ಗಿರಿಯ ಮೇಲಿನ ಸರೋವರ

"ಈ ದಿನ ನಾವು ದ್ವೀಪಕ್ಕೆ ಈಜಿ ಹೊಗಬಾರದಂತೆ. ಹಾಗೆಂದು ನಮ್ಮ ರಾಣಿ ತಿಳಿಸಿದ್ದಾಳೆ. ನಿನ್ನೆ ರಾತ್ರಿ ಆ ರೆಕ್ಕೆಯ ಹಾವಿನಿಂದ ಸುದ್ದಿ ಬಂತು.

"ಆ ಅನಿಷ್ಟ! ಏನೆಂದು ಹೇಳಿತೋ, ಆ ಹಾವು?"

"ಯಾರಿಗೆ ಗೊತ್ತು. ಏನೋ ಕೆಟ್ಟ ಸುದ್ದಿಯೇ ಇರಬೇಕು. ನಮ್ಮ ರಾಣಿ, 'ನನ್ನ ಪ್ರಜೆಗಳೇ, ಈಗ ನಾನು ನಿಮ್ಮ ಕೈ ಬಿಡಲಾರೆ,' ಎಂದು ತುಂಬ ಸಂಕಟದಿಂದ ಎಂದಳು.”

"ಮತ್ತೇನು ತಾನೆ ಮಾಡುವುದು, ನಾವು? ಬನ್ನಿ ಸ್ನಾನವನ್ನಾದರೂ ಮಾಡೋಣ,” ಗುಲಾಬಿ ಬಣ್ಣದ ಮೋಹದ ಬಟ್ಟೆಗಳನ್ನು ಧರಿಸಿದ್ದ ಪುಟ್ಟ ಪುಟ್ಟ ಜನರು ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಸರೋವರದ ದಡಕ್ಕೆ ನಡೆದರು.

ಅವರ ಮಾತುಗಳಿಂದ ರಾಜಕುಮಾರನಿಗೆ ಅವರ ರಾಣಿಯ ಹೆಸರು ಗುಲ್ಬದನ್ ಎಂದು ಗೊತ್ತಾಗಿತ್ತು. ಅದರೆ ಅವಳು ಯಾರು, ಅವಳಿಗೆ ರೆಕ್ಕೆಯ ಹಾವಿನಿಂದ ಬಂದ ಸುದ್ದಿಯೇನು ಎಂದು ತಿಳಿಯದೆ ಯೋಚನೆಯಲ್ಲಿ ಮಗ್ನನಾದನು. ಹಾಗೆಯೇ ಯೋಚಿಸುತ್ತಾ ನೋಡು ತಿದ್ದಾಗ ಗುಂಪು ಗುಂಪಾಗಿ ನಿಂತಿದ್ದ ಪುಟ್ಟ ಜನರು ಪಕ್ಕಕ್ಕೆ ಸರಿದು ಪಲ್ಲಕ್ಕಿಯೊಂದಕ್ಕೆ ದಾರಿ ಮಾಡಿಕೊಟ್ಟರು. ನಾಲ್ಕು ಮಂದಿ ಪುಟ್ಟ ಜನರು ಕೆಂಪು, ಬಂಗಾರದ ಬಣ್ಣಗಳಿಂದ ಹೊಳೆಯುತ್ತಿದ್ದ, ರೇಷ್ಮೆಯ ಬಟ್ಟೆಗಳಿಂದ ಅಲಂಕರಿಸಿದ್ದ ಆ ಪಲ್ಲಕ್ಕಿಯನ್ನು ಹೊತ್ತು ತರುತ್ತಿದ್ದರು. ಪಲ್ಲಕಿಯ ಸುತ್ತಲೂ ಗಲ್‌ ಗಲ್ ಶಬ್ದಮಾಡುತ್ತಿದ್ದ ಸಣ್ಣ ಗಂಟೆಗಳಿದ್ದವು. ಪಲ್ಲಕ್ಕಿ ಹೊತ್ತಿದ್ದ ಪುಟ್ಟ ಜನರು ಕೆಂಪು ಪೈಜಾಮು, ನೇರಳೆ ಬಣ್ಣದ ಅಂಗಿಗಳನ್ನು ತೊಟ್ಟಿದ್ದರು. ಅವರ ಹಸಿರು ಗಡ್ಡಗಳು ಮೊಳಕಾಲಿನವರೆಗೂ ಬೆಳೆದಿದ್ದುವು. ರಸ್ತೆಯಲ್ಲಿ ಅತ್ತ ಇತ್ತ ಜನರೆಲ್ಲ ತಲೆಬಾಗಿ ಪಲ್ಲಕ್ಕಿಯಲ್ಲಿದ್ದವರಿಗೆ ಗೌರವ ಸೂಚಿಸಿದರು. ರಾಜಕುಮಾರನು ಅವಿತುಕೊಂಡಿದ್ದ ಪೊದೆಯ ಬಳಿಯಲ್ಲೇ ಮೆರವಣಿಗೆ ನಿಂತಿತು.

