ಅನಂತನಾಗ್ ಹೆಸರು ಕೇಳದವರಿಲ್ಲ ಕರ್ನಾಟಕದಲ್ಲಿ. ನಾಗರಕಟ್ಟೆಯ ಕಟ್ಟೆ ಇಳಿದು ನಾಗ್ ಆದರೂ ಕನ್ನಡದಲ್ಲಿ ಸುಪ್ರಸಿದ್ಧರು. ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಎಲ್ಲ ಕನ್ನಡ ಸಿನೆಮಾ ಪ್ರಿಯರಿಗೆ ಹರ್ಷ ತಂದಿದೆ. ಅವರು ಮಾಡದ ಪಾತ್ರಗಳೇ ಇಲ್ಲ ಎನ್ನಲಾಗದಿದ್ದರೂ ಅವರು ಮಾಡಿದ ಪಾತ್ರ ವೈವಿಧ್ಯತೆ ಇನ್ನೊಬ್ಬರು ಮಾಡಿಲ್ಲ ಅನ್ನುವದು ಮಾತ್ರ ಸತ್ಯ. ನಿಷ್ಕರ್ಷದಲ್ಲಿ ಪೊಲೀಸ್, ನಾ ನಿನ್ನ ಬಿಡಲಾರೆ ಅಲ್ಲಿ ದೆವ್ವ ಹಿಡಿದ ಮನುಷ್ಯ, ಬಯಲು ದಾರಿಯಲ್ಲಿ ಮಿಲಿಟರಿ ಮನುಷ್ಯ, ಕೆಜಿಎಫ್ ನಲ್ಲಿ ಪತ್ರಕರ್ತ.. ಆದರೆ ಅದೆಲ್ಲ ಪಾತ್ರಕ್ಕಿಂತ ನನಗೆ ಹಿಡಿಸಿದ್ದು ಬೆಳದಿಂಗಳ ಬಾಲೆಯ ಚೆಸ್ ಆಟಗಾರ - ರೇವಂತ.

ಕನ್ನಡ ಸಿನೆಮಾದಲ್ಲಿ ತರ್ಕ, ಉತ್ಕರ್ಷ ಅಥವಾ ನಿಷ್ಕರ್ಷ ತರಹ ರೀಮೇಕ್ ಸಿನಿಮಾ ಮಾಡುತ್ತಿದ್ದರೂ ಅದರಲ್ಲೇ ತಮ್ಮ ಪ್ರತಿಭೆ ತೋರಿಸಿದ ಡೈರೆಕ್ಟರ್ ಎಂದರೆ ಸುನಿಲ್ ಕುಮಾರ್ ದೇಸಾಯಿ. ಬೆಳದಿಂಗಳ ಬಾಲೆ ರೀಮೇಕ್ ಆಗಿರಲಿಲ್ಲ ಆದರೆ ಅದು ಅದೇ ಹೆಸರಿನ ತೆಲುಗು ಕಾದಂಬರಿ ಮೇಲೆ ಆಧಾರಿತ ಚಿತ್ರ ಆಗಿತ್ತು. ಯಂಡಮೂರಿ ವೀರೇಂದ್ರನಾಥ್ ಅವರು ಆ ಕಾಲದ ಒಬ್ಬ ವಿಶೇಷ ಕಾದಂಬರಿಕಾರ. ತುಳಸಿದಳ, ಆನಂದೋ ಬ್ರಹ್ಮ ದಂತಹ ಸಂಪೂರ್ಣವಾಗಿ ವಿಭಿನ್ನ ಕಾದಂಬರಿ ಬರೆದವರು, ಬೆಳದಿಂಗಳ ಬಾಲೆಯ ಅದೇ ರೀತಿ ವಿಶೇಷತೆ ಮೆರೆದರು.

ಕೆಲವೇ ಪಾತ್ರಗಳೊಂದಿಗೆ ಹೆಣೆದ ಕಥೆಯಲ್ಲಿ ಆಕ್ಷನ್, ಆಶ್ಲೀಲತೆ , ಅನಗತ್ಯ ಹಾಸ್ಯ ಏನೂ ಇಲ್ಲದಿದ್ದರೂ ಮೊದಲಿಂದ ಕೊನೆವರೆಗೂ ಹಿಡಿದಿಡುವ ಸಿನಿಮಾ. ಕಾದಂಬರಿ ನಾನು ಓದಿಲ್ಲ ಆದರೆ ಸಿನೆಮಾ ಪ್ರೇಕ್ಷಕರನ್ನು ಸಂಪೂರ್ಣವಾಗಿ ಹಿಡಿದಿಡುವಲ್ಲಿ ಯಶಸ್ವಿ ಆಗಿತ್ತು.

ಜಗತ್ತಿನ ಎಲ್ಲ ಪ್ರೇಕ್ಷಕರಿಗಿಂತ ವಿಭಿನ್ನವಾಗಿರುವ ಕನ್ನಡಿಗರನ್ನು ಮೆಚ್ಚಿಸುವದು ಬಲು ಕಷ್ಟ. ಯಾವ ಕಥೆ ಹಿಡಿಸುತ್ತದೆ ಅನ್ನೋದು ಇಂದಿನವರೆಗೂ ಬಿಡಿಸಲಾರದ ಸಮಸ್ಯೆ. ಇಂಥ ಒಂದು ಒಳ್ಳೆ ಚಿತ್ರ ಗೆಲ್ಲಲಿಲ್ಲ. ಸುನೀಲ್ ಕುಮಾರ್ ದೇಸಾಯಿ ಅವರ A ಸರ್ಟಿಫಿಕೇಟ್ ಚಿತ್ರಗಳಾದ ಉತ್ಕರ್ಷ ಅಥವಾ ತರ್ಕ ಬಹುಶಃ ಇದಕ್ಕಿಂತ ಹೆಚ್ಚು ದುಡ್ಡು ಮಾಡಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.

ಯಶ್, ಸುದೀಪ್, ರಮೇಶ್ ಮತ್ತೆ ಉಪೇಂದ್ರ ಅಂಥ ಪ್ರತಿಭಾವಂತ ನಟರು ಈ ಚಿತ್ರವನ್ನು ರೀಮೇಕ್ ಮಾಡೋ ಪ್ರಯತ್ನ ಮಾಡಿದರೆ ಅದು ಅನಂತ ನಾಗ್ ಮತ್ತೆ ಸುನಿಲ್ ಕುಮಾರ್ ದೇಸಾಯಿ ಅವರಿಗೆ ಕೊಡೋ ದೊಡ್ಡ ಗೌರವ. ಲ್ಯಾಂಡ್ ಲೈನ್ ಫೋನ್ ಈ ಚಿತ್ರದ ಜೀವಾಳ ಹೀಗಾಗಿ ರಿಮೇಕ್ ಮಾಡಿದರು ಸಾವಿರದ ಒಂಭೈನೂರ ತೊಂಬತ್ತರ ಕಾಲದ ಚಿತ್ರ ಆಗಿರಬೇಕು. ಇಂದು ರೆಟ್ರೋ ಕಥೆಗಳಿಗೆ ಎಲ್ಲಿಲ್ಲದೆ ಬೇಡಿಕೆ ಇದೆ. ಜನ ಮನಸ್ಸು ಮಾಡಬೇಕು ಅಷ್ಟೇ!