ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ… ಮೇ ತಿಂಗಳ ಎರಡನೇ ವಾರದ ಭಾನುವಾರವನ್ನು (ಈ ವರ್ಷ ಮೇ ೧೦) ವಿಶ್ವ ತಾಯಂದಿರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗೂ ಇದೆಯಾ? ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇದು ಅನಿವಾರ್ಯತೆಯಿಂದ, ಪರಿಸ್ಥಿಯ ಅವಲೋಕನದಿಂದ ಮನಗಂಡು ಬಂದಿರಬಹುದು. ೧೮೭೦ರಲ್ಲಿ ಜೂಲಿಯಾ ವಾರ್ಡ್ ಎಂಬವರು, ಯುದ್ಧದಲ್ಲಾಗುವ ಸಾವು ನೋವುಗಳನ್ನು ಕಂಡು ಮಮ್ಮಲ ಮರುಗಿದರು. ಯುದ್ಧರಂಗದಲ್ಲಿ ಮಡಿಯುತ್ತಿರುವ ಸಾವಿರಾರು ಯುವಕರ ತಾಯಂದಿರ ನಿಟ್ಟುಸಿರು, ದುಃಖ, ಆರ್ತನಾದದ ಅರಿವಿದ್ದ ಇವರು 'ಇನ್ನಾದರೂ ಯುವಕರನ್ನು ಕೊಲ್ಲದಿರಿ, ನಿಮ್ಮ ಮಕ್ಕಳಿಗೆ ಹೇಳಿರಿ' ಎಂಬ ಘೋಷಣೆಯೊಂದಿಗೆ, ಪ್ರತೀ ವರ್ಷದ ಮೇ ಎರಡನೇ ವಾರದ ಭಾನುವಾರ ದಿನ ಮೆರವಣಿಗೆ ಹೋಗಿ ಪ್ರಚಾರ ಮಾಡಿ ಆರಂಭಿಸಿದರಂತೆ. ಅಂದಿನ ದಿನದಿಂದ ಪ್ರಾರಂಭವಾಯಿತು ಈ ಅಮ್ಮಂದಿರ ದಿನ.

‘ತಾಯಿ, ಅಮ್ಮ’ ಪದವೇ ರೋಮಾಂಚನವಲ್ಲವೇ? ಎಷ್ಟು ಶಕ್ತಿ ಅಡಗಿದೆ ನೋಡಿ. ಸಹನೆ, ತ್ಯಾಗ, ಮಮತೆ, ಪ್ರೀತಿ, ಪ್ರೇಮ, ವಾತ್ಸಲ್ಯದ ಪ್ರತಿರೂಪವೇ ತಾಯಿ. ಮಕ್ಕಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿ ಸರಿದಾರಿಗೆ ಒಯ್ದು, ತನ್ನ ಕಾಲಮೇಲೆ ತಾನೇ ನಿಲ್ಲುವಂತೆ ಮಗುವನ್ನು ರೂಪಿಸುವವಳು ತಾಯಿ. ಕರುಣಾಮಯಿ ಆಕೆ. ‘ಅಮ್ಮ’ ಎಂಬ ಎರಡಕ್ಷರದಲ್ಲಿ ಅಪರಿಮಿತ ಆನಂದ, ನಿರ್ಮಲತೆ, ಕೋಮಲತೆ,‌ ಸಿಟ್ಟು, ಸೆಡವು, ಹುಸಿಕೋಪ (ನಾಟಕೀಯ) ವಾತ್ಸಲ್ಯದ ಶರಧಿಯೇ ಅಡಗಿದೆಯಲ್ಲವೇ? ಈ ಮಧುರ ಬಂಧವನ್ನು ಯಾರಿಗೂ ತುಂಡರಿಸಲು, ಬೇರ್ಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ತುಂಡರಿಸಲು ನೋಡಿದರೆ ಅವರಷ್ಟು ಶತಮೂರ್ಖರು ಬೇರಾರು ಇಲ್ಲ. ಅವಳಷ್ಟು ಸಹನಾ ಶಕ್ತಿ ಯಾರಿಗಾದರೂ ಇರಲು ಸಾಧ್ಯವೇ? ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವೆ.

