ಕೆಲವು ವರ್ಷಗಳಿಂದ ಅಡಿಕೆ ಬೆಳೆಯಲ್ಲಿ ಫಸಲು ಕುಂಠಿತವಾಗುತ್ತಲೇ ಇದೆ. ಇದಕ್ಕೆ ಜಂತು ಹುಳ (ನಮಟೋಡು) ವಿನ ಬಾಧೆಯ ಕಾರಣವಿರಬಹುದೇನೋ? ಈ ಬಗ್ಗೆ ಒಂದು ಪುಟ್ಟ ಬರಹ.

ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಬೇರೆ ಬೇರೆ ರೀತಿಯಲ್ಲಿ ನಷ್ಟವನ್ನು ಅನುಭವಿಸುತ್ತಾ ಬರುತ್ತಿದ್ದಾರೆ. ಕೆಲವು ವರ್ಷ ಅಡಿಕೆ ಫಸಲಿಗೆ ಕೊಳೆ ರೋಗ ಬಂದು ಬಹಳಷ್ಟು ಬೆಳೆ ಹಾನಿಯಾಗಿದೆ. ಪ್ರಾಕೃತಿಕ ತೊಂದರೆ, ಏನು ಮಾಡುವುದು, ಅಡಿಕೆ ಮರ ಇದೆಯಲ್ಲಾ, ಮುಂದಿನ ವರ್ಷವಾದರೂ ಅಡಿಕೆ ಉಳಿಸೋಣ ಎಂದು ಅಲ್ಲಿಂದಲ್ಲಿಗೆ ಸಮಾಧಾನದಲ್ಲಿದ್ದರೆ, ಮಳೆಗಾಲ ಮುಗಿಯುವಷ್ಟರಲ್ಲಿ ಮರಗಳೇ ಸಾಯುವ ಸ್ಥಿತಿ ಉಂಟಾಯಿತು. ಬಹುತೇಕ ರೈತರಲ್ಲಿ ಕನಿಷ್ಟ ೫-೧೦% ಮರಗಳು ಸತ್ತಿರಬಹುದು.

ಬರೇ ಇಷ್ಟೇ ಅಲ್ಲ. ಕಳೆದ ವರ್ಷದ ಮಳೆಗಾಲದ ಮಳೆಯ ಪರಿಣಾಮವೋ ಅಥವಾ ಇನ್ನೇನೋ. ಮರಗಳ ಬೇರು ವ್ಯವಸ್ಥೆಗೂ ಬಹಳ ಹಾನಿಯಾಗಿದೆ. ಎಳೆ ಸಸಿಗಳ (ಸುಮಾರು ೩-೪ ವರ್ಷದವು) ಬೇರುಗಳಿಗೆ ಜಂತುಹುಳದ ಸಮಸ್ಯೆ (ನಮಟೋಡು) ಹೆಚ್ಚಾಗಿದೆ. ಇದು ದೊಡ್ಡ ಮರಗಳಿಗೂ ಆಗಿರಬಹುದುದು. ಮರಗಳು ಒಣಗಿ ಸಾಯುವುದಕ್ಕೆ ಇದೂ ಕಾರಣವಾಗಿರಬಹುದು. ಕೆಲವು ಕಡೆ ಕೊಳೆ ರೋಗ ಬರದೇ ಇದ್ದ ಮರಗಳೂ ಸಹ ಸತ್ತಿರುವ ನಿದರ್ಶನ ಇದೆ. ಅಲ್ಲಿ ಜಂತುಹುಳದ ತೊಂದರೆ ಇದ್ದಿರಬಹುದು.

