ಅಡಿಕೆ ಬೆಳೆಗಾರರಿಗೆ ನಿತ್ಯ ಕಾಡುತ್ತಿರುವ ಬೆಲೆ ಸ್ಥಿರತೆ ಎಂಬ ಆತಂಕಕ್ಕೆ ಉತ್ತರವನ್ನು ಅವರವರು ಅವರವರ ತೋಟದಲ್ಲೇ ಹುಡುಕಬೇಕು. ಬೆಲೆ ಏರಿದರೆ ಖುಷಿ, ಬೆಲೆ ಕುಸಿದರೆ ಅಚ್ಚರಿ ಇಲ್ಲ. ಸ್ಥಿರವಾಗಿ ಉಳಿದರೂ ತೊಂದರೆ ಇಲ್ಲ. ಮೂರಕ್ಕೂ ಸಿದ್ದರಾಗಿರಬೇಕು. ಕೃಷಿಕರಿಗೆ ಕೃಷಿಯೇ ಸಹಾಯ ಮಾಡುವ ವೃತ್ತಿ.
೧೯೭೦ ನೇ ಇಸವಿಯಲ್ಲಿ ಅಡಿಕೆಯ ಬೆಲೆ ಭಾರೀ ಇಳಿಮುಖವಾಗಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಆ ನಂತರ ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಾ ಬಂತು. ಆ ಸಮಯದಲ್ಲಿ ಇದ್ದ ಅಡಿಕೆ ಉತ್ಪಾದನೆ ಈಗಿನ ೨೫% ದಷ್ಟು ಮಾತ್ರ ಇದ್ದಿರಬಹುದು. ಆಗ ಮಾರುಕಟ್ಟೆ ವಿಚಾರದಲ್ಲಿ ಸೋತು ಹೀಗಾಗಿದೆ ಎಂದು ಮನಗಂಡ ರೈತ ಮುಖಂಡರು ಅದಕ್ಕೊಂದು ವ್ಯವಸ್ಥೆಯನ್ನು ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಿ ಆದನ್ನು ಮಾಡಿಯೇ ಬಿಟ್ಟರು. ಕ್ರಮೇಣ ಅಡಿಕೆಯ ಬೆಲೆ ಭಾರೀ ಇಳಿಕೆಯಾಗದಿದ್ದರೂ ಸ್ಥಿರವಾಗಿ ಮುಂದುವರಿಯಿತು. ಖಾಸಗಿ ವರ್ತಕರು, ಸಹಕಾರೀ ವ್ಯವಸ್ಥೆ ಪೈಪೋಟಿಯಲ್ಲಿ ಅಡಿಕೆ ಬೆಳೆಗಾರರಿಗೆ ಸ್ಥೈರ್ಯ ದೊರೆಯಿತು. ಹಾಗೇ ಮುಂದುವರಿಯುತ್ತಾ ೧೯೯೭- ೯೮ ನೇ ಸಾಲಿನಲ್ಲಿ ಭಾರೀ ಏರಿಕೆ ಉಂಟಾಯಿತು. ಕ್ರಮೇಣ ಅದು ಇಳಿಕೆಯ ಹಾದಿ ಹಿಡಿಯುತ್ತಾ ಪಾತಾಳಕ್ಕೆ ಇಳಿದು ಮತ್ತೆ ಸ್ವಲ್ಪ ಸ್ವಲ್ಪವೇ ಏರಿಕೆ ಕಾಣುತ್ತಾ ೨೦೧೪ರಲ್ಲಿ ಹಾಗೂ ೨೦೨೫ ನೇ ಇಸವಿಯಲ್ಲಿ ಅದು ಮತ್ತೆ ಅದು ಉತ್ತುಂಗಕ್ಕೇ ಏರಿತು. ಆನಂತರ ಸ್ವಲ್ಪ ಸ್ವಲ್ಪ ಇಳಿಕೆಯಾಗುತ್ತಾ, ಎರಿಕೆಯಾಗುತ್ತಾ ಇದೆಯಾದರೂ, ಹಿಂದಿನಂತೆ ಪಾತಾಳಕ್ಕೆ ಇಳಿಯದೆ ಉಳಿದಿದೆ ಎಂಬುದು ಅಡಿಕೆ ಬೆಳೆಗಾರರ ಅನುಭವ.
