ಕಳೆದ ವಾರ ಮನೆಗೆ ಬಂದಿದ್ದವರು ನಾನು ಇನ್ನೂ ಪೂರ್ಣ ಸಮಯದಲ್ಲಿ ಕೃಷಿ ಮಾಡುತ್ತಿಲ್ಲ ಎಂದರು. ನಾನು ಒಳ್ಳೆಯದು, ಕೆಲಸ ಬಿಟ್ಟು ಬಂದು ಅಡಿಕೆ ಹಾಕುವ ಬದಲು ಸ್ವಲ್ಪ ಬೇರೆಯ ಮರಗಳನ್ನು ನೆಡಬಹುದು ಎಂದೆ.
ಬಹುತೇಕ ಕೃಷಿಗೆ ಬರುವವರದ್ದು ಇದೇ ಕತೆ. ಅದರಿಂದ ಏನು ಬೇಕು, ಎಷ್ಟು ಬೇಕು ಎನ್ನುವುದರ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ಎರಡು ಮೂರು ವರ್ಷ ಕೃಷಿ ಮಾಡುವಷ್ಟರಲ್ಲಿ ಕೈ ಕಚ್ಚುತ್ತದೆ. ಆಗ ಇದ್ದಕ್ಕಿದ್ದ ಹಾಗೆ ದಾರಿ ಬದಲಿಸಲು ಪ್ರಯತ್ನ ಮಾಡುತ್ತಾರೆ. ಇನ್ನಷ್ಟು ಬಂಡವಾಳ ಬೇಕಾಗುತ್ತದೆ. ಪುನಃ ಅದನ್ನು ಮರಳಿ ಪಡೆಯಲು ಸರ್ಕಸ್!!
ಮಾರಾಟ ಮಾಡುವ ಒತ್ತಡ ಕೃಷಿ ಭೂಮಿಯಿಂದ ದೂರ ಉಳಿಯುವಂತೆ ಮಾಡುತ್ತದೆ. ಕೃಷಿಕರೇ ಮೌಲ್ಯವರ್ಧನೆ ಮಾಡಬೇಕು ಎನ್ನುವುದು ಒಳ್ಳೆಯದು. ಆದರೆ ಯಾವ ಮಟ್ಟದಲ್ಲಿ ಎಂದು ಮೊದಲೇ ನಿರ್ಧರಿಸಬೇಕು. ಉಪಕರಣಗಳನ್ನು ಇಟ್ಟು ಮೌಲ್ಯವರ್ಧನೆ ಮಾಡಲು ಆರಂಭಿಸಿದರೆ ಮಾರುಕಟ್ಟೆಯ ತಲೆನೋವು ಇದ್ದೇ ಇರುತ್ತದೆ. ನಂತರ ಕೃಷಿ ಭೂಮಿಯಿಂದ ದೂರವಾದರೆ ಕೃಷಿ ಕುಸಿಯುತ್ತದೆ. ಇನ್ನೊಬ್ಬರು ಸ್ನೇಹಿತರು ಮೌಲ್ಯವರ್ಧನೆ ಆರಂಭಿಸಿದ ಮೇಲೆ ಕೃಷಿ ಭೂಮಿಗೆ ಹೋಗಲಾಗುತ್ತಿಲ್ಲ ಎಂದರು. ಇದು ಸಾಮಾನ್ಯವಾಗಿ ಆಗುವ ತೊಂದರೆ. ಅದರಲ್ಲೂ ಮೌಲ್ಯವರ್ಧನೆ ಕೃಷಿ ಭೂಮಿಯಿಂದ ಹೊರಗಾಗುವುದಾದರೆ ಹಾಗೂ ನಾವೂ ಅಲ್ಲಿರದೆ ಬೇರೆಡೆಯಿದ್ದರೆ.
