ನಿರಂಜನರು ಬರೆದ ಸಾಮಾಜಿಕ ಕಾಳಜಿಯ ಒಂದು ಕಥೆ ‘ಕೊನೆಯ ಗಿರಾಕಿ’.ಈ ಕಥೆಯ ನಾಯಕಿ ಕಾಣಿ. ಈಕೆ ದಿಕ್ಕು ದೆಸೆ ಇಲ್ಲದ ಬಡ ಹೆಣ್ಣುಮಗಳು. ಈಕೆಯನ್ನು ಈ ಸಮಾಜ ಹೇಗೆ ಒಬ್ಬ ಮನುಷ್ಯಳಂತೆ ನೋಡದೆ, ಹೇಗೆ ಮಾರಲು, ಕೊಳ್ಳಲು ಇರುವ ವಸ್ತುವಾಗಿ ಕಾಣುತ್ತದೆ ಎಂಬುದನ್ನು ನಾವು ಕಾಣಬಹುದು. ಈ ಕಾಣಿಯ ಪರಿಸ್ಥಿತಿಯು ಸಮಾಜದಲ್ಲಿರುವ ಅದೆಷ್ಟೋ ಹೆಣ್ಣುಮಕ್ಕಳ ಪರಿಸ್ಥಿತಿಯಾಗಿದೆ.

ಕಾಣಿಯ ಅಸ್ತಿತ್ವವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪಿತೃಪ್ರಧಾನ ಸಮಾಜ ವ್ಯವಸ್ಥೆ ಅವಳ ಮೇಲೆ ನಿಯಂತ್ರಣ ಇಟ್ಟುಕೊಂಡು, ಆಕೆಯನ್ನು ಅವರಿಗೆ ಬೇಕಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತದೆ. ಆಕೆಯ ಸ್ವಾತಂತ್ರ್ಯದ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಹಾಗೆಯೇ ಆಕೆಗೆ ತನಗಿಷ್ಟ ಬಂದ ಹಾಗೆ ಬದುಕಲು ಅವಕಾಶ ಇರುವುದಿಲ್ಲ.

ಈ ಒಂದು ಕಥೆಯಲ್ಲಿ ಕೊನೆಯ ಗಿರಾಕಿಯಾಗಿ ಕಾಣಿ ಸಿಗುವ ಗಿಡುಗ, ಆಕೆ ಸತ್ತ ಮೇಲೆ ಆಕೆಯನ್ನು ಕುಕ್ಕುತ್ತದೆ. ಆದರೆ ಜನರು ಆಕೆ ಬದುಕಿದ್ದಾಗಲೇ ಆಕೆಯನ್ನು ಕುಕ್ಕಿ ಕುಕ್ಕಿ, ಅವಳ ಸಾವಿಗೆ ಕಾರಣವಾಗಿ, ಗಿಡುಗಕ್ಕಿಂತಲೂ ಹೆಚ್ಚು ಕ್ರೂರವಾಗಿ ಕಾಣುತ್ತಾರೆ.

ಈ ಪಿತೃಪ್ರಧಾನ ಸಮಾಜದಲ್ಲಿ ಇಂದಿಗೂ ಇಂತಹ ಪರಿಸ್ಥಿತಿಗಳನ್ನು ನಾವು ಕಾಣಬಹುದು. ಇಂದು ಮಹಿಳಾ ಸಬಲೀಕರಣ ಮುಂದುವರಿಯುತ್ತಿರಬಹುದು. ಆದರೆ ಹಾಗೆಂದು ಹೆಣ್ಣಿನ ಮೇಲೆ ದೌರ್ಜನ್ಯ, ಶೋಷಣೆ ಇಂದಿಗೂ ನಿಂತಿಲ್ಲ. ಬಾಯಿ ಬಿಟ್ಟು ಹೆಣ್ಣುಮಗು ಹೇಳದೇ ಇರಬಹುದು; ಆದರೆ ಆಕೆ ಒಳಗೊಳಗೆ ಕೊರಗುತ್ತಾ, ಯಾರಲ್ಲೂ ಹೇಳಲು ಆಗದೆ ಬದುಕಿದ್ದು ಸಾಯುತ್ತಿರುತ್ತಾಳೆ.ಈ ಕಥೆಯಲ್ಲಿ ಕಾಣಿ ಮೂಕಿ ಇದು ಸಮಾಜದಲ್ಲಿ ದೌರ್ಜನ್ಯ ಮತ್ತು ಶೋಷಣೆಗೆ ಒಳಗಾದ ಹೆಣ್ಣುಮಗಳು ಬಾಯಿ ಇದ್ದರೂ ತನ್ನ ನೋವುಗಳನ್ನು ಹೇಳಿಕೊಳ್ಳಲಾಗದೆ ಹೇಗೆ ಮೂಕಿಯಾಗಿಯೇ ಇರುತ್ತಾಳೆ ಎಂಬುವುದರ ಸಂಕೇತವಾಗಿ ನಾವು ಕಾಣಬಹುದಾಗಿದೆ