ಎಳೆ ಸಸಿಗಳು ಇನ್ನೇನು ಫಸಲಿಗಾರಂಭಿಸಿದವು. ಫಸಲು ಇದ್ದ ಸಸಿಗಳಲ್ಲಿ ಈ ವರ್ಷ ಬೇರುಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಕೆಲವು ಸಸಿಗಳು ದೂಡಿದರೆ ಬೀಳುವ ಸ್ಥಿತಿಯಲ್ಲಿದ್ದವು. ಕೈಯಿಂದ ದೂಡಿದಾಗ ಬುಡ ಸಮೇತ ಮಗುಚಿ ಬಿದ್ದ ಕೆಲವು ಸಸಿಗಳ ಬುಡ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬೇರುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದ್ದವು. ಹಾಗೆಂದು ಬೇರು ಹುಳದ ಸಮಸ್ಯೆಯಾಗಿರಬಹುದೇ ಎಂದು ಪರಿಶೀಲಿಸಿದರೆ ಯಾವುದೇ ಹುಳಗಳಾಗಲೀ, ಮೊಟ್ಟೆಗಳಾಗಲೀ ಇರುವ ಕುರುಹು ಕಾಣಲಿಲ್ಲ. ಬೇರುಗಳಲ್ಲಿ ಕವಲು ಬೇರುಗಳು ಸತ್ತು ಹೋಗಿವೆ. ಬುಡದಿಂದ ಹೊರಡುವ ಬೇರುಗಳು ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಇದ್ದು, ಅವುಗಳೂ ಸಹ ಕಳೆ ಗುಂದಿ ಕಪ್ಪು ಬಣ್ಣದಲ್ಲಿದ್ದವು. ಬೇರುಗಳನ್ನು ಅಡ್ಡಲಾಗಿ ಸಿಗಿದು ನೋಡಿದಾಗ ಒಳಗಿನ ಅಂಗಾಂಶ (conducting tissue) ಹಾಳಾಗಿರುವುದು (ಬಣ್ಣ ಕಳೆದುಕೊಂಡಿರುವುದು) ಕಂಡು ಬಂತು, ಬೇರಿನ ಹೊರ ಪರೆ ಕಪ್ಪಗಾಗಿ, ತುದಿ ಭಾಗ ಕಪ್ಪಗಾಗಿತ್ತು. ಬೆಳವಣಿಗೆಯ ಭಾಗ ಹಾನಿಯಾಗಿರುವ ಕಾರಣ ಅಲ್ಲಿಂದ ಮುಂದೆ ಬೇರಿನ ಬೆಳವಣಿಗೆ ನಿಂತು ಹೋಗಿತ್ತು.

Screenshot 2026-08-31 10.00.24 AM.png

ಜಂತುಹುಳಗಳು R similis (Radopholus) ತಾಳೆ ಜಾತಿಯ ಮರದ ಬೇರುಗಳಿಗೆ ಹಾನಿ ಮಾಡುತ್ತವೆ ಎಂಬ ಬಗ್ಗೆ ಓದಿದ ನೆನಪಾಗಿ ಈ ಬಗ್ಗೆ ಸಂಶಯ ಬಂದು ಆ ಲೇಖನದಲ್ಲಿ ತಿಳಿಸಲಾದ ಲಕ್ಷಣಗಳು ಮಗುಚಿ ಬಿದ್ದ ಅಡಿಕೆ ಸಸಿಯ ಬೇರುಗಳಲ್ಲಿ ಕಾಣಲಾಯಿತು. ಈ ಜಂತು ಹುಳಗಳು ಅಕ್ಟೋಬರ್ ನಿಂದ ನವೆಂಬರ್ ತನಕ ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಇದರೊಂದಿಗೆ ಒಂದು ಜಾತಿಯ ಶಿಲೀಂದ್ರವೂ ಸೇರಿಕೊಂಡಿರುತ್ತದೆ. ಒಂದು ಗ್ರಾಂ ಬೇರಿನಲ್ಲಿ ಸುಮಾರು ೪೦೦ ರಷ್ಟು ನಮಟೋಡುಗಳನ್ನು ಪತ್ತೆ ಹಚ್ಚಲಾಗಿತ್ತಂತೆ. ಎಲ್ಲಿ ಬಾಳೆ. ಕರಿಮೆಣಸು, ಏಲಕ್ಕಿ, ಅನನಾಸು ಮುಂತಾದ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಸುತ್ತಾರೋ ಅಲ್ಲೆಲ್ಲಾ ಈ ನಮಟೋಡುಗಳು ಇರುವ ಸಾಧ್ಯತೆ ಇದೆ. ಈ ನಮಟೋಡು ಬೇರನ್ನು ಕೊರೆದು ಹಾಳು ಮಾಡುತ್ತದೆ.

ಅಧಿಕ ಮಳೆಯಾಗುವ ವರ್ಷದಲ್ಲಿ ಮಣ್ಣು ಅತಿಯಾಗಿ ಹುಳಿಯಾಗುತ್ತದೆ. ಮಣ್ಣಿನಲ್ಲಿ ಮೇಲು ಮಣ್ಣು ಕೊಚ್ಚಣೆಯಾಗಿ ಹೋಗುತ್ತದೆ. ಮಣ್ಣಿನ ರಸಸಾರ ಕಡಿಮೆಯಾಗುವ ಸಮಯದಲ್ಲಿ ಮರಕ್ಕೆ ಎಲ್ಲಾ ನಮೂನೆಯ ರೋಗ ರುಜಿನಗಳು, ಕೀಟಗಳು ಬಾಧಿಸುತ್ತವೆ. ಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಬಹುಷಃ ಈ ವರ್ಷ ಎಡೆ ಬಿಡದೆ ಎರಡು ತಿಂಗಳ ಕಾಲ ಮಳೆ ಸುರಿದು. ಮಣ್ಣು ಸಪ್ಪೆಯಾಗಿ ಬೇರಿನ ಭಾಗಕ್ಕೆ ಜಂತುಹುಳುಗಳ ತೊಂದರೆ ಆದದ್ದೂ ಇರಬಹುದು.

