ಶಂಕರ್ ನಾಗ್ The Legend

‘ಕರಾಟೆ ಕಿಂಗ್’ ಶಂಕರ್ ನಾಗ್ ಹೆಸರು ಕೇಳಿದೊಡನೆಯೇ ಚಿತ್ರ ರಸಿಕರ ಮನದಲ್ಲಿ ಮಿಂಚಿನ ಓಟ ಪ್ರಾರಂಭವಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಾರಂಭವಾದ ಶಂಕರ್ ನಾಗ್ ನಟನಾ ಕೌಶಲ್ಯ, ನಿರ್ದೇಶನದತ್ತ ಹೊರಳಿ ಮಾಲ್ಗುಡಿ ಡೇಸ್ ನಂತಹ ಕಲಾತ್ಮಕ ಧಾರವಾಹಿಯನ್ನು ರಚಿಸುತ್ತಾರೆ. ಇಂತಹ ಅದ್ಭುತ ನಟ, ನಿರ್ದೇಶಕ ಅಕಾಲವಾಗಿ ಚಿತ್ರ ಪ್ರೇಮಿಗಳನ್ನು, ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದು ಮೂರು ದಶಕಗಳ ನಂತರವೂ ಇನ್ನೂ ಅರಗಿಸಿಕೊಳ್ಳಲಾಗದ ಸಂಗತಿ. ಅಂತಹ ಒಂದು ಬಲವಾದ ಗುರುತನ್ನು ಮೂಡಿಸಿ ಹೋಗಿದ್ದರು ಶಂಕರನಾಗ್. ಅವರ ಬಗ್ಗೆ ಅಸಂಖ್ಯಾತ ಪುಸ್ತಕಗಳು ಬಂದಿವೆ. ಈಗ ಬಂದಿದೆ ‘ಶಂಕರ್ ನಾಗ್ the legend’ ಎನ್ನುವ ಕೃತಿ.

ಕೃತಿಯ ಬೆನ್ನುಡಿಯಲ್ಲಿ ಕಂಡ ಬರಹ ಹೀಗಿದೆ… “ಶಂಕರ್ ನಾಗ್ ಅವರ ಸ್ಪಾಟ್ ಡೆತ್ ಅನೇಕ ವಿವಾದಗಳಿಗೆ ಕಾರಣ ಆಗಿತ್ತು. ಆದರೆ ಅವರು ಬದುಕಿದ್ದಿದ್ದರೆ ಏನಾಗುತ್ತಿತ್ತು...? ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತ, ಚರಿತ್ರೆಯ ಪುಟಗಳಲ್ಲಿ ಅವರು ಇತಿಹಾಸವಾಗಿ ದಾಖಲಾದರೂ ಅಭಿಮಾನಿಗಳ ಮನದಲ್ಲಿ, ಆರಾಧಿಸುವ ಹೃದಯಗಳಲ್ಲಿ ಅವರು ಇನ್ನೂ ಜೀವಿಸುತ್ತಿದ್ದಾರೆ.

ಒಂದಲ್ಲ ಒಂದು ಕಾರಣಗಳಿಂದ ಅಭಿಮಾನಿಗಳು, ಶಂಕರ್ ನಾಗ್ ಅವರ ಬಗ್ಗೆ ಮಾತನಾಡುತ್ತಾರೆ, ಚರ್ಚೆ ನಡೆಸುತ್ತಾರೆ. ಫೇಸ್‌ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಅವರ ಬಗ್ಗೆ ಪೋಸ್ಟ್ ಕಾಣಬಹುದು. ಅವರನ್ನು ಅಭಿಮಾನಿಗಳು ಮರೆತಿಲ್ಲ. ಆದರೆ ಚಿತ್ರರಂಗ...? ಸರ್ಕಾರ...? ಚಿತ್ರರಂಗ, ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವುದಿರಲಿ, ಸ್ಟಾಚ್ಯು ಕೂಡ ನಿರ್ಮಿಸಲಿಲ್ಲ. ಅಭಿಮಾನಿಗಳು ಅಲ್ಲಲ್ಲಿ ಅವರ ಜನ್ಮದಿನದಂದು ರಕ್ತದಾನ ಶಿಬಿರ, ಪುಣ್ಯಸ್ಮರಣೆ ಮಾಡುವುದು ಬಿಟ್ಟರೆ ಚಿತ್ರರಂಗ ಸಂಪೂರ್ಣವಾಗಿ ಈ ವಿಷಯದಲ್ಲಿ ಮೌನವಹಿಸಿದೆ. ಶಂಕರ್ ನಾಗ್ ಅವರ ಹೆಸರನ್ನು ನೆನಪಿಸುವ ಒಂದೇ ಒಂದು ಸಂಗತಿ ಅಂದರೆ ಜೆ.ಪಿ. ನಗರದಲ್ಲಿ ಇರುವ 'ರಂಗ ಶಂಕರ'. ಅರುಂಧತಿ ನಾಗ್ ಒಬ್ಬರೇ ಏಕಾಂಗಿಯಾಗಿ, ಸಾಹಸಿಯಂತೆ 'ರಂಗ ಶಂಕರ'ವನ್ನು ಕಟ್ಟಿದರು. ಅದನ್ನು ಹೊರತು ಪಡಿಸಿದರೆ ಶಂಕರ್ ನಾಗ್ ಅವರ ಹೆಸರಲ್ಲೇನಿದೆ...? ಉಳಿದುಕೊಂಡಿರುವುದು ಕೇವಲ ಅವರ ಅಜರಾಮರ ಹೆಸರು ಮಾತ್ರ...!”

೧೬೮ ಪುಟಗಳ ಈ ಕೃತಿಯಲ್ಲಿ ೨೬ ಅಧ್ಯಾಯಗಳಿವೆ. ಶಂಕರ್ ನಾಗ್ ಅವರ ಕೊನೆಯ ಪಯಣ ‘ಕಗ್ಗತ್ತಲ ರಾತ್ರಿಯ ಕಾರ್ ಪಯಣ’ ಎನ್ನುವಲ್ಲಿಂದ ಪ್ರಾರಂಭವಾಗುವ ಅಧ್ಯಾಯ, ಶಂಕರ್ ನಾಗ್ ಅವರಿಗೂ ಕರ್ನಾಟಕ ರತ್ನ ಕೊಡಬೇಕು ಎನ್ನುವ ಅಧ್ಯಾಯಕ್ಕೆ ಕೊನೆಗೊಳ್ಳುತ್ತದೆ. ಈ ಕೃತಿಯ ಅಧ್ಯಾಯಗಳನ್ನು ಒಂದೊಂದಾಗಿ ಓದುತ್ತಾ ಹೋದಂತೆ ಮನಸ್ಸು ಭಾರವಾಗುತ್ತದೆ, ಎಂತಹ ಒಂದು ಪ್ರತಿಭೆಯನ್ನು ನಮ್ಮಿಂದ ಆ ದೇವರು ಕಸಿದೇ ಬಿಟ್ಟನಲ್ಲ ಎನ್ನುವ ಬೇಸರ ಕಾಡುತ್ತದೆ. ಶಂಕರ್ ನಾಗ್ ಅಭಿಮಾನಿಗಳು ಮಾತ್ರವಲ್ಲ, ಕರ್ನಾಟಕ ರಾಜ್ಯದ ಸಮಸ್ತ ಜನರು ಕೊಂಡು ಓದಬೇಕಾದ ಪುಸ್ತಕ ಇದು.