ಹೆಣ್ಣಿನ ಭವಿಷ್ಯ ಎಂದರೆ ಏನು? ಈ ಒಂದು ಕಥೆಯಲ್ಲಿ ಕಾಣಿಗೆ ಯಾವುದೇ ಭವಿಷ್ಯ ಇಲ್ಲ. ಅವಳ ಕನಸು ನುಚ್ಚುನೂರಾಗುತ್ತದೆ. ಅವಳ ಬದುಕಿನ ಪ್ರತಿಯೊಂದು ಹಂತದಲ್ಲೂ ಯಾರಾದರೂ ಅವಳ ಮೇಲೆ ಅಧಿಕಾರ ಸಾಧಿಸುತ್ತಲೇ ಇರುತ್ತಾರೆ. ಒಂದು ಹೆಣ್ಣು ತನಗಿಷ್ಟ ಬಂದಂತೆ ಬದುಕಲು, ಜೀವನ ಕಟ್ಟಿಕೊಳ್ಳಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಕಾಣಿಯ ಪಾತ್ರವೇ ಉದಾಹರಣೆಯನ್ನು ನೀಡುತ್ತದೆ.

ಟಿಪಿಕಲ್ ಸಾಂಪ್ರದಾಯಿಕ ಕುಟುಂಬಗಳಲ್ಲಿ ನಾವು ಹೇಗೆ ಒಂದು ಹೆಣ್ಣಿನ ಬದುಕಿನ ಎಲ್ಲಾ ವಿಚಾರಗಳಲ್ಲಿ ಆಕೆಯ ಮನೆಯವರು, ಕುಟುಂಬದವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬಹುದು. ಮದುವೆಯ ವಿಚಾರವನ್ನೇ ನೋಡಿದರೂ, ಅವಳಿಗೆ ಇಷ್ಟವಿಲ್ಲದಿದ್ದರೂ ಮನೆಯವರ ಒತ್ತಾಯಕ್ಕೆ ಬೇರೆ ದಾರಿಯಿಲ್ಲದೆ ಮದುವೆಯಾಗುವುದು ಮುಂತಾದವುಗಳನ್ನು ಕಾಣಬಹುದು.

ಒಂದು ಹೆಣ್ಣುಮಗು ತನಗಿಷ್ಟ ಬಂದಂತೆ ಇದ್ದು, ಭವಿಷ್ಯ ಕಟ್ಟಿಕೊಳ್ಳಲು ನೋಡಿದರೆ, ಅವಳನ್ನು ‘ಗಂಡುಬೀರಿ’ ಎಂದು ಹಗುರವಾಗಿ ಮಾತನಾಡುತ್ತಾರೆ. ಯಾಕೆ ಈ ಸಮಾಜ ಹೀಗಿದೆ? ಒಂದು ಕಡೆ ಮಹಿಳಾ ಸಬಲೀಕರಣ ಆಗುತ್ತಿದ್ದರೂ, ಇನ್ನೊಂದು ಕಡೆ ಇಂದಿಗೂ ಇಂತಹ ಮನಸ್ಥಿತಿ ಪ್ರಚಲಿತದಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು.