ಕರಾವಳಿ ಮಲೆನಾಡಿನ ರೈತರಿಗೆ ಅಡಿಕೆ ಅಲ್ಲದೆ ಬೇರೆ ಬೆಳೆ ಆಯ್ಕೆ ಎಂದರೆ ಭತ್ತ ಮತ್ತು ತೆಂಗು, ಗೇರು ಬೆಳೆಗಳು. ಎಲ್ಲರೂ ತುತ್ತಿಗಾಗಿ ಬಳಕೆ ಮಾಡುವ ಭತ್ತದ ಬೆಳೆಯ ಸ್ಥಿತಿಯಂತೂ ಚಿಂತಾಜನಕ. ಭತ್ತ ಬೆಳೆದರೆ ಎರಡು ಬೆಳೆಗಳಲ್ಲಿ ಬರುವ ಉತ್ಪಾದನೆ ಗರಿಷ್ಟ ೫೦ ಕ್ವಿಂಟಾಲು ಭತ್ತ. ಇದರ ಮೌಲ್ಯ ಏನಿದ್ದರೂ ೯೦,೦೦೦ ದಷ್ಟು.ಉಳಿದಂತೆ ಹುಲ್ಲು ಮಾರಾಟದಿಂದ ೧೦,೦೦೦ ಸಂಪಾದನೆಯಾದರೆ ಒಟ್ಟು ಸುಮಾರು ಒಂದು ಲಕ್ಷ ಭತ್ತದ ಹೊಲದಲ್ಲಿನ ಹುಟ್ಟುವಳಿ. ಇದಕ್ಕೆ ಮಾಡುವ ಖರ್ಚುಗಳ ಲೆಕ್ಕಾಚಾರ ಹಾಕಿದರೆ ಅದರಲ್ಲಿ ಉಳಿಕೆ ಪ್ರಮಾಣ ಏನೇನೂ ಇಲ್ಲ. ಆದ ಕಾರಣ ಉಳಿದ ಯಾವುದೇ ಬೆಳೆಯನ್ನು ಬೆಳೆಸುವುದು ಅಸಾಧ್ಯವೆಂದಿರುವ ಜಾಗದಲ್ಲಿ ಮಾತ್ರವೇ ಭತ್ತದ ಬೆಳೆಯನ್ನು ಬೆಳೆಸಲಾಗುತ್ತಿದೆ. ಅಡಿಕೆ ಬೆಳೆ ಹಾಗಿಲ್ಲ. ಒಂದು ಎಕ್ರೆಯಲ್ಲಿ ಏನಿಲ್ಲವೆಂದರೂ ೧೦ ಕ್ವಿಂಟಾಲು ಅಡಿಕೆ ಉತ್ಪಾದನೆ ಸಾಧ್ಯ. ಪ್ರಾದೇಶಿಕತೆಯನ್ನು ಹೊಂದಿಕೊಂಡು ಇದು ಇನ್ನೂ ಹೆಚ್ಚಳವಾಗುತ್ತದೆ. ತೆಂಗಿನ ಕತೆಯೂ ಹಾಗೆಯೇ. ಒಂದು ಮರಕ್ಕೆ ೧೦೦ ಕಾಯಿ ದೊರೆತರೂ ಮರದ ಉತ್ಪಾದಕತೆ ೧೦೦೦ ರೂ ಮಾತ್ರ. ಎಕ್ರೆಗೆ ೮೦ ಮರದಲ್ಲಿ ೮೦,೦೦೦ ಬಂದರೆ ಸಾಕಾಗದು. (ಈಗ ಪ್ರಸ್ತುತ ತೆಂಗಿನ ಕಾಯಿಗೆ ಬೆಲೆ ಇದ್ದರೂ ಲಭ್ಯತೆ ಕಡಿಮೆ ಇದೆ) ಇದರ ಬೆಲೆ ಅಸ್ಥಿರತೆ ಬಗ್ಗೆ ರೈತರಲ್ಲಿ ಅಂಜಿಕೆ ಇದೆ. ಗೇರು ಬೆಳೆಯಲ್ಲಿ ಖರ್ಚು ಕಡಿಮೆ ಆದಕ್ಕನುಗುಣವಾಗಿ ಲಾಭವಿದೆ, ಆದರೆ ಅದನ್ನು ಎಲ್ಲಾ ಭಾಗದಲ್ಲೂ ಬೆಳಸಲು ಸಾಧ್ಯವಾಗುವುದಿಲ್ಲ. ಆ ದೃಷ್ಟಿಯಲ್ಲಿ ನೋಡಿದರೆ ವಾರ್ಷಿಕ ಈಗಿನ ಧಾರಣೆಯಲ್ಲಿ ಎನಿಲ್ಲವೆಂದರೂ ೨,೦೦,೦೦೦ ವರಮಾನ ತಂದುಕೊಡಬಲ್ಲ ಬೆಳೆ ಎಂದರೆ ಅಡಿಕೆ ಮಾತ್ರ. ಇದನ್ನು ಮನಗಂಡೇ ರೈತರು ಅಡಿಕೆ ಬೆಳೆ ಪ್ರದೇಶವನ್ನು ಹೆಚ್ಚಿಸುತ್ತಿರುವುದು. ಅಡಿಕೆಯೊಂದಿಗೆ ಮಿಶ್ರ ಬೆಳೆ ಸಾಧ್ಯ. ಈ ಮಿಶ್ರ ಬೆಳೆಗಳಿಂದ ಏನಿಲ್ಲವೆಂದರೂ ವಾರ್ಷಿಕ ೧ ಲಕ್ಷ ಉತ್ಪಾದನೆ ಮಾಡಬಹುದಾಗಿದೆ. ಆದ ಕಾರಣ ಸದ್ಯಕ್ಕೆ ಅಡಿಕೆಗೆ ಸರಿಸಾಟಿಯಾದ ಆದಾಯ ತಂದು ಕೊಡಬಲ್ಲ ಬೆಳೆ ಬೇರೆ ಇಲ್ಲ.
ಅಡಿಕೆಯನ್ನು ಈಗಿನ ವರೆಗೂ ಬರೇ ತಿಂದು ಉಗುಳುವ ಅಭ್ಯಾಸಕ್ಕಾಗಿಯೇ ಉಪಯೋಗಿಸಲಾಗುತ್ತಿದೆ. ಇದನ್ನು ತಂಬಾಕಿನ ಜೊತೆಗೆ ಅತ್ಯಧಿಕ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ತಂಬಾಕನ್ನು ಜಗಿಯುವುದಕ್ಕಾಗುವುದಿಲ್ಲ. ಅದಕ್ಕೆ ಜಗಿಯಲು ಅನುಕೂಲವಾಗುವಂತೆ ಅಡಿಕೆಯನ್ನು ಸೇರಿಸಲಾಗುತ್ತದೆ. ಅಡಿಕೆಯಲ್ಲಿ ಯಾವುದೇ ಮತ್ತು ಕೊಡುವ ಪದಾರ್ಥ ಇರುವುದಿಲ್ಲ. ಆದರೂ ಅಡಿಕೆಯನ್ನೇ ವೀಳ್ಯದೆಲೆ ಜಗಿಯಲು, ಗುಟ್ಕಾ ತಯಾರಿಕೆಗೆ , ಪಾನ್ ಬೀಡಾಗಳಿಗೆ ಬಳಕೆ ಮಾಡಲಾಗುತ್ತದೆ. ಗುಟ್ಕಾ ಎಂಬ ಸಿದ್ದ ಉತ್ಪನ್ನ ಬಂದ ತರುವಾಯ ಅಡಿಕೆಯ ಮಾರುಕಟ್ಟೆಗೆ ಒಂದು ಆಯಾಮ ದೊರೆಯಿತು ಎನ್ನಬಹುದು. ಇದು ಸುಮಾರು ೧೯೮೮-೯೦ ನೇ ಇಸವಿಯ ನಂತರ. ಅದಕ್ಕೆ ಹಿಂದೆ ನಮ್ಮ ದೇಶದಲ್ಲಿ ವೀಳ್ಯದೆಲೆಯೊಂದಿಗೆ ಜಗಿಯಲು ಬಳಕೆ ಮಾಡುತ್ತಿದ್ದರು. ಬಹುತೇಕ ಅಡಿಕೆ ಪಾನ್ ಬೀಡ ತಯಾರಿಸುವ ಅಂಗಡಿಗಳ ಮೂಲಕವೇ ವಿಕ್ರಯವಾಗುತ್ತಿತ್ತು. ಸರಕಾರಕ್ಕೆ ಇದರಿಂದ ಸಮರ್ಪಕ ಲೆಕ್ಕಾಚಾರ ದೊರೆಯದೆ ಆದಾಯವವೂ ಇರಲಿಲ್ಲ. ಗುಟ್ಕಾ ಬಂದ ನಂತರ ಬಹುತೇಕ ಕೆಂಪಡಿಕೆ, ಒಡೆದ ಅಡಿಕೆ , ಸಿಪ್ಪೇ ಗೋಟು ಕರಿ ಗೋಟು ಎಲ್ಲವೂ ಗುಟ್ಕಾ ತಯಾರಿಕೆಗೆ ಬಳಕೆಯಾಗಿ ಗುಟ್ಕಾ ಉತ್ಪಾದನೆಗೆ ದೇಶದಾದ್ಯಂತ ಹತ್ತಾರು ದೈತ್ಯ ಕಂಪೆನಿಗಳು ಹುಟ್ಟಿಕೊಂಡವು. ಇಂದು ಉತ್ತಮ ಗುಣಮಟ್ಟದ ಚಾಲೀ ಅಡಿಕೆ ಮತ್ತು ೫-೧೦ % ಉತ್ಕೃಷ್ಟ ಗುಣಮಟ್ಟದ ಕೆಂಪಡಿಕೆ (ಚಿತ್ರ ೨) ಹೊರತಾಗಿ ಉಳಿದೆಲ್ಲಾ ತರಾವಳಿಯ ಅಡಿಕೆಯೂ ಗುಟ್ಕಾ ತಯಾರಿಕೆಗೇ ಬಳಸಲ್ಪಡುತ್ತದೆ.
