ಇಳೆಗೆ ಇಳಿವ ಎಲ್ಲ ಶಿಶುವು 

ಅಳುತ ನುಡಿವ ಮೊದಲ ನುಡಿಯ 

ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು

 

ನಾವು ನಡೆವ ನೆಲವು ತಾಯಿ 

ನಾವು ಕುಡಿವ ಜಲವು ತಾಯಿ 

ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು

 

ನಾವು ನುಡಿವ ನುಡಿಯು ತಾಯಿ 

ನಾವು ನೆಡುವ ಗಿಡವು ತಾಯಿ 

ನಾವು ಪಡೆವ ಎಲ್ಲ ಫಲವು ಅಮ್ಮನ್ನಿಂದಲೆ

 

ಅವಳೆ ದೇವಿ ಬಾಳ ಬೆಳಕು 

ಅವಳೆ ಉಸಿರು ಅವಳೆ ಹಸಿರು 

ಅವಳ ಮರೆತು ಎಂದು ನಾವು ಬಾಳಲಾರೆವು

 

ನಾಕವಿರಲಿ ನರಕವಿರಲಿ 

ಏಕವಾಗಿ ಜಗವ ಪೊರೆವ 

ಮೂಕ ಜೀವಿ ಭೂಮಿ ತಾಯಿ ಮರೆಯಬೇಡಿರಿ

 

ಅಮ್ಮಗಿಂತ ದೇವರಿಲ್ಲ 

ಗುಮ್ಮಗಂತು ಎಡೆಯು ಇಲ್ಲ 

ಸುಮ್ಮನೇಕೆ ಅವಳ ಜನರು ಬೀಳುಗಳೆವರು?

 

ಎಲ್ಲ ಎಡೆಯು ಇರಲು ಸೋತ 

ದೇವ ತಾನು ಕಾಣೆಯಾಗಿ 

ಅಮ್ಮನನ್ನು ಭುವಿಗೆ ತಂದು ಧನ್ಯನಾದನು

 

-ವಾ. ಮುರಳೀಧರ, ತೀರ್ಥಹಳ್ಳಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