ತಂಬಾಕು ನಿಷೇಧ ಮಾಡಬಹುದು: ಈಗ ದೇಶದಾದ್ಯಂತ ತಂಬಾಕು ಮಂಡಳಿಯ ನಿರ್ಧೇಶನದ ಮೇರೆಗೆ ಎಷ್ಟು ಬೇಡಿಕೆ ಇದೆಯೋ ಅಷ್ಟು ತಂಬಾಕನ್ನು ನೊಂದಾಯಿತ ಕೃಷಿಕರ ಮೂಲಕ ನಿರ್ದಿಷ್ಟ ಪ್ರದೆಶಗಳಲ್ಲಿ ಮಾತ್ರವೇ ಬೆಳೆಸಲಾಗುತ್ತದೆ. ಇದನ್ನು ಕೊಳ್ಳುವುದು ತಂಬಾಕು ಮಂಡಳಿಯವರು. ಸಿಗರೇಟು, ಬೀಡಿ, ಪಾನ್ ತಂಬಾಕು ಈ ಮುಂತಾದ ಉದ್ದೇಶಕ್ಕೆ ಬಳಕೆಯಾಗುವ ತಂಬಾಕು ಬೇರೆ ಬೇರೆ ಇರುತ್ತದೆ. ಇದನ್ನು ತಂಬಾಕು ಮಂಡಲಿಯ ನಿರ್ಧೇಶನದ ಮೇಲೆಯೇ ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ನಿಷೇಧ ಮಾಡುವುದು ಸುಲಭ. ಇದು ಬಹುವಾರ್ಷಿಕ ಬೆಳೆಯಲ್ಲ. ಈ ಬೆಳೆಯಲ್ಲಿ ಎಕ್ರೆಗೆ ರೈತ ೧ ಲಕ್ಷ ತನಕವೂ ಸಂಪಾದನೆ ಮಾಡಬಹುದು. ಒಂದು ವೇಳೆ ತಂಬಾಕನ್ನು ನಿಷೇಧ ಮಾಡಿದರೆ ಆ ಪ್ರದೇಶದ ರೈತರು ಅದರ ಬದಲಿಗೆ ಬೇರೆ ಬೆಳೆ ಬೆಳೆಯಬಹುದು.ಅಷ್ಟೇ ಉತ್ಪಾದನೆ ತಂದು ಕೊಡಬಲ್ಲ ಬೇರೆ ಬೆಳೆಗಳೂ ಸಹ ಇವೆ.
ಅಡಿಕೆ ಕ್ಯಾನ್ಸರ್ ಕಾರಕ ಎಂಬುದನ್ನು ಎತ್ತಿ ಹಿಡಿಯಬಹುದು. ತಾಜಾ ಅಡಿಕೆ ಅಥವಾ ರೈತರು ಸುರಕ್ಷಿತವಾಗಿ ದಾಸ್ತಾನು ಇಟ್ಟ ಅಡಿಕೆ ಯಾವುದೇ ಹಾನಿಕಾರಕ ಅಂಶಗಳನ್ನು ಹೊಂದದೆ ಇರಬಹುದು. ಆದರೆ ಅದು ಗ್ರಾಹಕರಿಗೆ ತಲುಪುವ ಹಂತಕ್ಕೆ ಮುಟ್ಟುವಾಗ ದಾಸ್ತಾನು ಲೋಪದಿಂದ ಅದರಲ್ಲಿ ಶಿಲೀಂದ್ರ ಬೆಳೆದು ಅದು ಆರೋಗ್ಯಕ್ಕೆ ಹಾನಿಕರವಾಗಿ ಪರಿಣಮಿಸಿ ಅದರಿಂದ ಬಾಯಿಯ ಕ್ಯಾನ್ಸರ್ ಗಂಟಲು ಕ್ಯಾನ್ಸರ್ ಬರಬಹುದು. ಈ ಅಂಶದ ಮೂಲಕ ಅಡಿಕೆ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು.
ಈ ಮೂರು ಅವಕಾಶಗಳ ಬಗ್ಗೆ ಸ್ವಲ್ಪ ಅಂಜಿಕೆ ಇದೆ. ಸರಕಾರ ಅಡಿಕೆ ಬೆಳೆಯ ಮೇಲೆ ಏನಾದರೂ ಕ್ರಮ ಕೈಗೊಳ್ಳುವುದೇ ಆಗಿದ್ದಲ್ಲಿ ಈ ಮೂರು ಬಲವಾದ ಅವಕಾಶಗಳು ಇವೆ. ಉಳಿದ ಅವಕಾಶಗಳೆಂದರೆ,
ಅಡಿಕೆ ಬೆಳೆ ಸಂಶೋಧನೆಗೆ ಅನುದಾನ ನಿಲ್ಲಿಸಬಹುದು: ಅಡಿಕೆಯ ತಳಿ ಸುಧಾರಣೆ, ರೋಓಗ ಕೀಟ ಬಾಧೆ ನಿಯಂತ್ರಣ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಸಂಶೋಧನಾ ಕೇಂದ್ರಗಳಿಗೆ ಅನುದಾನವನ್ನು ಕಡಿಮೆ ಮಾಡುತ್ತಾ ಬೆಳೆ ಹೆಚ್ಚಾಗದಂತೆ ನಿಯಂತ್ರಣ ಮಾಡಬಹುದು.
ಬೆಳೆ ಒಳಸುರಿಗಳಿಗೆ ಸಹಾಯಧನ ನಿಲ್ಲಿಸಬಹುದು. ಹೊಸ ಪ್ರದೇಶ ವಿಸ್ತರಣೆಗೆ ತಡೆ ಹಾಕಬಹುದು. ಇವುಗಳಿಂದ ತಪ್ಪಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಅವಕಾಶಗಳು ಇವೆ. ಇವುಗಳ ಹೊರತಾಗಿ ಬೆಳೆ ನಿಲ್ಲಿಸಲು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಇದು ಯಾವುದೂ ಅಡಿಕೆ ಬಳಕೆಯ ಮೇಲೆ ಅಂಥಹ ಪರಿಣಾಮವನ್ನು ಉಂಟು ಮಾಡಲಾರದು. ಇಂದು ಅಡಿಕೆ ಮಾರುಕಟ್ಟೆ ಎಂಬುದು ಕೆಲವೊಂದು ಸೆಂಟಿಮೆಂಟ್ಸ್ ಆಧಾರದಲ್ಲಿ ನಡೆಯುತ್ತಿದೆ. ಕೆಲವೊಮ್ಮೆ ಉತ್ಪಾದನೆ ಹೆಚ್ಚು ಇದ್ದರೂ ಬೆಲೆ ಉತ್ತಮವಾಗಿಯೇ ಇರುತ್ತದೆ. ಬೆಳೆ ಕಡಿಮೆ ಇದ್ದಾಗ್ಯೂ ಬೆಲೆ ಕುಸಿತ ಉಂಟಾಗುತ್ತದೆ. ಇದೆಲ್ಲಾ ವರ್ತಕರು ಮಾಡುವ ವ್ಯವಹಾರ ಚಾಣಕ್ಯತೆ. ಗುಟ್ಕಾ ಉತ್ಪಾದನೆಗೆ ಈಗಿನ ಅಡಿಕೆ ಉತ್ಪಾದನೆ ಸಾಕಾಗುವುದಿಲ್ಲ. ಅದಕ್ಕಾಗಿಯೇ ಗುಟ್ಕಾ ತಯಾರಕರು ಕಳಪೆ ದರ್ಜೆಯ ಅಡಿಕೆಯನ್ನು ( ಸಿಪ್ಪೆಗೋಟು, ಕರಿಗೋಟು, ಇನ್ನಿತರ ಅಡಿಕೆಯ ಬದಲಿಗೆ ಮಿಶ್ರಣ ಮಾಡುವ ಕಾಯಿಗಳು) ಅದರೊಂದಿಗೆ ಮಿಶ್ರಣ ಮಾಡುತ್ತಾರೆ.
