ಅಯೋಧ್ಯಾ - ಕಾಶಿ - ಭೂತಾನ್

‘ಅಯೋಧ್ಯಾ - ಕಾಶಿ - ಭೂತಾನ್’ ಎನ್ನುವ ಒಂದು ಅಧ್ಯಾತ್ಮಿಕ ಪಯಣವನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಹೆಚ್, ಶ್ರೀಧರ್ ರಾವ್. ಅವರ ಈ ಕೃತಿಗೆ ಲೇಖಕರಾದ ಚೇತನ್ ಭಾರ್ಗವ್ ಅವರು ಸೊಗಸಾದ ಅನಿಸಿಕೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿದ್ದಾರೆ. ಅದರ ಕೆಲವು ಆಯ್ದ ಭಾಗಗಳು…

“ಶ್ರೀಧರ ರಾವ್ ಅವರ 'ಅಯೋಧ್ಯಾ-ಕಾಶಿ-ಭೂತಾನ್'ಕೃತಿಯು ಕೇವಲ ಭೌಗೋಳಿಕ ಮಾಹಿತಿಗಳನ್ನು ಒದಗಿಸುವ ಸಾಮಾನ್ಯ ಪ್ರವಾಸ ಕಥನವಲ್ಲ, ಲೇಖಕರು ತಮ್ಮ ಮುನ್ನುಡಿಯಲ್ಲಿ ತಿಳಿಸಿರುವಂತೆಯೇ ಇದೊಂದು ಸುಂದರ 'ಆಧ್ಯಾತ್ಮಿಕ ಪಯಣ'. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆಯಲ್ಲಿರುವಾಗ ಪ್ರವಾಸ ಮಾಡಿದ್ದರೂ, ಸೇವೆಯಿಂದ ನಿವೃತ್ತರಾದ ಮೇಲೆ  ಲೇಖಕರು, ತಮ್ಮ ಬಿಡುವಿನ ವೇಳೆಯನ್ನು ಸಾರ್ಥಕಗೊಳಿಸುತ್ತಾ, ಸಮಾನಮನಸ್ಕ ಮಿತ್ರ ಸಮೂಹದೊಡನೆ ಕೈಗೊಂಡ ಪ್ರವಾಸದ ನೈಜ ಹಾಗೂ ಆಳವಾದ ಅನುಭವಗಳನ್ನು ಅತ್ಯಂತ ಆಪ್ತವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಲೇಖಕರು ಅಯೋಧ್ಯೆ, ಕಾಶಿ, ನೈಮಿಷಾರಣ್ಯ, ಪ್ರಯಾಗ್‌ರಾಜ್, ಚಿತ್ರಕೂಟ, ಬುದ್ಧಗಯಾ ಹಾಗೂ ಗಯಾ ಮುಂತಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಪ್ರವಾಸವೆಂದರೆ ಬರಿಯ ಊರು ಸುತ್ತುವ ಪ್ರಕ್ರಿಯೆಯಲ್ಲ, ಬದಲಾಗಿ ಅದೊಂದು 'ಸಮಗ್ರ ಅನುಭವ ಕಥನ'. ಆಧ್ಯಾತ್ಮಿಕತೆ ಎಂದರೇನು ಎಂಬ ಜಿಜ್ಞಾಸೆಯೊಂದಿಗೆ ಆರಂಭವಾಗುವ ಈ ಪುಸ್ತಕ, ಪುಣ್ಯಕ್ಷೇತ್ರಗಳ ದರ್ಶನದ ಮೂಲಕ ಭೌತಿಕ ಹಂಬಲಗಳನ್ನು ಮತ್ತು ನಮ್ಮೊಳಗಿನ 'ಅಹಂ' ಅನ್ನು ತೊರೆದು, ಮಹತ್ತತ್ವಕ್ಕೆ ತಲೆಬಾಗುವ ಪ್ರಕ್ರಿಯೆಯನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸುತ್ತದೆ. ಅಂತರಂಗವನ್ನು ಶೋಧಿಸುವ ಭಕ್ತಿಯೋಗದ ಸಾಧನೆಯಾಗಿ ಈ ಯಾನ ರೂಪುಗೊಂಡಿದೆ. ಲೌಕಿಕ ಜಂಜಾಟಗಳಿಂದ ದೂರ ಸರಿದು ಆಧ್ಯಾತ್ಮವನ್ನು ಅರಿಯುವ ಲೇಖಕರ ವಾರ್ಷಿಕ ಪ್ರವಾಸದ ಪರಿಪಾಠ ಇಲ್ಲಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಹೀಗೆ ಮಿತ್ರರೊಡನೆ 'ಅಡಿಗಾಸ್ ಯಾತ್ರಾ' ಮೂಲಕ ಕಾಯ್ದಿರಿಸಿದ ಈ ಪ್ರವಾಸವು ಲೇಖಕರು ಮತ್ತು ಅವರ ಸಂಗಡಿಗರಿಗೆ ಸ್ಮರಣೀಯವಾಗಿರುವುದರ ಜೊತೆಗೆ, ಓದುಗರಲ್ಲೂ ಆ ಸುಂದರ ಪಯಣದ ಅನುಭೂತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರವಾಸಿ ತಾಣಗಳ ಪೌರಾಣಿಕ ಹಿನ್ನೆಲೆಯ ಜೊತೆಗೆ ಲೇಖಕರು ಹಂಚಿಕೊಂಡಿರುವ ಬಾಲ್ಯದ ಒಂದು ಘಟನೆ ಮನಕಲುಕುವಂತಿದೆ. ಹಿಂದೆ ಕಾಶಿಗೆಂದು ಹೋದ ತಮ್ಮ ದೊಡ್ಡಮ್ಮನ ಪತಿ ತಿರುಗಿ ಬಾರದೇ ಹೋದಾಗ, ಅವರ ದೊಡ್ಡಮ್ಮ ೧೨ ವರ್ಷಗಳ ಕಾಲ ಪತಿಗಾಗಿ ಕಾದಿದ್ದು, ಕೊನೆಗೆ ಪತಿ ಬರಲಾರನೆಂದು ಅರಿತು ಅವರ ಅಪರ ಕರ್ಮಗಳನ್ನು ನೆರವೇರಿಸಿ ಆದೊಡನೆ  ವೈಧವ್ಯ ಸ್ವೀಕರಿಸಿದ ಪ್ರಸಂಗ ಓದುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಆರಂಭವಾಗುವ ಈ ಪ್ರವಾಸವು, ದಿನಚರಿಯ ರೂಪದಲ್ಲಿ ತೆರೆದುಕೊಳ್ಳುತ್ತಾ ಒಂದು 'ಉಪಯುಕ್ತ ಪ್ರವಾಸಿ ಕೈಪಿಡಿ'ಯಾಗಿಯೂ ಕಾರ್ಯನಿರ್ವಹಿಸುತ್ತದೆ. ಅಯೋಧ್ಯೆ ಮತ್ತು ಅದರ ಸುತ್ತಮುತ್ತಲ ಸ್ಥಳಗಳ ಹಿನ್ನೆಲೆ, ಪಯಣದಲ್ಲಿನ ವಿನೋದಗಳು, ಎದುರಾದ ಪ್ರಯಾಸ ಹಾಗೂ ಸಂಕಟದ ಪ್ರಸಂಗಗಳು ಓದುಗರನ್ನೂ ಯಾತ್ರಿಕರನ್ನಾಗಿಸುತ್ತವೆ. ಗಯಾ, ಕಾಶಿ, ವಾರಣಾಸಿ ಹಾಗೂ ಇತರ ಪ್ರೇಕ್ಷಣೀಯ ತಾಣಗಳ ಭೇಟಿಯ ವಿಷದವಾದ ವಿವರಣೆಯು, ಒಮ್ಮೆಯಾದರೂ ರಾಮ ಹಾಗೂ ಶಿವ-ಪಾರ್ವತಿಯರ ಪವಿತ್ರ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲವನ್ನು ಹುಟ್ಟುಹಾಕುತ್ತದೆ.

