ಖ್ಯಾತ ಆಂಗ್ಲ ಬರಹಗಾರ, ಅದ್ಬುತ ಕಾದಂಬರಿಕಾರ ರಸ್ಕಿನ್ ಬಾಂಡ್ ಮಕ್ಕಳಿಗಾಗಿ ಕೆಲವು ಕಥೆಗಳನ್ನು ಬರೆದಿದ್ದಾರೆ. ಅಂತಹ ಒಂದು ಕಥೆಯನ್ನು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…
ಗಿರಿಯ ಮೇಲಿನ ಸರೋವರ
ಆಕಾಶದಲ್ಲಿ ಒಂದಾದರೂ ನಕ್ಷತ್ರ ಕಾಣುತ್ತಿರಲಿಲ್ಲ. ಚಂದ್ರನೂ ಕಾಣುತ್ತಿರಲಿಲ್ಲ. ಅಂತಹ ರಾತ್ರಿಯಲ್ಲೂ ಬಳಲಿ ಬೆಂಡಾಗಿದ್ದ ರಾಜಕುಮಾರ ಸಫರ್ ಸೋತು ಊದಿ ಕೊಂಡಿದ್ದ ತನ್ನ ಕಾಲುಗಳನ್ನು ಎಳೆದುಕೊಂಡು ಎದುರಿಗೆ ಕಾಣುತ್ತಿದ್ದ ಎತ್ತರವಾದ ಪರ್ವತಗಳ ಕಡೆ ಕಾಲು ಹಾಕುತ್ತಿದ್ದ. ಎಷ್ಟು ನಡೆದರೂ ಹತ್ತಿರ ಬಾರದೆ ದೂರವೇ ಇರುತ್ತಿದ್ದ ಆ ಪರ್ವತಗಳೇ ಅವನ ದಾರಿಯ ಕೊನೆ, ಕನಸಿನ ನಾಡು; ಅದನ್ನು ಒಂದಲ್ಲ ಒಂದು ದಿನ ಸೇರಿಯೇ ಸೇರುವ ಭರವಸೆ ಅವನಿಗಿತ್ತು.
ಯೋಗಿಯಂತೆ ವೇಷ ಮರೆಸಿಕೊಂಡು ಕಳೆದ ಹನ್ನೆರಡು ವಾರಗಳಿಂದಲೂ ಅವನು ಧೂಳು ತುಂಬಿದ ಆ ನಾಡಿನಲ್ಲಿ ಹೆಜ್ಜೆ ಹಾಕುತ್ತಲೇ ಇದ್ದನು. ಅವನ ವಿಶಾಲವಾದ ಹೆಗಲು, ಧೈರ್ಯ ತುಂಬಿದ ಕಣ್ಣು, ನೀಳವಾದ ಮತ್ತು ಬಲವಾದ ಕಾಲುಗಳೊಡನೆ ಹೊಂದಿ ಕೊಳ್ಳುವ ಅವನ ಕಾವಿ ಬಟ್ಟೆ, ಭಿಕ್ಷಾ ಪಾತ್ರೆಗಳನ್ನು ಕಂಡು ದಾರಿಹೋಕರಿಗೆ ಕೌತುಕವಾಗುತ್ತಿತ್ತು. ಸಫರ್ ದೆಹಲಿಯ ರಾಜಕುಮಾರ. ರಾಜ ಸಹಜ ಲಕ್ಷಣವನ್ನು, ವರ್ತನೆ ಗಳನ್ನು ಮುಚ್ಚಿಡುವುದು ಅವನಿಗೆ ಅಷ್ಟು ಸುಲಭವಾಗಿರಲಿಲ್ಲ.
ಯಮುನಾ ನದಿಯ ತೀರದಲ್ಲಿ ತನ್ನ ತಂದೆಯ ಅರಮನೆಯ ಉಪ್ಪರಿಗೆಯ ಮೇಲೆ ಒಂದು ಬೆಳದಿಂಗಳ ರಾತ್ರಿ ನಿದ್ದೆ ಮಾಡುತ್ತಿದ್ದಾಗ ಅವನಿಗೊಂದು ಕನಸು ಬಿದ್ದಿತ್ತು.