ಫಳಫಳ ಹೊಳೆಯುತ್ತಿದ್ದ ರತ್ನಗಳ ಉಂಗುರಗಳನ್ನು ಹಾಕಿಕೊಂಡಿದ್ದ ಪುಟ್ಟ ಕೈಯಿಂದ ಪರದೆಗಳನ್ನು ಸರಿಸಿ ರಾಣಿ ಗುಲ್ಬದನ್ ಪಲ್ಲಕ್ಕಿಯಿಂದ ಹೊರಬಂದಳು. ಅವಳನ್ನು ಕಂಡಕೂಡಲೇ ರಾಜಕುಮಾರನ ಹೃದಯ ಒಂದು ಕ್ಷಣ ಹಾಗೆಯೇ ನಿಂತಿತು. ದೆಹಲಿಯಲ್ಲಿದ್ದಾಗ ಕನಸಿನಲ್ಲಿ ಕಂಡ ಕುಸುಮ ಕೋಮಲ ಲತಾಂಗಿ ಅವಳೇ! ತನ್ನ ತಂದೆಯ ತೋಟದ ಪುಟ್ಟ ಗುಲಾಬಿ ಹೂವಿನಂತಹ ಅವಳ ಮುಖ ಅವನಿಗೆ ಬಹು ಮನೋಹರವಾಗಿ ಕಂಡಿತು.

ಪುಟ್ಟ ಪುಟ್ಟ ತುತೂರಿಗಳ ಧ್ವನಿಯಾಯಿತು. ಅದನ್ನು ಕೇಳಿ ಎಲ್ಲರೂ ನಿಶ್ಚಬ್ದವಾಗಿ ತಮ್ಮ ರಾಣಿಯ ಕಡೆ ಆಸಕ್ತಿಯಿಂದ ನೋಡಿದರು.

ರಾಣಿ ಗುಲ್ಬದನ್ ತನ್ನ ಮೃದು ಮಧುರ ಕಂಠದಿಂದ ಪ್ರಜೆಗಳಿಗೆ ಹೇಳಿದಳು- "ನನ್ನ ಮೆಚ್ಚಿನ ಪ್ರಜೆಗಳೇ, ನಿಮಗೆ ನಾನೊಂದು ಕೆಟ್ಟ ಸುದ್ದಿ ತಿಳಿಸಬೇಕಾಯಿತು. ರೆಕ್ಕೆಯ ಹಾವು ಬೆಲ್ಕುಷ್ ನನ್ನನ್ನು ಮದುವೆಯಾಗಲು ಪಣತೊಟ್ಟಿದೆ. ನಾನು ಇಲ್ಲವೆಂದರೆ, ನಮ್ಮ ದೇಶವನ್ನೆಲ್ಲಾ ನಾಶ ಮಾಡುತ್ತದಂತೆ.”

