ಉತ್ತರ ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ವಾಸ ಅಲ್ಲಿನ ಮರುಭೂಮಿಯ ಒಣ ಪ್ರದೇಶದಲ್ಲಿ. ಇದು ಸುಮಾರು ಐದಾರು ಅಡಿ ಉದ್ದ ಬೆಳೆಯುತ್ತದೆ. ಚಾಟಿಯಂತಹ ಬಾಲ ಮತ್ತು ಉದ್ದದ ಉಗುರುಗಳಿರುವ ಸದೃಢ ಮಾಂಸಾಹಾರಿ ಪ್ರಾಣಿಗಳಾದ ಇವುಗಳ ಆಹಾರ ಹಕ್ಕಿಗಳು, ಸರೀಸೃಪಗಳು ಮತ್ತು ಸಣ್ಣ ಸಸ್ತನಿಗಳು. ಕಂದು ಅಥವಾ ಆಲಿವ್ ಬಣ್ಣದ ಇವುಗಳ ಚರ್ಮದಲ್ಲಿ ಹಳದಿ ಬಣ್ಣದ ವೃತ್ತಾಕಾರದ ಹಲವಾರು ಮಚ್ಚೆಗಳು ಇರುತ್ತವೆ (ಮರುಭೂಮಿಯಲ್ಲಿ ವೇಷಪಲ್ಲಟ ಮೂಲಕ ಆತ್ಮರಕ್ಷಣೆಗಾಗಿ). (ವೈಜ್ಞಾನಿಕ ಹೆಸರು: ವರನಸ್ ಪನೋಪ್-ಟೆಸ್)
ಈ ದೊಡ್ಡ ಪ್ರಾಣಿಗಳ ಮೊಟ್ಟೆಗಳನ್ನು ಕಂಡವರು ಇರಲಿಲ್ಲ! ಇವು ಎಲ್ಲಿ ಮೊಟ್ಟೆ ಇಡುತ್ತವೆ ಎಂಬುದು ಸೌತ್ ಫ್ಲೋರಿಡಾ ವಿಶ್ವವಿದ್ಯಾಲಯದ ಸರೀಸೃಪ ವಿಜ್ಞಾನಿ ಸಿಯಾನ್ ಡೂಡಿ ಎದುರಿಸಿದ ದೊಡ್ಡ ಸವಾಲು. ಅವರು ಹಲವು ವರುಷ ಇವುಗಳ ಬಗ್ಗೆ ಅಧ್ಯಯನ ನಡೆಸಿದ್ದರೂ ಈ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇವು ಗಾತ್ರದಲ್ಲಿ ಇಷ್ಟು ದೊಡ್ಡದಾಗಿದ್ದರೂ ಜನರಿಗೆ ಕಾಣ ಸಿಗುತ್ತಿದ್ದದ್ದು ತೀರಾ ಅಪರೂಪ. ಆಸ್ಟ್ರೇಲಿಯಾದ ಮೂಲನಿವಾಸಿಗಳನ್ನು ಈ ಬಗ್ಗೆ ಪ್ರಶ್ನಿಸಿದರು. ಅವರಲ್ಲಿ ಕೆಲವರು ಅವುಗಳ ಸುರಂಗಗಳ ಪ್ರವೇಶದ ಬಳಿ ಗರ್ಭಿಣಿ ದೊಡ್ಡ-ಹಲ್ಲಿಗಳನ್ನು ಹಿಡಿಯುತ್ತಿದ್ದರು. ಆದರೆ, ಆ ಸುರಂಗಗಳನ್ನು ನಾಲ್ಕೈದು ಅಡಿ ಅಗೆದು ನೋಡಿದರೂ ಅಲ್ಲಿಗೇ ಆ ಬಿಲಗಳು ಕೊನೆಗೊಂಡಂತೆ ಕಾಣಿಸುತ್ತಿತ್ತು.