ರೈತರು ಯಾವ ರೀತಿ ಮುಂದಾಲೋಚನೆ ಮಾಡಬೇಕು: ಅಡಿಕೆ ಬೆಳೆಯ ಮೇಲೆ ಯಾವುದೇ ಕ್ರಮ ಕೈಗೊಂಡರೂ ಅದು ಬೆಳೆಗಾರರಿಗೆ ತೊಂದರೆಯಾದಂತೆ. ಇದನ್ನು ಪ್ರಜಾಪ್ರಭುತ್ವ ಆಡಳಿತವಿರುವ ಯಾವ ಆಡಳಿತಾರೂಢ ಸರಕಾರವೂ ಮಾಡುವ ಗೋಜಿಗೆ ಹೋಗುವುದಿಲ್ಲ. ಕೆಲವೊಂದು ಒತ್ತಡಗಳಿಗೆ ಮಣಿದು ಇಂಥಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡರೂ ಅದು ತಾತ್ಕಾಲಿಕವಾಗಿರುತ್ತದೆ. ತಂಬಾಕನ್ನು ನಮ್ಮ ದೇಶದಲ್ಲಿ ಬೆಳೆಯದಿದ್ದರೆ ಪ್ರಪಂಚದ ಕೆಲವು ಹಿಂದುಳಿದ ದೇಶಗಳಲ್ಲಿ ಬೆಳೆಸಬಹುದು. ಅಲ್ಲಿಂದ ಆಮದೂ ಮಾಡಲೂ ಬಹುದು. ಅದೇ ರೀತಿ ಅಡಿಕೆಯನ್ನೂ. ಆದ ಕಾರಣ ರೈತರು ಬೆಲೆ ಕುಸಿತ ಎಂಬ ಆಗಾಗ ಆಗುವ ಸಮಸ್ಯೆಗೆ ತಮ್ಮಲ್ಲೇ ಸಿದ್ದ ಉತ್ತರಗಳನ್ನು ಇಟ್ಟುಕೊಂಡು ರೈತರಾಗುವುದೇ ಜಾಣತನ.
ಅಡಿಕೆ ಬೆಳೆಯನ್ನೊಂದೇ ಬೆಳೆಸಬೇಡಿ. ಉಳಿದ ಬೆಳೆಗಳಿಗೂ ಅವಕಾಶಗಳನ್ನು ಇಟ್ಟುಕೊಳ್ಳಿ. ೫ ಎಕ್ರೆ ಹೊಲ ಇರುವವರು ಕೇವಲ ೩ ಎಕ್ರೆಯಲ್ಲಿ ಮಾತ್ರ ಅಡಿಕೆ ಬೆಳೆಯಿರಿ. ಉಳಿದ ಪ್ರದೇಶಗಳಲ್ಲಿ ವಿಭಾಗ ಮಾಡಿಕೊಂಡು ಇನ್ನಿತರ ಹೊಲಕ್ಕೆ ಹೊಂದುವ ಬೆಳೆಗಳನ್ನು ಬೆಳೆಸಬೇಕು. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಲು ಅವಕಾಶ ಹೆಚ್ಚಿರಬೇಕು. ಅಡಿಕೆಯ ಜೊತೆಗೆ ಕೊಕ್ಕೋ ಬೆಳೆಸುವುದರಿಂದ ಒಂದಷ್ಟು ವರಮಾನ ದೊರೆಯುತ್ತದೆ. ಜಾಯೀ ಕಾಯಿ ಬೆಳೆಸುವುದರಿಂದ ತೋಟದ ಒಳಗೆ ಗಾಳಿ ತಡೆ ಜೊತೆಗೆ ನೆರಳಿನ ವಾತಾವರಣ ಉಂಟಾಗಿ ಅಡಿಕೆಗೆ ಅನುಕೂಲವಾಗುತ್ತದೆ. ಒಂದು ಜಾಯೀ ಕಾಯಿ ಮರ ಗೇರು ಮರದಷ್ಟೇ ವರಮಾನವನ್ನು ತಂದು ಕೊಡಬಲ್ಲುದು.
