ಅಲ್ಲಮನೊಂದಿಗೆ ಅನುಸಂಧಾನ

“ಅಲ್ಲಮನೊಂದಿಗೆ ಅನುಸಂಧಾನ” ಎನ್ನುವುದು ಹಿರಿಯ ಲೇಖಕ ಸಿದ್ದರಾಮ ಉಪ್ಪಿನ ನೂತನ ಕೃತಿ. ಈ ಕೃತಿಯು ವಚನಗಳ ಮಾದರಿಯಲ್ಲಿ ರಚಿತವಾದ ವಚನಗಳನ್ನು ಹೊಂದಿದೆ. ವಚನಕಾರರು ಬಳಸುವ ಅಂಕಿತಗಳು ಅವರ ತಾತ್ವಿಕ ಬದ್ಧತೆಯ ಆಸ್ಮಿತೆಯ ರೂಪಗಳಾಗಿದೆ. ಕಲಬುರಗಿಯ ಪ್ರಸಿದ್ಧ ವಕೀಲರಾದ ಜೆ ಅಗಸ್ಟಿನ್ ಅವರು ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅವರು ಕೃತಿಗೆ ಬರೆದ ಬೆನ್ನುಡಿ “ಅಲ್ಲಮನ ಸಹವಾಸದಲ್ಲಿ…”ಯ ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿದೆ… 

“ಯಾವುದೆ ಸಾಹಿತಿಯ ಕೃತಿ, ಆತನ ಪರಿಸರ, ಆತ ಬದುಕಿದ ಕಾಲ ಹಾಗೂ ಆತನ ಜೀವನಾನುಭವಗಳ ಹಿನ್ನೆಲೆಯಲ್ಲಿ ನಾವು ನೋಡುತ್ತೇವೆ. ಎಲ್ಲದರ ಪ್ರಭಾವ ಆತನ ಸಾಹಿತ್ಯ ಸೃಷ್ಟಿಯಲ್ಲಿ ಪ್ರತಿಫಲಿಸುತ್ತದೆ.

ಅವರ ಗದ್ಯ ಅಥವಾ ಪದ್ಯ ಯಾವುದೂ ಅವರ ಬದುಕಿನ ಪರಿಧಿಯಿಂದ ಆಚೆ ರೂಪಿತವಾದದ್ದಲ್ಲ. ಬದುಕಿನ ನೋವು ನಲಿವುಗಳ ರಸಾಯನವೇ ಅವರ ಸಾಹಿತ್ಯದ ಜೀವಾಳ. ಸಿದ್ಧರಾಮರ ಬರಹ ಸಹ ಅವರ ಬದುಕಿನ ಸುತ್ತಲೂ ಭ್ರಮಣ ಗೊಂಡಿದ್ದು ನೋಡುತ್ತೇವೆ. ಅವರ ಕಾವ್ಯ, ಸಾಹಿತ್ಯದ ಕುಸುಮಗಳು, ಅವರ ಎಲ್ಲಾ ನೋವು, ನಿಂದೆ, ಅಪಮಾನಗಳ ಲಾವಾದಲ್ಲಿ ಅರಳಿದ್ದು. ಸಿದ್ಧರಾಮ ನೋವುಂಡು ನಂಜುಂಡರಾದವರು..

ಸಿದ್ಧರಾಮ ಉಪ್ಪಿನರವರು ಕಾವ್ಯ ಹಾಗೂ ಗದ್ಯ ಬರಹಗಳಲ್ಲಿ ತಮ್ಮದೇ ಆದಂತಹ ಒಂದು ವಿಶಿಷ್ಟ ಶೈಲಿ ರೂಪಿಸಿದ್ದಾರೆ. ಈ ಶೈಲಿಯನ್ನು ಅವರು ವಿಚಾರ ಮಾಡಿ ರೂಢಿಸಿ ಪಳಗಿಸಿದ್ದಲ್ಲ. ಬದಲಾಗಿ ಅದು ಸಹಜವಾಗಿಯೇ ಮೂಡಿ ಬಂದದ್ದು. ಒಮ್ಮೆ ಬರಹವನ್ನು ಕಾಗದಕ್ಕಿಳಿಸಿದ ನಂತರ ಅವರು ಅದನ್ನು ಯಾವುದೇ ಛಂದಸ್ಸಿನ ಹಾಗೂ ವ್ಯಾಕರಣದ ನಿಯಮಕ್ಕೆ ಅಳೆದು ಸುರಿದು ಕತ್ತರಿಸಿ ಮರುಸೃಷ್ಟಿ ಮಾಡಲ್ಲ. ಬದಲಾಗಿ ಅದನ್ನು ಇದ್ದದಿದ್ದಂತೆಯೇ ಕಾಗದದ ಮೇಲೆ ಬಿಟ್ಟುಬಿಡುತ್ತಾರೆ. ಇಲ್ಲಿ ಅವರ ಕವಿತೆ ಒಮ್ಮೊಮ್ಮೆ ಗುಪ್ತಗಾಮಿನಿ ನದಿಯ ಧಾರೆಯಾಗಿ ಮೌನವಾಗಿ. ಇನ್ನೊಮ್ಮೆ ಕಡಿದಾದ ಬೆಟ್ಟದಿಂದ ಕೆಳಗೆ ಧುಮುಕುವ ಜಲರಾಶಿಯಂತೆ ಭೋರ್ಗೆರೆದು ಹರಿಯುತ್ತದೆ. ಸಣ್ಣ ಸಣ್ಣ ಸಾಲುಗಳಲ್ಲಿ ಬದುಕನ್ನು, ಬದುಕಿನ ಸತ್ಯಗಳನ್ನು ವಿಪರ್ಯಾಸಗಳನ್ನು, ಕ್ರೌರ್ಯಗಳನ್ನು ಉಪ್ಪಿನರವರು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಇಂದ್ರಿಯಾನುಭವಗಳ ಇತಿಮಿತಿಗಳ ಸತ್ಯವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಸಿದ್ಧರಾಮರ ಸಮಸ್ತ ಓದು, ಸ್ವಾನುಭವ ಇಲ್ಲಿ ಭಟ್ಟಿ ಇಳಿದು ಸಾಂದ್ರಗೊಂಡಿದೆ.

ಈ ಅಲ್ಲಮನ ಗುಹೇಶ್ವರ ಗುಹೆಯಲಿ ಮೊದಲಿಗರಾಗಿ ಮಿಂದೆದ್ದವರು... ಮುನ್ನುಡಿ ಬರೆದ ಪ್ರೊ. ಎಸ್ ಜಿ ಸಿದ್ಧರಾಮಯ್ಯ, ಡಾ. ಬಸವರಾಜ ಎಲಿಗಾರ, ಡಾ. ಜೆ ಎಸ್ ಪಾಟೀಲ್, ಡಾ. ಸಮೀರ ಹಾದಿಮನಿ, ಶ್ರೀನಿವಾಸ ಜಾಲವಾದಿ. ಜಿ ಬಿ ಪಾಟೀಲ್, ಶರಣ ಗದ್ವಾಲ್, ಡಾ. ಸಂಗಮೇಶ ಹಳೇಮನಿ, ಪ್ರಾಧ್ಯಾಪಕ ಸಿ ಎಸ್ ಭೀಮರಾಯ, ಜ್ಯೋತಿ, ತ್ರಿವೇಣಿ, ರೇವತಿ, ಸಾಹೇಬಗೌಡ ಬಿರಾದಾರ್ ಅಂಥವರು ನಿಜಕ್ಕೂ ಧನ್ಯರು.