ಸುಗಂಧ ದ್ರವ್ಯಗಳು ಯಾರಿಗೆ ಇಷ್ಟವಿಲ್ಲ? ಬೆಲೆಬಾಳುವ ಅತ್ತರಿನ ಸುವಾಸನೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಜೊತೆಗೆ ಪ್ರಾಣಿ ಮತ್ತು ಸಸ್ಯಮೂಲದ ಅನೇಕ ಸುಗಂಧ ಬೀರುವ ವಸ್ತುಗಳಿವೆ. ಶ್ರೀಗಂಧ, ಲಾವಂಚ ಇತ್ಯಾದಿ ಸಸ್ಯಗಳ ಪರಿಮಳ ಎಲ್ಲರಿಗೂ ಗೊತ್ತಿರುವಂಥದ್ದೇ. ಇನ್ನು ಹೂವುಗಳಿಗಂತೂ ಅವುಗಳದ್ದೇ ಆದ ಸುಗಂಧವಿದೆ. ಮಲ್ಲಿಗೆ, ಸಂಪಿಗೆ ಮೊದಲಾದ ಹೂವುಗಳ ಪರಿಮಳಕ್ಕೆ ಮನಸೋಲದವರಾರು? ಇವು ಸಸ್ಯಮೂಲದ ಸುಗಂಧಗಳಾದರೆ ಇನ್ನು ಕಸ್ತೂರಿ ಮೃಗದಿಂದ ದೊರಕುವ ಕಸ್ತೂರಿ ಮತ್ತು ಪುನುಗು ಬೆಕ್ಕಿನ ಪುನುಗು ಇತ್ಯಾದಿಗಳು ಪ್ರಾಣಿಮೂಲದ ಸುಗಂಧಗಳಾಗಿವೆ. ಇವಲ್ಲದೆ ಇನ್ನೊಂದು ಸುಗಂಧದ್ರವ್ಯವಿದೆ. ಪ್ರಾಣಿಮೂಲದ್ದೇ ಆದ ಅದನ್ನು ಪನ್ನಂಬರ (Ambergris) ಎಂದು ಕರೆಯುತ್ತಾರೆ. ಇದರಲ್ಲೇನು ವಿಶೇಷ ಎಂದಿರಾ? ವಿಶೇಷ ಇರುವುದು ಇದರ ಮೂಲದಲ್ಲಿ!
ಈ ಪನ್ನಂಬರದ ಮೂಲ ಚೌದಲೆ ತಿಮಿಂಗಿಲ ಎಂಬ ಹೆಸರಿನ ಒಂದು ತಿಮಿಂಗಿಲ. ಹಲ್ಲಿರುವ ತಿಮಿಂಗಿಲಗಳ ಪೈಕಿ ಅತ್ಯಂತ ದೊಡ್ಡಗಾತ್ರದ ತಿಮಿಂಗಿಲವಿದು. ಗಂಡುಗಳು 60 ಅಡಿಯವರೆಗೆ ಉದ್ದವಿರುತ್ತವೆ. ಈ ಬೃಹತ್ ತಿಮಿಂಗಿಲದ ಮಲವೇ ರೂಪಾಂತರ ಹೊಂದಿ ಸುವಾಸನೆ ಬೀರುವ ಪನ್ನಂಬರ ಆಗಿ ಬದಲಾಗುತ್ತದೆ ಎಂದರೆ ನಂಬುತ್ತೀರಾ?
ತಿಮಿಂಗಿಲದ ಮಲ ಎಂದಕೂಡಲೇ ವ್ಯಾಕ್ ಎಂದು ಮುಖ ಸಿಂಡರಿಸಿಕೊಳ್ಳದಿರಿ. ತಿಮಿಂಗಿಲದ ದೇಹದಿಂದ ವಿಸರ್ಜನೆಯಾದ ಮೊದಲಿಗೆ ಇದು ಮಲದಂತೆಯೇ ದುರ್ವಾಸನೆ ಬೀರುತ್ತಿರುತ್ತದೆ. ಯಾರೂ ಅದರ ಹತ್ತಿರ ಸುಳಿಯಲಾಗುವುದಿಲ್ಲ. ತಿಮಿಂಗಿಲ ಎಂದಮೇಲೆ ಕೇಳಬೇಕೇ? ದಿನವೊಂದಕ್ಕೆ ಕ್ವಿಂಟಲ್ಗಟ್ಟಲೆ ತಿನ್ನುವ ತಿಮಿಂಗಿಲದ ವಿಸರ್ಜನೆ ಕೂಡ ಅಷ್ಟೇ ಅಗಾಧ ಪ್ರಮಾಣದಲ್ಲಿರುತ್ತದೆ. ದುರ್ವಾಸನೆ ಬೀರುವ ಈ ಮಲ ಅನೇಕ ವರ್ಷಗಳ ಕಾಲ ಸೂರ್ಯನ ಬೆಳಕು ಮತ್ತು ಗಾಳಿಗೆ ಒಡ್ಡಿಕೊಂಡು ರಾಸಾಯನಿಕ ಕ್ರಿಯೆಗಳಿಗೆ ಒಳಪಡುತ್ತದೆ. ಅದರ ಪರಿಣಾಮ ಅದು ಮೇಣದಂಥ ಪದಾರ್ಥವಾಗಿ ಬದಲಾಗುತ್ತದೆ. ಆಗ ಅದಕ್ಕೆ ಸುವಾಸನೆ ಬರುತ್ತದೆ.