ವೆನಿಲ್ಲಾ ಬೆಳೆಸಬಹುದು: ಒಮ್ಮೆ ವೆನಿಲ್ಲಾ ಬೆಳೆಯ ಬೆಲೆ ಕುಸಿತವಾಗಿ ಬೇಸರ ತಂದಿದ್ದರೂ ಸಹ ಈಗ ವೆನಿಲ್ಲಾ ಬೆಲೆ ಉತ್ತಮವಾಗಿದ್ದು, ಮೆಣಸು ಕೊಕ್ಕೋ, ಮುಂತಾದ ಎಲ್ಲಾ ಮಿಶ್ರ ಬೆಳೆಗಳಿಗಿಂತ ಲಾಭದಾಯಕವಾಗಿದೆ. ವೆನಿಲ್ಲಾದ ಈಗಿನ ಧಾರಣೆ ಅಡಿಕೆಯನ್ನೂ ಮಿಶ್ರ ಬೆಳೆ ಮಾಡುವಷ್ಟು ಇದೆ.
ಗೃಹ ಉದ್ದಿಮೆಯ ಮೂಲಕ ಅಡಿಕೆಯ ಮಾರುಕಟ್ಟೆ ಹೆಚ್ಚಿಸಬಹುದು: ಅಡಿಕೆಯನ್ನು ಬರೇ ತಂಬಾಕು ಜೊತೆ ತಿನ್ನುವುದು ಮಾತ್ರವಲ್ಲ. ಅದನ್ನು ಬೇರೆ ಬೇರೆ ಪಾಕದಲ್ಲಿ ಯಾವುದೇ ಹಾನಿಕಾರಕ ವಸ್ತುಗಳನ್ನು ಸೇರಿಸದೆ ಹಾಗೆಯೇ ಸಿಹಿಯ ಜೊತೆಗೆ ತಿನ್ನಲು ಬಳಕೆ ಮಾಡುತ್ತಾರೆ. ಇದೇನೂ ಸಣ್ಣ ಬಳಕೆ ಅಲ್ಲ. ದುರದೃಷ್ಟವೆಂದರೆ ಇಂದು ಬಳಕೆಯಲ್ಲಿರುವ ಈ ಸಿಹಿ ಸುಪಾರಿಯಲ್ಲಿನ ಸುಪಾರಿಯ ಗುಣಮಟ್ಟ ಮಾತ್ರ ಶೋಚನೀಯ. ಮದುವೆಯಲ್ಲಿ- ಉಪನಯನ- ಗೃಹ ಪ್ರವೇಶ ಮುಂತಾದ ಶುಭ ಸಮಾರಂಭಗಳಲ್ಲಿ ತಾಂಬೂಲವಾಗಿ ಒಂದೊಂದು ಕಡೆಗೆ ಕನಿಷ್ಟ ೧ ಕಿಲೋ ಸಿಹಿ ಸುಪಾರಿ ಬೇಕಾಗುತ್ತದೆ. ಸಿಹಿ ಅಡಿಕೆಯಲ್ಲಿ ವೈವಿಧ್ಯಮಯ ತಯಾರಿಕೆಗಳಿವೆ. ಉತ್ತಮ ಗುಣಮಟ್ಟದ ಸಿಹಿ ಸುಪಾರಿಯನ್ನು ತಯಾರಿಸಿ ಮಾರುಕಟ್ಟೆ ಮಾಡುವ ಮೂಲಕ ರೈತರು ಮೌಲ್ಯವರ್ಧನೆಗೆ ತೊಡಗಿದರೆ ಭಾರೀ ಅವಕಾಶಗಳಿವೆ. ಅಡಿಕೆಯನ್ನು ಬೇರೆ ಬೇರೆ ಆಕಾರಗಳಲ್ಲಿ ಕತ್ತರಿಸುವ ಯಂತ್ರಗಳು ಈಗ ಲಭ್ಯ. ಇದು ಅತೀ ದೊಡ್ದ ಮಾರುಕಟ್ಟೆ ಅವಕಾಶವನ್ನು ಹೊಂದಿದ್ದು ಭಾರತವಲ್ಲದೆ ಬೇರೆ ದೇಶಗಳಲ್ಲೂ ಮಾರುಕಟ್ಟೆ ಮಾಡಬಹುದಾದುದು.