ಅದು ೨೦೦೦ ನೇ ಇಸವಿಯ ಸುಮಾರು. ಆಗ ಅಡಿಕೆ ಬೆಳೆಗಾರರು ಬಾರೀ ಕಷ್ಟದ ದಿನಗಳನ್ನು ಕಂಡಿದ್ದರು. ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದೇ, ಕೆಲಸ ಮಾಡಿಸುವುದೇ ಯಾವುದಕ್ಕೂ ಅಡಿಕೆಗೆ ಬೆಲೆ ಏನೂ ಇಲ್ಲ.ಎಂಬ ಆತಂಕ ಇತ್ತು. ಜೊತೆಗೆ ಮಾರಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ವ್ಯಾಪಾರಸ್ಥರೂ ಸಹ ದಿವಾಳಿ ಹಂತಕ್ಕೆ ತಲುಪಿದ್ದರು. ಆಗ ರೈತರಿಗೆ ತಜ್ಞರು ಮತ್ತು ಸಾಂತ್ವನ ಹೇಳುವವರು ಹೇಳಿದ ಮಾತು ಈಗಲೂ ನೆನಪಿದೆ. ಅಡಿಕೆಗೆ ಭವಿಷ್ಯವಿಲ್ಲ, ಆದಷ್ಟು ಬೇರೆ ಬೆಳೆ ಬಗ್ಗೆ ಚಿಂತಿಸಿರಿ. ಯಾವುದೇ ಕಾರಣಕ್ಕೂ ಬೆಳೆ ಪ್ರದೇಶವನ್ನು ವಿಸ್ತರಿಸದಿರಿ ಎನ್ನುತ್ತಾ ರೈತರನ್ನು ಸಮಾಧಾನ ಮಾಡುತ್ತಿದ್ದುದು ನಮಗೆಲ್ಲಾ ಗೊತ್ತಿದೆ. ಕೆಲವು ಜನ ಇದನ್ನು ನಂಬಿ ತಮ್ಮ ಬೆಳೆಯ ಆರೈಕೆಯನ್ನೂ ಕಡಿಮೆ ಮಾಡಿದ್ದುಂಟು. ಆದರೆ ಇವರೆಲ್ಲರ ಸಲಹೆ ಬರೇ ಊಹನೆ ಮಾತ್ರವೇ ಆಗಿತ್ತು ಹೊರತಾಗಿ ನಿಖರ ಅಧ್ಯಯನ ಆಗಿರಲಿಲ್ಲ. ಬೆಳೆಗಾರರನ್ನು ಬರೇ ಗೊಂದಲಕ್ಕೀಡುಮಾಡುವ ಹೇಳಿಕೆಯಾಗಿತ್ತು. ಒಂದು ವೇಳೆ ಇದು ಸತ್ಯವೇ ಆಗಿದ್ದಲ್ಲಿ ನಂತರದ ವರ್ಷಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗಲು ಸಾಧ್ಯವಿರಲಿಲ್ಲ. ಅಡಿಕೆ ಬಗ್ಗೆ ಗೊಂದಲದ ಹೇಳಿಕೆಯನ್ನು ಕೇಳಿಯೂ ಕೇಳಿಸದಂತೆ ಏನು ಬೇಕಾದರೂ ಆಗಲಿ ಎಂದು ಅಡಿಕೆ ಬೆಳೆಯನ್ನು ವಿಸ್ತರಿಸುತ್ತಾ ಬಂದ ಕೆಲವರಲ್ಲಿ ಈಗ ೧೦ ಕ್ವಿಂಟಾಲು ಉತ್ಪಾದನೆಯಾಗುತ್ತಿದ್ದಲ್ಲಿ ೧೦೦ ಕ್ವಿಂಟಾಲಿಗೂ ಮಿಕ್ಕಿ ಉತ್ಪಾದನೆಯಾಗುತ್ತಿದೆ. ಅಡಿಕೆಯ ಉತ್ಪಾದನೆ ಹೆಚ್ಚಳವಾದ ಲೆಕ್ಕವನ್ನು ನೋಡಿದರೆ ಬೆಲೆ ಇಷ್ಟರ ಮಟ್ಟಿಗೆ ಸ್ಥಿರವಾಗಿದೆ ಎಂದರೆ ಅಡಿಕೆಗೆ ಬೇಡಿಕೆ ಇಲ್ಲದಿಲ್ಲ. ಬಳಕೆ ತಗ್ಗುತ್ತಿದೆ ಎಂಬುದೆಲ್ಲಾ ಬರೇ ವದಂತಿ.