ನಾವು ಕೃಷಿಕರಾಗಲು ಬಂದಿದ್ದರೆ ಕೃಷಿ ಭೂಮಿಯಲ್ಲಿರುವುದು ಸೂಕ್ತ. ಮಾರುಕಟ್ಟೆ ನಮ್ಮ ಜಾಗವೇ ಆದರೆ ಇನ್ನೂ ಒಳ್ಳೆಯದು. ಆದರೆ ಹಾಗೆಲ್ಲಾ ಆಗಲು ವರ್ಷಗಳು ಹಿಡಿಯುತ್ತವೆ. ಭೂಮಿ ಕೊಂಡ ಕ್ಷಣದಲ್ಲೇ ಹಲವಾರು ಉದ್ದಿಮೆಗಳಿಗೆ ಕೈ ಹಾಕಿದರೆ ಕೃಷಿ ನಿಧಾನವಾಗುತ್ತದೆ. ದೊಡ್ಡ ಕುಟುಂಬಗಳಲ್ಲಿ ಒಬ್ಬರು ಆಚೆ ನೋಡಿದರೆ ಇನ್ನೊಬ್ಬರು ಕೃಷಿ ನೋಡಬಹುದಾದ ವ್ಯವಸ್ಥೆಯಿದ್ದಾಗ ಅಷ್ಟು ಕಷ್ಟವಾಗುವುದಿಲ್ಲ. ಸಣ್ಣ ಕುಟುಂಬವಿದ್ದು ಕೃಷಿ ನೋಡುವವನೇ ಮಾರಾಟವನ್ನೂ ನೋಡಬೇಕಾದಾಗ ಕಷ್ಟ.
ಒಂದು ಭೂಮಿಯಿಂದ ನಮ್ಮ ನಿರೀಕ್ಷೆಯೇನು ಎಂಬುದನ್ನು ಒಂದು ಕಡೆ ಬರೆದಿಡಬೇಕು. ಅದು ಹಣವೋ ನೆಮ್ಮದಿಯೋ, ಜೀವನ ಪದ್ದತಿಯೋ, ಎಲ್ಲದರ ಹದವಾದ ಮಿಶ್ರಣವೋ ಇತ್ಯಾದಿ. ಹಣ ಬೇಕಿದ್ದರೆ ಅದನ್ನು ಕೂಡಾ ಹೇಳುವಲ್ಲಿ ಸಂಕೋಚವಿರಬಾರದು. ಒಮ್ಮೆ ಆ ದೃಢತೆ ಬಂದ ಮೇಲೆ ಹಾದಿ ತಪ್ಪುವುದು ಕಡಿಮೆಯಾಗುತ್ತದೆ. ಇಲ್ಲವಾದಲ್ಲಿ ಎಲ್ಲರೂ ಮಾಡಿದೆಲ್ಲಾ ನಾವೂ ಮಾಡುವ ಹಾಗಾಗುತ್ತದೆ. ಇನ್ನೊಬ್ಬರ SWOT ನಮಗೆ ಪೂರ್ಣವಾಗಿ ತಿಳಿಯದ ಕಾರಣ ಅವರಷ್ಟು ಗೆಲುವು ದಕ್ಕದೆ ಪರದಾಡಬೇಕಾಗುತ್ತದೆ. ಸದ್ಯಕ್ಕೆ ಬೆಳೆಯುವವರು ಹಾಗೂ ಮಾರಾಟ ಮಾಡುವವರ ಎರಡು ತಂಡಗಳು ಬೇಕು. ಅವುಗಳ ಲಾಭದ ಹಂಚಿಕೆ ಸಮನಾಗಿ ಆದರೆ ಅಷ್ಟೇ ಸಾಕು!
ನನ್ನ ಪ್ರಕಾರ ಬೆಳೆಯುವವನು ಭೂಮಿ ಬಿಟ್ಟು ಹೋಗಬಾರದು. ಮಾರಾಟ ಮಾಡುವವನಿಗೆ ಭೂಮಿಯಲ್ಲಿ ಗಿಡಕ್ಕೆ ನೀರು ಹಾಕುವ ಚಿಂತೆ ಇರಬಾರದು. ನಾನು ಹೇಳುತ್ತಿರುವುದು ಯಾವುದೂ ಹೊಸತಲ್ಲ. ಸಾಕಷ್ಟು ಜನ ಪ್ರಯೋಗ ಮಾಡಿದ್ದಾರೆ ಹಲವು ವಾರಗಳ ನಂತರ ಸೋತಿದ್ದಾರೆ. ಹಾಗಾಗಿಯೇ ಹಲವಾರು ಪ್ರಯೋಗಗಳು ಸೋತ ಹಾಗೆ ಕಾಣುತ್ತವೆ.