ಎಲ್ಲಾ ಬಿಡೋಣ, ಅಂಕುರವಾದ ಭ್ರೂಣವನ್ನು ಗರ್ಭದೊಳಗೆ ಜೋಪಾನವಾಗಿ ಬಚ್ಚಿಟ್ಟು, ನವಮಾಸ ಕಳೆದೊಡನೆ, ಬುವಿಯ ಬೆಳಕನ್ನು ಕಾಣುವಂತೆ ಮಾಡುವ ಏಕೈಕ ದೇವತೆ ತಾಯಿ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಜೊತೆಗೆ ಒಳ್ಳೆಯ ಕುಟುಂಬ ಸದಸ್ಯರು ಒದಗಿಬಂದರೆ ಮಹಾಭಾಗ್ಯ ಆಕೆಯದು. ಕಿರುಕುಳ, ಪೀಡನೆ, ಚುಚ್ಚುವಿಕೆ, ಮೆಟ್ಟುವಿಕೆ, ಕೀಳಾಗಿ ಕಾಣುವ ಮನೋಭಾವದ ಮನೆಮಂದಿ,ಬಡತನ, ಈ ಎಲ್ಲದರ ಮಧ್ಯೆ ಸಿಲುಕಿ ನಲುಗಿ ಬೇಯುವ ತಾಯಂದಿರೂ ಬಹಳಷ್ಟು ಮಂದಿ ಇದ್ದಾರೆ. ನಮ್ಮ ನಿಮ್ಮ ನಡುವೆಯೇ ಜೀವಚ್ಛವವಾಗಿ ಬದುಕುತ್ತಿದ್ದಾರೆ. ಹೆಣ್ಣೆಂದರೆ ಬರೇ ಭೋಗದ ವಸ್ತುವಾಗಿ, ಮನೆ ಕೆಲಸದವಳಾಗಿ, ಸದಸ್ಯರ ಆಶೋತ್ತರ ಪೂರೈಸಲಿರುವವಳಾಗಿ, ಅವಳಿಗೂ ಒಂದು ಮನಸ್ಸಿದೆ, ಹೃದಯವಿದೆ, ಭಾವನೆಗಳಿವೆ ಎಂದು ಅರ್ಥ ಮಾಡಿಕೊಳ್ಳದವರ ನಡುವೆಯೇ ಬದುಕು ಸವೆಸುವ ಅಮ್ಮಂದಿರೂ ಸಾಕಷ್ಟು ಇದ್ದಾರೆ.

ಮಾಧ್ಯಮಗಳಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ವಿಷಯ ಬರುತ್ತಿರುತ್ತದೆ. ಈಗಂತೂ ಈ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಕ್ಷಣಮಾತ್ರದಲ್ಲಿ ವಿಷಯ ಜಗಜ್ಜಾಹೀರು ಆಗುತ್ತದೆ.ಹೆತ್ತ ತಾಯಿ ವಯಸ್ಸಾದವಳೆಂದು ನೋಡದೆ ಎತ್ತಿ ಎತ್ತಿ ನೆಲಕ್ಕೆ ಕುಕ್ಕುವುದು, ಹೊಡೆದು ಬಡಿದು ಮಾಡುವುದು, ಕುತ್ತಿಗೆ ದಬ್ಬಿ ಹೊರಗೆ ಎಸೆಯುವುದು, ಕಾಲಿನಲ್ಲಿ ತುಳಿಯುವುದು, ಉಪವಾಸ ಕೆಡಹುವುದು, ಎಲ್ಲೋ ರಸ್ತೆಯಲ್ಲಿ ಬಿಟ್ಟು ಬರುವುದು, ಕೊಲ್ಲುವುದೂ ಇದೆ. ಮಾನವ ಎಷ್ಟೊಂದು ಕೆಳಮಟ್ಟಕ್ಕೆ ಇಳಿದ ಅನ್ನಿಸುತ್ತದೆ. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಮನುಷ್ಯತ್ವ ಮರೆತರಲ್ಲ? ಎಂದು ಮನಸ್ಸು ಹಿಂಡುತ್ತದೆ. ಎಲ್ಲೋ ದೂರದಲ್ಲಿ ಹೋಗಿ ಕುಳಿತವರಿಗೆ ಹಣವೇ ಮುಖ್ಯ, ಹೆತ್ತವರು ಬೇಡ ಎಂದರೆ ಏನು ಹೇಳಬೇಕು? (ಅನಿವಾರ್ಯತೆಯಾದರೆ ಒಪ್ಪೋಣ) ಅವರ ಅಪರಕ್ರಿಯಾದಿಗಳಿಗೂ ಬಾರದಷ್ಟು ಕಟುಕರು ಈ ಮಕ್ಕಳು. ಅದೇ ತಾಯಿ ಬಡತನದಲ್ಲಿ ಬೆಂದಾಗ ಮಗುವನ್ನು ಕೊರಳು ಹಿಸುಕಿ ಉಸಿರೇ ನಿಲ್ಲಿಸಿದ್ದರೆ,ಈ ಮಕ್ಕಳು ಪ್ರಪಂಚದಲ್ಲಿ ಮೆರೆದಾಡಲು ಸಾಧ್ಯವಿತ್ತೇ? ಹೆತ್ತ ಅಮ್ಮನನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ಇದ್ದರೆಷ್ಟು? ಬಿಟ್ಟರೆಷ್ಟು? ಕಷ್ಟ ಪಡುವ ಅಮ್ಮಂದಿರಿಗೆ

ಒಂದು ದಿನ ಶುಭಾಶಯ ಹೇಳಿದರೆ ಸಾಲದು. ಇಲ್ಲಿ ಕೃತಜ್ಞತೆ ಸಲ್ಲಿಸುವುದು ಮುಖ್ಯ. ಕಣ್ಣಲ್ಲಿ ರಕ್ತ ಇಲ್ಲದ ಹಾಗೆ ಇರುವ, ಮಕ್ಕಳು ಪ್ರಾಯಸಂದ ಕಾಲದಲ್ಲಿ ಹೊರದೂಡಿ ಬೀದಿಪಾಲು ಮಾಡುವುದನ್ನು ಕಂಡಿದ್ದೇವೆ. ನನಗೆ ತಿಳಿದ ಹಾಗೆ ಪ್ರವಾಹದ ನೀರು ತುಂಬಿ ಹರಿಯುವ ಹೊಳೆಗೆ ತಾಯಿಯನ್ನು ದೂಡಿದವನಿದ್ದಾನೆ, ಪರಿಹಾರದ ಹಣ ಸಿಕ್ಕುತ್ತದೆ ಎನ್ನುವ ಆಸೆಯಲ್ಲಿ. ಆಸ್ತಿ, ಚಿನ್ನಕ್ಕಾಗಿ ಕೊಂದವರಿದ್ದಾರೆ. ಕುಡಿದ ಮತ್ತಿನಲ್ಲಿ ಮದವೇರಿ ಹಾಸಿಗೆಗೆ ಆಹ್ವಾನಿಸಿದವರಿದ್ದಾರೆ. ಕುಡಿಯಲು ಹಣ ನೀಡದ್ದಕ್ಕೆ ಮನಬಂದಂತೆ ಬಡಿದವರಿದ್ದಾರೆ.(ಕಾಲ ಕೆಟ್ಟಿದೆ ಹೇಳ್ತೇವೆ, ಕೆಟ್ಟದ್ದು ಕಾಲವಲ್ಲ, ಮಾನವನ ಆಲೋಚನೆಗಳು ಕೆಟ್ಟಿವೆ) ಹೆಣ್ಣನ್ನು ಹಾಡಿ ಹೊಗಳಬಹುದು, ಆದರೆ ತಾಯಿಯನ್ನು ಹಾಡಿ ಹೊಗಳುವುದು ಕಷ್ಟ ಸಾಧ್ಯ. ಹೆತ್ತತಾಯಿಯ ಋಣವನ್ನು ತೀರಿಸಲು ಸಾಧ್ಯವೇ? ಆಕೆ ಕುಟುಂಬದ ಕಾರ್ಯ ನಿರ್ವಹಣಾಧಿಕಾರಿ, ಹಿತಚಿಂತಕಿ, ಕರುಣಾಮಯಿ, ಅಪ್ಪನ ಹೃದಯದೊಡತಿ, ಮನೆಯ ಸೌಭಾಗ್ಯದೇವತೆ, ಸುಖ-ದು:ಖ ಎರಡೂ ಆಕೆಯಿಂದ. ಅಪ್ಪನಿಗೆ ಗೃಹಮಂತ್ರಿಯಾಗಿ ಸಲಹೆ ಸೂಚನೆ ಕೊಡಬಲ್ಲಳು. (ಬೆಳಗಿನಿಂದ ರಾತ್ರಿ ತನಕ ದುಡಿಯುವ ಯಂತ್ರವೆಂದು ಭಾವಿಸುವವರೂ ಇದ್ದಾರೆ) ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ. ಒಮ್ಮೊಮ್ಮೆ ಅಪ್ಪನ ಸಿಟ್ಟಿಗೆ ಗುರಿಯಾಗುವವಳೂ ತಾಯೇ.ಆದರೂ ಹೊಂದಾಣಿಕೆಯಿದೆ ಆಕೆಯಲಿ.