ಅಡಿಕೆ ಬೆಳೆಯ ಬಗ್ಗೆ ಯಾವುದೇ ಅಪ ಪ್ರಚಾರವನ್ನೂ ಈಗ ಯಾರೂ ನಂಬುತ್ತಿಲ್ಲ. ಜನ ದುಂಬಾಲು ಬಿದ್ದು ಅಡಿಕೆ ತೋಟ ವಿಸ್ತರಿಸುತ್ತಿದ್ದಾರೆ. ಈ ವರ್ಷ ದಕ್ಷಿಣ ಕನ್ನಡದಲ್ಲಿ ಸುಮಾರು ೧೦ ಲಕ್ಷಕ್ಕೂ ಅಡಿಕೆ ಬೀಜಗಳು ಖಾಸಗಿ ತೋಟಗಳಿಂದ ಮತ್ತು ಸರಕಾರೀ ಸಂಶೋಧನಾ ಕೇಂದ್ರಗಳಿಂದ ಕರ್ನಾಟಕ, ಕೇರಳ, ತಮಿಳುನಾಡಿಗೆ ಮಾರಾಟವಾಗಿದೆ. ಸುಮಾರಾಗಿ ಎಲ್ಲಾ ನರ್ಸರಿಗಳಿಂದ ೨ ಲಕ್ಷಕ್ಕೂ ಹೆಚ್ಚು ಸಸಿಗಳು ಈಗಾಗಲೇ ಮಾರಾಟವಾಗಿವೆ. ಇನ್ನೂ ಸುಮಾರು ೩-೫ ಲಕ್ಷದಷ್ಟು ಸಸಿಗಳು ವಿವಿಧ ನರ್ಸರಿಗಳಲ್ಲಿ ಮಾರಾಟಕ್ಕೆ ಸಿದ್ದವಾಗಿವೆ. ಮಲೆನಾಡಿನಾದ್ಯಂತ ಈ ವರ್ಷ ಸುಮಾರು ೨೦-೩೦ ಲಕ್ಷಕ್ಕೂ ಹೆಚ್ಚು ಅಡಿಕೆ ಸಸಿಗಳು ತಯಾರಾಗಿದ್ದು, ಸುಮಾರು ಅರ್ಧಕ್ಕೂ ಹೆಚ್ಚು ಪಾಲು ಆಗಲೇ ಮಾರಾಟವಾಗಿವೆ. ಇದು ಕಳೆದ ಹತ್ತು ವರ್ಷಗಳಿಂದ ಏಕ ಪ್ರಕಾರವಾಗಿ ಸಸ್ಯೋತ್ಪಾದನೆ, ನಾಟಿ ಮುನ್ನಡೆಯುತ್ತಿದೆ. ಮಲೆನಾಡಿನ ಬಹುತೇಕ ಸಸಿಗಳು ಅಲ್ಲೇ ಸುತ್ತಮುತ್ತ ಮತ್ತು ಅರೆ ಮಲೆನಾಡು ಭಾಗಗಳಲ್ಲಿ ನೆಡಲ್ಪಟ್ಟಿವೆ. ಒಂದು ಎಕ್ರೆಗೆ ೫೦೦ ಸಸಿಯಂತೆ ೧ ಲಕ್ಷ ಗಿಡ ಎಂದರೆ ೧೦೦ ಎಕ್ರೆ ವಿಸ್ತೀರ್ಣದಷ್ಟು ಬೆಳೆ ಪ್ರದೇಶವಾಗುತ್ತದೆ.ಒಟ್ಟಾರೆಯಾಗಿ ಕರಾವಳಿ ಮಲೆನಾಡಿನಾದ್ಯಂತ ಮಾರಾಟವಾದ ಸಸಿಗಳಿಂದ ವರ್ಷಕ್ಕೆ ಏನಿಲ್ಲವೆದರೂ ೩೦೦ ಎಕ್ರೆಗೂ ಹೆಚ್ಚು ಅಡಿಕೆ ಬೆಳೆ ಕ್ಷೇತ್ರ ಹೆಚ್ಚಳವಾಗುತ್ತಿದೆ. ತಮಿಳುನಾಡು ಮತ್ತು ಆಂದ್ರ ಪ್ರದೇಶ, ಕೇರಳದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಅಡಿಕೆ ಬೆಳೆ ಪ್ರದೇಶಗಳು ಹೆಚ್ಚುತ್ತಿವೆ. ಪುತ್ತೂರು ತಾಲೂಕು, ಇಚ್ಲಂಪಾಡಿಯ ಶ್ರೀ ಹರಿಶ್ಚಂದ್ರ ಶೆಟ್ಟಿಯವರ ತೋಟದಿಂದ ಈ ವರ್ಷ ಸುಮಾರು ೧ ಲಕ್ಷದಷ್ಟು ಅಡಿಕೆ ಬೀಜಗಳು ತಮಿಳುನಾಡು ಕಡೆಯ ನರ್ಸರಿಗಳಿಗೆ ಮಾರಾಟವಾಗಿದೆಯಂತೆ. ಹಾಗೆಯೇ ಇತರ ಬೆಳೆಗಾರರ ತೋಟದಿಂದ ಮಾರಾಟವಾದ ಬೀಜದ ಅಡಿಕೆಯ ಬಗ್ಗೆ ಮಾಹಿತಿ ಇಲ್ಲ.
