ಹಳೇಮನೆ

ಅಮ್ಮ ಹೊರಗಡೆ ಗೇಟಿನ ಹತ್ತಿರ ನಿಂತು ಯಾರ ಬಳಿಯೋ ಮಾತನಾಡುತ್ತಿದ್ದುದು ಕೇಳಿ, ನಾನೂ ಹೊರಗೆ ಬಂದೆ ಅಮ್ಮನ ಹತ್ತಿರ ಏನೋ ಕೇಳಿ ಆ ದಂಪತಿ ಮುಂದೆ ಹೋಗುತ್ತಿದ್ದರು. 'ಏನಂತೆ?' ಎಂದು ಕೇಳಿದೆ. ಅದಕ್ಕೆ ಅಮ್ಮ, 'ಹಳೇಮನೆ ಬೇಕಾಗಿತ್ತಂತೆ ಅವರಿಗೆ ಇಲ್ಲಿ ಎಲ್ಲೂ ಹಳೇಮನೆ ಸಿಗಲ್ಲ. ಹೀಗೇ ಮುಂದೆ ಅರ್ಧ ಮೈಲು ನಡೆದುಕೊಂಡೆ ಹೋಗಿ, ಅಲ್ಲಿ ಒಂದೆರಡು ಇವೆ. ಅಂತ ಹೇಳಿದೆ' ಅಂದಳು. ಅಷ್ಟು ಹೊತ್ತಿಗೆ ಆ ದಂಪತಿ ವಾಪಾಸ್ಸು ಬಂದರು. 'ಮೇಡಂ, ಹಳೇಮನೆಯವರು ಇಲ್ಲೇ ಎಲ್ಲೊ ಇದ್ದಾರೆ. ಅಂತ ಹೇಳಿದರು ಆ ಕಡೆಯವರು. ಹೋದ ವಾರ ಬಾಡಿಗೆಗೆ ಬಂದಿದ್ದಾರೆ ನೋಡಿ. ಅವರ ಮನೆ ಕೇಳಿದ್ದಿ...' ಎಂದರು. ನಾನು ನಗುತ್ತಲೇ ನಮ್ಮ ಮನೆಯ ಎದುರು ಮನೆಯನ್ನು ತೋರಿಸಿದೆ.

-ಸು. ವಿಜಯಲಕ್ಷ್ಮಿ

***

ಸ್ವಾದಿಷ್ಟ ಪಶು ಆಹಾರ!

ಆರನೇ ತರಗತಿಯಲ್ಲಿ ಓದುತ್ತಿರುವ ನನ್ನ ಸೋದರಿಯ ಮಗಳು ಅಂಶಿಯ ಜೊತೆ ಕಾರ್ಕಳದ ಪೇಟೆ ಸುತ್ತಾಡಲು ಹೋಗಿದ್ದೆ. ಒಂದೆಡೆ ಅಂಗಡಿಯ ಮುಂದೆ, ಒಂದು ಜಾಹೀರಾತು ಫಲಕದಲ್ಲಿ, 'ಸ್ವಾದಿಷ್ಟ ಹಾಗೂ ಪೌಷ್ಟಿಕ ಪಶು ಆಹಾರ' ಎಂಬುದಾಗಿ ಪಶು ಆಹಾರದ ಬ್ಯಾಂಡ್ ಒಂದರ ಜಾಹೀರಾತು ಹಾಕಲಾಗಿತ್ತು. ಅದನ್ನು ಓದಿದವಳೇ ಅಂಗಡಿಯವನಿಗೆ, ' ಈ ಆಹಾರ ಸ್ವಾದಿಷ್ಟವೆಂದು ಯಾರು ಹೇಳಿದರು? ಪಶುಗಳು ಬಂದು ಹೇಳಿದವಾ? ಅಥವಾ ನೀನೇ ರುಚಿ ನೋಡಿದ್ರಾ?' ಎಂದು ಕೇಳಿದರು. ಅಂಗಡಿಯವ ಉತ್ತರಿಸದೇ ಸುಮ್ಮನೇ ನಿಂತ. 'ಈ ಆಹಾರವನ್ನು ಪಶುಗಳು ಇಷ್ಟಪಟ್ಟು ತಿನ್ನುವುದನ್ನು ನೋಡಿ ಹಾಗೆ ಬರೆದಿರಬೇಕು' ಎಂದು ಹೇಳಿದ ಮೇಲೆ ಸುಮ್ಮನಾದಳು. ಅಂಗಡಿಯವ ನೆಮ್ಮದಿಯ ನಿಟ್ಟುಸಿರು ಬಿಟ್ಟ