ಎಷ್ಟೋ ಮನೆಗಳಲ್ಲಿ" ನೀನು ಕೆಲಸವಿಲ್ಲದೆ ಮನೆಯಲ್ಲೇ ಬಿದ್ದಿರ್ತಿ, ಗಂಡಸರ ಕಷ್ಟ ನಿನಗೇನು ಗೊತ್ತು? ಎಂಬುದಾಗಿ ಮಾತನಾಡುವವರು ಇದ್ದಾರೆ. 'ತಾಯಿಯ ದುಡಿಮೆ, ಬೆವರಿನ ಬೆಲೆಗೆ ಅಳತೆ ಮಾನಗಳಿಲ್ಲ ಅಲ್ಲವೇ? ಆಕೆಯ ಕೆಲಸಕಾರ್ಯಗಳು ಎಲೆಯ ಮರೆಯ ಕಾಯಿಯಂತೆ. ತಾಯಿ ಎನ್ನುವ ಜೀವ ನಿರೀಕ್ಷೆ ಮಾಡುವುದು ಆಸ್ತಿ, ಅಂತಸ್ತು, ಐಶ್ವರ್ಯ, ಒಡವೆ, ವಸ್ತ್ರ ಖಂಡಿತಾ ಅಲ್ಲ, ಬೊಗಸೆಯಷ್ಟು ಪ್ರೀತಿ, ನೆಮ್ಮದಿ, ಒಂದು ತುತ್ತು ಅನ್ನ. ಅನಾರೋಗ್ಯ ಸಂದರ್ಭದಲ್ಲಿ ಆಕೆ ಮಕ್ಕಳಿಗಾಗಿ ಮಾಡುವ ತ್ಯಾಗ, ಪಡುವ ಯಾತನೆ ಅಳತೆಗೂ ನಿಲುಕದು. ಇಂದಿನ ಈ ಸಂಕಷ್ಟದ ಕಾಲದಲ್ಲಿ ತಾಯಿಯ ಪಾತ್ರ ಹಿರಿದು. ಮಗಳು, ಸೊಸೆ, ಅಮ್ಮ, ಅಜ್ಜಿ, ಸಹೋದರಿ, ಗೆಳತಿ, ಸಖಿ ನಾನಾ ಪಾತ್ರಗಳನ್ನು ನಿಭಾಯಿಸುವ ಸ್ತ್ರೀಯನ್ನು ತಾಯಿಯ ಸ್ಥಾನದಲ್ಲಿ ಪೂಜಿಸೋಣ, ವ್ಯಕ್ತಿತ್ವಕ್ಕೆ ಬೆಲೆ ಕೊಡೋಣ. ’ಕ್ಷಮಯಾಧರಿತ್ರಿ’ ಆದ ಆಕೆಯು ನಮ್ಮಗಳ ಮನೆಯನ್ನು ಬೆಳಗುವ ನಂದಾದೀಪ.

