ಜ್ಞಾನಕ್ಕಿಂತ ದೊಡ್ಡದು ವ್ಯಕ್ತಿತ್ವ; ವ್ಯಕ್ತಿತ್ವದ ಅಡಿಪಾಯವೇ ಮೌಲ್ಯ ಶಿಕ್ಷಣ.

ಇಂದಿನ ಶಿಕ್ಷಣ ವ್ಯವಸ್ಥೆ ವೇಗವಾಗಿ ಬದಲಾಗುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ಜಗತ್ತಿನಲ್ಲಿ ಅಪಾರ ಜ್ಞಾನವನ್ನು ಸಂಪಾದಿಸುತ್ತಿದ್ದಾರೆ. ಆದರೆ ಜ್ಞಾನ ಹೆಚ್ಚಾದಷ್ಟೂ ಮಾನವೀಯ ಮೌಲ್ಯಗಳು ಬೆಳೆಯುತ್ತಿವೆಯೇ ಎಂಬ ಪ್ರಶ್ನೆ ಸಮಾಜದ ಮುಂದೆ ನಿಂತಿದೆ. ಶಾಲಾ ಶಿಕ್ಷಣದ ನಿಜವಾದ ಉದ್ದೇಶ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅಥವಾ ಉದ್ಯೋಗ ಪಡೆಯುವುದು ಮಾತ್ರವಲ್ಲ; ಉತ್ತಮ ವ್ಯಕ್ತಿತ್ವ ಹೊಂದಿದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದಾಗಿದೆ. ಈ ಗುರಿಯನ್ನು ಸಾಧಿಸುವ ಪ್ರಮುಖ ಸಾಧನವೇ ಮೌಲ್ಯ ಶಿಕ್ಷಣ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ 2026–27ನೇ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲೆಗಳ 1ರಿಂದ 10ನೇ ತರಗತಿವರೆಗೆ ಪ್ರತಿದಿನ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಿರುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಪ್ರತಿದಿನ ಶಾಲಾ ಪ್ರಾರ್ಥನೆಯ ನಂತರ ನಿಗದಿತ ಸಮಯದಲ್ಲಿ ಮೌಲ್ಯ ಶಿಕ್ಷಣವನ್ನು ನಡೆಸುವುದು, ಅದರ ದಾಖಲೆಯನ್ನು ನಿರ್ವಹಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಚಟುವಟಿಕೆಗಳನ್ನು ಬೆಳೆಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

ಇಂದು ಸಮಾಜದಲ್ಲಿ ಹಿಂಸಾಚಾರ, ಮಾದಕ ವ್ಯಸನ, ಸೈಬರ್ ಅಪರಾಧ, ಅಸಹಿಷ್ಣುತೆ, ಹಿರಿಯರ ಗೌರವದ ಕೊರತೆ, ಪರಿಸರ ನಿರ್ಲಕ್ಷ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಅಭಾವ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು ಅತ್ಯಗತ್ಯವಾಗಿದೆ.

ಮೌಲ್ಯ ಶಿಕ್ಷಣವು ಮಕ್ಕಳಿಗೆ ಕೇವಲ ಪಾಠ ಹೇಳುವುದಲ್ಲ; ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ.

ಮೌಲ್ಯ ಶಿಕ್ಷಣದ ಪ್ರಮುಖ ಅಂಶಗಳು

ಶಾಲೆಯಲ್ಲಿ ಮೌಲ್ಯ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಈ ಗುಣಗಳನ್ನು ಬೆಳೆಸಬಹುದು.

• ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆ

• ಶಿಸ್ತು ಮತ್ತು ಸಮಯ ಪಾಲನೆ

• ಹಿರಿಯರಿಗೆ ಗೌರವ ಹಾಗೂ ಕಿರಿಯರ ಮೇಲೆ ಪ್ರೀತಿ

• ರಾಷ್ಟ್ರಪ್ರೇಮ ಮತ್ತು ಸಂವಿಧಾನದ ಮೌಲ್ಯಗಳ ಅರಿವು

• ಪರಿಸರ ಸಂರಕ್ಷಣೆಯ ಹೊಣೆಗಾರಿಕೆ

• ಸಾಮಾಜಿಕ ಸೇವಾ ಮನೋಭಾವ

• ಸಹಾನುಭೂತಿ ಮತ್ತು ಮಾನವೀಯತೆ

• ಲಿಂಗ ಸಮಾನತೆ ಹಾಗೂ ವೈವಿಧ್ಯತೆಗೆ ಗೌರವ

• ಡಿಜಿಟಲ್ ಜವಾಬ್ದಾರಿ ಮತ್ತು ಸಾಮಾಜಿಕ ಜಾಲತಾಣಗಳ ಸದುಪಯೋಗ

• ಕಾನೂನು ಪಾಲನೆ ಮತ್ತು ನಾಗರಿಕ ಜವಾಬ್ದಾರಿ

ಇಂದು ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಆದರೆ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ, ಸಹನೆ, ಸಂಯಮ ಮತ್ತು ನೈತಿಕತೆ ಅಗತ್ಯ. ಇವು ಪಠ್ಯಪುಸ್ತಕಗಳಿಂದ ಮಾತ್ರ ಬರವುದು ಸಾಧ್ಯವಿಲ್ಲ. ಶಿಕ್ಷಕರ ನಡವಳಿಕೆ, ಶಾಲೆಯ ವಾತಾವರಣ, ಪ್ರಾರ್ಥನೆ, ಕಥೆಗಳು, ಮಹನೀಯರ ಜೀವನ, ಗುಂಪು ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯ ಮೂಲಕವೇ ಈ ಗುಣಗಳು ರೂಪುಗೊಳ್ಳುತ್ತವೆ.

ಮೌಲ್ಯ ಶಿಕ್ಷಣವನ್ನು ಒಂದು ಪ್ರತ್ಯೇಕ ವಿಷಯವೆಂದು ನೋಡದೆ, ಪ್ರತಿಯೊಬ್ಬ ಶಿಕ್ಷಕರು ತಮ್ಮ ಬೋಧನೆಯ ಭಾಗವಾಗಿಸಬೇಕು. ಶಿಕ್ಷಕರು ಹೇಳುವುದಕ್ಕಿಂತ ಅವರು ಹೇಗೆ ಬದುಕುತ್ತಾರೆ ಎಂಬುದೇ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರೇ ಮೌಲ್ಯ ಶಿಕ್ಷಣದ ಜೀವಂತ ಮಾದರಿಯಾಗಬೇಕು.

ಮೌಲ್ಯ ಶಿಕ್ಷಣವು ಶಾಲೆಯ ಜವಾಬ್ದಾರಿ ಮಾತ್ರವಲ್ಲ. ಮನೆಯಲ್ಲಿ ಪೋಷಕರು ಮಕ್ಕಳೊಂದಿಗೆ ಕಳೆಯುವ ಸಮಯ, ಹಿರಿಯರಿಗೆ ಗೌರವ, ಸತ್ಯವಂತಿಕೆ, ಸರಳತೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನು ತಮ್ಮ ನಡವಳಿಕೆಯ ಮೂಲಕ ಮಕ್ಕಳಿಗೆ ಕಲಿಸಬೇಕು. ಶಾಲೆ ಮತ್ತು ಮನೆ ಒಂದೇ ದಿಕ್ಕಿನಲ್ಲಿ ಕೆಲಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.

ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಜಗತ್ತು ಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗಿದೆ. ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿಸುವುದರ ಜೊತೆಗೆ, ಅದನ್ನು ಜವಾಬ್ದಾರಿಯಿಂದ ಬಳಸುವ ಸಂಸ್ಕಾರವನ್ನು ಬೆಳೆಸುವುದು ಇನ್ನಷ್ಟು ಅಗತ್ಯವಾಗಿದೆ. ಇಲ್ಲದಿದ್ದರೆ ಜ್ಞಾನವು ಸಮಾಜದ ಅಭಿವೃದ್ಧಿಗೆ ಬದಲಾಗಿ ದುರುಪಯೋಗಕ್ಕೂ ಕಾರಣವಾಗಬಹುದು.

ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಅಲ್ಲ, ಉತ್ತಮ ಜೀವನಕ್ಕಾಗಿ ಎಂಬುದನ್ನು ನಾವು ಮರೆಯಬಾರದು. ಮೌಲ್ಯಗಳಿಲ್ಲದ ಶಿಕ್ಷಣವು ದಿಕ್ಕಿಲ್ಲದ ಹಡಗಿನಂತಿದೆ. ಆದ್ದರಿಂದ ಶಾಲೆಗಳಲ್ಲಿ ಮೌಲ್ಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕಾಲದ ಅಗತ್ಯವಾಗಿದೆ.

ಕರ್ನಾಟಕ ಸರ್ಕಾರ ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ಕಾರ್ಯಕ್ರಮವು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯ ದೈನಂದಿನ ಚಟುವಟಿಕೆಯ ಭಾಗವಾದರೆ ಮಾತ್ರ ಅದರ ನಿಜವಾದ ಉದ್ದೇಶ ಈಡೇರುತ್ತದೆ.

"ವಿದ್ಯಾರ್ಥಿಯ ಕೈಗೆ ಪುಸ್ತಕ ಕೊಡುವುದು ಶಿಕ್ಷಣ; ಆದರೆ ಅವನ ಹೃದಯದಲ್ಲಿ ಮೌಲ್ಯಗಳನ್ನು ಬಿತ್ತುವುದು ನಿಜವಾದ ಶಿಕ್ಷಣ."

-ಎಂ.ಆರ್‍.ಮಾನ್ವಿ