ಅಡಿಕೆಯನ್ನು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲೂ ನಂತರ ಕೇರಳ, ಆನಂತರ ಮಹಾರಾಷ್ಟ್ರ, ಅಸ್ಸಾಂ ಈಗ ತಮಿಳುನಾಡಿನಲ್ಲೂ ಬೆಳೆಯುತ್ತಿದ್ದು, ಇಷ್ಟೂ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ಅಡಿಕೆ ಸಾಕಾಗದೆ ಬೇರೆ ದೇಶಗಳಿಂದಲೂ ಅಡಿಕೆಯನ್ನು ಆಮದು ಮಾಡಿ ಈ ಮೇಲಿನ ಬಳಕೆಗೆ ಬೇಕಾದ ಅಡಿಕೆಯ ಬೇಡಿಕೆಯನ್ನು ಪೂರೈಸಲಾಗುತ್ತದೆ. ಒಂದು ಲೆಕ್ಕಾಚಾರ ಪ್ರಕಾರ ಕರ್ನಾಟಕಕ್ಕೆ ದಿನಕ್ಕೆ ೪ ಲೋಡು ಗುಟ್ಕಾ ಬೇಕಾಗುತ್ತದೆಯಂತೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದರ ಬಳಕೆ ಇದ್ದು, ಗುಟ್ಕಾ ಹೊರತಾಗಿ ದೇಶದಾದ್ಯಂತ ಪಾನ್ ಬೀಡಾ ತಯಾರಿಸಿಕೊಡುವ ಲಕ್ಷಾಂತರ ಅಂಗಡಿಗಳು ಇವೆ. ಈ ಅಂಗಡಿಗಳಿಗೆ ದಿನಕ್ಕೆ ಏನಿಲ್ಲವೆಂದರೂ ಸರಾಸರಿ ೨-೩ ಕಿಲೋ ಅಡಿಕೆಯಾದರೂ ಬೇಕಾಗುತ್ತದೆ. ಅಹಮದಾಬಾದ್ ಪಟ್ಟಣದ ಸುತ್ತಮುತ್ತ ಸುಮಾರು ೨೦೦ ಕ್ಕೂ ಹೆಚ್ಚು ಪಾನ್ ಬೀಡಾ ಅಂಗಡಿಗಳು ಇವೆ. ಅದೇ ರೀತಿ ಇನ್ನಿತರ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಮತ್ತು ಇನ್ನಿತರ ಕಡೆಗಳಲ್ಲಿ ಏನಿಲ್ಲವೆಂದರೂ ೨೦೦೦ ಕ್ಕೂ ಮಿಕ್ಕಿ ಪಾನ್ ಮಸಾಲಾ ತಯಾರಿಸಿಕೊಡುವ ಅಂಗಡಿಗಳಿವೆ. ಅದೇ ರೀತಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಎಲ್ಲಾ ಕಡೆಯಲ್ಲೂ ಸಾವಿರಾರು ಸಂಖ್ಯೆಯ ಪಾನ್ ಮಸಾಲಾ ಅಂಗಡಿಗಳ ಮೂಲಕ ಅಡಿಕೆ ಬಳಕೆಯಾಗುತ್ತಿದೆ.
