ವಾಸ್ದೇವನ ಪಂಚಕಳಸ ಯಾತ್ರೆ

ಶ್ರೀನಿವಾಸ ಪಾ. ನಾಯ್ಡು ‘ವಾಸ್ದೇವನ ಪಂಚಕಳಸ ಯಾತ್ರೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಹೆಸರಲ್ಲೇ ಏನೋ ಕುತೂಹಲ ಕೆರಳಿಸುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಕಥೆಗಾರ ಡಾ. ಲಕ್ಷ್ಮಣ ವಿ ಎ. ಇವರು ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

“ಸಣ್ಣ ಕಥೆ ಈಗ ಬರೀ ಹರಿಕಥೆಯಲ್ಲ. ಅದು ಕಥೆಗಾರನೊಬ್ಬನ ಹಣೆಬರಹ ಬರೆಯುವ ಒಂದು ಅದೃಷ್ಟದ ಹಾಗೆ. ಲೇಖಕನೊಬ್ಬನ ಸೃಜನಶೀಲತೆಯನ್ನೇ ಕೆಣಕುವ ಸಾಲು-ಸಾಲು ಸ್ಪರ್ಧೆಗಳು, ಬಹು ಮೊತ್ತದ ಆಮಿಷವೊಡ್ಡುವ ಬಹುಮಾನಗಳು! ಅದಕ್ಕೆ ತಕ್ಕುದಾಗಿ ಸಮೃದ್ಧ ಫಸಲಿನ ಹಾಗೆ ಹರಿ-ಬರಿಯಲ್ಲಿ ಬರುತ್ತಿರುವ ಈ ಹೊತ್ತಿನ ಕಥೆಗಳು, ಹಾಗೆಯೇ ಸಧ್ಯದ ಸಣ್ಣ ಕಥಾ ಪ್ರಕಾರವೊಂದು ಪ್ರತಿಭಾವಂತ ಲೇಖಕನ ಸೃಜನಶೀಲ ಅಖಾಡವೂ ಹೌದು. ಕಾವ್ಯ, ನಾಟಕ ಕಾದಂಬರಿ ಮುಂತಾದ ಸಾಹಿತ್ಯದ ಇತರ ಪ್ರಕಾರಗಳಿಗಿಂತ ಕಥಾ ಪ್ರಕಾರ, ಅದರ ಕ್ಲುಪ್ತತೆ, ಓಫ್, ಸಂಕ್ಷಿಪ್ತತೆಗಳಿಂದಾಗಿ ಈ ಕಾಲಕ್ಕೆ ಹೇಳಿ ಮಾಡಿಸಿದಂತಹ ಒಂದು ಪ್ರಕಾರ,

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀನಿವಾಸರು ಈ ಕಾಲದ ಓದುಗರ ನಾಡಿ ಹಿಡಿದವರ ಹಾಗೆ ಈ ಪ್ರಕಾರಕ್ಕೆ ಮಾರುಹೋಗಿ, ತಮ್ಮ ಮೊದಲ ತೊದಲ ಸಂಕಲನ ಹೊರತರುತ್ತಿದ್ದಾರೆ. ಇಲ್ಲಿನ ಘಟನೆಗಳು ಛಕಾಛಕನೇ ಜರಗುತ್ತವೆ. ಮೂಲತಃ ಮಲೆನಾಡಿನ ಸೀಮೆಯವರಾದ ಇವರ ಕಥೆಗಳು ಒಂದರ್ಥದಲ್ಲಿ ಮಳೆ, ಕಾಡು ಇವುಗಳ ರಮಣೀಯತೆ ಮತ್ತು ರುದ್ರತೆಯನ್ನು ವಿವರಿಸುತ್ತಲೇ ಮನುಷ್ಯನ ವಿಕೃತಿಯಿಂದ ಪ್ರಕೃತಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಹೇಳುತ್ತ ಬೆಟ್ಟಗಳ ಕುಸಿತಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಈ ಬೆಟ್ಟಗಳ ಕುಸಿತ ಕೇವಲ ಬೆಟ್ಟಗಳ ಕುಸಿತ ಮಾತ್ರವಾಗದೆ ಮೌಲ್ಯಗಳ ಕುಸಿತವೂ ಆಗಿ ಇಲ್ಲಿ ಒಂದು ರೂಪಕವಾಗಿ ಮೈದಳೆಯುತ್ತದೆ. ವೇಗದ ಜಗತ್ತಿಗೆ ತಾಳ್ಮೆ ಮತ್ತು ಸಂಯಮ ಕಲಿಸುವ 'ತಾಳ್ಮೆ ದೈವವು’ ಕಥೆಯ ಕಥಾನಾಯಕ ಮಧು, ಒಂದು ಮಿಸ್ ಕಾಲ್ ತಂದೊಡ್ಡುವ ಆಘಾತ ಮತ್ತು ಅದರ ಸುಖಾಂತ್ಯ, ಮುಗ್ಧ ಚಾಲಕ ವಾಸ್ದೇವನ ಭಗ್ನ ಪ್ರೇಮ ಮತ್ತು ಪ್ರೇಮಿಯನ್ನು ಹುಡುಕುತ್ತ ಬೆಂಗಳೂರಿಗೆ ಬಂದಿಳಿಯುವ ವಾಸ್ದೇವ ಈ ನಗರದ ಕೊಳಚೆಯಲ್ಲಿ ವಾಸಿಸುವ ಹೆಗ್ಗಣವನ್ನು ನೋಡುತ್ತ ಅಂತ್ಯವಾಗುವ ಕಥೆ-ಒಂದು ಬಗೆಯ ಚಿಂತನೆಯನ್ನು ಹುಟ್ಟು ಹಾಕುತ್ತದೆ. ತೇಜಸ್ವಿ ನಡೆದಾಡಿದ ಮಣ್ಣಿನವರಾದ ಗೆಳೆಯ ಶ್ರೀನಿವಾಸರ ಕೆಲ ಕಥೆಗಳು ಭಾಷೆಯನ್ನು ಇನ್ನಷ್ಟು ಚೆನ್ನಾಗಿ ದುಡಿಸಿಕೊಳ್ಳಬಹುದಾಗಿತ್ತು. ಮುಂದಿನ ಕಥೆಗಳಲ್ಲಿ ಈ ಕೊರತೆ ಕಾಣದಿರಲಿ ಎಂದು ಹಾರೈಸುವೆ”