ಡೂಡಿ ಮತ್ತು ನಾಲ್ವರು ಸಹೋದ್ಯೋಗಿಗಳು 2012ರಲ್ಲಿ ಒಂದು ದೊಡ್ಡ-ಹಲ್ಲಿಯ ನೆಲದಾಳದ ಮೊಟ್ಟೆಗೂಡಿನ ಜಾಡು ಹಿಡಿದಿದ್ದರು. ಮನುಷ್ಯನ ತೋಳಿನ ಗಾತ್ರದ ಬಿಲವನ್ನು ನೆಲದ ಮೇಲ್ಮೈಯಿಂದ ಎರಡು ಅಡಿ ಆಳದ ವರೆಗೆ ಅಗೆದಾಗ ಅದು ಕೊನೆಗೊಂಡಂತೆ ಕಾಣಿಸಿತು. ಆಗ ಹಾರೆಯ ಬದಲಾಗಿ ಒಂದು ಕಡ್ಡಿಯನ್ನು ಇನ್ನೂ ಆಳಕ್ಕೆ ನುಗ್ಗಿಸಿದಾಗ ಕೆಳಗಡೆಯ ಮಣ್ಣು ಮೆದುವಾಗಿರುವಂತೆ ಅನಿಸಿತು. ಇದರ ಅರ್ಥವೇನೆಂದರೆ, ಆ ಸುರಂಗವು ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತಲೂ ಆಳವಾಗಿತ್ತು. ಗರ್ಭಿಣಿ ದೊಡ್ಡ-ಹಲ್ಲಿಯು ಸುರಂಗವನ್ನು ಕೊರೆದು ಅನಂತರ ಮಣ್ಣಿನಿಂದ ಪುನಃ ಮುಚ್ಚಿತ್ತು!
ಅವರು ಆ ಸುರಂಗವನ್ನು ಮೂರಡಿ ಆಳದ ವರೆಗೆ ಅಗೆದು ನೋಡಿದರೂ ಮೊಟ್ಟೆಗಳು ಕಾಣಿಸಲಿಲ್ಲ. ಡೂಡಿಗೆ ಗೊಂದಲವಾಯಿತು. ಯಾಕೆಂದರೆ ಬಹುಪಾಲು ಸರೀಸೃಪಗಳು ಮೇಲ್ಮೈಯಿಂದ ಒಂದಡಿ ಆಳದೊಳಗೆ ಮೊಟ್ಟೆಗಳನ್ನು ಇಡುತ್ತವೆ. ಇಲ್ಲಿ ಇನ್ನೊಂದು ವಿಚಿತ್ರ ಕಾಣಿಸಿತು. ಕೆಳಕ್ಕೆ ಹೋದಂತೆ ದೊಡ್ಡ-ಹಲ್ಲಿಯ ಸುರಂಗ ಕಾರ್ಕ್-ಸ್ಕ್ರೂನಂತೆ ಕೆಳಕ್ಕೆ ತಿರುಗುತ್ತಿತ್ತು!
ಮರುದಿನ, ಐದಡಿ ಆಳಕ್ಕೆ ಅಗೆದು ನೋಡಿದರೂ ದೊಡ್ಡ-ಹಲ್ಲಿಯ ಮೊಟ್ಟೆಗಳ ಸುಳಿವಿಲ್ಲ. ಆಗ, ಆ ಹೊಂಡದ ತಳದಲ್ಲಿ ನೆಲದಲ್ಲಿ ಮಲಗಿ, ತನ್ನ ಕೈಯನ್ನು ಸುರಂಗದ ಆಳಕ್ಕೆ ತೂರಿಸಿದ್ದ ಸಹೋದ್ಯೋಗಿ ಕಿರುಚಿದ “ಮೊಟ್ಟೆಗಳು!” ಅಂತಿಮವಾಗಿ ಡೂಡಿ ಮತ್ತು ಸಹೋದ್ಯೋಗಿಗಳು ದೊಡ್ಡ-ಹಲ್ಲಿಯ ಮೊಟ್ಟೆಗಳನ್ನು ಪತ್ತೆ ಮಾಡಿದ್ದರು. ಆ ಸುರಂಗದಿಂದ ಅವರು ಹೊರ ತೆಗೆದ ಮೊಟ್ಟೆಗಳ ಸಂಖ್ಯೆ ಹತ್ತು!