ಅಡಿಕೆ ತೋಟದಲ್ಲಿ ಮರಮಟ್ಟು: ಅಡಿಕೆ ತೋಟದಲ್ಲಿ ಒಂದಷ್ಟು ಸಾಗುವಾನಿ ಸಸಿ ನೆಡುವುದು, ಹಲಸಿನ ಸಸಿ ನೆಡುವುದು ಮಾಡುವುದರಿಂದ ಅದು ಕೆಲವು ವರ್ಷಗಳ ನಂತರ ಉತ್ತಮ ಆದಾಯ ತಂದು ಕೊಡಬಲ್ಲ ಮರಮಟ್ಟು ಅಗುತ್ತದೆ. ನೀರಾವರಿ, ಗೊಬ್ಬರ ಮುಂತಾದ ಅನುಕೂಲತೆಯನ್ನು ಬಳಸಿಕೊಂಡು ಅದು ವೇಗವಾಗಿ ಬೆಳೆದು ಬೇಗ ಕಡಿಯಬಹುದಾದ ಮರಮಟ್ಟು ಆಗುತ್ತದೆ. ಅಡಿಕೆ ತೋಟದ ಬದುಗಳಲ್ಲಿ, ಎಡೆಯಲ್ಲಿ ಇದನ್ನು ಬೆಳೆಸುವುದರಿಂದ ನಷ್ಟ ಇಲ್ಲ. ಅರಣ್ಯ ಮರಮಟ್ಟುಗಳಾದ ಅಕೇಶಿಯಾ, ಸಾಗುವಾನಿ, ಮಹಾಗನಿ, ಹಲಸು, ಹೆಬ್ಬಲಸು ಮುಂತಾದ ಮರಮಟ್ಟುಗಳನ್ನು ಬೆಳೆಸುವುದರಿಂದ ಧೀರ್ಘಾವಧಿಯಲ್ಲಿ ಒಂದು ಆಸ್ತಿ ಸೃಷ್ಟಿಯಾಗುತ್ತದೆ.
ಒಟ್ಟಿನಲ್ಲಿ ಅಡಿಕೆ ಬೆಳೆಗಾರರೆಲ್ಲರಿಗೂ ನಿತ್ಯ ಅಂಜಿಕೆಯಾಗಿ ಕಾಡುವ ಬೆಲೆ ಹೀಗೇ ನಿಲ್ಲಬಹುದೇ, ಕುಸಿತವಾದರೆ ಏನು ಗತಿ ಎಂಬ ಆತಂಕಕ್ಕೆ ಉತ್ತರವನ್ನು ಅವರೇ ಈಗಿಂದೀಗಲೇ ಅದೇ ಕೃಷಿಯಲ್ಲಿ ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಬೆಲೆ ಬಿದ್ದರೂ ಅಚ್ಚರಿ ಇಲ್ಲ. ಸ್ಥಿರವಾಗಿ ಉಳಿದರೂ ಅಚ್ಚರಿ ಇಲ್ಲ. ಎರಡಕ್ಕೂ ನಾವು ಸಿದ್ದರಿರಲೇ ಬೇಕು.
(ಮುಗಿಯಿತು)
ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!