ರಾಣಿಯ ಈ ಮಾತುಗಳನ್ನು ಕೇಳಿ ಪ್ರಜೆಗಳ ಮಧ್ಯದಿಂದ ಅಳು, ನಿಟ್ಟುಸಿರುಗಳು ಕೇಳಿ ಬಂದವು. ರೆಕ್ಕೆಯ ಹಾವಿನೊಡನೆ ಹೋರಾಟ ಸಾಗದೆಂದು ಅವರಿಗೆಲ್ಲಾ ತಿಳಿದೇ ಇತ್ತು. ಆದರೆ ತಮ್ಮ ಪ್ರೀತಿಯ ರಾಣಿ ಆ ದುಷ್ಟ ಹಾವಿನ ವಶವಾಗುವುದನ್ನು ತಿಳಿದು ಅವರ ಮನಸ್ಸು ಕೋಪದಿಂದ ಕುದಿಯುತ್ತಿತ್ತು.

"ಹೆಚ್ಚು ಗಲಾಟೆ ಮಾಡಬೇಡಿ ಆ ಹಾವು ಇಲ್ಲಿಯೇ ಹತ್ತಿರದಲ್ಲಿದೆ. ದ್ವೀಪದಲ್ಲಿ ನನಗಾಗಿ ಕಾಯುತ್ತಿದೆ” ಎಂದು ರಾಣಿ ಗುಲ್ಬದನ್ ತಿಳಿಸಿದಳು.

ಈ ಮಾತುಗಳನ್ನು ಹಾವು ಕೇಳಿತೆಂಬಂತೆ ದ್ವೀಪದಿಂದ ಗುಡುಗಿನ ಶಬ್ದ ಕೇಳಿಸಿತು. ತಾನು ಗುಹೆಯಲ್ಲಿದ್ದಾಗ ಆಗಾಗ ಕೇಳಿ ಬರುತ್ತಿದ್ದ ಶಬ್ದವೇನೆಂದು ಆಗ ರಾಜಕುಮಾರನಿಗೆ ತಿಳಿಯಿತು. ಶಬ್ದ ಕೇಳಿದ ಕೂಡಲೇ ಪುಟ್ಟ ಜನರೆಲ್ಲಾ ಎಲ್ಲೆಂದರಲ್ಲಿ ಅಡಗಿಕೊಂಡರು. ಆದರೆ ಆ ಸುಂದರಿ ರಾಣಿ ಮಾತ್ರ ಸ್ವಲ್ಪವೂ ಬೆದರದೆ ದಿಟ್ಟತನ ದಿಂದ ದ್ವೀಪದ ಕಡೆ ನೋಡುತ್ತಾ ನಿಂತಳು.

"ಈ ದಿನ ನಾನು ನನ್ನ ಮಾತನ್ನು ಪಾಲಿಸುವೆ. ಈ ದಿನ ಸೂಯ್ಯನು ಮುಳುಗುವುದರೊಡನೆ ನಮಗೆ ಈ ಸಂಕಷ್ಟದಿಂದ ಪಾರಾಗಲು ದಾರಿ ದೊರೆಯದೆ ಹೋದರೆ ಇನ್ನೊಂದು ತಿಂಗಳಲ್ಲಿ ಬೆಲ್ಕುಷ್ ಹಾವನ್ನು ಮದುವೆ ಯಾಗುವೆ" ಎಂದು ಕೂಗಿ ಹೇಳಿದಳು.

“ಪ್ರಜೆಗಳೇ, ಈ ದಿನ ವಸಂತ ಋತುವಿನ ಮೊದಲ ದಿನ. ದುಃಖ ಸಂಕಟಗಳನ್ನು ಮರೆತು ನೀರಿನಲ್ಲಿ ಆನಂದಿಸಿರಿ. ಆದರೆ ದ್ವೀಪದಿಂದ ಮಾತ್ರ ದೂರವಿರಿ" ಎಂದು ರಾಣಿ ಗುಲ್ಬದನ್ ಪ್ರಜೆಗಳಿಗೆ ಹೇಳಿದಳು.