ದೂರದ ಬೆಟ್ಟಗಳ ಮೇಲಿರುವ ಸರೋವರ ಅವನಿಗೆ ಕನಸಿನಲ್ಲಿ ಕಂಡಿತ್ತು. ಸರೋವರದ ಮಧ್ಯೆ ಒಂದು ದ್ವೀಪ. ದಡದ ಬಳಿ ಅನೇಕ ಮಂದಿ ಪುಟ್ಟ ಜನರು ಸ್ನಾನ ಮಾಡುತ್ತಿದ್ದರು. ಅವರ ಮಧ್ಯೆ ಒಂದು ಸಣ್ಣ ಹುಡುಗಿ ದ್ವೀಪದ ಕಡೆಗೆ ನೋಡುತ್ತಾ ನಿಂತಿದ್ದುದನ್ನು ಅವನು ಕಂಡಿದ್ದ. ಅವಳ ರಾಜ ಯೋಗ್ಯ ಠೀವಿ, ನಡವಳಿಕೆಗಳ ಜತೆಯಲ್ಲಿ, ದುರ್ಬಲಳಂತೆ ಕಂಡರೂ ಅಪೂರ್ವ ಸೌಂದರ್ಯದಿಂದ ತುಂಬಿದ್ದ ಅವಳನ್ನು ನೋಡಿ ಅವನ ಮನಸ್ಸು ಅವಳಿಗೆ ಮಾರುಹೋಯಿತು. ನಿದ್ದೆಯಿಂದ ಎಚ್ಚೆತ್ತನಂತರ ಅವನಿಗೆ ಬಿದ್ದ ಕನಸು ಮರೆಯಾಗಲಿಲ್ಲ. ದಿನವೆಲ್ಲಾ ಅವನ ಮುಂದೆ ಸರೋವರದ ಬಳಿ ನಿಂತಿದ್ದ ಆ ಹುಡುಗಿಯ ಚಿತ್ರವೇ ಇದ್ದಂತಿತ್ತು.
ಕಡೆಗೆ ಆಸ್ಥಾನ ಜ್ಯೋತಿಷ್ಯನನ್ನು ಕರೆಸಿ ಕನಸಿನ ಅರ್ಥವನ್ನು ಕೇಳಿದ್ದ. ಜ್ಯೋತಿಷ್ಯನು ನಕ್ಷತ್ರಗಳ ಸ್ಥಿತಿಗತಿಗಳನ್ನು ದೀರ್ಘವಾಗಿ ಪರೀಕ್ಷಿಸಿ ಗಂಭೀರವಾಗಿ ಹೀಗೆಂದನು-
“ಒಂಟಿಯಾಗಿ ನೀನು ನಡೆದು ಉತ್ತರಕ್ಕೆ ಹೋಗ ಬೇಕು. ಕನಸಿನಲ್ಲಿ ಕಂಡ ಸರೋವರದ ಬಳಿಗೆ ಹೋಗಿ ಇಪ್ಪತ್ತು ತಿಂಗಳ ಕಾಲ ತಪಸ್ಸು ಮಾಡಬೇಕು. ಆಗ ಬಯಕೆ ಪೂರ್ಣವಾಗುತ್ತದೆ.”
ತನ್ನ ಕನಸಿನ ಸರೋವರವನ್ನು ಹುಡುಕಿಕೊಂಡು ರಾಜಕುಮಾರನಿಗೆ ಬೆಟ್ಟಗಳು ದೊಡ್ಡ ಹೊರಟಿದ್ದ ತಡೆಗಳಂತೆ ಕಂಡವು.
“ಈ ಕಗ್ಗತ್ತಲೆಯಲ್ಲಿ ಒಂದಾದರೂ ನಕ್ಷತ್ರ ನನಗೆ ದಾರಿ ತೋರಬಾರದೆ,” ಎಂದು ನಿಟ್ಟುಸಿರು ಬಿಟ್ಟನು.
ಕೂಡಲೇ ಅವನಿಗೊಂದು ನಕ್ಷತ್ರ ಕಂಡಿತು. ಪರ್ವತ ಶಿಖರಗಳಿಗೆ ತಾಗುವಷ್ಟು ಕೆಳಗಿದ್ದ ಧ್ರುವನಕ್ಷತ್ರ ತನ್ನ ಬಣ್ಣ ಬಣ್ಣದ ಕಿರಣಗಳಿಂದ ರಾಜಕುಮಾರನನ್ನು ತನ್ನೆಡೆಗೆ ಬರಲು ಕರೆಯುವಂತಿತ್ತು.
ನಕ್ಷತ್ರವನ್ನು ನೋಡಿ ನಡೆದು, ಕಡೆಗೊಮ್ಮೆ ಪೂರ್ಣವಾಗಿ ಬಳಲಿ ಬೀಳುತ್ತ ಏಳುತ್ತ ಗುಹೆಯೊಂದನ್ನು ಹೇಗೋ ಸೇರಿಕೊಂಡನು. ಹಿಂದಿನ ಹಳ್ಳಿಯಲ್ಲಿ ಪುಣ್ಯಾತ್ಮನೊಬ್ಬನು ಕರುಣೆಯಿಂದ ಕೊಟ್ಟಿದ್ದ ಕುರಿಯ ಚರ್ಮದ ಅಂಗಿಯೊಂದು ಇಲ್ಲದೆ ಹೋಗಿದ್ದರೆ ಚಳಿಯಲ್ಲಿ ಮರಗಟ್ಟಿ ಹೋಗಬೇಕಾಗಿತ್ತು. ಅಂಗಿಯನ್ನು ಕೊಟ್ಟಿದ್ದ ಮಲ್ಲ ಆಗಲೇ ಹೇಳಿದ್ದನು “ಕೊಬ್ಬಿದ ಹರೆಯದ ಕೋಣದ ಶಕ್ತಿಯನ್ನೂ ಸೆಳೆಯುವಷ್ಟಿದೆ, ಬೆಟ್ಟದ ಮೇಳಿನ ಛಳಿ" ಬೆಚ್ಚನೆಯ ಆ ಅಂಗಿಯನ್ನು ಹೊದ್ದು ಮಲಗಿ ನಿದ್ರಿಸಿತೊಡಗಿದಾಗ ಮಲ್ಲನು ಹೇಳಿದುದು ರಾಜಕುಮಾರನಿಗೆ ನೆನಪಿಗೆ ಬಂತು. ಮನಸ್ಸಿನಲ್ಲೇ ಮಲ್ಲನಿಗೆ ದೇವರು ಒಳ್ಳೆಯದು ಮಾಡಲೆಂದುಕೊಂಡನು.
ಮರು ಬೆಳಿಗ್ಗೆ ಬೆಳಗುವ ಸೂರ್ಯಕಿರಣಗಳು ಅವನನ್ನೆಬ್ಬಿಸಿದವು. ಆಗಲೇ ಬೆಳಗಾಗಿ ಬಲು ಹೊತ್ತಾಗಿತ್ತು. ಎದ್ದ ಕೂಡಲೇ ಗುಹೆಯ ದಕ್ಷಿಣಕ್ಕೆ ಓಡಿ ನೋಡಿದನು. ಆ ಗುಹೆಯ ಕೆಳಗೆ ಸ್ಪಟಿಕದಂತೆ ಶುಭ್ರವಾಗಿದ್ದ ತಿಳಿನೀರಿನ ಸರೋವರ. ಸರೋವರದಲ್ಲಿ ರಾಜ ಹಂಸಗಳು ಗಂಭೀರ ವಾಗಿ ಈಜುತ್ತಿದ್ದವು. ಮಧ್ಯೆ ಬಂಡೆಗಳಿಂದ ಸುತ್ತುವರಿದ ದ್ವೀಪ, ಸುತ್ತಲ ಬೆಟ್ಟಗಳಲ್ಲಿ ದೇವದಾರು, ಸಾಲ, ನೀಲಗಿರಿಯ ಮರಗಳು ತುಂಬಿ ಬೆಳೆದಿದ್ದ ಕಾಡು. ದ್ವೀಪದಲ್ಲಿ ಇನಿತೂ ಶಬ್ದವಿಲ್ಲದ ಶಾಂತಿ ನೆಲೆಸಿತ್ತು.
ಸಫರ್ ಸ್ವಲ್ಪ ಹೊತ್ತು ನಿಶ್ಚಲವಾಗಿ ತೆನ್ನೆದುರಿಗಿದ್ದ ಆ ರಮ್ಯ ನೋಟವನ್ನು ನೋಡುತ್ತಾ ಮೈಮರೆತನು. ಮರು ಕ್ಷಣವೇ ಕೈಗಳನ್ನು ಮೇಲೆತ್ತಿ ಜೋಡಿಸಿ, “ಸರ್ವ ಶಕ್ತನಾದ ದೇವರೇ, ನನ್ನ ಕನಸು ಕೇವಲ ಕಥೆಯಲ್ಲ. ಅಕ್ಷರಶಃ ನಿಜವಾದುದು. ನಾನೀಗ ಮಾಡಲಿರುವ ದೊಡ್ಡ ತಪಸ್ಸಿಗೆ ನಾನು ಅರ್ಹನಾಗುವಂತೆ ಮಾಡಿ ಅಗತ್ಯವಾದ ಶಕ್ತಿಯನ್ನು ಕೊಡು," ಎಂದು ಮೊದಲ ಪ್ರಾರ್ಥನೆ ಮಾಡಿದನು.
