ಎಷ್ಟೋ ಜನ್ಮ  ಪುಣ್ಯ ಮಾಡಿದ್ರೆ ಮಗಳು ಹುಟ್ಟುತ್ತಾಳಂತೆ! ಯಾಕಂದ್ರೆ ಕನ್ಯಾದಾನ ಅಷ್ಟು ದೊಡ್ಡ ದಾನ. ದೊಡ್ಡವಳಾಗೋ ವರೆಗೂ ಸಾಕಿ ಸಲುಹಿ ಮುಂದೆ ಯೋಗ್ಯ ವರನಿಗೆ ಕೊಟ್ಟರೆ ಜನ್ಮ ಸಾರ್ಥಕ ಅನ್ನೋ ಭಾವನೆ ಇದೆ ನಮ್ಮಲ್ಲಿ. ಸಾಕಿ ಸಲಹೋದು ಅನ್ನೋದು ಸುಮ್ನೆ ಬಾಯಿ ಮಾತಿಗೆ, ಒಂದು ವಯಸ್ಸಿಗೆ ಮಗಳೇ ಎಲ್ಲ ನೋಡಿಕೊಂಡು ಹೋಗಿಬಿಡುತ್ತಾಳೆ. ಚಿಕ್ಕವಳಿದ್ದಾಗ ರಾಜಕುಮಾರಿಯಂತೆ ಬೆಳೆಸಿ ಅವಳನ್ನ ತಲೆ ಮೇಲೆ ಕೂರಿಸಿಕೊಳ್ಳೋದು ಸಾಮಾನ್ಯ. ಅವಳನ್ನ ಬಯ್ಯೋ ಮನಸ್ಸು ಯಾವ ಅಪ್ಪಂಗೂ ಬರೋದಿಲ್ಲ. ಗಂಡಸು ಹೆಂಡತಿಯಲ್ಲಿ ಗೆಳತಿ ಅನ್ನು ಕಂಡರೆ ತಾಯಿಯಲ್ಲಿ ದೇವರನ್ನ ಕಾಣುತ್ತಾನೆ. ಆದರೆ ಮಗಳಲ್ಲಿ! ಅವಳಲ್ಲಿ ತಾಯಿಯನ್ನ ಕಾಣುತ್ತಾನೆ! ತಾಯಿಗೆ ಹೇಗೆ ಬಯ್ಯೊದು! ಅವಳು ಏನು ಮಾಡಿದರೂ ಚೆಂದ. ಬೆಳೀತಾ ಬೆಳೀತಾ ಮಗಳು ಅಪ್ಪನ ಎಲ್ಲ ದೋಷ ಗೊತ್ತು ಮಾಡಿಕೊಂಡು, ಮಗನಂತೆ ಕಾಯುತ್ತಾಳೆ. ಅಮ್ಮನ ಜೊತೆ ಅವಳ ಸಂಬಂಧ ಸ್ವಲ್ಪ ಬೇರೆ. ಅಮ್ಮನಿಗೆ ಮಗಳಿಂದ  ಅಪೇಕ್ಷೆಗಳು ಜಾಸ್ತಿ! ತನ್ನ ಜೀವನಾನುಭವ ಮಗಳಿಗೆ ಕುಡಿಸಲು ಶತಪ್ರಯತ್ನ ಮಾಡುತ್ತಾಳೆ. ಎಷ್ಟೇ ಪ್ರೀತಿ ಇದ್ದರೂ  ತೋರಿಸಿಕೊಳ್ಳೋದು ಬರಿ ಸಿಟ್ಟು ಸೆಡವು. ಮಗಳು ಅಮ್ಮನನ್ನ ಅರ್ಥ ಮಾಡಿಕೊಳ್ಳೋದು ತಾನು ಅಮ್ಮ ಆದಮೇಲೆನೆ. ಅಮ್ಮ ಅಲ್ಲಿ ವರೆಗೂ ಕಾಯಬೇಕು ಮಗಳ ಪ್ರೀತಿಗೆ. ಮಗಳು ಅಪ್ಪನನ್ನ ಪ್ರೀತಿಸೋದೆ ಎಲ್ಲರೂ ಅಪ್ಪನನ್ನ ಬಯ್ಯುತ್ತಾರೆ ಅನ್ನೋ ಕಾರಣಕ್ಕೆ! ಒಟ್ಟಿನಲ್ಲಿ ಒಬ್ಬ ಮಗಳು ಮನೆಯಲ್ಲಿದ್ದರೆ ಎಲ್ಲ ಸುಂದರ. ಮಗಳ ಜೊತೆ ಒಬ್ಬ ಮಗನು ಇರಲೇಬೇಕು. ಒಬ್ಬಬ್ಬ ಮಕ್ಕಳನ್ನ ಪಡೆಯೊದೇ ಜಾಸ್ತಿ ಈಗ. ಮದುವೆ ಆದಾಗ ಅವನು ಮಂಗಳದವನಾದರೆ ಅವಳು ಶುಕ್ರಗ್ರಹದವಳಾಗಿ ಬಿಡುತ್ತಾಳೆ. ಅಕ್ಕ ತಮ್ಮ ಅಥವಾ ಅಣ್ಣಾ ತಂಗಿ ಎನ್ನೋ ಬಂಧ ಇರಬೇಕು. ಬೆಳೀತಾ ಬೆಳೀತಾ ಇಬ್ಬರಿಗೂ ಇನ್ನೊಬ್ಬರ ಕಷ್ಟಗಳು ಅರ್ಥ ಆಗುತ್ತವೆ. ತಂಗಿ ಅಥವಾ ಅಕ್ಕ ಇರುವ ಯಾವದೇ ಮನುಶ್ಯ ಹೆಂಡತಿನ್ನ ಒಂದು ವಸ್ತುವಾಗಿ ನೋಡಲಾರ. ಹಾಗೆಯೇ ಅಣ್ಣ ತಮ್ಮ ಜೊತೆ ಬೆಳೆದೊಳಿಗೆ ಗಂಡ ಬರಿ ದುಡಿಯುವ ಪ್ರಾಣಿಯಾಗಿ ಕಾಣಿಸಲಾರ. 

ಚಿತ್ರ ಕೃಪೆ: ಇಂಟರ್ನೆಟ್