ಯುವ ಬರಹಗಾರರಾದ ಗೋಪಿನಾಥ್ ಕರವಿಯವರ ಸಂಶೋಧನಾ ಕೃತಿ ‘ಗ್ರಾಮದ ಕನಸು’ ದೇಶ ಸುಭಿಕ್ಷವಾಗಿರಬೇಕಾದರೆ ಆ ದೇಶದ ಪ್ರತಿಯೊಂದು ಗ್ರಾಮವೂ ನೆಮ್ಮದಿಯ ಬದುಕು ಕಾಣ ಬೇಕು. ಇದೇ ಆಶಯದೊಂದಿಗೆ ಬರೆದ ಈ ಕೃತಿಗೆ ಡಾ. ಶಿವಪ್ಪ ಅರಿವು ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಅದರಲ್ಲಿ ಅವರು “ಹತ್ತನೇ ತರಗತಿ ಮುಗಿಸಿ ಡಿಪ್ಲೊಮಾ ಓದಿಗೆ ಸೇರಿದ್ದ ಗೋಪಿ ನನ್ನ ಸಂಪರ್ಕಕ್ಕೆ ಬಂದಿದ್ದರು. ಮೂರು ವರ್ಷಗಳ ಕಾಲ ನನ್ನ ಜೊತೆಗಿದ್ದರು. ಸಾಹಿತ್ಯ, ಸಂಗೀತ, ನಾಟಕ, ತಿರುಗಾಟ ಇತ್ಯಾದಿಗಳು ಆತನನ್ನು 'ತಾಂತ್ರಿಕ' ಶಿಕ್ಷಣದಿಂದ ವಿಮುಕ್ತಗೊಳಿಸಿದವು. ಡಿ.ಟಿ.ಪಿ. ಬಲ್ಲ ಯುವಕನೊಬ್ಬ ಬೇಕೆಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಕೇಳಿದಾಗ ಗೋಪಿಯನ್ನು ಕಳುಹಿಸಿಕೊಟ್ಟೆ. ಮಠದಲ್ಲಿದ್ದುಕೊಂಡು ಬಿ.ಎ. ಮುಗಿಸಿ, ಇಂಗ್ಲಿಷಿನಲ್ಲಿ ಸ್ನಾತಕ ಪದವಿ ಪಡೆದರು. ಈ ಅವಧಿಯಲ್ಲಿ ರಾಜ್ಯದ ಅನೇಕ ಹಿರಿಯರ, ಸಾಧಕರ, ಹೋರಾಟಗಾರರ ಪರಿಚಯವಾಗಿ ಅವರೆಲ್ಲರಿಂದ ಕಲಿಯತೊಡಗಿದರು. ಈಗಿನ ಗೋಪಿನಾಥ್ ಕರವಿ ಒಂದೆರಡು ವರ್ಷಗಳ ಫಸಲಲ್ಲ, ಬರೋಬರಿ ಹತ್ತನ್ನೆರಡು ವರ್ಷಗಳ ಪರಿಶ್ರಮ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಸಂಸ್ಥೆಯಲ್ಲಿ ಜೀವನ ಕೌಶಲ್ಯಗಳ ತರಬೇತುದಾರರಾಗಿ ನಿರ್ವಹಿಸುತ್ತಿರುವ ಗೋಪಿನಾಥ್, ಕವಿತೆ, ಲೇಖನ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಈಗ ಸ್ವತಂತ್ರ ಕೃತಿಯೊಂದನ್ನು ಪ್ರಕಟಿಸುವ ಸಾಹಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಅನುಕೂಲಗಳಿಲ್ಲದ ಹಳ್ಳಿಯಿಂದ ಎದ್ದು ಬಂದ ಯುವಕ, ಅದೇ ಹಳ್ಳಿಯನ್ನು ಕನವರಿಸುತ್ತಾ, ಅದನ್ನು ಮಾತ್ರವಲ್ಲದೆ ಎಲ್ಲಾ ಹಳ್ಳಿಗಳನ್ನೂ ಸಶಕ್ತಗೊಳಿಸುವ ಚಿಂತನೆ ಮಾಡಿರುವುದು ಬೆನ್ನು ತಟ್ಟಬೇಕಾದ ಕೆಲಸ.
ಹಳ್ಳಿ ಸರ್ವಕಾಲಕ್ಕೂ ಉಳಿಯಬೇಕಾದ ಒಂದು ವ್ಯವಸ್ಥೆ, ಏಕೆಂದರೆ ಒತ್ತಡವಿಲ್ಲದ ಬದುಕು, ಪ್ರಶಾಂತವಾದ ಪರಿಸರ, ವಿಶಾಲ ಕೆರೆಗಳು, ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಉಳಿದಿರುವ ಮಾನವೀಯ ಸಂಬಂಧಗಳು ಅಲ್ಲಿರುತ್ತವೆ. ಅಲ್ಲಿನ ಜಾತಿ ತಾರತಮ್ಯ, ಅಸ್ಪೃಶ್ಯ ಆಚರಣೆಗಳನ್ನು ಸರಿಪಡಿಸಿ, ಕೃಷಿಯನ್ನು ಬಲಪಡಿಸಿದರೆ ಹಳ್ಳಿ ನಮ್ಮನ್ನು ಕಾಯುತ್ತದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕರವಿರೆಡ್ಡಿಹಳ್ಳಿಯ ಗೋಪಿನಾಥ್ ಇವೆಲ್ಲವನ್ನು ಗಮನಿಸಿಯೇ ಹಳ್ಳಿಗಳನ್ನು ಬಲಪಡಿಸುವ, ಸುಂದರಗೊಳಿಸುವ ವಿಚಾರಗಳನ್ನು ಕೃತಿಗೆ ತಂದಿದ್ದಾರೆ. ಸಮರ್ಥ ಅಂಗನವಾಡಿ, ಶಾಲೆ, ಗ್ರಾಮ ಗ್ರಂಥಾಲಯ, ಸ್ಪಡಿ ಸೆಂಟರ್, ಶುದ್ಧ ಕುಡಿಯುವ ನೀರು, ಸಮುದಾಯ ಶೌಚಾಲಯ, ಬೈಕ್ ಆಂಬುಲೆನ್ಸ್ ಸೇರಿದಂತೆ ಹಲವು ಸೌಕರ್ಯಗಳ ಬಗ್ಗೆ ಇವರು ಮಾತನಾಡಿದ್ದಾರೆ. ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿದಂತೆ ತಾವು ಬೆಳೆದ ಹಳ್ಳಿಗಳ ಮೇಲೆ ಪ್ರೀತಿ ಇರುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಇದು. ಇನ್ನಷ್ಟು ಓದಿ, ತಿರುಗಿ, ಚಿಂತಿಸಿ ಮತ್ತಷ್ಟು ಕೃತಿಗಳನ್ನು ಗೋಪಿನಾಥ್ ಕರವಿ ಪ್ರಕಟಿಸಲೆಂದು ಆಶಿಸುತ್ತೇನೆ.” ಎನ್ನುತ್ತಾ ಶುಭ ಹಾರೈಸಿದ್ದಾರೆ. ೧೯೨ ಪುಟಗಳ ಈ ಕೃತಿ ಹೊಸ ಬರಹಗಾರನೊಬ್ಬನ ಪ್ರತಿಭೆಯನ್ನು ಬಿಂಬಿಸುವಲ್ಲಿ ಸಫಲವಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!