ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ‘ಎದ್ದೇಳು, ಚುರುಕಾಗು, ಕೆಲಸಮಾಡು, ಅಭಿವೃದ್ಧಿ ಹೊಂದು, ಸಕಲ ಭಾಗ್ಯಗಳನ್ನೂ ಸಂಪಾದಿಸು ಎಂದು ಉಪದೇಶ ಮಾಡಿದನಂತೆ.
ಅದಕ್ಕವನು ಹಾಗೆಲ್ಲಾ ಮಾಡಿದೇ ಎಂದಿಟ್ಟುಕೊಳ್ಳಿ, ಮುಂದಕ್ಕೆ? ಎಂಬ ಪ್ರಶ್ನೆ ಕೇಳಿದಾಗ,.. ಮುಂದಕ್ಕೆ, ಆರಾಮಾಗಿ ಕಾಲಮೇಲೆ ಕಾಲ ಹಾಕಿಕೊಂಡು, ಮಲಗಿ ಆನಂದವಾಗಿರಬಹುದು" ಎಂದನಂತೆ.
ಅಲ್ಲಾ, ನಾನು ಈಗಾಗಲೇ ಆ ಸ್ಥಿತಿಯಲ್ಲಿದ್ದೇನೆ, ನಿಮ್ಮ ದಾರಿ ನೀವು ನೋಡ್ಕೊಳ್ಳಿ" ಎಂದನಂತೆ ನಮ್ಮ ಭೂಪತಿ. ಹೀಗೆ ಪುಗಸಟ್ಟೆ ಸಲಹೆಗಳನ್ನು ಕೊಡುವವರು ನಮಗೆ ಬಹಳ ಜನ ಸಿಗುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ಅತೀ ಸುಲಭವಾದ ಕೆಲಸಗಳೆಂದರೆ ‘ ಅನ್ಯರಿಗೆ ಸಲಹೆ ನೀಡುವುದು ಮತ್ತು ಮತ್ತೊಬ್ಬರು ಮಾಡಿದ ಕೆಲಸದಲ್ಲಿ ಹುಳುಕ ಹುಡುಕುವುದು. ಯಾರಿಗಾದರೂ ಏನನ್ನಾದರೂ ಕೊಡುವಾಗ, ನಾವು ‘ ಭಯ’ ಮತ್ತು ಎಚ್ಚರಿಕೆಯಿಂದ ಕೊಡಬೇಕು.
ಏತಕ್ಕೆಂದರೆ, ನಾವು ಕೊಟ್ಟ ವಸ್ತು ಅಥವಾ ವಿಷಯ ಅವರಿಗೆ ಉಪಯೋಗಕ್ಕೆ ಬರುತ್ತದೋ ಅಥವಾ ಅದರಿಂದ ಅವರಿಗೆ ಏನಾದರೂ ತೊಂದರೆಯಾಗುತ್ತದೆಯೋ ಇಲ್ಲವೋ ಎಂಬ ಭಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊಡಬೇಕು.
ಹಾಗೆ ನಮ್ಮ ಮನಸ್ಸಿನಲ್ಲಿ ಭಯವಿಟ್ಟುಕೊಂಡರೆ, ಆಗ ನಾವು ಕೊಡುವುದು ಸೂಕ್ತವಾಗಿ, ಉಪಯುಕ್ತವಾಗಿ, ಅನುಕೂಲವಾಗಿರುತ್ತದೆ. ಹಾಗಾಗಿ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಅಪಕಾರವನ್ನೆಸಗಬಾರದು ಎನ್ನುವುದು ನಮ್ಮ ಸಂಸ್ಕೃತಿ.
ಪರರಿಗೆ ಉಪಕರಿಸುವುದು ಅಷ್ಟು ಸುಲಭವಲ್ಲ, ಅನ್ಯರ ಅವಶ್ಯಕತೆಗಳನ್ನು ಅರಿಯುವುದು ಬಹಳ ಕಷ್ಟ. ಅದು ಏನೋ ಇದ್ದರೆ ನಾವು ಮತ್ಯೇನನ್ನೋ, ಊಹಿಸಿ, ಭಾವಿಸಿ ಕೊಟ್ಟಾಗ, ಎಡವಟ್ಟಾಗುತ್ತದೆ. ನಿಷ್ಪ್ರಯೋಜಕ ವಸ್ತು ಅಥವಾ ಸಲಹೆಯನ್ನು ನೀಡಿ ಅನ್ಯರಿಗೆ ಉಪಕರಿಸದೆ, ಹಲಬಾರಿ ತೊಂದರೆಯನ್ನೇ ಮಾಡಿದಂತಾಗುತ್ತದೆ. ನಮ್ಮ ಉದ್ದೇಶ್ಯ ‘ಶುದ್ಧ' ’ವಾಗಿದ್ದರೂ,.. ಅವರಿಗೆ ಬೇಕಾದ ವಸ್ತು ಅಥವಾ ವಿಷಯ, ...ಬೇಕಾದ ಸಮಯದಲ್ಲಿ, ಬೇಕಾದ ಪ್ರಮಾಣದಲ್ಲಿ ಕೊಡುವುದರಲ್ಲಿ ನಾವು ಸೋಲುತ್ತೇವೆ. ಹಾಗಾಗಿ ಅನ್ಯರಿಗೆ ಉಪಕಾರ ಮಾಡುವುದು ಸುಲಭವಲ್ಲ. ಉಪಕಾರ ಮಾಡಬೇಕೆಂದು ಶುದ್ಧಮನಸಿದ್ದರೂ ಹಾಗೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಾವು ಅನ್ಯರಿಗೆ ಸೂಕ್ತ ಉಪಕಾರ ಮಾಡಲಾಗದಿದ್ದರೆ, ಅವರ ಪಾಡಿಗೆ ಅವರನ್ನು ಅವರ ಕರ್ಮಕ್ಕೆ ಅವರನ್ನು ಬಿಟ್ಟು, ಶುದ್ಧಮನಸ್ಸಿನಿಂದ ಅವರಿಗೆ ಶುಭವಾಗಲೆಂದು ಹಾರೈಸಿದರೆ, ಅವರಿಗೆ ಒಳಿತನ್ನು ಮಾಡಿದಂತೆಯೇ!, ಅಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!