ಯಶಸ್ಸಿನ ರಹಸ್ಯ

ಎಲ್ಲರಿಗೂ ಜೀವನದಲ್ಲಿ ಯಶಸ್ವಿ ಆಗಬೇಕೆಂಬ ಮಹದಾಸೆ ಇರುತ್ತದೆ. “ಅದಕ್ಕಾಗಿ ನಾನೇನು ಮಾಡಬಹುದು?” ಎಂಬ ಕುತೂಹಲ ಇರುವವರಿಗೆ “ಯಶಸ್ಸಿನ 108 ರಹಸ್ಯಗಳನ್ನು” ತಿಳಿಸುತ್ತದೆ ಈ ಪುಸ್ತಕ. ಜಿ. ಸುರೇಂದ್ರನ್ ಇಂಗ್ಲಿಷಿನಲ್ಲಿ ಬರೆದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ. ಕೆ. ಎಸ್. ಮೂರ್ತಿ. 

ಮೊದಲ ಹದಿನೈದು ರಹಸ್ಯಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇನೆ:

1.ಒಳ್ಳೆಯ ಕಲ್ಪನಾಶಕ್ತಿ ಮತ್ತು ದೂರದರ್ಶಿತ್ವವನ್ನು ರೂಢಿಸಿಕೊಳ್ಳಿ 

2.ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸಿ.

3.ದೃಢನಿರ್ಧಾರದೊಡನೆ ಕಾರ್ಯ ನಿರ್ವಹಿಸಿದಿ 

4.ಸ್ವಾಭಿಮಾನವನ್ನು ಉಳಿಸಿಕೊಳ್ಳಿ 

5.ನಿಸರ್ಗ ಸೌಂದರ್ಯವನ್ನು ಅನುಭವಿಸಿ 

6.ಸಕಲವನ್ನು ಅನುಗ್ರಹಿಸಿರುವ ಭಗವಂತನಿಗೆ ಧನ್ಯರಾಗಿ 

7.ಪ್ರತಿದಿನ ಒಬ್ಬರಿಗಾದರೂ ಸಹಾಯ ಮಾಡಿ 

8.ಪಡೆಯುವುದಕ್ಕಿಂತ ಹೆಚ್ಚು ನೀಡುವುದನ್ನು ಕಲಿಯಿರಿ 

9.ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡಿ 

10.ಮಂದಹಾಸದಿಂದಿರಿ, ನಗುವುದನ್ನು ಮರೆಯದಿರಿ 

ಇವನ್ನು ಗಮನಿಸಿದಾಗ, ಇವೆಲ್ಲ ನಮಗೆ ಗೊತ್ತಿರುವ ಸೂತ್ರಗಳೇ ಎಂದನಿಸುತ್ತದೆ, ಅಲ್ಲವೇ? ಆದರೆ ಪುಸ್ತಕದ ವಿಶೇಷತೆ ಇರುವುದು ಪ್ರತಿಯೊಂದು (ಕೆಲವು “ರಹಸ್ಯಗಳ” ಹೊರತಾಗಿ) “ರಹಸ್ಯ”ದ ಬಗ್ಗೆ ಚುಟುಕಾದ ವಿವರಣೆ ನೀಡಿದ ನಂತರ, ಆ “ರಹಸ್ಯ”ವನ್ನು ಅಳವಡಿಸಿಕೊಂಡು ಯಶಸ್ವಿಯಾದ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ಚುಟುಕಾಗಿ ಪ್ರಸ್ತುತ ಪಡಿಸಿರುವುದು. ಇದರಿಂದಾಗಿ ಆ “ರಹಸ್ಯ”ವನ್ನು ಅರ್ಥ ಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ. 

ಉದಾಹರಣೆಗೆ, “ಪ್ರತಿಕೂಲ ಪರಿಸ್ಥಿತಿಗಳು ನಿಮಗೆ ಬುದ್ಧಿ ಕಲಿಸುತ್ತವೆ” ಎಂಬ (87ನೇ) ರಹಸ್ಯದ ವಿವರಣೆ ಹೀಗೆ ಶುರುವಾಗುತ್ತದೆ: ಒಬ್ಬ ಮನುಷ್ಯ ನಿಮಗೆ ತೊಂದರೆ ಕೊಡುತ್ತಿದ್ದರೆ, ಆತ ನಿಮಗೆ ಗುರುವೆಂದು ತಿಳಿಯಿರಿ. ಈತ ನಿಮಗೆ ತೊಂದರೆಗಳ ಪರಿಸ್ಥಿತಿಯನ್ನೆದುರಿಸುವ ಪಾಠ ಕಲಿಸುತ್ತಿದ್ದಾನೆ.” ವಿವರಣೆ ಹೀಗೆಯೇ ಮುಂದುವರಿದು, “ಪ್ರತಿಕೂಲದಿಂದ ನಮಗೆ ಕಷ್ಟವೆಂದರೇನು? ಎಂದು ತಿಳಿಯ ಪಡಿಸುತ್ತದೆ. ಆಗ ನಾವು ಅದರ ಪರಿಹಾರದ ಬಗ್ಗೆ ಯೋಚಿಸುತ್ತೇವೆ. ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನೆದುರಿಸಿದ ಮೇಲೆ, ನಮ್ಮ ಮನಸ್ಸು ಪಕ್ವವಾಗುತ್ತದೆ” ಎಂದು ಮುಕ್ತಾಯವಾಗುತ್ತದೆ. ಅನಂತರ, ಇದಕ್ಕೆ ನೀಡಲಾಗಿರುವ ದೃಷ್ಟಾಂತ ಹಿರಿಯ “ಹಿಂದೂಜ” ಅವರ ಒಂದು ಪುಸ್ತಕದ ಅರ್ಪಣೆಯ ಬಗ್ಗೆ. ಯಾಕೆಂದರೆ ಅವರು “ಯಶಸ್ಸಿನ ಗಾಥೆ” ಎಂಬ ಆ ಕೃತಿಯನ್ನು ಈ ರೀತಿ ಅರ್ಪಣೆ ಮಾಡಿದ್ದಾರೆ: “ನನ್ನ ಜೀವನದುದ್ದಕ್ಕೂ ನನ್ನ ಕಾಲೆಳೆದು ತೊಂದರೆಗೆ ಸಿಕ್ಕಿಸಿ, ಅನೇಕ ಕಷ್ಟಗಳಿಗೆ ನನ್ನನ್ನು ಗುರಿ ಮಾಡಿದವರೆಲ್ಲರಿಗೂ ಈ ಕೃತಿಯನ್ನು ಕೃತಜ್ಞತಾಪೂರ್ವಕ ಅರ್ಪಿಸುತ್ತಿದ್ದೇನೆ…”

