"ಕೈಯಲ್ಲಿ ಆಧಾರ್ ಕಾರ್ಡ್ ಇದೆ, ಪ್ಯಾನ್ ಕಾರ್ಡ್ ಇದೆ, ಚಲಾಯಿಸಲು ಮತದಾರರ ಗುರುತಿನ ಚೀಟಿಯೂ ಇದೆ; ಹಾಗಿದ್ದರೂ ನಾನು ಈ ದೇಶದ ಪ್ರಜೆ ಅಥವಾ ಭಾರತೀಯ ನಾಗರಿಕನೆಂದು ಸಾಬೀತುಪಡಿಸಲು ಇವಿಷ್ಟೇ ಸಾಲದೇ?"
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಕಲ್ಕತ್ತಾ ಹೈಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನ ಬೆನ್ನಲ್ಲೇ ಈ ಪ್ರಶ್ನೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಧಾರ್, ಪ್ಯಾನ್ ಮತ್ತು ಮತದಾರರ ಗುರುತಿನ ಚೀಟಿಗಳು (EPIC) ಪೌರತ್ವವನ್ನು ಅಂತಿಮವಾಗಿ ಸಾಬೀತುಪಡಿಸುವ ದಾಖಲೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿರುವ ತೀರ್ಪು ಹೊಸ ಕಾನೂನನ್ನೇನೂ ರೂಪಿಸಿಲ್ಲ; ಬದಲಾಗಿ ದೇಶದಲ್ಲಿ ಜಾರಿಯಲ್ಲಿರುವ ಮೂಲ ಕಾನೂನು ಆಶಯಗಳನ್ನೇ ಪುನರುಚ್ಚರಿಸಿದೆ.
ಹಾಗಿದ್ದರೆ ಕಾನೂನು ದೃಷ್ಟಿಯಲ್ಲಿ ಪೌರತ್ವ ಎಂದರೇನು? ದಿನನಿತ್ಯ ಬಳಸುವ ಈ ದಾಖಲೆಗಳ ನೈಜ ಮೌಲ್ಯವೇನು? ಇಲ್ಲಿದೆ ಒಂದು ನೋಟ.
ಕಾನೂನಿನ ದೃಷ್ಟಿಯಲ್ಲಿ 'ಪೌರತ್ವ' : ಭಾರತೀಯ ಸಂವಿಧಾನದ 5ರಿಂದ 11ನೇ ವಿಧಿಗಳವರೆಗೆ ಪೌರತ್ವದ ಮೂಲ ತತ್ವಗಳನ್ನು ಉಲ್ಲೇಖಿಸಲಾಗಿದ್ದರೂ, ಪೌರತ್ವ ಪಡೆಯುವ ಹಾಗೂ ಕಳೆದುಕೊಳ್ಳುವ ಪ್ರಕ್ರಿಯೆಗಳನ್ನು ಭಾರತೀಯ ಪೌರತ್ವ ಕಾಯ್ದೆ–1955 (Citizenship Act, 1955) ನಿಯಂತ್ರಿಸುತ್ತದೆ. ಈ ಕಾಯ್ದೆಯಡಿ ಪೌರತ್ವವನ್ನು ಜನ್ಮ, ವಂಶಾವಳಿ, ನೋಂದಣಿ, ನೈಸರ್ಗಿಕೀಕರಣ ಹಾಗೂ ಹೊಸ ಪ್ರದೇಶದ ಸೇರ್ಪಡೆ ಎಂಬ ಐದು ನಿರ್ದಿಷ್ಟ ಮಾರ್ಗಗಳ ಮೂಲಕ ಮಾತ್ರ ಪಡೆಯಲು ಸಾಧ್ಯ.ನಾವು ಧರ್ಮಗ್ರಂಥದಂತೆ ನೆಚ್ಚಿಕೊಂಡಿರುವ ಗುರುತಿನ ಚೀಟಿಗಳ ನೈಜ ಉದ್ದೇಶವೇ ಬೇರೆ
ಆಧಾರ್ ಕಾರ್ಡ್: ಇದು UIDAI ನೀಡುವ ವಿಶಿಷ್ಟ ಗುರುತಿನ ಸಂಖ್ಯೆಯಷ್ಟೇ. ಆಧಾರ್ ಕಾಯ್ದೆಯಲ್ಲೇ "ಆಧಾರ್ ಸಂಖ್ಯೆಯು ಭಾರತೀಯ ಪೌರತ್ವದ ಪುರಾವೆಯಲ್ಲ" ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇದು ಕೇವಲ ವಾಸಸ್ಥಳ ಮತ್ತು ಗುರುತಿನ ದೃಢೀಕರಣಕ್ಕೆ ಮಾತ್ರ ಸೀಮಿತ.
