ಒಲವ ಸಾಲನು ಮೋಹಿಸಿ ಬಣ್ಣವ ಬದಲಿಸಿ ದಹಿಸಿದೆಯಲ್ಲ ಗೆಳೆಯಾ

ಚೆಲುವ ಪಾಲನು ಕರುಣಿಸಿ ಮೂದಲಿಸಿ ಕಣ್ಣಲೆ ಬಿಂಬಿಸಿದೆಯಲ್ಲ ಗೆಳೆಯಾ

 

ನಿನ್ನೊಳಗೆ ನಾನಿರುವೆ  ಹೆದರದಿರು ಎಂದು  ಆಡಿದ ಮಾತುಗಳು ಮರೆತು ಹೋಯಿತೇನೋ

ತನ್ನೊಳಗೆ ಎಲ್ಲವನು ಬಚ್ಚಿಟ್ಟು  ಕೆಂಡದ  ಮಳೆ ಸುರಿಸಿದೆಯಲ್ಲ ಗೆಳೆಯಾ

 

ಬದುಕು ಗಾಡಿಯ  ಎರಡು ಚಕ್ರಗಳೆಂಬುದ ಅರಿತಿಲ್ಲವೇನೋ

ಬೆಳಕು ಬಾಳಿನೊಳು ಮೂಡುವ ಮುನ್ನವೇ ಹುನ್ನಾರ ನಡೆಸಿದೆಯಲ್ಲ ಗೆಳೆಯಾ

 

ಸಮರ್ಥತೆಯಿಂದ ಕಗ್ಗಂಟನ್ನು ಬಿಡಿಸುವ ಚಾಕ ಚಕ್ಯತೆ ತಿಳಿದಿಲ್ಲವೇ

ನಿರರ್ಥಕವಾಗಿ  ಗೋಸುಂಬೆಯ ತೆರದಿ ಅವಿತು ಸೋಲಿಸಿದೆಯಲ್ಲ ಗೆಳೆಯಾ

 

ಹೃದಯ ಮಂದಿರದಿ ನವಿರಾದ ಭಾವನೆಗಳ ಹುಟ್ಟು ಹಾಕಲು ಚಂದವಾಯಿತೇ

ರತ್ನಳ ಇಚ್ಛೆಯನು ಮುಳ್ಳ ಹಾದಿಯಲಿ ತುಳಿಸಿದೆಯಲ್ಲ ಗೆಳೆಯಾ

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