ಯಾರೋ ಹೇಳಿದ ನೆನಪು ‘ಅಮ್ಮನ ಕಣ್ಣೀರು ಶಾಪವಾಗಬಹುದೆಂದು’. ಆದರೆ ಯಾವ ತಾಯಿಯೂ ತನ್ನ ಕಂದನಿಗೆ ಎರಡು ಬಗೆಯಲಾರಳು. ಅಮ್ಮನ ಸೆರಗಿನ ರಹಸ್ಯ, ಬೆಚ್ಚನೆಯ ಸ್ಪರ್ಶ, ಭದ್ರತೆ, ಭಯ ನಿವಾರಣೆ ಅನುಭವಿಸಿದ ಮಗುವಿಗೆ ಮಾತ್ರ ಗೊತ್ತಿರಬಹುದು. ಉಪ್ಪರಿಗೆಯ ಮೇಲೆ ಹತ್ತಿಸಿ ಮೆರವಣಿಗೆ ಮಾಡುವುದು ಬೇಡ, ಮನೆಯೊಳಗೆ ಜೊತೆಯಲ್ಲಿರಿಸಿ ಪ್ರೀತಿ, ವಾತ್ಸಲ್ಯ, ಒಂದು ಹಿಡಿ ಅನ್ನ ನೀಡುವ ಬುದ್ಧಿ ಎಲ್ಲಾ ಮಕ್ಕಳಿಗೂ ಬರಲಿ. ಕಳೆದು ಕೊಂಡ ಮೇಲೆ ಹಣ ಕೊಟ್ಟರೂ ಸಿಗಲಾರದ ಏಕೈಕ ರೂಪ ತಾಯಿ, ನೆನಪಿರಲಿ. ಬಹಳ ಹಿಂದಕ್ಕೆ ತಿರುಗಿ ನೋಡಿದರೆ ಹತ್ತು-ಹನ್ನೆರಡು ಮಕ್ಕಳನ್ನು ಹೆತ್ತು ಸಾಕಿದ ಹೆತ್ತವರಿದ್ದಾರೆ. (ನನ್ನ ತಾಯಿಯವರಿಗೆ ೯ ಮಕ್ಕಳು, ಅತ್ತೆಯವರಿಗೆ ೧೧ ಮಕ್ಕಳು). ಎಲ್ಲರನ್ನೂ  ಇದ್ದುದರಲ್ಲೇ ತೃಪ್ತಿ ಪಟ್ಟು ಬೆಳೆಸಿ ದೊಡ್ಡವರನ್ನಾಗಿ ಮಾಡಿಲ್ಲವೇ? ಪನ್ನೀರ ಸಿಂಚನ ಮಾಡದಿದ್ದರೂ ಕಣ್ಣೀರು ಬಾರದ ಹಾಗೆ ಮಕ್ಕಳ ವ್ಯವಹಾರವಿರಲೆಂದು ಆಶಿಸುವೆ. ಭಗವಂತ ಭೂಮಿಗೆ ಕಳುಹಿಸಿದ ಎರಡನೇ ದೇವರೇ ತಾಯಿಯಂತೆ. ಅಮ್ಮನಿಗೆ ಮಿಗಿಲಾದ ದೇವರಿರಲು ಸಾಧ್ಯವೇ? ‘ಅಮ್ಮ ನಿನಗೆ ನೀನೇ ಸರಿಸಾಟಿ’ ನಿನ್ನನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. 

ಭಗವಂತನ ಸ್ವರೂಪಿ, ಜಗತ್ತಿನಲ್ಲಿ ಕಣ್ಣಿಗೆ ಕಾಣಿಸುವ ಜೀವಂತ ದೇವರಾದ ವಿಶ್ವದ ಎಲ್ಲಾ ತಾಯಂದಿರಿಗೂ ಈ ಶುಭ ದಿನದಂದು ಹೃದಯಪೂರ್ವಕ ಕೃತಜ್ಞತೆಗಳು  ಮತ್ತು ಪ್ರೀತಿಯೊಡಲ ನಮಸ್ಕಾರಗಳು.

ರತ್ನಾ ಕೆ.ಭಟ್ಟ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