ನಾವು ನಾಲ್ವರು ಗೆಳೆಯರು ಒಂದು ರಜಾದಿನ ಸಪತ್ನೀಕರಾಗಿ ಪಿಕ್ನಿಕ್ ಹೋಗುವುದೆಂದು ನಿರ್ಧರಿಸಿದೆವು. ಹಿಂದಿನ ದಿನ ಎಲ್ಲ ಸೇರಿ ಚರ್ಚೆ ನಡೆಸಿ ವೇಳಾಪಟ್ಟಿ ಸಿದ್ಧಪಡಿಸಿದ್ದಾಯಿತು. ಮರುದಿನ ಬೆಳಿಗ್ಗೆ ಒಬ್ಬನ ಹೆಂಡತಿಗೆ ಏನೋ ತುರ್ತು ಕೆಲಸ ಬಂದು ಆಕೆ ಬರದೇ ಗಂಡನನ್ನು ಮಾತ್ರ ಕಳುಹಿಸಿಕೊಟ್ಟಳು. ನಾವು ಮೂರು ಜನ ಸಪತ್ನೀಕರಾಗಿ ಬಂದರೆ ಆತ ಒಬ್ಬನೇ ಬಂದ. ಎಲ್ಲ ಕಡೆಯಲ್ಲೂ ನಾವೆಲ್ಲ ನಮ್ಮನಮ್ಮ ಹೆಂಡತಿಯರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳುವುದನ್ನು ಅವನು ಒಬ್ಬನೇ ನಿಂತು ಪೆಚ್ಚುಮೋರೆ ಹಾಕಿಕೊಂಡು ನೋಡುತ್ತಿದ್ದ. ನಾವೂ ಅವನಿಗೆ ಸಾಕಷ್ಟು ಕಾಲೆಳೆದೆವು ಅನ್ನಿ. ಇದೆಲ್ಲ ಮುಗಿದು ವಾಪಸ್ ಹೊರಡಲು ಸಜ್ಜಾದಾಗ ಅಲ್ಲೊಂದು ಸೀರೆ ಅಂಗಡಿ ಕಣ್ಣಿಗೆ ಬಿತ್ತು. ನಮ್ಮ ಮೂವರ ಪತ್ನಿಯರೂ ಅತ್ತ ನಡೆದರು. ಅವರು ಅಲ್ಲಿ ಒಳಹೊಕ್ಕು ಸೀರೆಗಳನ್ನು ತೆಗೆಸಿ ರಾಶಿ ಹಾಕಿಸಿ ನೋಡಲು ಆರಂಭಿಸುತ್ತಿದ್ದಂತೆ ನಾವು ಕಿಸೆ ಮುಟ್ಟಿ ನೋಡಿಕೊಳ್ಳತೊಡಗಿದರೆ ಅಷ್ಟುಹೊತ್ತು ಪೆಚ್ಚುಮೋರೆ ಹಾಕಿಕೊಂಡು ನಿಂತಿದ್ದ ಏಕಾಂಗಿ ಗೆಳೆಯನ ಮುಖದಲ್ಲಿ ನಗು ಮೂಡಿತು. 'ಒಬ್ಬನೇ ಬಂದಿದ್ದ ನನ್ನನ್ನು ಆಡಿಕೊಂಡು ನಗ್ತಾ ಇದ್ರಲ್ಲಾ, ಈಗ ಅನುಭವಿಸಿ' ಎಂದು ಪಕಪಕನೆ ನಗುತ್ತಿದ್ದರೆ ನಮ್ಮ ಮೂವರ ಮುಖ ಇಂಗು ತಿಂದ ಮಂಗನಂತಾಗಿತ್ತು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!