ಕೆಂಪಡಿಕೆಯಾಗಲೀ , ಚಾಲಿ ಅಡಿಕೆಯಾಗಲೀ ಬಹುತೇಕ ಬಳಕೆಯಾಗುವುದು ಗುಟ್ಕಾ ತಯಾರಿಕೆಗೆ. ಗುಟ್ಕಾ ಮಾರುಕಟ್ಟೆ ಅತೀ ದೊಡ್ದದಾಗಿದ್ದು ಇದನ್ನು ನಿಯಂತ್ರಣಕ್ಕೆ ತರುವುದು ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಗುಟ್ಕಾ ನಿಷೇಧ ಆದರೆ ಮತ್ತೊಂದು ವಿಧದಲ್ಲಿ ಅಡಿಕೆಯ ಬಳಕೆ ಆಗುತ್ತದೆ. ಬಹುಷಃ ಗುಟ್ಕಾ ನಿಷೇಧ ಎಂಬುದು ಸಾಧ್ಯವಿಲ್ಲದ ಮಾತು. ಈಗಾಗಲೇ ಇದನ್ನು ಕೆಲವು ರಾಜ್ಯ ಸರಕಾರಗಳು ಪ್ರಯೋಗ ಮಾಡಿ ನೋಡಿ ಇದರಿಂದ ಪ್ರಯೋಜನವಾಗದ ಕಾರಣ ನಿಷೇಧವನ್ನು ಮತ್ತೆ ಹೇರಲು ಮುಂದಾಗಿಲ್ಲ. ಇಷ್ಟಕ್ಕೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ಹಾನಿಕವೆಂದರೂ ಅದನ್ನು ಬಳಕೆ ಮಾಡುವ ಜನ ಬಳಸುತ್ತಲೇ ಇದ್ದಾರೆ. ಅಡಿಕೆಗೆ ಎಲ್ಲಿಯ ತನಕ ಭವಿಷ್ಯವಿದೆ ಎಂದರೆ ಜನ ಯಾವಾಗ ಗುಟ್ಕಾ ಪಾನ್ ಮಸಾಲಾ ಜಗಿಯುವ ಹವ್ಯಾಸವನ್ನು ಬಿಡುತ್ತಾರೆಯೋ ಆ ತನಕ ಇದಕ್ಕೆ ಬೇಡಿಕೆ ಇದೆ.
ಅಡಿಕೆಯನ್ನು ಪರ್ಯಾಯ ಬಳಕೆಗೆ ಉಪಯೋಗಿಸುವುದರಲ್ಲಿ ಕೆಲವೊಂದು ಪ್ರಯತ್ನಗಳಾಗಿದ್ದರೂ ಸಹ ಅದು ಈಗ ಇರುವ ಉತ್ಪಾದನೆಯಲ್ಲಿ ಏನೇನೂ ಅಲ್ಲ. ಅದನ್ನು ಅವಲಂಬಿಸಿ ಮಾರುಕಟ್ಟೆಯಲ್ಲಿ ಅಂತಹ ಬದಲಾವಣೆಯನ್ನು ನಿರೀಕ್ಷಿಸುವಂತಿಲ್ಲ. ಏನಿದ್ದರೂ ತಿಂದು ಉಗುಳುವುದೇ ಈ ತನಕದ ಬಳಕೆ.
