ನಮ್ಮ ಅಮ್ಮ ಅಜ್ಜಿಯ ಕಾಲವನ್ನು ಒಮ್ಮೆ ನೆನಪಿಸಿಕೊಳ್ಳಿ. ಬದುಕು ಬೇರೆಯದೇ ಒಂದು ಲಯದಲ್ಲಿ ಆಗ ಸಾಗುತ್ತಿತ್ತು. ಅದರಲ್ಲೂ ಹೆಚ್ಚಾಗಿ ಹಳ್ಳಿಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲೇ ಮುಂದಿನ ಎರಡು ಮೂರು ತಿಂಗಳಿಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಕೊಂಡು ಅದನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿ ಡಬ್ಬದಲ್ಲಿ ಹಾಕಿಟ್ಟರೆ ಮಳೆಗಾಲ ಮುಗಿಯುವವರೆಗೆ ಅಂಗಡಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಮನೆಗೆ ಅಕಸ್ಮಾತ್ ಆಗಿ ನೆಂಟರು ಬಂದರೂ ಇದ್ದ ಸಾಮಗ್ರಿಗಳಲ್ಲಿಯೇ ಅಡುಗೆ ಮಾಡುವ ಚಾತುರ್ಯ ಅಮ್ಮಂದಿರಿಗಿತ್ತು. ಯಾವುದಾದರು ಸಾಮಗ್ರಿ ಇರದಿದ್ದರೂ ಅದರ ಬದಲು ಮತ್ತೊಂದು ಬಳಸಿ ಅಡುಗೆ ಮಾಡುವ ಕಲೆಯಂತೂ ಎಲ್ಲಾ ಅಮ್ಮಂದಿರಿಗೂ ಸಿದ್ದಿಸಿತ್ತು.
ಒಂದು ವಸ್ತುವನ್ನು ಕೊಂಡುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸುತ್ತಿದ್ದರು. ಅತೀ ಅಗತ್ಯವೆಂದೆಣಿಸಿದರೆ ಮಾತ್ರ ಕೊಂಡುಕೊಳ್ಳುತ್ತಿದ್ದ ಕಾಲ ಅದಾಗಿತ್ತು. ಆ ನಂತರದ ದಿನಗಳಲ್ಲಿ ಕಿರಾಣಿ ಅಂಗಡಿ, ಚಿಕ್ಕಪುಟ್ಟ ತರಕಾರಿ ಅಂಗಡಿಗಳಿಂದ ಜನರು ಮೆಲ್ಲನೆ ಸೂಪರ್ ಮಾರ್ಕೆಟ್ ನತ್ತ ಒಲವು ತೋರಿಸಲು ಪ್ರಾರಂಭಿಸಿದ್ದರು. ಮಾಲ್ ಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ತಮಗಿಷ್ಟ ಬಂದ ವಸ್ತುಗಳನ್ನು ನೋಡಿ, ಆರಿಸುವುದರಲ್ಲಿ ಹೆಚ್ಚು ಖುಷಿಪಡುತ್ತಿದ್ದರು. ದಿನಸಿ ಸಾಮಗ್ರಿಗಳು, ಹಣ್ಣು ತರಕಾರಿಗಳು ಅಷ್ಟೇ ಅಲ್ಲ ಸ್ಟೇಷನರಿ ಸಾಮಾಗ್ರಿಗಳು, ಸೌಂದರ್ಯವರ್ಧಕಗಳು, ಪ್ಲಾಸ್ಟಿಕ್ ವಸ್ತುಗಳು ಗೃಹ ಬಳಕೆಯ ವಸ್ತುಗಳು ಎಲ್ಲವೂ ಒಂದೇ ಕಡೆ ದೊರೆಯುತ್ತಿದ್ದ ಕಾರಣದ ಜನರು ಸೂಪರ್ ಮಾರ್ಕೆಟ್ ಗಳತ್ತ ಆಕರ್ಷಿತರಾದರು.