-ರಮಣ್ ಶೆಟ್ಟಿ ರೆಂಜಾಳ್

***

ಬ್ಯಾಗಿನ ಫಜೀತಿ

ಬಹಳ ಹಿಂದಿನ ಘಟನೆ. ನಮ್ಮ ತಾಯಿ ನಿಧನವಾದ ಬಳಿಕ ಅವರ ಕಾರ್ಯ ಮಾಡಲು ಕುಟುಂಬದವರೆಲ್ಲ ಗೋಕರ್ಣಕ್ಕೆ ತೆರಳಿದ್ದೆವು. ಕಾರ್ಯ ಮುಗಿದ. ಬಳಿಕ ಭದ್ರಾವತಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆವು. ನಮ್ಮ ಭಾವ ಬುಕ್ ಅಂಗಡಿಗೆ ಹೋಗಿ ಗೋಕರ್ಣ ಮಹಾತ್ಮಾ ಪುಸ್ತಕ ಹಾಗೂ ಕ್ಯಾಲೆಂಡರ್ ತೆಗೆದುಕೊಂಡು ಅಂಗಡಿಯವರೇ ಕೊಟ್ಟ ಚೀಲದಲ್ಲಿ ಹಾಕಿಕೊಂಡು ಬಂದು. ಅದನ್ನು ಅಕ್ಕನ ಕೈಗೆ ಕೊಟ್ಟರು. ಸ್ವಲ್ಪ ಸಮಯದ ಬಳಿಕ ನಾನು ಚೀಲದಲ್ಲಿ ಕೈಹಾಕಿ ಆ ಪುಸ್ತಕವನ್ನು ತೆಗೆದುಕೊಂಡು ಓದಲು ತೊಡಗಿದೆ. ಎದುರುಗಡೆಯಿಂದ ಒಬ್ಬ ವ್ಯಕ್ತಿ ತದೇಕ ಚಿತ್ತದಿಂದ ನನ್ನನ್ನು ನೋಡುತ್ತಿದ್ದ. ಇವನೇಕೆ ಹೀಗೆ ನೋಡುತ್ತಿದ್ದಾನೆ ಎಂದು ಸಿಟ್ಟಿನಿಂದ ಅವನನ್ನು ದುರುಗುಟ್ಟಿ ಹಾಗೇ ಪುಸ್ತಕವನ್ನು ಬ್ಯಾಗಿನಲ್ಲಿ ತುರುಕಲು ಹೋದೆ. ಅದರಲ್ಲಿ ಪಟ್ಟಿ ಪಟ್ಟಿ ನಿಕ್ಕರ್ ಕಂಡು, 'ಇದ್ಯಾರದೆ?' ಎಂದು ಅಕ್ಕನಿಗೆ ಕೇಳಿದೆ. 'ಆ ಬ್ಯಾಗು ನಮ್ಮದಲ್ಲ' ಅಂದಳು. ಕತ್ತೆತ್ತಿ ನೋಡಿದರೆ ದುರದುರ ನೋಡುತ್ತ ಎದುರಿಗೆ ಬಂದ ವ್ಯಕ್ತಿ ನನ್ನ ಕೈಯಲ್ಲಿದ್ದ ಬ್ಯಾಗನ್ನು ಕಿತ್ತುಕೊಂಡು ಬೇರೆ ಕಡೆ ಹೋದ. ಇಬ್ಬರಲ್ಲೂ ಅದೇ ಅಂಗಡಿಯಿಂದ ಬಂದ ಅದೇ ಬ್ಯಾಗಾದ್ದರಿಂದ ಹೀಗಾಯ್ತು.

-ಭಾರತೀ ಗಂಗಾಧರ್

***

ನಾಮಕರಣ

ಅಂದು ಪರಿಯ ಮಗಳು ಪುಟ್ಟಿ ತನ್ನ ಅಮ್ಮನ ಗೆಳತಿ ಕಮಲಳ ಮನೆಗೆ ಹೋದಾಗ. ಕಮಲ ತನ್ನ ಮಹಡಿ ಬಾಲ್ಕನಿಯಲ್ಲಿ ಸ್ವಲ್ಪ ದೊಡ್ಡ ಕುಂಡದಲ್ಲಿ ಬೆಳೆಸಿದ್ದ ತಾವರೆ ಹೂಗಳನ್ನು ನೋಡಿ, 'ಇದು ಕೆಸರಿನಲ್ಲಿ ಬೆಳೆಯುವ ಹೂವು ಲೋಟಸ್ ಅಲ್ವಾ ? ಎಂದಳು ಕಮಲ. ಹೌದು, ಪುಟ್ಟೀ,ಇದನ್ನು ಮಣ್ಣಿನಲ್ಲೂ ಬೆಳೆಸಬಹುದು, ಸೂರ್ಯನ ಬೆಳಕು ಬೇಕು. ಹೀಗಾಗಿ ಪಾಟ್‌ನಲ್ಲಿ ಬೆಳೆಸಿದ್ದೇವೆ' ಎಂದರು. ಹಾಗಾದ್ರೆ ಇದಕ್ಕೆ ಒಂದು ಹೆಸರಿಡಬೇಕಲ್ಲಾ ಅಂಟಿ?' ಅಂದ್ಲು ಪುಟ್ಟಿ. 'ಹೂ.... ಹೌದು, ನೀನೇ ಏನಾದ್ರೂ ನಾಮಕರಣ ಮಾಡಮ್ಮಾ' ಅಂತ ಅನ್ನುವಷ್ಟರಲ್ಲೇ 'ಆಂಟಿ, ಇದನ್ನು ನೀವು ಪಾಟ್‌ನಲ್ಲಿ ಬೆಳಸಿದ್ದೀರಾ.... ಅದಕ್ಕೇ ಇದ್ರ ಹೆಸರು ಪ್ಲೋಟಸ್, ಪೋಟ್ + ಲೋಟಸ್ = ಪ್ಲೋಟಸ್ ಅಂದಾಗ ಎಲ್ಲರಿಗೂ ಇದೊಂಥರಾ ಹೆಸರು ಚೆನ್ನಾಗಿದೆ ಅನ್ನಿಸ್ತು.

-ಸುಮನಾ

ಚಿತ್ರ: ಗಣೇಶ ಆಚಾರ್ಯ

(ಆಗಸ್ಟ್ ೨೦೨೪ರ ‘ಮಯೂರ’ ಸಂಗ್ರಹಿತ)