ಸ್ನಾನ ಎಂದರೆ ಒಂದಾನೊಂದು ಕಾಲದಲ್ಲಿ ಮಣ್ಣಿನಿಂದ ಮಾಡುತ್ತಿದ್ದರಂತೆ. ಪಾಶ್ಚಿಮಾತ್ಯ ಪ್ರಭಾವ ಮತ್ತು ಜಾಗತೀಕರಣದಿಂದ ಈಗ ಸಾಬೂನು ಪ್ರತಿ ಸ್ನಾನಗೃಹದ ಅವಿಭಾಜ್ಯ ಅಂಗವಾಗಿದೆ.

ಹಾಲಿನ, ಅಲೋ ವೇರಾ, ನಿಂಬೆ ಇಲ್ಲವೇ ಬರೀ ಗ್ಲಿಸರಿನ್ ಸೋಪುಗಳು ಈಗ ಪ್ರಸಿದ್ಧ. ಸಾಬೂನಿನ ಗುಣಮಟ್ಟ ಅದರ ಪ್ರಚಾರಕ್ಕಾಗಿ ತಯಾರಿಸಿದ ಜಾಹೀರಾತಿನ ಚೆಲುವೆಯ ಅಂದದಮೇಲೆ ನಿಂತಿರುತ್ತದೆ. ನಾಲ್ಕೈದು ವಯಸ್ಸಿನ ಮಗುವಿನ ತಾಯಿ ಸಂತೂರ್ ಉಪಯೋಗಿಸಿದರೆ ಇನ್ನೂ ಕನ್ಯೆಯಾಗೆ ಕಾಣುತ್ತಾಳಂತೆ!

ಮನೆಯಲ್ಲೇ ಇಂಥ ಸಾಬೂನು ಮಾಡಬಹುದು ಎಂದು YouTube ಅಲ್ಲಿ ನೋಡಿ ತಿಳಿಯಿತು. ನಾನು ಸಣ್ಣವನಿದ್ದಾಗ ರಾಜೀವ್ ದೀಕ್ಷಿತ್ ಎಂಬ ಸ್ವದೇಶಿ ಆಂದೋಲನಕಾರರ ಭಾಷಣ ನೆನಪಿಗೆ ಬಂತು. ಗುಲ್ಬರ್ಗದ ಯುವಕರು ಯಾಕೆ ಸಾಬೂನು ತಯಾರಿಸಿ ಸ್ವಂತ ಕಾಲ ಮೇಲೆ ನಿಲ್ಲಬಾರದು ಎಂದು ನೂತನ ವಿದ್ಯಾಲಯ ಆಟದ ಮೈದಾನದಲ್ಲಿ ಭಾಷಣ ಮಾಡುತ್ತಾ ಹೇಳಿದ್ದರು.

ಸಾಬೂನು ಬೇಸ್, ವಿಟಮಿನ್ ಇ ಮತ್ತೊಂದು ಸೋಪಿನ ಆಕಾರಕ್ಕೆ ಒಂದು ಅಚ್ಚು ತರಿಸಿದ್ದಾಯ್ತು. ಒಂದು ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಒಂದು ಅಲೋವೆರಾ ತುಂಡು ಮಿಕ್ಸಿ ಅಲ್ಲಿ ರುಬ್ಬಿದ್ದಾಯ್ತು. ಸಾಬೂನು ಬೇಸ್ ಅನ್ನು ಒಂದು ಬಟ್ಟಲಲ್ಲಿ ಹಾಕಿ ಅದನ್ನು ಇನ್ನೊಂದು ಪಾತ್ರೆಯಲ್ಲಿ ಇಟ್ಟು ನೀರು ಹಾಕಿ ಕಾಯಿಸಿದೆವು. ಬಟ್ಟಲಿನ ಸಾಬೂನು ಬೇಸ್ ಕರಗಿದಂತೆ ಅದಕ್ಕೆ ಕಿತ್ತಳೆ ರಸ ಸೇರಿಸಿ, ಒಂದು ವಿಟಮಿನ್ ಇ ಮಾತ್ರೆಯ ರಸವನ್ನೂ ಬೆರೆಸಿ ಅಚ್ಚಿನಲ್ಲಿ ಹಾಕಿದ್ದಾಯ್ತು.

ಎರಡು ಗಂಟೆ ಬಿಟ್ಟು ನೋಡಿದರೆ ಗಟ್ಟಿಯಾದ ಕಿತ್ತಳೆ-ಅಲೋವೆರಾ ಸಾಬೂನು ತಯಾರಾಗಿತ್ತು.

ಮೊದಲ ಬಾರಿ ಬಳಸಿದಾಗಲೇ ಗೊತ್ತಾಯಿತು - ಜಾಹೀರಾತಿನ ಆಡಂಬರವಿಲ್ಲದಿದ್ದರೂ, ಕೈಯಾರೆ ಮಾಡಿದ ಈ ಸಾಬೂನಿನಲ್ಲಿ ಒಂದು ಬಗೆಯ ತೃಪ್ತಿ ಇತ್ತು. ಏನಿದ್ದರೂ ಚರ್ಮಕ್ಕೆ ಒಗ್ಗುತ್ತದೆಯೇ ಎಂದು ಒಂದೆರಡು ವಾರ ಬಳಸಿ ನೋಡಬೇಕಷ್ಟೆ.

ರಾಜೀವ್ ದೀಕ್ಷಿತ್ ಅವರ ಆ ಭಾಷಣ ಕೇಳಿ ಮೂರು ದಶಕಗಳೇ ಕಳೆದಿದ್ದರೂ, ಸ್ವಂತ ಕೈಯಿಂದ ಏನಾದರೂ ಮಾಡುವ ಆ ಸಣ್ಣ ಸ್ವಾವಲಂಬನೆಯ ಪಾಠ ಇನ್ನೂ ಮನಸಿನಲ್ಲಿ ಉಳಿದಿದೆ ಎಂಬುದೇ ಒಂದು ವಿಶೇಷ.

ಮಕ್ಕಳ ಜೊತೆ ಮಾಡಿದರೆ ಅವರಿಗೆ ಇದೊಂದು ಮರೆಯದ ಅನುಭವ ಆಗುವುದರಲ್ಲಿ ಸಂದೇಹವಿಲ್ಲ. ನನ್ನ ಮಕ್ಕಳಿಗೆ ಈಗ ಸಾಬೂನು ಹೇಗೆ ಮಾಡುತ್ತಾರೆ ಅನ್ನೋದು ಗೊತ್ತಾಯಿತು. ನೀವೂ ಮಾಡಿ ನೋಡಿ! ಮಕ್ಕಳು ಖುಷಿಪಡುತ್ತಾರೆ