ಈಗಂತೂ ಆನ್ಲೈನ್ ಶಾಪಿಂಗ್ನ ಕಾಲ. ಬೇಕೆನಿಸಿದಾಗ ಬೇಕಾದದ್ದನ್ನು ಮರುಕ್ಷಣವೇ ಕೊಂಡುಕೊಳ್ಳಬಹುದು. ಪಾಲಕ್ ಪನೀರ್ ಮಾಡಲೆಂದು ತಯಾರು ಮಾಡಿ ಕೊನೆಗೆ ಪನೀರ್ ಇಲ್ಲವೆಂದು ಗೊತ್ತಾದರೂ ಚಿಂತೆ ಇಲ್ಲ, ತಕ್ಷಣ ಆರ್ಡರ್ ಮಾಡಿದರಾಯಿತು. ನೆಂಟರು ಬರುತ್ತೇನೆ ಎಂದಾಗ ಮನೆಯ ಲೋಕೇಶನ್ ಶೇರ್ ಮಾಡಿ ತಕ್ಷಣವೇ ಅವರಿಗೆ ಕೊಡಲು ಏನೂ ಇಲ್ಲ ಎಂದು ಜ್ಯೂಸ್ ಆರ್ಡರ್ ಮಾಡಿದರೆ ಅವರು ಮನೆ ತಲುಪುವ ಮೊದಲೇ ಜ್ಯೂಸ್ ನಮ್ಮ ಮನೆ ತಲುಪಿರುತ್ತದೆ. ಯಾರದ್ದೋ ಬರ್ತಡೇ ಪಾರ್ಟಿಗೆ ಹೊರಟಾಗ ಗಿಫ್ಟ್ ತೆಗೆದುಕೊಳ್ಳುವುದು ಮರೆತು ಹೋಯಿತೆಂದು ಚಿಂತಿಸಬೇಕಾಗಿಲ್ಲ ಆರ್ಡರ್ ಮಾಡಿದರೆ ಆಯ್ತು, ಹತ್ತೇ ನಿಮಿಷದಲ್ಲಿ ನಮ್ಮ ಕೈ ಸೇರುತ್ತದೆ, ಬ್ಯಾಗು ಹಿಡಿದುಕೊಂಡು ಅಂಗಡಿ ತಲುಪುವ ಮೊದಲೇ ಆರ್ಡರ್ ಮಾಡಿದ್ದು ಮನೆ ತಲುಪಿರುತ್ತದೆ. ದುಡ್ಡಿಗಿಂತಲೂ ಸಮಯವೇ ಅಮೂಲ್ಯವಾಗಿರುವ ಇಂದಿನ ದಿನಗಳಲ್ಲಿ ಆನ್ಲೈನ್ ನಲ್ಲಿ ತರಿಸುವವರೇ ಹೆಚ್ಚು.
ನಮಗೆ ಸಮಯ- ಉಳಿಸುವುದರಲ್ಲಿ ಇದು ಸಹಾಯ ಮಾಡಿದರೂ, ಜತೆ ಜತೆಗೆ ನಮ್ಮನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ಅಂಗಡಿಗೆ ಹೋಗುವ ಶ್ರಮ ಇಲ್ಲದ ಕಾರಣ, ಯೋಜನೆ ಮಾಡುವ ಅಭ್ಯಾಸ ಕಡಿಮೆಯಾಗುತ್ತಿದೆ. 'ಇಲ್ಲದಿದ್ದರೆ ಏನು ಮಾಡುವುದು ಎಂದು ಯೋಚಿಸುವ ಬದಲು, ಆರ್ಡರ್ ಮಾಡಿದರೆ ಆಯ್ತು ಎನ್ನುವ ಮನಸ್ಥಿತಿ ಬೆಳೆದಿದೆ. ಆನ್ ಲೈನ್ ಶಾಪಿಂಗ್ ಸಮಯ ಉಳಿಸುವ ಸಾಧನವಾಗಿರಬಹುದು, ಆದರೆ ಅತಿಯಾದ ಬಳಕೆಯಿಂದ ನಮ್ಮ ಚಿಂತನೆ, ಶಿಸ್ತನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಅಗತ್ಯ ಮತ್ತು ಆಸೆ ನಡುವಿನ ಗಡಿಯನ್ನು ನಮಗೆ ನಾವೇ ನಿರ್ಧರಿಸಿಕೊಳ್ಳಬೇಕು, ಇಲ್ಲದಿದ್ದರೆ ಅನುಕೂಲದ ನೆಪದಲ್ಲಿ ನಮ್ಮ ಯೋಚನೆ, ಯೋಜನೆ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.
-ಅಶ್ವಿನಿ ಸುನಿಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!