ಪುಟ್ಟ ಜನರ ಬೇಸರ, ಭಯಗಳು ಬಹುಕಾಲ ಉಳಿಯಲಿಲ್ಲ. ಹಾಡುತ್ತಾ, ನಗುತ್ತಾ, ನಲಿಯುತ್ತಾ ನೀರಿನಲ್ಲಿ ಕುಣಿದು ಆಟವಾಡಲು ಸಿದ್ಧರಾದರು. ಒಂದೇ ನಿಮಿಷದಲ್ಲಿ ತಮ್ಮ ಮೇಲುಡುಪುಗಳನ್ನು ತೆಗೆದಿಟ್ಟು ನೀರೆಡೆಗೆ ಓಡಿದರು. ಆ ಒಂದು ಕ್ಷಣ ಅವರನ್ನು ನೋಡಿ ರಾಣಿ ಗುಲ್ಬದನ್, ನಿಟ್ಟಿಸಿರು ಬಿಟ್ಟಳು. ಮರುಕ್ಷಣವೇ ಪಲ್ಲಕ್ಕಿಯೊಳಕ್ಕೆ ಹೋಗಿ ತಾನು ಯಾವಾಗಲೂ ಜಲಕ್ರೀಡೆಗಾಗಿ ಬಳಸುತ್ತಿದ್ದ ಹಳದಿಯ ಬಟ್ಟೆಗಳನ್ನು ತೊಟ್ಟು ಹೊರಬಂದಳು.

"ರಾಣಿಯ ಕಿರೀಟವನ್ನು ತೆಗೆದುಕೋ" ಮಾತುಗಳು ರಾಜಕುಮಾರನಿಗೆ ತನ್ನ ಬಲಗಡೆಯಿಂದ ಕೇಳಿ ಬಂದಂತೆ ಆಯಿತು. ಬಲಕ್ಕೆ ತಿರುಗಿ ನೋಡಿದನು. ಯಾರೂ ಇರಲಿಲ್ಲ. ಸ್ವಲ್ಪ ದೂರದಲ್ಲಿ ಬಂಡೆಯ ಮೇಲೆ ಹಾವುರಾಣಿಯೊಂದು ಬಾಯಿ ಬಿಟ್ಟುಕೊಂಡು ಇವನನ್ನೇ ನೋಡುತ್ತಿತ್ತು.

ರಾಜಕುಮಾರನು ಸ್ವಲ್ಪವೂ ಹಿಂದೆಗೆಯದೆ, ತಾನು ಅಡಗಿದ್ದ ಎಡೆಯಿಂದ ಪಲ್ಲಕ್ಕಿಯ ಕಡೆಗೆ ಓಡಿದನು. ರಾಣಿಯ ದಾಸಿಯರು, "ರಾಕ್ಷಸ, ರಾಕ್ಷಸ” ಎಂದು ಅರಚಿಕೊಂಡು ಓಡಿದರು. ದಾಸಿಯರ ಕೂಗನ್ನು ಕೇಳಿ ರಾಣಿ ಗುಲ್ಬದನ್ ನೀರಿನಿಂದ ಹೊರ ಬಂದು ತನ್ನ ಕಿರೀಟವನ್ನು ಹಿಡಿದಿದ್ದ ರಾಕ್ಷಸನ ಎದುರು ನಿಂತಳು.

ರಾಜಕುಮಾರನು ಅವಳನ್ನು ಸಂತೈಸುತ್ತಾ, "ಸುಂದರೀ, ನನ್ನ ಒರಟುತನವನ್ನು ಕ್ಷಮಿಸು. ಆದರೆ ಈ ಗಳಿಗೆಗಾಗಿ ತಾನು ಅನೇಕ ತಿಂಗಳಿಂದ ಕಾದಿರುವೆ” ಎಂದು ಅವಳತ್ತ ಹೆಜ್ಜೆಯಿಡತೊಡಗಿದನು. ಮರುಕ್ಷಣವೇ, ಆ ಪುಟ್ಟ ಕಿರೀಟ ಅವನ ಕೈಯಿಂದ ಜಾರಿ ನೀರೊಳಕ್ಕೆ ಬಿತ್ತು. ಅವನೂ, ರಾಣಿಯೂ ನೋಡ ನೋಡುತ್ತಿದ್ದಂತೆಯೇ ಕಿರೀಟವು ನೀರಿನಲ್ಲಿ ಮುಳುಗಿಹೋಯಿತು.