ಅನಂತರ, ಸಿಯಾನ್ ಡೂಡಿ ಇಂತಹ ಅನೇಕ ದೊಡ್ಡ-ಹಲ್ಲಿಯ ಸುರಂಗಗಳನ್ನು ಅಗೆದು ಪರಿಶೀಲಿಸಿದ್ದಾರೆ. ಎಲ್ಲದರಲ್ಲಿಯೂ ಅದೇ ರೀತಿಯ ರಚನೆಗಳು ಕಾಣಿಸಿವೆ. ಕೊಂಬಚ್ಚೇಳುಗಳು ಮತ್ತು ಪೋಕೆಟ್ ಗೋಫರ್-ಗಳು ಕೂಡ ಇಂತಹದೇ ಸುರುಳಿ ಆಕಾರದ ಸುರಂಗಗಳನ್ನು ಕೊರೆದು ಮೊಟ್ಟೆಗಳನ್ನು ಇಡುತ್ತವೆ. ಆದರೆ, ಆಸ್ಟ್ರೇಲಿಯಾದ ದೊಡ್ಡ-ಹಲ್ಲಿಗಳ ಮೊಟ್ಟೆ ಸುರಂಗಗಳು ಇತರ ಪ್ರಾಣಿಗಳ ಮೊಟ್ಟೆ-ಸುರಂಗಗಳಿಗಿಂತ ಆಳವಾಗಿರುತ್ತವೆ - ಕೆಲವು ಮೊಟ್ಟೆ-ಸುರಂಗಗಳು ನೆಲದ ಮೇಲ್ಮೈಯಿಂದ 13 ಆಡಿ ಆಳಕ್ಕೆ ಕೊರೆಯಲ್ಪಟ್ಟಿದ್ದವು! ಇದಕ್ಕೆ ಡೂಡಿ ತಿಳಿಸುವ ಕಾರಣ: ಆ ದೊಡ್ಡ-ಹಲ್ಲಿಗಳು ವಿಶೇಷ ಸವಾಲೊಂದನ್ನು ಎದುರಿಸುತ್ತವೆ. ಅವುಗಳ ದೊಡ್ಡ ಮೊಟ್ಟೆಗಳಿಂದ ಮರಿಗಳು ಹೊರಬರಬೇಕಾದರೆ, ಅವು ಎಂಟು ತಿಂಗಳುಗಳ ದೀರ್ಘ ಕಾಲ ಕಾವು ಪಡೆಯಬೇಕು. ಇದು ಆಸ್ಟ್ರೇಲಿಯಾದ ಬಿರುಸಿನ ಒಣ ಹಂಗಾಮನ್ನು ಒಳಗೊಂಡಿರುವ ಕಾಲ. ಆ ಕಾಲಾವಧಿಯಲ್ಲಿ ಹಲವಾರು ತಿಂಗಳು ಮಳೆಯೂ ಸುರಿಯೋದಿಲ್ಲ. ಆಳವಿಲ್ಲದ ಸುರಂಗದಲ್ಲಿ ಮೊಟ್ಟೆಗಳನ್ನು ಇಟ್ಟರೆ, ಅವು ಶಾಖದಿಂದ ಬೆಂದು ಹೋಗಬಹುದು. ಬದಲಾಗಿ, ತಂಪಾಗಿರುವ ಮತ್ತು ತೇವಾಂಶಭರಿತವಾಗಿರುವ ಆಳವಾದ ಸುರಂಗದಲ್ಲಿ ಮೊಟ್ಟೆಗಳನ್ನು ಇಟ್ಟರೆ ಆ ಮೊಟ್ಟೆಗಳು ನಾಶವಾಗದೆ, ಅವುಗಳಿಂದ ಮರಿಗಳು ಹೊರಬರುತ್ತವೆ.