ಸರಕಾರ ಅಡಿಕೆಯನ್ನು ನಿಷೇಧಿಸಲಿದೆಯೇ ಈ ಬಗ್ಗೆ ಜನರಲ್ಲಿ ಕೆಲವೊಂದು ಆತಂಕಗಳು ಇದೆ. ಸರಕಾರ ಈ ಕುರಿತಾಗಿ ಒಮ್ಮೊಮ್ಮೆ ಸದ್ದೆಬ್ಬಿಸುತ್ತದೆ ಸಹ. ಆದರೆ ಆಡಿಕೆಯನ್ನು ನಿಷೇಧಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ ಅಡಿಕೆ ಬೆಳೆಗಾರರು ತಮ್ಮ ಚಿಂತನೆಯ ಒಂದು ಮೂಲೆಯಲ್ಲಿ ಅಡಿಕೆಯ ಮಾರುಕಟ್ಟೆ ಕುಸಿತವಾದರೆ ಮುಂದೇನು ಎಂಬ ಬಗ್ಗೆ ಯೋಚನೆ ಹೊಂದಿರಲೇ ಬೇಕು. ಸರಕಾರ ಒಂದೋ ತಂಬಾಕನ್ನು ನಿಷೇಧ ಮಾಡುತ್ತದೆ. ಇಲ್ಲವೇ ಅಡಿಕೆಯ ಬೆಲೆ ಕುಸಿತವಾಗುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಇದಕ್ಕೆ ಕಾರಣ ಅಭಿವೃದ್ದಿ ಹೊಂದಿದ ದೇಶಗಳ ಒತ್ತಾಯ ಮತ್ತು ಜಾಗತಿಕ ಆಹಾರ ಸಂಸ್ಥೆಯ ಒತ್ತಡ ಕಾರಣವಾಗುತ್ತದೆ.
ಕಾಫಿಯ ಬೆಳೆ ಕುಸಿತವಾಗಿ ಸುಮಾರು ೧೦ ವರ್ಷಗಳೇ ಆಗಿವೆ. ಕಳೆದ ೧೦ ವರ್ಷಗಳಿಂದ ಏರಿಕೆಯಾಗದೇ ಇದ್ದ ಕಾಫಿ ದರ ಗಗನಕ್ಕೇರಿದೆ. ಇದಕ್ಕೆ ಕಾರಣ ಕಾಫೀ ಬೆಳೆಯ ಪ್ರದೇಶಗಳು ಹೆಚ್ಚಳವಾಗುವುದು ಸ್ಥಗಿತವಾಗಿದೆ. ಕಾಫೀ ಬೆಳೆಗಾರರು ಕರಿಮೆಣಸನ್ನು ನಂಬಿ ಕಾಫಿ ಬೆಳೆಸುತ್ತಿದ್ದು, ಕಾಫಿ ಬೆಳೆಯುವಲ್ಲಿರುವ ಸಮಸ್ಯೆಗಳ ಕಾರಣ ಕಾಫಿಗೆ ಬೆಲೆ ಇದ್ದರೂ ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ. ಬಹಳಷ್ಟು ಕಾಫಿ ಬೆಳೆಗಾರರು ಈಗ ಅಡಿಕೆ ಬೆಳೆಗಾರರಾಗುತ್ತಿದ್ದಾರೆ.
ಶುಂಠಿ ಬೆಲೆ ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿತ್ತು. ಇದರಿಂದಾಗಿ ಶುಂಠಿ ಬೆಳೆ ಪ್ರದೇಶ ಬಹಳಷ್ಟು ಹೆಚ್ಚಳವಾಯಿತು. ಮಲೆನಾಡಿನ ಭಾಗದಿಂದ ಬಯಲುನಾಡಿನ ವರೆಗೂ ಶುಂಠಿ ಬೆಳೆ ವಿಸ್ತರಿಸಲ್ಪಟ್ಟಿತು. ಆದರೆ ಈಗ ಶುಂಠಿಯ ಬೆಲೆಯೂ ಕುಸಿಯುವ ಭೀತಿಯಲ್ಲಿದೆ. ಶುಂಠಿ ಬೆಳೆಸುವ ರೈತರೂ ಅಡಿಕೆ ಬೆಳೆಯತ್ತ ಗಮನ ಹರಿಸುತ್ತಿದ್ದಾರೆ.
ಇದೆಲ್ಲಾ ಅಡಿಕೆ ಬೆಳೆಯ ಪ್ರದೇಶ ವಿಸ್ತರಣೆಗೆ ಅನುಕೂಲಮಾಡಿಕೊಡುತ್ತಿದೆ. ಅದಕ್ಕನುಗುಣವಾಗಿ ವಾರ್ಷಿಕ ಏನಿಲ್ಲವೆಂದರೂ ೫೦೦ ಎಕ್ರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಅಡಿಕೆ ಬೆಳೆ ಹೆಚ್ಚಳವಾಗಿ ವಾರ್ಷಿಕ ಕನಿಷ್ಟ ೫೦೦೦ ಕ್ವಿಂಟಾಲು ಆಡಿಕೆ ಉತ್ಪಾದನೆ ಹೆಚ್ಚಳವಾಗುತ್ತಿದೆ. ಇಷ್ಟು ಪ್ರಮಾಣದ ಅಡಿಕೆಯನ್ನು ಈಗಿನ ಬಳಕೆಗೆ ಉಪಯೋಗಿಸಲು ಸಾಧ್ಯವಿದೆಯೇ ಈ ಬಗ್ಗೆ ಬೆಳೆಗಾರರು ಯೋಚಿಸಬೇಕಾಗಿದೆ. ಅಡಿಕೆ ಉತ್ಪಾದನೆ ಹೆಚ್ಚಿದಂತೆ ಬೇಡಿಕೆ ಕಡಿಮೆಯಾಗುತ್ತಾ ಬೆಲೆ ಕಡಿಮೆಯಾಗುತ್ತದೆ. ಆದರೆ ಉತ್ಪಾದನಾ ವೆಚ್ಚ ಮಾತ್ರ ಹೆಚ್ಚಳವಾಗುತ್ತಿರುತ್ತದೆ. ಅಡಿಕೆ ನಿಷೇಧ ಖಂಡಿತವಾಗಿಯೂ ಯಾವುದೇ ಸರಕಾರಗಳೂ ಮಾಡುವುದಿಲ್ಲ. ಕಾರಣ ಇದರಲ್ಲಿ ಬರೇ ರೈತರು ಮಾತ್ರ ಭಾಗಿಗಳಲ್ಲ. ಕನಿಷ್ಟ ೧೦೦ ಜನ ಬೆಳೆಗಾರರಿಗೆ ೧ ವರ್ತಕ, ೧ ಒಳಸುರಿ ಪೂರೈಕೆದಾರ, ಒಬ್ಬ ಬೆಳೆಗಾರನ ಸುತ್ತ ಸುಮಾರು ೨ ಮೂರು ಜನ ಕೆಲಸದವರು ಸೇರಿ ಅಡಿಕೆ ಬೆಳೆಯಲಾಗುವ ಪ್ರದೇಶದಾದ್ಯಂತ ೨೫ -೩೦ % ಕ್ಕೂ ಹೆಚ್ಚಿನ ಜನ ಅಡಿಕೆ ಬೆಳೆಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಭಿಸಿರುವ ಕಾರಣ ಅಡಿಕೆ ಬೆಳೆಯನ್ನು ನಿಷೇಧಿಸುವುದು ಅಷ್ಟು ಸುಲಭದ ಮಾತಲ್ಲ. ಅದರ ಬದಲಿಗೆ ಕೆಲವೊಂದು ಋಣಾತ್ಮಕ ತಡೆಗಳನ್ನು ಸರಕಾರ ಮಾಡಬಹುದು. ಅಂಥಹ ಸಾಧ್ಯತೆಗಳಲ್ಲಿ ಕೆಲವು ಇವು.
ಗುಟ್ಕಾ ನಿಷೇಧ ಮಾಡಬಹುದು. ಸರಕಾರ ಗುಟ್ಕಾ ನಿಷೇಧ ಮಾಡಿದರೆ ಅದರ ಬದಲಿಗೆ ತಿನ್ನುವವರು ಬೇರೆ ವಿಧದಲ್ಲಿ ತಂಬಾಕು- ಅಡಿಕೆಯನ್ನು ಬಳಕೆ ಮಾಡುತ್ತಾರೆ. ಆಗ ಸ್ವಲ್ಪ ಮಟ್ಟಿಗೆ ಬಳಕೆ ಕಡಿಮೆಯಾಗಬಹುದಾದರೂ, ಇದು ಅಡಿಕೆ ಮಾರುಕಟ್ಟೆಯ ಮೇಲೆ ಇದು ದೊಡ್ದ ಹೊಡೆತವನ್ನು ಉಂಟುಮಾಡುತ್ತದೆ. ಅಡಿಕೆಯ ಬೆಲೆ ಕಡಿಮೆಯಾಗುತ್ತದೆ. ಇದರಿಂದಾಗಿ ಅಡಿಕೆಯ ಕೃಷಿಯ ಮೇಲೆ ಆಸಕ್ತಿ ಕಡಿಮೆಯಾಗಿ ಉತ್ಪಾದನೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಬರುತ್ತದೆ.
(ಇನ್ನೂ ಇದೆ)
ಚಿತ್ರಗಳು ಹಾಗೂ ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!