ತನ್ನ ಪಯಣದ ಕೊನೆಯಾದ ಆ ಗುಹೆಯೇ ಅವನ ಮನೆಯಾಯಿತು. ಗುಹೆಯ ಬಾಯಿಂದ ಸೂಯ್ಯೋದಯವಾದುದು ತಿಳಿಯುತ್ತಿತ್ತು. ಸ್ವಲ್ಪ ದಿನಗಳಲ್ಲೆ ವಿವಿಧ ರೀತಿಯ ಹಕ್ಕಿಗಳ ಚಿಲಿಪಿಲಿ, ಕಿರುಬಗಳ ಕೂಗು, ಜಿಂಕೆಗಳ ಅರಚುವಿಕೆ, ಕರಡಿಯ ಗುರುಗುಟ್ಟುವಿಕೆಗಳಿಗೆ ಅವನ ಕಿವಿಗಳು ಹೊಂದಿಕೊಂಡವು. ಅವನ ಧ್ಯಾನ ಭಂಗ ಮಾಡಲು ಅಲ್ಲಿ ಮನುಷ್ಯರ ಧ್ವನಿಗಳಿರಲಿಲ್ಲ. ಒಮ್ಮೊಮ್ಮೆ ವಿಚಿತ್ರ ರೀತಿಯ ಅಬ್ಬರವೊಂದು ಆ ಶಾಂತವಾದ ಕಣಿವೆ ಯನ್ನು ತುಂಬುತ್ತಿತ್ತು. ಬೆಟ್ಟಗಳಿಂದ ಪ್ರತಿಧ್ವನಿಗೊಂಡು ರಾಜಕುಮಾರನಿಗೆ ತಲುಪುತ್ತಿದ್ದ ಆ ಧ್ವನಿ, ಸ್ವಾತಂತ್ರ್ಯ ಬಯಸುತ್ತಿರುವ ಭೂತಗಳ ಅಳುವೆಂದು ತೋರುತ್ತಿತ್ತು.
ಅಮವಾಸ್ಯೆ ನಂತರ ಪಾಡ್ಯಮಿಯ ದಿನ ಚಂದ್ರ ದರ್ಶನ ಮಾಡಿ ಗುಹೆಯ ಬಂಡೆಯ ಮೇಲೆ ಸಫರ್ ಗುರುತು ಮಾಡುತ್ತಿದ್ದನು. ಈಗಾಗಲೇ ಆ ಬಂಡೆಯ ಮೇಲೆ ಅಂತಹ ಹತ್ತೊಂಬತ್ತು ಗುರುತುಗಳಾಗಿದ್ದವು. ಇನ್ನೊಂದು ಗುರುತು ಬಿದ್ದರೆ ಅವನ ತಪಸ್ಸಿನ ಇಪ್ಪತ್ತು ತಿಂಗಳ ಅವಧಿ ಮುಗಿದಂತೆ. ಕಡೆಗೊಂದು ರಾತ್ರಿ ಅಮಾವಾಸ್ಯೆಯ ನಂತರ ದ್ವೀಪದ ಮೇಲಿನ ವಿಚಿತ್ರಾಕಾರದ ಬೆಟ್ಟದ ಹಿಂದೆ ಚಂದ್ರನು ಕಂಡು ಬಂದನು. ಅಂದಿಗೆ ರಾಜಕುಮಾರನ ತಪಸ್ಸು ಮುಗಿಯಿತು.
ಎಲೆಗಳ ಹಾಸಿಗೆಯ ಮೇಲೆ ಮಲಗಿದ್ದ ಅವನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ. ರಾತ್ರಿಯ ಅವಧಿಗಳು ಬಹು ನಿಧಾನವಾಗಿ ಕಳೆದವು. ಕಡೆಗೊಮ್ಮೆ ಬೆಳಗಾಗಿ ಸುಂದರ ವಸಂತಮಾಸದ ದಿನ ಉದಯಿಸಿತು. ಆ ಕಣಿವೆಯ ಗಾಳಿ ಯಲ್ಲಿ ವಿಚಿತ್ರವಾದ ಹಿತ ಸಂಗೀತ ತುಂಬಿತ್ತು. ಗುಹೆಯ ಹೊರಗೆ ಹುಲುಸಾಗಿ ಬೆಳೆದಿದ್ದ ಹುಲ್ಲಿನ ಮೇಲೆ ಮೈ ಮೇಲೆ ಹಾಗೆಯೇ ಕಣಿವೆಯತ್ತ ನೋಡಿದನು. ನೂರಾರು ಜನ ಪುಟ್ಟ ಮನುಷ್ಯರು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು.
ರಾಜಕುಮಾರನು ತಾನಿದ್ದ ಬೆಟ್ಟದ ಮೇಲಿನಿಂದ ಬಹಳ ಹುಶಾರಾಗಿ ಕಣಿವೆಗೆ ಇಳಿದನು. ಅವನು ಇಳಿಯುವಾಗ ಒಂದು ಸಣ್ಣ ಕಲ್ಲು ಜಾರಿದರೂ ಕುಳ್ಳರು ಬೆದುರಿ ಚೆದುರಿ ಬಿಟ್ಟಾರೆಂದು ಸ್ವಲ್ವವೂ ಶಬ್ದವಾಗದಂತೆ ಇಳಿದು ಅವರ ಮಾತುಗಳನ್ನು ಕೇಳಿಸಿಕೊಂಡನು.
(ಇನ್ನೂ ಇದೆ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!