ಸಮರ್ಪಕವಾದ ಮೊಟ್ಟೆ-ಸುರಂಗವನ್ನು ನಿರ್ಮಿಸಲಿಕ್ಕಾಗಿ ಗರ್ಭಿಣಿ ದೊಡ್ಡ-ಹಲ್ಲಿ ಆರಂಭದಲ್ಲಿ ಎರಡು ಅಡಿಗಳ ಆಳದ ಸುರಂಗ ತೋಡುತ್ತದೆ. ಅದರ ಮಣ್ಣನ್ನು ಪಕ್ಕದಲ್ಲಿ ರಾಶಿ ಹಾಕುತ್ತದೆ. ಅನಂತರ ಇನ್ನಷ್ಟು ಆಳಕ್ಕೆ ತನ್ನ ಮುಂಗಾಲುಗಳಿಂದ ಸುರಂಗ ತೋಡುತ್ತಾ ಸಾಗುತ್ತದೆ. ಆಗ ಮರಳುಗಾಡಿನ ಸುರಂಗದ ಮರಳನ್ನು ತನ್ನ ಬಾಲದ ಕಡೆಗೆ ಹಿಂದೂಡುತ್ತದೆ - ಕೊನೆಗೆ ಸುರಂಗ ಪತ್ತೆಯಾಗದಂತೆ ಅದನ್ನು ಮುಚ್ಚಲಿಕ್ಕಾಗಿ. ಇದು ಹಲವು ದಿನಗಳ ಕೆಲಸ! ಆ ಅವಧಿಯಲ್ಲಿ ಅದು ಮಣ್ಣಿನಲ್ಲಿ ಮುಳುಗಿರುತ್ತದೆ ಮತ್ತು ಅದರ ದೇಹದ ಸುತ್ತಲು ಇರುವ ಗಾಳಿ ಉಸಿರಾಟಕ್ಕೆ ಬೇಕಾದಷ್ಟು ಮಾತ್ರ. ಕೆಳಕ್ಕೆ ಹೋದಂತೆ, ಹಿಂದಕ್ಕೆ ದೂಡಿದ ಮಣ್ಣು-ಮರಳು ಕೆಳಕ್ಕೆ ಸುರಿಯುವುದನ್ನು ಅದರ ಬೆನ್ನು ತಡೆಯುತ್ತದೆ. ಈ ಕಾರಣಕ್ಕಾಗಿ ದೊಡ್ಡ-ಹಲ್ಲಿ ಸುರುಳಿ ಆಕಾರದಲ್ಲಿ ಮೊಟ್ಟೆ-ಸುರಂಗ ಕೊರೆಯುತ್ತದೆ ಎಂದು ವಿವರಿಸುತ್ತಾರೆ ಡೂಡಿ. ಸುರಂಗ ಸೂಕ್ತ ಆಳಕ್ಕೆ ತಲಪಿದಾಗ ಎರಡು ಮುಷ್ಠಿ ಗಾತ್ರದ ಚೇಂಬರನ್ನು ಅಗೆದು ಅಲ್ಲಿ ಜೊಟ್ಟೆಗಳನ್ನು ಇಡುತ್ತದೆ. ಅಂತಿಮವಾಗಿ, ಸುರಂಗವನ್ನು ಮುಚ್ಚುತ್ತಾ ಹಿಂದಕ್ಕೆ ತೂರಿಕೊಂಡು ಬರುತ್ತಾ, ಏಳರಿಂದ ಹತ್ತು ದಿನಗಳ ನಂತರ ಮಣ್ಣಿನಿಂದ ಹೊರಬರುತ್ತದೆ.