ಪ್ರತಿ ವಾರ ಒಬ್ಬರು ಅಂಗಡಿಯಲ್ಲಿ ಕೂರಬೇಕು ಎಂದು ಆರಂಭವಾದ ಗುಂಪೊಂದಿತ್ತು. ಆದರೆ ಕೃಷಿಯ ಕಾಯಕವೇ ಹಾಗೆ. ಆ ಸಮಯ ಬಂದಾಗ ಏನೋ ಅಟಕಾಯಿಸುತ್ತದೆ. ಒಮ್ಮೆ ಪರವಾಗಿಲ್ಲ ಎರಡು ಬಾರಿ ಒಕೆ. ಆದರೆ ನಂತರದಲ್ಲಿ ಇನ್ನೊಬ್ಬರು ನಮಗೋಸ್ಕರ ಅವರ ಸಮಯವನ್ನು ಕೊಡುವುದಿಲ್ಲ. ಹಾಗೇ ನಿಧಾನವಾಗಿ ಮನಸ್ತಾಪ ನಂತರ ಯೋಜನೆ ನಿಲ್ಲುತ್ತದೆ.
ಆದರೆ ಮಾರಾಟ ಮಾಡುವುದು ಕೂಡಾ ಅಷ್ಟೇ. ಎಷ್ಟು ಮಾಡಬಹುದು? ಗುಂಪಿನಲ್ಲಿ ಹತ್ತು ಜನರಿದ್ದರೆ. ಸುಮಾರು ಹತ್ತು ಎಕರೆಯಷ್ಟು ಬಾಳೆ ಬೆಳೆದಿದ್ದರೆ ಅಷ್ಟನ್ನೂ ಮಾರಲು ಸಾಧ್ಯವೇ? ಹಾಗಿದ್ದರೆ ಏನನ್ನು ಎಷ್ಟು ಬೆಳೆಯಬಹುದು? ಹಾಗೂ ಯಾರು ಏನನ್ನು ಬೆಳೆಯಬೇಕು ಎಂದು ಹೇಗೆ ನಿರ್ಧರಿಸುವುದು? ಬೆಳೆಗೆ ಮೌಲ್ಯವೆಷ್ಟು? ಅದರ ಗುಣಮಟ್ಟ ಯಾರು ನಿರ್ಧರಿಸುವುದು? ಅದರಲ್ಲಿ ಯಾರಾದರೂ ಒಬ್ಬರದ್ದು ಮಾರಾಟವಾಗದಿದ್ದರೆ ಏನು ಮಾಡುವುದು? ಇತ್ಯಾದಿಇತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಬರುತ್ತದೆ. ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಬೆಳವಣಿಗೆಗೆ ಕೃಷಿಕರೂ ಪಾಲುದಾರರಾದರೆ ಉತ್ತಮ. ಆಗ ಹಣ ಹೂಡಿದವನೇ ದೊಡ್ಡಪ್ಪ ಎನ್ನುವುದು ತಪ್ಪುತ್ತದೆ.
ಯಾರಾದರೂ ಮೌಲ್ಯವರ್ಧನೆ ಮಾಡುತ್ತಿದ್ದರೆ, ಅವರನ್ನು (ಕಷ್ಟವೆನಿಸಿದರೂ) ಕೇಳಬೇಕಾದ ಒಂದಿಷ್ಟು ಪ್ರಶ್ನೆಗಳಿವೆ. ಶೇಕಡಾ ಎಷ್ಟು ಮಾರಾಟವಾಗುತ್ತದೆ? ಅಷ್ಟು ಮಾರಾಟ ಮಾಡಲು ಎಷ್ಟು ಅವಧಿ ಬೇಕು? ಎಷ್ಟು ಬಂಡವಾಳ, ಬಂಡವಾಳ ಮರಳಿ ಬಂದಿದೆಯೇ? ಅದು ಕಂಪೆನಿಯಾಗಿದ್ದರೆ ಅದರ ಲಾಭ ನಷ್ಟವೇನು? ಜೊತೆಗೆ ನಮಗೆ ಅಷ್ಟು ಸಮಯ, ಬಂಡವಾಳ, ಸಾಧ್ಯವೇ?
