ಹೆಣ್ಣು ಹೆಣ್ಣೆಂದು ಕಡಗಣಿಸಲು ಬಹುದೇ?

ಹೆಣ್ಣಿಲ್ಲದೇ ಜೀವ ಜನಿಸಲು ಬಹುದೇ ?

 

ಬಲು ದುಸ್ತರವಹುದು ಹೆಣ್ಣಿನ ಬಾಳು

ತುಸು ಎಡವಿದರೂ ಬಾಳೆಲ್ಲ ಗೋಳು

ಸಂಸಾರದ ನೊಗ ಹೊರುವ ನಿಷ್ಠೆಯ ಆಳು

ತಂದೆ-ಮಗು ಇಬ್ಬರಿಗೂ ಮುತ್ತಿಡುವ ದಯಾಳು

ಸತ್ಯದ ಮಾತೊಂದ ಹೇಳುವೆನು ಕೇಳು

ಹುಟ್ಟಿ ಸಾಯುವವರೆಗೂ ಆಸರೆ ಹೆಣ್ಣಿನ ತೋಳು

 

ಒಂದೇ ಜನುಮದಲಿ ಹಲಬಗೆಯ ಪಾತ್ರ

ಕರೆಯುವ ನಾಮಪದಗಳು ನೆಪಮಾತ್ರ

ಜನನಿಯೆಂದರೆ ದೇವರಿಗಿಂತಲೂ ಮಿಗಿಲು

ಅಕ್ಕನೆಂದರೆ ಅಕ್ಕರೆ ಬಾನೆತ್ತರದ ಮುಗಿಲು

ತಂಗಿಯೆಂದರೆ ಗಂಗೆ ಹರಿದಂತೆ ಒಡಲು

ಮಡದಿಯೆಂದರೆ ಬೆಲೆಗೆಟುಕದ ರತ್ನದ ಹರಳು

ಮಗಳೆಂದರೆ ಜೀವನದಿ ಪ್ರೀತಿ ಉಕ್ಕಿದ ಕಡಲು

ಸ್ನೇಹಿತೆಯೆಂದರೆ ಹಿತ ನೀಡುವ ತಣ್ಣನೆ ನೆರಳು

ಅತ್ತೆ ಚಿಕ್ಕಮ್ಮ ಎಂದರೆ ವಾತ್ಸಲ್ಯದ ಕರುಳು

ಅತ್ತಿಗೆ ನಾದಿನಿಯೆನೆ  ಮಮತೆಯ ಬಯಲು

ಸೊಸೆಯೆಂದರೆ ಬಂದಂತೆ ಹೊಸ ಹಗಲು

ಯಾವ ರೂಪದಲ್ಲಿ ಬಂದರೂ ಬಾಳಿನ ತಿರುಳು

ಯಾವ ವೇಷ ತೊಟ್ಟರೂ ಮುಕುಟದ ಹರಳು

 

ಏನಂದು ಕರೆಯಲಿ ನಿನ್ನ  ಮಹಾ ಇಳೆಯೆ

ನಿನಗೆ ಸಮನಾರುಂಟು ಮಹಾ ತಾಯಿಯೆ

ನಿನಗಿದೋ ಕೋಟಿ ಕೋಟಿ ನಮನ ಮಹಿಳೆ

-ಗಣಪತಿ ಹೆಗಡೆ, ಉ.ಕ.

ಚಿತ್ರ ಕೃಪೆ: ಇಂಟರ್ನೆಟ್ ತಾಣ