ಮೊಟ್ಟೆಗಳಿಂದ ಹೊರ ಬಂದ ಮರಿಗಳು ತಾಯಿ ಮಾಡಿದ ಸುರಂಗದ ದಾರಿಯಲ್ಲಿ ಹೊರಬರುವುದಿಲ್ಲ. ಅವು ನೇರವಾಗಿ ಮೇಲ್ಮುಖವಾಗಿ ಮಣ್ಣನ್ನು ಕೊರೆದು ದಾರಿ ಮಾಡಿಕೊಂಡು ಹೊರಬರುತ್ತವೆ. ಇನ್ನೊಂದು ಸಂಗತಿ: ಈ ದೊಡ್ಡ-ಹಲ್ಲಿಗಳು ಹತ್ತಿರಹತ್ತಿರವಾಗಿಯೇ ತಮ್ಮ ಮೊಟ್ಟೆ-ಸುರಂಗಗಳನ್ನು ಕೊರೆಯುತ್ತವೆ. ಒಮ್ಮೆ ಸಣ್ಣ ಕೋಣೆಯ ಅಳತೆಯ ಜಾಗದಲ್ಲಿ ಇಂತಹ 100 ಸುರಂಗಗಳನ್ನು ಪತ್ತೆ ಮಾಡಲಾಯಿತು.
ವರುಷವರುಷವೂ ದೊಡ್ಡ ಹಲ್ಲಿಗಳು ನಿರ್ದಿಷ್ಟ ಜಾಗದಲ್ಲಿಯೇ ತಮ್ಮ ಮೊಟ್ಟೆ-ಸುರಂಗಗಳನ್ನು ಕೊರೆಯುತ್ತವೆ. ಕೆಲವು ವರುಷಗಳ ನಂತರ ಆ ಜಾಗದಲ್ಲಿ ನೂರಾರು ಸುರಂಗಗಳ ಜಾಲ ಉಳಿಯುತ್ತದೆ. ಈ ಜಾಲದಲ್ಲಿ ಇತರ ಪ್ರಾಣಿಗಳು ವಾಸ ಮಾಡಲು ಮತ್ತು ಮೊಟ್ಟೆಗಳನ್ನಿಡಲು ಶುರು ಮಾಡುತ್ತವೆ: ಇತರ ಹಲ್ಲಿಗಳು, ಹಾವುಗಳು, ಚೇಳುಗಳು, ದುಂಬಿಗಳು, ಇರುವೆಗಳು, ಇಲಿಯಂತಹ ಪ್ರಾಣಿಗಳು ಇತ್ಯಾದಿ. ಕಪ್ಪೆಗಳು ಒಣ ಹವೆಯ ಕಾಲದಲ್ಲಿ ಈ ಹಳೆಯ ಸುರಂಗಗಳ ಮಣ್ಣಿನಲ್ಲಿ ಹುದುಗಿ ಬದುಕುತ್ತವೆ. ಇಂತಹ ಒಂದು ಜಾಗದಲ್ಲಿ, ಡೂಡಿ ಮತ್ತು ಅವರ ಸಹೋದ್ಯೋಗಿಗಳು 418 ಕಪ್ಪೆಗಳನ್ನು ಪತ್ತೆ ಮಾಡಿದರು! ಹೀಗೆ, ಇತರ ಪ್ರಾಣಿಪಕ್ಷಿಗಳನ್ನು ತಿಂದು ಬದುಕುವ ದೊಡ್ಡ-ಹಲ್ಲಿಗಳು ಇತರ ಪ್ರಾಣಿಗಳು ಜೀವಿಸಲಿಕ್ಕೂ ಅವಕಾಶ ಸೃಷ್ಟಿಸುತ್ತವೆ.
ಈ ಭೂಮಿಯಲ್ಲಿ ಮನುಷ್ಯ ಪತ್ತೆ ಮಾಡಿರದ ಇಂತಹ ವಿಸ್ಮಯಗಳು ಇನ್ನು ಎಷ್ಟಿವೆಯೋ!
ಚಿತ್ರ ಕೃಪೆ: ಸಿಯಾನ್ ಡೂಡಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!