ತಿಮಿಂಗಿಲಗಳ ಸಂಖ್ಯೆ ಅಗಾಧವಾಗಿರುವುದರಿಂದ ಮತ್ತು ಒಂದೊಂದು ತಿಮಿಂಗಿಲವೂ ಕೆಜಿಗಟ್ಟಲೆ ಮಲವಿಸರ್ಜನೆ ಮಾಡುವುದರಿಂದ ಸಾಗರಗಳಲ್ಲಿ ಅಗಾಧ ಪ್ರಮಾಣದ ಪನ್ನಂಬರ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ ತಪ್ಪು. ಏಕೆಂದರೆ ತಿಮಿಂಗಿಲಗಳ ಪೈಕಿ ಚೌದಲೆ ತಿಮಿಂಗಿಲಗಳ ಮಲ ಮಾತ್ರ ಪನ್ನಂಬರವಾಗಿ ಬದಲಾಗುತ್ತದೆ. ಜೊತೆಗೆ ಇವುಗಳಲ್ಲಿ ಸಹ ಶೇಕಡಾ ಒಂದರಷ್ಟು ತಿಮಿಂಗಿಲಗಳ ಮಲ ಮಾತ್ರ ಪನ್ನಂಬರವಾಗಿ ಬದಲಾಗುತ್ತದೆ. ಹಾಗಾಗಿ ಅದು ಅತ್ಯಂತ ಅಪರೂಪದ ವಸ್ತುವಾಗಿದೆ. ಜೊತೆಗೆ ಅದರ ಸುವಾಸನೆಯಿಂದಾಗಿ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಅದಕ್ಕೆ ಬಹಳ ಬೇಡಿಕೆಯಿದೆ. ಹಾಗಾಗಿ ಅದಕ್ಕೆ ವಿಪರೀತ ಬೆಲೆ. ಅವು ಹದಿನೈದು ಗ್ರಾಮ್ನಿಂದ ಹಿಡಿದು ಐವತ್ತು ಕೆಜಿಯವರೆಗೆ ಬೇರೆಬೇರೆ ಗಾತ್ರದ ತುಣುಕುಗಳಾಗಿ ಸಿಗುತ್ತದೆ. ಯೆಮೆನ್ ದೇಶದ ಕಡಲಿನಲ್ಲಿ ೨೦೨೧ರಲ್ಲಿ ನೂರಾಇಪ್ಪತ್ತೇಳು ಕೆಜಿ ತೂಗುತ್ತಿದ್ದ ಭಾರೀ ಪನ್ನಂಬರದ ತುಣುಕೊಂದು ಪತ್ತೆಯಾಗಿತ್ತು.
ಇನ್ನೊಂದು ಸಂಶಯ ನಿಮ್ಮನ್ನು ಕಾಡುವುದು ಸಹಜ. ಎಲ್ಲ ಚೌದಲೆ ತಿಮಿಂಗಿಲಳಿಂದಲೂ ಪನ್ನಂಬರ ತಯಾರಾಗುವುದಿಲ್ಲವೇಕೆ? ಈ ಸಂಶಯದ ಜಾಡು ಹಿಡಿದು ಹೋದ ವಿಜ್ಞಾನಿಗಳಿಗೆ ಅದರ ಭಾರೀ ತುಣುಕುಗಳ ಮಧ್ಯದಲ್ಲೆಲ್ಲ ಸ್ಕ್ವಿಡ್ಗಳ ಕೊಕ್ಕುಗಳು ಪತ್ತೆಯಾದವು. ಸ್ಕ್ವಿಡ್ಗಳು ಈ ಚೌದಲೆ ತಿಮಿಂಗಿಲಗಳ ಪ್ರಮುಖ ಆಹಾರ. ಇಡೀ ಸ್ಕ್ವಿಡ್ನ ದೇಹ ಮೃದುವಾಗಿದ್ದು, ಜೀರ್ಣವಾಗುತ್ತದೆ. ಆದರೆ ಅದರ ಕೊಕ್ಕು ಮಾತ್ರ ಬಹಳ ಕಠಿಣ. ಅದು ಜೀರ್ಣವಾಗುವುದಿಲ್ಲ. ಹಾಗಾಗಿ ಅದು ಕರುಳು ಮತ್ತಿತರ ಒಳ ಅಂಗಾಂಗಗಳಿಗೆ ಚುಚ್ಚಿಕೊಳ್ಳದಂತೆ ಅದರ ಸುತ್ತಲೂ ತಿಮಿಂಗಿಲದ ದೇಹದಿಂದ ಯಾವುದೋ ವಸ್ತು ಸ್ರವಿಸಿ ಅದು ಕೊಕ್ಕನ್ನು ಸುತ್ತುವರೆದು ಮೇಣದ ಮುದ್ದೆಯಂತೆ ಮಾಡಿ ವಿಸರ್ಜಿಸುತ್ತದೆ ಎಂದು ಊಹಿಸಿದ್ದಾರೆ. ಒಂದುವೇಳೆ ತಿಮಿಂಗಿಲ ಸ್ಕ್ವಿಡ್ನ್ನು ತಿನ್ನುವಾಗ ಜಾಗರೂಕತೆ ವಹಿಸಿ ಅದರ ಕೊಕ್ಕನ್ನು ನುಂಗದಿದ್ದರೆ ಪನ್ನಂಬರ ತಯಾರಾಗುವ ಪ್ರಮೇಯವೇ ಬರುವುದಿಲ್ಲ. ರಾಶಿಬಿದ್ದ ತಿಮಿಂಗಿಲದ ಮಲ ಸಂಪೂರ್ಣವಾಗಿ ಪನ್ನಂಬರವಾಗಿ ಬದಲಾಗುವುದಿಲ್ಲ.
