ಬಾಲ್ಯದಲ್ಲಿ ಎಲ್ಲರಿಗೂ ತಮ್ಮ ಅಪ್ಪ ಸೂಪರ್ ಮ್ಯಾನ್. ಬೆಳೆಯುತ್ತಾ ಬೆಳೆಯುತ್ತಾ ತಮ್ಮ ಅಪ್ಪ ಎಲ್ಲರಂತೆ ಸಾಮಾನ್ಯ ವ್ಯಕ್ತಿ ಎನ್ನುವುದು ತಿಳಿದರೂ ಆತ ನಮಗಾಗಿ ಮಾಡಿದ ತ್ಯಾಗ ಮಾತ್ರ ಮರೆಯುವಂತಿಲ್ಲ. ಮನು ಗುರುಸ್ವಾಮಿಯವರು ಅಪ್ಪಂದಿರ ನೆನಪುಗಳನ್ನು ‘ಅಪ್ಪನ ಅಂಗಡಿ’ ಎನ್ನುವ ಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅವರ ಈ ಕೃತಿಗೆ ಕಥೆಗಾರರಾದ ಕಿರಣ್ ಕುಮಾರ್ ಕೆ ಆರ್ ಅವರು ಸೊಗಸಾದ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಅವರ ಬೆನ್ನುಡಿಯಲ್ಲಿ ಕಂಡ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಪುರಾಣದ ಕಥೆಗಳಲ್ಲಿ ಮಾದರಿ ಅನ್ನಿಸುವಂಥ ಮಕ್ಕಳು ಹಲವರಿದ್ದಾರೆ - ತಂದೆ ಕೊಟ್ಟ ಮಾತನ್ನು ನಿಜ ಮಾಡಲು ಕಾಡಿಗೆ ಹೋದ ರಾಮ, ತಂದೆಯ ಮದುವೆ ನಡೆಯಲೆಂದು ಭೀಷ್ಮ ಪ್ರತಿಜ್ಞೆ ತೆಗೆದುಕೊಂಡ ದೇವವ್ರತ, ತಂದೆಯನ್ನು ಚಿರಯೌವನ ದಲ್ಲಿಡಲು ತನ್ನ ಯೌವನವನ್ನೇ ತ್ಯಾಗ ಮಾಡಿದ ಪುರು ಪಟ್ಟಿ ದೊಡ್ಡದಿದೆ. ಆದರೆ ಮಾದರಿ ಅನ್ನಿಸುವಂಥ ಅಪ್ಪಂದಿರ ಉದಾಹರಣೆಗಳು ನಮಗೆ ಸಿಗುವುದು ಕಷ್ಟ ಕರ್ತವ್ಯ, ಸಿದ್ಧಾಂತ, ರಾಜಕಾರಣ, ಸ್ವಾರ್ಥ, ಮೋಹಗಳಿಗೆ ಸೋತು ಮಕ್ಕಳಿಗೆ ಸಿಗಬೇಕಿದ್ದ ಪ್ರೀತಿ ಕೊಡಲು ಮರೆತ ಅಪ್ಪಂದಿರೇ ಹೆಚ್ಚು, ಒಳ್ಳೆಯ ಮಗನೆಂದು ಅನ್ನಿಸಿಕೊಳ್ಳುವುದು ಸುಲಭ, ಒಳ್ಳೆಯ ಅಪ್ಪನೆಂದು ಅನ್ನಿಸಿಕೊಳ್ಳುವುದು ಕಷ್ಟವೋ ಏನೋ!
ಇಲ್ಲಿನ ಲೇಖನಗಳಲ್ಲಿ ಮಾದರಿ ಅನ್ನಿಸುವಂಥ ಅಪ್ಪಂದಿರ ಕಥೆಗಳಿವೆ. ಇವರೆಲ್ಲ ಮಕ್ಕಳಿಗೆ ಹೊಡೆದು ಬುದ್ದಿ ಹೇಳಿದವರಲ್ಲ. ಬದಲಿಗೆ ತಾವು ಬದುಕಿದ ರೀತಿಯಿಂದಲೇ ಮಾದರಿಯಾದವರು. ಉದಾಹರಣೆಗೆ, ಒಂದು ಲೇಖನದಲ್ಲಿ ಬರುವ ಅಪ್ಪ ಊರಿನಲ್ಲಿ ಬರಗಾಲವಿದ್ದಾಗ ಊರಿನವರಿಗೆಲ್ಲ ಸಾಲಕ್ಕೆ ದಿನಸಿ ಸಾಮಾನು ಹಂಚುತ್ತಾರೆ. ಹೀಗೆ ಸಂಸಾರದ ನಾವಿಕನೆಂಬ ಪಾತ್ರದ ಭಾರದಲ್ಲಿ ನಲುಗಲು ನಿರಾಕರಿಸಿದವರೇ ಮಾದರಿ ಅಪ್ಪ ಎಂದನ್ನಿಸುವುದು ಕಾಕತಾಳೀಯವಿರಲಾರದು.
ಇಲ್ಲಿ ಪ್ರಶ್ನೆಯಾಗಿಯೇ ಉಳಿದ ಅಪ್ಪನೆಂಬ ಒಗಟನ್ನು ಒಡೆಯುವ ಒದ್ದಾಟಗಳೂ ಇವೆ. ಉತ್ತರ ಸಿಗದಿದ್ದರೂ ಕೂಡ ಉತ್ತರ ಕಂಡುಕೊಳ್ಳುವ ಯತ್ನದಲ್ಲೇ ಹೊಳಹುಗಳು ಸಿಗುತ್ತವೆ. ಒಳ್ಳೆಯದೋ ಕೆಟ್ಟದ್ದೋ, ಅಪ್ಪನ ವ್ಯಕ್ತಿತ್ವದ ಒಂದು ಚೂರು ನಮ್ಮೊಳಗೂ ಸೇರಿಕೊಂಡಿರುವುದರಿಂದ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದಕ್ಕೆ ಅಪ್ಪನನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇಲ್ಲಿನ ಲೇಖನಗಳಲ್ಲಿ ಈ ರೀತಿ ಅರ್ಥ ಮಾಡಿಕೊಳ್ಳುವ ಯತ್ನವಿದೆ. ಜೊತೆಗೆ ನಾವು ಬದುಕಿದ ಒಂದು ಕಾಲಘಟ್ಟದ ವಿವರಗಳೂ ದಾಖಲಾಗಿರುವುದು ಈ ಪುಸ್ತಕದ ಮೌಲ್ಯ ಹೆಚ್ಚಿಸಿದೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!