ಕಿರೀಟವನ್ನು ಕಳೆದುದಕ್ಕೆ ನಾಚಿ, ಪೆಚ್ಚಾದ ರಾಜಕುಮಾರ ಸಫರ್, ರಾಣಿಯ ಕಡೆ ಕ್ಷಮೆಯಾಚಿಸಿ ನೋಡಿದನು. ಆದರೆ ಅವನು ಕಂಡದ್ದೇನು! ಪುಟ್ಟ ಜನರ ರಾಣಿಯನ್ನಲ್ಲ. ತನ್ನಂತೆಯೇ ಬೆಳೆದಿದ್ದ ಸುಂದರ ಯುವತಿಯೊಬ್ಬಳು ಅವನ ಮುಖ ನೋಡಿ ಮುಗುಳ್ನಗುತ್ತಿದ್ದಳು! ಗುಲ್ಬದನ್ ಅವಳೇನೇ? ಅದೇ ಹೊಳೆಯುವ ಕಪ್ಪು ಕೂದಲು. ಅದೇ ಮೃದು ಮನೋಹರ ಕಂದು ಕಣ್ಣುಗಳು. ಅದೇ ಗುಲಾಬಿ ಬಣ್ಣದ ಕೆನ್ನೆಗಳು. ಅವಳೇ ಗುಲ್ಬದನ್. ಒಂದೇ ಕ್ಷಣದಲ್ಲಿ ಪೂರ್ಣ ಬೆಳವಣಿಗೆ ಹೊಂದಿದ್ದಳು.

ಒಬ್ಬರನ್ನೊಬ್ಬರು ಆಶ್ಚರ್ಯದಿಂದ ನೋಡುತ್ತಾ ಮುಗುಳ್ನಗುತ್ತಾ ಅವರಿಬ್ಬರೂ ನಿಂತಿದ್ದಾಗ ರೆಕ್ಕೆಯ ಹಾವು ಬೆಲ್ಕುಷ್ ತನ್ನ ಗವಿಯಿಂದ ಬಂದಿತು. ತನ್ನೆದುರೇ ನಡೆದ ಆ ಮಾಯೆಯನ್ನು ಕಂಡು ಹಾವು ರೋಷದಿಂದ ತನ್ನ ಬಾಲವನ್ನು ಬಡಿದು ಸರೋವರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು.

ರಾಣಿ ಗುಲ್ಬದನ್ ಅದನ್ನು ಗಮನಿಸಿ ಗಾಬರಿಯಿಂದ, “ಬೇಗ ಬಾ, ಇಲ್ಲೇ ನಿಂತಿದ್ದರೆ ಬೆಲ್ಕುಷ್ ನಮ್ಮನ್ನು ಕೊಂದುಬಿಡುತ್ತದೆ" ಎಂದು ಕೂಗಿಕೊಂಡಳು.

ರಾಜಕುಮಾರ ಅವಳನ್ನು ತನ್ನ ಬಲವಾದ ತೋಳುಗಳಲ್ಲಿ ಎತ್ತಿಕೊಂಡು ತನ್ನ ಗುಹೆಗೆ ನಡೆದನು. ತಮ್ಮನ್ನು ಹಿಡಿಯಲಾಗದೆ ಬೆಂಕಿಯನ್ನುಗುಳುತ್ತಾ ರೋಷದಿಂದ ಸುತ್ತಾಡುತ್ತಿದ್ದ ಹಾವನ್ನವರು ದೂರದಿಂದಲೇ ನೋಡಿದರು. ಅವರಿಗೂ ಪುಟ್ಟಜನರಿಗೂ ಅಸರೆಯಾಗಿದ್ದ ಆ ಬೆಟ್ಟ ರಾಜಕುಮಾರನ ಇಪ್ಪತ್ತು ತಿಂಗಳ ತಪಸ್ಸಿನಿಂದ ಪವಿತ್ರವಾಗಿ ಬಿಟ್ಟಿತ್ತು, ಸತ್ಯ, ಧರ್ಮಗಳನ್ನು ಕಂಡು. ಕೆಟ್ಟವರು ಹೆದರಿ ದೂರ ಸರಿಯಲೇಬೇಕು.