ಸ್ನೇಹಿತರು ಹೇಳುತ್ತಿದ್ದರು ಯಾರೋ ಹಸು ಸಾಕು ಆರಂಭಿಸಿ ಈಗ ಸಿಹಿತಿಂಡಿಗಳ ಅಂಗಡಿಯನ್ನೇ ಇಟ್ಟಿದ್ದಾರೆ ಎಂದು. ಅದು ಹಲವರಿಗೆ ಗೆಲುವಾಗಿ ಕಾಣಬಹುದು. ಆದರೆ ಮೇಲಿನ ಪ್ರಶ್ನೆಗಳನ್ನು ಕೇಳಿದಾಗ ಅಥವಾ ನಮಗೆ ನಾವೇ ಕೇಳಿಕೊಂಡಾಗ, ನಮ್ಮ ಮೂಲ ಉದ್ದೇಶವೇನಿತ್ತು ಹಾಗೂ ಈಗ ನಾವು ಮಾಡುತ್ತಿರುವುದೇನು ಎಂಬುದರ ಅಂತರ ತಿಳಿಯುತ್ತದೆ. ಇರುವುದೊಂದೇ ಜೀವನ ಎಷ್ಟು ಬಾರಿ ಹಾದಿ ತಪ್ಪಲು ಸಾಧ್ಯ? :-) ಅದು ಸರಿಯಲ್ಲ ಎಂದೇ ಕೃಷಿಗೆ ಬಂದು ನಂತರ ಇಲ್ಲೂ ಹಾಗೇ ಆದರೆ ಉಪಯೋಗವೇನು?
ಹಾಗಾಗಿ ಕೃಷಿಗೆ ಬರುವುದರ ಬಗ್ಗೆ ನಿಮ್ಮ ಮೂಲ ಉದ್ದೇಶವೇನು? ಅದು ನಿಮ್ಮ ಮನಸ್ಥಿತಿ, ಹಣಕಾಸಿನ ಪರಿಸ್ಥಿತಿ, ಮನೆಯವರ ಇಚ್ಛೆಗಳು, ಮಕ್ಕಳ ವಯಸ್ಸು ಹಾಗೂ ಅವರ ಆಯ್ಕೆಗಳು ಎಲ್ಲವನ್ನೂ ಗಮನಿಸಿ. ನೀವು ಮೂಲದಿಂದ ಅಲ್ಲೇ ಇದ್ದು ಮಕ್ಕಳು ಅಲ್ಲೇ ಹುಟ್ಟಿದರೆ ಬೇರೆ. ನಗರದಿಂದ ಹಳ್ಳಿಗೆ ಬರುವುದಾದರೆ ಬೇರೆ. ಕೃಷಿಗೆ ಬರುವುದು ಪುನಃ ಒಂದು ಉದ್ದಿಮೆ ಬೆಳೆಸಲು ಎಂದರೆ ಯಾಕೋ ಮೂಲ ಉದ್ದೇಶವೇ ಸರಿಯಿಲ್ಲ ಎನಿಸುತ್ತದೆ. ಕೃಷಿಯ ಮಿತಿಗಳು ಹಾಗೂ ಅದರ ಲಾಭಗಳ ಅರಿವು ಇನ್ನೂ ಆಗಿಲ್ಲವೆಂದೆನಿಸುತ್ತದೆ. ಅಲ್ಲೂ ರಾತ್ರಿ ಕೆಲಸ ಮಾಡಿ ಬೇಜಾರಾಗಿ ಇಲ್ಲೂ ರಾತ್ರಿಯಿಡೀ ಕೆಲಸ ಮಾಡಬೇಕೇ? ಹಾಗಾದರೆ ಕೆಲಸ ಬಿಡುವುದರ ಉದ್ದೇಶವೇನಿತ್ತು? ಎಲ್ಲವೂ ಮೊದಲೇ ಯೋಚಿಸಿ.
ಯಾವುದು ಮಾಡಬೇಕು? ಅದನ್ನು ಯಾಕೆ ಮಾಡಬೇಕು? ಅದನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕು? ಮಾಡುವುದರಿಂದ ಆಗುವ ಲಾಭ ನಷ್ಟಗಳೇನು? ಅದು ನಮ್ಮ ಮೂಲ ಉದ್ದೇಶಕ್ಕೆ ಪೂರಕವಾಗಿದೆಯೇ? ಅಥವಾ ಹಾದಿ ತಪ್ಪುತ್ತಿದ್ದೇವೆಯೇ? ಎಂಬುದರ ಬಗ್ಗೆ ಗಮನವಿರಲಿ. ಯಾರಿಗೆ ಬೇಕಾದರೂ ಸುಳ್ಳು ಹೇಳಬಹುದು ನಮಗೆ ನಾವೇ ಸುಳ್ಳು ಹೇಳಿಕೊಳ್ಳುವುದು ಕಷ್ಟ! ಹಾಗಾಗಿ ಇವೆಲ್ಲದರ ಬಗ್ಗೆ clarity ಇದ್ದಷ್ಟೂ ಒಳ್ಳೆಯದು.#ಕೃಷಿಚಿಂತನೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!