ಅದಾವುದೋ ಬಳ್ಳಿಯಲದಾವುದೋ ಶಾಖೆಯಲಿ
ತಲೆಯೆತ್ತಿ ಮೊಗ್ಗೊಂದು ಮೂಡುವುದು ವಿಧಿಯೇ !
ಹುಟ್ಟುತಲೆ ಕೋಮಲದ ನಿರ್ಮಲದ ಕುರುಹು…
ಬರುಬರುತ ಬಿರಿದರೆ ? ಅತಿಚೆಂದ ಸೊಬಗು…
ಎಲ್ಲಿಹುದೋ ಹೇಗಿಹುದೋ ಕೇಳದೆಯೆ ಹುಟ್ಟಿಹುದು
ಸೊಬಗೊಂದೆ ಮೈತುಂಬಿ ತೂಗಾಡುತಿಹುದು..
ನಿಲ್ಲುವುದೋ ? ಅರಳುವುದೋ ? ಹಿರಿಯಮುಡಿ ಸೇರುವುದೋ..?
ಇಳೆಗರಿದು ಗಾಳಿಗದು ತೂರಿ ಹೋಗುವುದೋ ?
ಇಳಿದು ಬುಟ್ಟಿಯ ಸೇರಿ ದೇವನಡಿ ತಲುಪುವುದೋ ?
ಯಾವಮಹಿಮನ ಶವವ ಮೆರೆಯೆ ಅಪ್ಪುವುದೋ ?
ಯಾವ ಸುಳಿವೂ ಇಲ್ಲ ! ಗಮ್ಯದ ಅರಿವಿಲ್ಲ…!
ಭಾಗ್ಯಕದೆ ಮೀಸಲು ಅದರ ಬದುಕು…
ಎಲ್ಲಿದ್ದರೇನು, ಎನಾದರೇನು,
ಅರಿವಿಕೆಯ-ಅರಿವೇನೋ ತಿಳಿಯದಾಗಿ ।
ಹುಟ್ಟುತಲೆ ಸಂತಸದಿ ಮೈತಾಳಿ ಬೀಗುತಲಿ
ಯಾವಸ್ಥಿತಿಯೊಳಗಿದ್ದರಲ್ಲಿ ಶ್ರಯಿಸಿ…
ಪರಿಮಳವ ಬೀರುತಲಿ - ಧನ್ಯತೆಯ ತೋರುತಲಿ
ಸಹಜತೆಯ ಕಲಿಸುವುದು ಕಾನನದ ಕುಸುಮ॥
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!