ಸುರಕ್ಷಿತವಾಗಿ ಗುಹೆಯನ್ನು ಸೇರಿದ ಮೇಲೆ ರಾಜಕುಮಾರನು ಗುಲ್ಬದನ್‌ ಳಿಗೆ ತನ್ನ ತಂದೆಯ ದೊಡ್ಡ ರಾಜ್ಯದ ವಿಚಾರ ತಿಳಿಸಿದನು. ತಾನು ದೆಹಲಿಯಲ್ಲಿ ಕಂಡ ಕನಸಿನ ವಿಷಯ, ತಾನು ಅಲ್ಲಿಗೆ ಬರಲು ಪಟ್ಟ ಪಾಡು, ತನ್ನ ತಪಸ್ಸು ಮೊದಲಾಗಿ ಎಲ್ಲ ವಿಷಯಗಳನ್ನೂ ತಿಳಿಸಿದನು.

"ನನ್ನ ದೆಹಲಿಯ ಅರಮನೆಯಲ್ಲಿ ನೀನು ಪ್ರಪಂಚಕ್ಕೇ ರಾಣಿಯಾಗುವೆ. ಆದರೆ ನಿನ್ನನ್ನು ಮಾಯೆಗೆ ಒಳಗು ಮಾಡಿದವರು ಯಾರು? ಕಣ್ಣು ಮುಚ್ಚಿ ತೆಗೆಯುವುದರೊಳಗಾಗಿ ನಿನ್ನಂತಹ ಅಪ್ಸರೆ ನನ್ನ ರಾಣಿಯಾದುದಾದರೂ ಹೇಗೆ?” ಎಂದು ಅವಳನ್ನು ಒಲಿಸಿಕೊಳ್ಳುತ್ತ ಕೇಳಿದನು.

ಅದನ್ನು ಕೇಳಿ ಕಣ್ಣಿನಿಂದ ಉದುರಿದ ಒಂದು ಪುಟ್ಟ ಹನಿ ನೀರನ್ನು ಒರೆಸಿಕೊಂಡು ಹೀಗೆಂದಳು ಗುಲ್ಬದನ್- "ನನ್ನ ತಂದೆ ಇಲ್ಲಿಂದ ಉತ್ತರಕ್ಕಿರುವ ಬೆಟ್ಟಗಳ ಆಚೆ ಇರುವ ದೊಡ್ಡ ರಾಜ್ಯದ ಚಕ್ರವರ್ತಿಯಾಗಿದ್ದನು. ನಾನು ಹುಟ್ಟಿದ ಸಮಯದಲ್ಲಿ, ಎಲ್ಲರೂ ಆನಂದದಲ್ಲಿ ಮೈ ಮರೆತಿದ್ದಾಗ ನಮ್ಮ ಶತ್ರು ಬೆಲ್ಕುಷ್ ನಮ್ಮ ಸೈನ್ಯ ಸಿದ್ಧವಾಗುವುದರೊಳಗೇ ನಮ್ಮ ದೇಶವನ್ನು ಸೂರೆ ಮಾಡಿದನು. ಸೋತ ನನ್ನ ತಂದೆ ದೇಶವು ಹಾಳಾಗದಂತೆ ಉಳಿಸಲು ನನ್ನನ್ನು ಬೆಲ್ಕುಷ್ ಗೆ ಮದುವೆ ಮಾಡಿ ಕೊಡುವುದಾಗಿ ಮಾತುಕೊಟ್ಟನು. ನನ್ನ ಸುಂದರಿ ತಾಯಿಯನ್ನು ಕಂಡು ಮತ್ಸರದಿಂದ ಕುದಿಯುತ್ತಿದ್ದ ಬೆಲ್ಕುಷ್‌ನ ತಂಗಿ, ನನ್ನ ತಾಯಿಯನ್ನು ಹಸಿರು ಹಾವುರಾಣಿ ಮಾಡಿ, ಉಳಿದೆಲ್ಲರನ್ನೂ ಪುಟ್ಟ ಜನರನ್ನಾಗಿ ಮಾಡಿಬಿಟ್ಟಳು. ಇದನ್ನೆಲ್ಲಾ ಕಂಡ ತಂದೆ ಸಂಕಟದಿಂದ ಎದೆಯೊಡೆದು ಸತ್ತನು. ಆದರೆ ಸಾಯುವ ಮೊದಲು ನನ್ನನ್ನು ಕರೆದು, ದಕ್ಷಿಣವು ಉತ್ತರಕ್ಕೆ ಬಂದಾಗ; ನಷ್ಟವು ಲಾಭವಾದಾಗ, ಬೆಲ್ಕುಷನ ಶಕ್ತಿ ನಾಶವಾಗುವುದೆಂದು ಹೇಳಿದನು."