ವಿಸರ್ಜನೆಯಾದ ಮೊದಲಿಗೆ ಇದು ಬಿಳಿಬಣ್ಣದಲ್ಲಿದ್ದು ಅದರ ನಡುವೆ ಕಪ್ಪು ಮಚ್ಚೆಗಳಿರುತ್ತವೆ. ಪನ್ನಂಬರವಾಗಿ ಬದಲಾದಮೇಲೆ ಬೂದು ಅಥವಾ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ತೇಲುವ ಬಂಗಾರ ಎಂದೂ ಕರೆಯುತ್ತಾರೆ.
ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳಲ್ಲಿ ತಿಮಿಂಗಿಲಗಳ ಕಗ್ಗೊಲೆ ಜಗತ್ತಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿತ್ತು. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ಸುಮಾರು 50,000 ತಿಮಿಂಗಿಲಗಳನ್ನು ಅವುಗಳ ಕೊಬ್ಬು ಮತ್ತು ಮಾಂಸಕ್ಕಾಗಿ ಕೊಲ್ಲಲಾಗುತ್ತಿತ್ತು. ಅವುಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದನ್ನು ಕಂಡು ಅಂತಾರಾಷ್ಟ್ರೀಯ ತಿಮಿಂಗಿಲ ರಕ್ಷಣಾ ಸಮಿತಿ ಅವುಗಳ ಕೊಲೆಯನ್ನು ನಿರ್ಬಂಧಿಸಿತು. ಪನ್ನಂಬರ ರಚನೆಯಾಗಲು ಅದು ವಿಸರ್ಜನೆಯಾಗಿ ಅನೇಕ ವರ್ಷಗಳೇ ಬೇಕಾಗುವ ಕಾರಣ ತಿಮಿಂಗಿಲವನ್ನು ಕೊಂದು ಅದನ್ನು ಪಡೆಯಲಾಗುವುದಿಲ್ಲ. ಆದರೂ ಪನ್ನಂಬರವನ್ನು ಹೊಂದುವುದು ಅಥವಾ ಅದನ್ನು ಮಾರುವುದು ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಕಾನೂನು ರೀತ್ಯಾ ಅಪರಾಧವಾಗಿದೆ. ಕೆಲವು ದೇಶಗಳು ಮಾತ್ರ ಅದಕ್ಕೆ ಕಾನೂನಿನ ಮಾನ್ಯತೆ ನೀಡಿವೆ.
ಜಗತ್ತಿನಲ್ಲಿ ಎಂಥೆಂಥ ವಿಚಿತ್ರಗಳಿವೆ ನೋಡಿ, ಯಾವ ವಸ್ತುವನ್ನು ಕಂಡರೆ ನಾವು ದುರ್ವಾಸನೆ ಎಂದು ಮುಖ ಸಿಂಡರಿಸಿ ದೂರ ಇಡುತ್ತೇವೋ ಅದೇ ವಸ್ತು ಕಾಲಕ್ರಮೇಣ ಬೆಲೆಬಾಳುವ ಸುಗಂಧಭರಿತ ವಸ್ತುವಾಗಿ ಪರಿವರ್ತನೆಗೊಳ್ಳುತ್ತದೆ ಎಂದರೆ ಎಂಥ ವಿಚಿತ್ರ ಅಲ್ಲವೇ? ಅದಕ್ಕೇ ಕಾಲಾಯ ತಸ್ಮೈ ನಮಃ ಎನ್ನುವುದೇನೋ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!