ಅದಲ್ಲದೆ, ಈ ಪುಸ್ತಕದಲ್ಲಿ ಯಶಸ್ವಿ ವ್ಯಕ್ತಿಗಳು ಬೆಳೆಸಿಕೊಳ್ಳಲೇ ಬೇಕಾದ ಹಲವಾರು ಉತ್ತಮ ಗುಣಗಳ ಬಗ್ಗೆಯೂ ವಿವರಣೆ ನೀಡಲಾಗಿದೆ: ಸ್ವಯಂಶಿಸ್ತು (34), ಆತ್ಮಗೌರವ ಮತ್ತು ಘನತೆ (37), ಸಮಯದ ಮಹತ್ವ (57), ಹಿರಿಮೆ (59), ವ್ಯವಹಾರ ಜ್ಞಾನ (60), ಮೌನ ಬಂಗಾರ (61), ಪರಿಪಕ್ವತೆ (62), ಬಾಳಿನ ಗುರಿ (63), ಆತ್ಮವಿಶ್ವಾಸ (65), ನಂಬಿಕೆ (88) ಇತ್ಯಾದಿ. 

ಇತರರ ಉನ್ನತಿಯನ್ನು ನೋಡಿ ಸಂಭ್ರಮಿಸಿ; ಇತರರಿಗೆ ಪ್ರೋತ್ಸಾಹ ನೀಡಿ; ಇತರರನ್ನು ಪ್ರಶಂಸೆ ಮಾಡಿ; ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ; ಇತರರಿಂದ ಸ್ಫೂರ್ತಿ ಪಡೆಯಿರಿ; ಇತರರನ್ನು ಗೌರವಿಸಿ; ಇತರರಿಗೆ ಸುಖ, ನೆಮ್ಮದಿ ಉಂಟು ಮಾಡಿ - ಇಂತಹ “ರಹಸ್ಯ”ಗಳಲ್ಲಿ ಬಹಳಷ್ಟು ಪುನರಾವರ್ತನೆ ಇದೆ. 

ಹಾಗೆಯೇ, ಆಕಾಶ, ಚಂದ್ರ, ಸೂರ್ಯ, ಸಮುದ್ರಗಳನ್ನು ಗಮನಿಸಿ (ರಹಸ್ಯ 15); ಪ್ರಕೃತಿಯೊಂದಿಗೆ ಸಾಮರಸ್ಯ ಹೊಂದಿರಿ (ರಹಸ್ಯ 91) ಮತ್ತು ಈ ಮೇಲಿನ ಪಟ್ಟಿಯ ರಹಸ್ಯ 5 - ಇವು ಮೂರರಲ್ಲಿ ವ್ಯತ್ಯಾಸವಿಲ್ಲ. ಅಂತೆಯೇ, ಇತರರಿಗೆ ಸ್ಫೂರ್ತಿದಾಯಕರಾಗಿ (ರಹಸ್ಯ 24) ಮತ್ತು ಸ್ಫೂರ್ತಿದಾಯಕ ಮುಂದಾಳತ್ವ (ರಹಸ್ಯ 68) ಇವೆರಡೂ ಒಂದೇ ಆಗಿವೆ.

ಕೆಲವು “ರಹಸ್ಯ”ಗಳಂತೂ ತೀರಾ ಸರಳವಾಗಿವೆ. ಉದಾಹರಣೆಗೆ, ಪ್ರತಿಯೊಂದು ತುತ್ತನ್ನೂ ಆಸ್ವಾದಿಸುತ್ತಾ ಹರ್ಷದಿಂದ ತಿನ್ನಿ (ರಹಸ್ಯ 21), ನಿಮ್ಮ ಉಡುಪಿನ ಬಗ್ಗೆ ಗಮನ ಹರಿಸಿ (ರಹಸ್ಯ 105). 

ಅದೇನಿದ್ದರೂ, ಏಪ್ರಿಲ್ 2025ರ ಹೊತ್ತಿಗೆ ಇದರ 13ನೇ ಮುದ್ರಣ ಮಾರುಕಟ್ಟೆಗೆ ಬಂದಿತ್ತು ಎಂಬುದು ಈ ಪುಸ್ತಕದಿಂದ ಹಲವಾರು ಜನರಿಗೆ ಪ್ರಯೋಜನವಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಪುಸ್ತಕದಲ್ಲಿ ತಿಳಿಸಿರುವ ಅನೇಕ “ರಹಸ್ಯ”ಗಳನ್ನು ಜೀವನದಲ್ಲಿ ಅನುಸರಿಸುವ ಸಾಧನೆ ಮಾಡಿದವರಿಗೆ “ಬದುಕಿನಲ್ಲಿ ಯಶಸ್ಸು” ಸಾಧಿಸಲು ಸಾಧ್ಯ.