ಅದರಂತೆ ಅಡಿಕೆಯ ಉತ್ಪಾದನೆಯೂ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಿಗೆ ಹಿಂದೆ ರೈತರು ಅಡಿಕೆ ಮರಗಳಿಗೆ ಹೆಚ್ಚೇನೂ ಗೊಬ್ಬರ ಕೊಡುತ್ತಿರಲಿಲ್ಲ. ವರ್ಷಕ್ಕೊಮ್ಮೆ ಲಭ್ಯವಿರುವಷ್ಟು ಕೊಟ್ಟಿಗೆ ಗೊಬ್ಬರ, ಸ್ವಲ್ಪ ರಾಸಾಯನಿಕ ಗೊಬ್ಬರ, ನೀರು ಬಿಟ್ಟರೆ ಅಂತಹ ಆರೈಕೆ ಇರಲಿಲ್ಲ. ಆದರೆ ಈಗ ಹಾಗಿಲ್ಲ. ಮರಕ್ಕೆ ಕನಿಷ್ಟ ೨-೩ ಕಿಲೋ ಅಡಿಕೆ ಉತ್ಪಾದನೆ ಮಾಡಬೇಕು ಎಂಬ ಗುರಿ ಇರಿಸಿಕೊಂಡು ಅದಕ್ಕನುಗುಣವಾಗಿ ಆರಿಕೆಯನ್ನೂ ಮಾಡುತ್ತಿದ್ದಾರೆ. ಬೇರೆ ಬೇರೆ ಗೊಬ್ಬರಗಳ ಮೂಲಕ ಇಳುವರಿಯೂ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ ೫೦% ಹೆಚ್ಚಳವಾಗಿದೆ. ಕರಾವಳಿಯ ಜಿಲ್ಲೆಗಳಲ್ಲಿ ಹಿಂದೆ ಪ್ರತೀ ಮರದ ಸರಾಸರಿ ಇಳುವರಿ ೧ ಕಿಲೋ ದಷ್ಟು ಇತ್ತು. ಈಗ ಅದು ೧.೫ ರಿಂದ ೨ ಕಿಲೋ ತನಕ ತಲುಪಿದೆ. ಮಲೆನಾಡು ( ಶಿರಸಿ, ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಕೊಪ್ಪ) ಕಡೆ ಹಿಂದೆ ಮರವೊಂದರ ಸರಾಸರಿ ೧.೫ ಕಿಲೋ ದಿಂದ ೨ ಕಿಲೋ ತನಕ ( ಕೆಂಪು) ಅಡಿಕೆ ಉತ್ಪಾದನೆಯಾಗುತ್ತಿದ್ದುದು, ಈಗ ೨.೫ ರಿಂದ ೩ ಕಿಲೋ ತನಕ ತಲುಪಿದೆ. ಇದರಿಂದಾಗಿ ಇರುವ ಬೆಳೆ ಪ್ರದೇಶದಲ್ಲೇ ೨೫% ಬೆಳೆ ಹೆಚ್ಚಳವಾಗಿದೆ ಎನ್ನುತ್ತಾರೆ ಕೆಲವು ಪ್ರಗತಿಪರ ರೈತರು.
ಇದೆಲ್ಲವನ್ನೂ ಮಾರುಕಟ್ಟೆ ಸಹಿಸಿಕೊಂಡು ಇನ್ನೂ ಅಡಿಕೆಗೆ ಉತ್ತಮ ಬೇಡಿಕೆಯೇ ಇದೆ ಎಂದಾದರೆ ಅಡಿಕೆಗೆ ಭವಿಷ್ಯ ಇಲ್ಲ ಎಂಬ ಮಾತಿನಲ್ಲಿ ಯಾವುದೇ ಭರವಸೆ ಇಲ್ಲ. ಬೇರೆ ಲಾಭದಾಯ ಬೆಳೆ ಬೆಳೆಸುವರೇ ಅವಕಾಶ ಇರುವವರನ್ನು ಹೊರತುಪಡಿಸಿ ಉಳಿದವರಿಗೆ ಅಡಿಕೆಯೇ ಸದ್ಯದ ಸ್ಥಿತಿಯಲ್ಲಿ ಲಾಭದಾಯಕ ಬೆಳೆಯಾಗಿದೆ.
(ಇನ್ನೂ ಇದೆ)
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: Challiyan - Malayalam Wikipedia.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!