ರಾಜಕುಮಾರನಾದ ನಾನು ಉತ್ತರಕ್ಕೆ ಬಂದೆ. ನಿನ್ನ ತಂದೆ ಹೇಳಿದುದು ನಿಜವಾಯಿತು. ದಕ್ಷಿಣ ಮಕುಟ ನಷ್ಟವಾಗಿ ನಿನಗೆ ಪ್ರಪಂಚದ ರಾಣಿಯ ಕಿರೀಟ ಲಾಭವಾಯ್ತು” ಎಂದ ರಾಜಕುಮಾರ ಸಫರ್.

"ನನ್ನ ಪ್ರಜೆಗಳಿಗೆ ನೀನು ಸಹಾಯ ಮಾಡುವೆಯಾ?” 

"ಖಂಡಿತವಾಗಿಯೂ ಮಾಡುವೆ. ನೀನು ನನ್ನನ್ನು ಮದುವೆಯಾಗುವೆಯಾ?”

"ಖಂಡಿತವಾಗಿಯೂ ಎಂದು ನಗುತ್ತಾ ಉತ್ತರ ಕೊಟ್ಟಳು ಗುಲ್ಬದನ್.

ರೂಪಸಿ ಗುಲ್ಬದನ್‌ ನೊಡನೆ ಹಿಂತಿರುಗಿದ ತಮ್ಮ ರಾಜಕುಮಾರನನ್ನು ದೆಹಲಿಯ ಜನರು ಬಹಳ ಆನಂದದಿಂದ ಸ್ವಾಗತಿಸಿದರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ರೇಷ್ಮೆಯ ಬಾವುಟಗಳು. ಕಂಬಗಳಿಗೆಲ್ಲಾ ಸುವಾಸನೆಯ ಹೂಗಳ ಹಾರಗಳನ್ನು ಸುತ್ತಿದರು. ಪ್ರತಿ ಬಾಗಿಲ ಮುಂದೆಯೂ ಬಣ್ಣ ಬಣ್ಣದ ರಂಗವಲ್ಲಿ ಹಾಕಿದ್ದರು. ರಾಜಕುಮಾರ ಸಫರ್ ಮತ್ತು ರಾಣಿ ಗುಲ್ಬದನ್ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಅರಮನೆಯ ಕಡೆ ಹೊರಟಾಗ ಪ್ರಜೆಗಳೆಲ್ಲಾ ಆನಂದದಿಂದ ಜಯ ಜಯಕಾರ ಮಾಡುತ್ತಿದ್ದರು. 

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