ಸಂತಸದ ನಾಡು 'ಸ್ವಚ್ಛ ಭೂತಾನ್': ತೀರ್ಥಕ್ಷೇತ್ರಗಳ ದರ್ಶನದ ಬಳಿಕ, ಭೂತಾನ್ ಭೇಟಿಯ ವಿವರಗಳು ಲೇಖಕರಿಗೂ ಹಾಗೂ ಓದುಗರಿಗೂ ಅತ್ಯಂತ ಚೇತೋಹಾರಿಯಾದ ಅನುಭವವನ್ನು ನೀಡುತ್ತವೆ. ಭಾರತದ ನೆರೆ ರಾಷ್ಟ್ರವಾದ ಭೂತಾನ್ ವಿಶ್ವದ ಅತ್ಯಂತ 'ಸ್ವಚ್ಛ ದೇಶ'ವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಆರ್ಥಿಕತೆಯ (GDP) ಬದಲು ನಾಗರಿಕರ 'ಒಟ್ಟಾರೆ ಸಂತಸದ' (Gross National Happiness) ಅಳತೆಗೋಲಿನಿಂದ ದೇಶದ ಶ್ರೀಮಂತಿಕೆಯನ್ನು ಅಳೆಯುವ ಜಗತ್ತಿನ ವಿಶಿಷ್ಟ ನಾಡಿನ ಮೂಲೆ ಮೂಲೆಗೂ ಲೇಖಕರು ನಮ್ಮನ್ನು ಕರೆದೊಯ್ಯುತ್ತಾರೆ.

ಸರಳವಾದ ನಿರೂಪಣೆ, ಸ್ಥಳಗಳ ನಿಖರ ವಿವರಣೆ, ಲೇಖಕರ ಸ್ವಾನುಭವ ಹಾಗೂ ಅವರ ಸ್ವಂತ ವಿಚಾರಧಾರೆಗಳು ಈ ಪುಸ್ತಕವನ್ನು ಕೇವಲ ಪ್ರವಾಸ ಕಥನವನ್ನಾಗಿಸದೆ, ನಮ್ಮದೇ ಕುಟುಂಬದ ಹಿರಿಯರೊಬ್ಬರು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ತಮ್ಮ ಅನುಭವಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಿರುವಂತೆ ಭಾಸವಾಗುವಂತೆ ಮಾಡಿದೆ. ಪ್ರವಾಸದ ಜೊತೆಗೆ ಆಧ್ಯಾತ್ಮಿಕ, ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಗಳನ್ನು ಒದಗಿಸುವ ಈ ಕೃತಿಯು ನಮ್ಮ ಗ್ರಂಥಾಲಯವನ್ನು ಬೆಳಗುವಂತಹ ಆಕರ ಗ್ರಂಥವಾಗಿದೆ. ೧೦೪ ಪುಟಗಳ ಈ ಪುಟ್ಟ ಪುಸ್ತಕ ಅಪಾರ ಮಾಹಿತಿಯನ್ನು ಒದಗಿಸುತ್ತದೆ.