ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು.

ನವ್ಯೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ. ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನ ಸಂಕಲನಗಳು. ಪ್ರಭು ಅಲ್ಲಮ, ನೆಲವ ಹುಡುಕಿ ಗದ್ಯ, ಅಲ್ಲಮ ನಾಟಕ, ರಾಮಕೃಷ್ಣ ಮತ್ತು ಅವರ ಕಾಲ, ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು- ಅನುವಾದಿತ ಕೃತಿಗಳು. ಒಟ್ಟು ೧೪ ಕೃತಿಗಳನ್ನು ರಚಿಸಿದ್ದು, ಆರ್ಯಭಟ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೨೫ರ ಗೌರವ ಪ್ರಶಸ್ತಿ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ.  

***

ಜಲಮಂತ್ರ

ಜಲವು ನಿಲ್ಲದೆ ತನ್ನ ಮೂಲವನ್ನರಸುವುದು

ಮಳೆಯಾಗುವುದು, ಸಮುದ್ರವಾಗುವುದು

ಬೀಜ ಮೊಳಕೆ ಸಸಿಯಾಗುವುದು

ಮರ ಮರದ ತೃಣದಲ್ಲೂ ಅಡಗುವುದು ತೊಡಗುವುದು

 

ವಾಯುವಿನ ಅಂಗ ಅಂಗಗಳಲ್ಲಿ

ಗಗನದ ಮಾಯಾ ವಿಸ್ತಾರದಲ್ಲಿ

ಮಿಂಚುಗಳ ಬಳುಕಿನಲ್ಲಿ ಗುಡುಗುವುದು

ಸಿಡಿಲಾಗುವುದು ರಹಸ್ಯದ ಗರ್ಭ ಒಡೆಯುತ್ತಾ

 

ಧರೆ ಮಿಕ್ಕಿ ಮೀರುವುದು ತನ್ನ ಮೈಯೊಡ್ಡಿ

ಕಣಿವೆಗಳಲ್ಲಿ ಧಾರೆಯಿಕ್ಕುವುದು

ಹಾಗೆ ನಕ್ಕ ಪುಷ್ಪಗಳಲ್ಲಿ, ಪರಾಗದಲ್ಲಿ, ಪರಿಮಳದಲ್ಲಿ

ಇದ್ದೂ ಇಲ್ಲದಂತಿರುವುದು, ಇಲ್ಲವಾಗುವುದು, ಸಲ್ಲುವ ಸದಿಚ್ಚೆಯಲ್ಲಿ 

 

ತಿಳಿ ನೀರು ಕುಡಿದೆ ಜಠರಾಗ್ನಿ ತಣಿಸಲು

ಕಾಡು ಕಿಚ್ಚಳಿಸಿದ್ದು, ಮೂಡಣಕ್ಕೆ ಚಿತ್ತಾರ ಬಿಡಿಸಿದ್ದು

ಕಾವಿದ್ದೂ ಗಾಳಿ ತಂಪಾಗಿ ಸುಳಿದದ್ದು

ಜಲಾಂತರ್ಯಾಮಿ ಸಕಲವೂ ಇದ್ದದ್ದು

ಆದರೆ ನನ್ನೊಳಗೆ ಕಿಚ್ಚಳಿಯದು, ಜಲಮಂತ್ರ ನಡೆಯದು

 

ನಾನು ಬೆಂಕಿಯಾಗಿರುವೆ ;

ಬೆಂಕಿ ನಾಲಗೆ ಚಾಚಿ ಎಲ್ಲ ನೊಣೆಯುತ್ತಿರುವೆ

ಗಗನಗಳ ದಿಕ್ಕುಗಳ

ಪಾತಾಳ ಸುರಂಗಗಳಲ್ಲಿ ಹೊಕ್ಕು, ಇರುಳ ಕಂದೀಲು ಹಿಡಿದು

ಕತ್ತಲನ್ನೇ ಹಡೆದು, ಕತ್ತಲಿಗೆ ಮುತ್ತಿಕ್ಕಿ ಸುರತಸುಖಿ

ಹೀಗಿದ್ದರೂ ಜಲ ತನ್ನ ಮೂಲವನ್ನರಸುತ್ತಲೇ ಇದೆ

ಚಕ್ರಗತಿ ತಿರುತಿರುಗಿ ತಂಗಾಳಿ ತೀಡುತ್ತಲೇ ಇದೆ.

(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)