Screenshot 2026-08-31 10.01.20 AM.png

ಮರಗಳು / ಸಸಿಗಳು ಸೂಕ್ತ ಪ್ರಮಾಣದಲ್ಲಿ ಪೋಷಕಗಳನ್ನು ಪೂರೈಸಿದ್ದರೂ ಸಪುರವಾಗುತ್ತಾ ಬರುತ್ತಿದ್ದರೆ, ಎಲೆಗಳ ಸಂಖ್ಯೆ ಏಳಕ್ಕಿಂತ ಕಡಿಮೆಯಾಗಿ ಕಂಡರೆ ಅಂತಹ ಸಸಿಯನ್ನು / ಮರವನ್ನು ಕೈಯಿಂದ ದೂಡಿದಾಗ ಬುಡ ಭಾಗ ಶಿಥಿಲವಾದ ಲಕ್ಷಣ ಕಂಡು ಬಂದರೆ ಮರಗಳಿಗೆ ಒಂದೋ ಬೇರು ಹುಳದ ತೊಂದರೆ ಇರಬಹುದು. ಇಲ್ಲವೇ ಜಂತು ಹುಳದ ತೊಂದರೆ ಇರಬಹುದು.

ಇಂತಹ ಮರ / ಸಸಿಯನ್ನು ಉಪಚರಿಸಿ ಸರಿ ಪಡಿಸುವುದು ಉಪಯುಕ್ತವೇ ಅಥವಾ ಆ ಸಸಿಯನ್ನು ತೆಗೆದು ಉತ್ತಮ ಬೇರೆ ಸಸಿಯನ್ನು ನಾಟಿ ಮಾಡುವುದೇ ಎಂಬುದನ್ನು ರೈತರೇ ತೀರ್ಮಾನಿಸಬೇಕು. ಬಹುಷಃ ತುಂಬಾ ಸಣಕಲಾಗಿರುವ ಸಸಿಗಳು ಯಾವುದೇ ಉಪಚಾರಕ್ಕೂ ಸ್ಪಂದಿಸದೆ ಇರಬಹುದು. ಅಂತಹ ಸಸಿಗಳನ್ನು ತೆಗೆದು ಬೇರೆ ಸಸಿ ನಾಟಿ ಮಾಡಿ. ಬೇರೆ ನಾಟಿ ಮಾಡುವಾಗ ತಕ್ಷಣದ ಉಪಚಾರವಾಗಿ ಸಸಿ ಬುಡಕ್ಕೆ ೫-೧೦ ಗ್ರಾಂ ಫೋರೇಟ್ ಹಾಕಿ. ಧೀರ್ಘಾವಧಿಯಲ್ಲಿ ಈ ಜಂತು ಹುಳ ಹಾಗೂ ಬೇರು ಹುಳದ ಉಪಟಳ ಕಡಿಮೆಯಾಗಲಿ ಜೈವಿಕ ಕೀಟ ನಾಶಕಗಳಾದ ಪೆಸಿಲೋಮೈಸಿಸ್, ಸುಡೋಮೋನಸ್, ಎಂಟಮೋ ಪಥೋಜೆನಿಕ್ ನಮಟೋಡು (EPN) ಬಳಕೆ ಮಾಡುವುದು ಸೂಕ್ತ. ಅಡಿಕೆ ಬೆಳೆಯಿರಲಿ, ಇನ್ಯಾವುದೇ ಬೆಳೆಯಿರಲಿ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ನೀರು ನಿಂತು ಚೌಗು ಆಗದಂತೆ ನೋಡಿಕೊಳ್ಳಬೇಕು. ಮಣ್ಣಿನ ರಸಸಾರದ ನಿರ್ವಹಣೆಗೆ ಗಮನ ಕೊಡಬೇಕು. ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕ ಫೋರೇಟ್ ಬಳಸಬಾರದು. ಇದು ಮಣ್ಣಿನ ಸೂಕ್ಷಾಣು ಜೀವಿಗಳನ್ನು ನಾಶಮಾಡುತ್ತದೆ. ಬೇವಿನ ಹಿಂಡಿ, ಹರಳು ಹಿಂಡಿ, ಗ್ರೆರಿಸೀಡಿಯಾ ಎಲೆ. ಕಾಂಪೋಸ್ಟು ಮಾಡಿದ ತೆಂಗಿನ ನಾರಿನ ಹುಡಿ ಬಳಕೆ ಮಾಡಿದಾಗ ಗರಿಷ್ಠ ಪ್ರಮಾಣದಲ್ಲಿ ನಮಟೋಡುಗಳ ನಿಯಂತ್ರಣ ಸಾಧ್ಯ.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