ಪ್ಯಾನ್ ಕಾರ್ಡ್: ಇದು ಕೇವಲ ಆದಾಯ ತೆರಿಗೆ ಸಲ್ಲಿಕೆ ಮತ್ತು ಹಣಕಾಸು ವಹಿವಾಟುಗಳಿಗೆ ಬಳಸುವ ದಾಖಲೆ.
ಮತದಾರರ ಗುರುತಿನ ಚೀಟಿ (EPIC): ಇದು ಜನಪ್ರತಿನಿಧಿತ್ವ ಕಾಯ್ದೆ-1950ರ ಅಡಿಯಲ್ಲಿ ಚುನಾವಣಾ ಆಯೋಗ ನೀಡುವ ಮತದಾನದ ಹಕ್ಕಿನ ಗುರುತಿನ ಚೀಟಿ.
ಈ ಮೂರೂ ದಾಖಲೆಗಳು ಒಬ್ಬ ವ್ಯಕ್ತಿಯ 'ಗುರುತನ್ನು' (Identity) ಮತ್ತು 'ನಿವಾಸವನ್ನು' (Residence) ದೃಢೀಕರಿಸಬಲ್ಲವೇ ಹೊರತು, ಆತ ಕಾನೂನಾತ್ಮಕವಾಗಿ ಭಾರತದ 'ಪೌರ' (Citizen) ಎಂಬುದನ್ನು ಅಂತಿಮವಾಗಿ ಪ್ರಮಾಣೀಕರಿಸುವುದಿಲ್ಲ.
ಹಾಗಿದ್ದರೆ ಪೌರತ್ವ ಸಾಬೀತುಪಡಿಸುವ ದಾಖಲೆಗಳು ಯಾವುವು?: ಭಾರತೀಯ ಕಾನೂನಿನಲ್ಲಿ "ಇದೇ ಅಂತಿಮ ಪೌರತ್ವ ಪ್ರಮಾಣಪತ್ರ" ಎಂದು ಒಂದೇ ಒಂದು ನಿರ್ದಿಷ್ಟ ದಾಖಲೆಯನ್ನು ಹೆಸರಿಸಲಾಗಿಲ್ಲ. ಬದಲಾಗಿ, ಸಂದರ್ಭಕ್ಕೆ ಅನುಗುಣವಾಗಿ ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಕೆಲ ಪ್ರಮುಖ ದಾಖಲೆಗಳ ಒಟ್ಟಾರೆ ಪರಿಶೀಲನೆ ನಡೆಸುತ್ತವೆ:
ಜನನ ಪ್ರಮಾಣ ಪತ್ರ (Birth Certificate): ಜನ್ಮದಿನಾಂಕ ಮತ್ತು ಜನ್ಮಸ್ಥಳವನ್ನು ದೃಢೀಕರಿಸುವ ಪ್ರಾಥಮಿಕ ದಾಖಲೆ.
ಭಾರತೀಯ ಪಾಸ್ಪೋರ್ಟ್: ಪೌರತ್ವ ಪರಿಶೀಲನೆಯ ನಂತರವೇ ವಿತರಿಸಲಾಗುವ ಪ್ರಮುಖ ದಾಖಲೆಗಳಲ್ಲಿ ಒಂದು.
ಪೌರತ್ವ ಪ್ರಮಾಣಪತ್ರ: ನೋಂದಣಿ ಅಥವಾ ನೈಸರ್ಗಿಕೀಕರಣದ ಮೂಲಕ ಪಡೆದ ಅಧಿಕೃತ ಪತ್ರ.
ಪೋಷಕರ ಪೌರತ್ವ ದಾಖಲೆಗಳು: ವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ ಆತನ ತಂದೆ-ತಾಯಿಯ ಪೌರತ್ವದ ದಾಖಲೆಗಳು.
ಪ್ರಮುಖ ವ್ಯತ್ಯಾಸ: ಕಾನೂನಿನ ದೃಷ್ಟಿಯಲ್ಲಿ "ಭಾರತದಲ್ಲಿ ವಾಸಿಸುವ ವ್ಯಕ್ತಿ" (Person) ಮತ್ತು "ಭಾರತದ ಪೌರ" (Citizen) ನಡುವೆ ಸ್ಪಷ್ಟ ಗೆರೆಯಿದೆ. ಸಂವಿಧಾನವು ಜೀವಿಸುವ ಹಕ್ಕು (ಅನುಚ್ಛೇದ 21) ಹಾಗೂ ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು (ಅನುಚ್ಛೇದ 14) ದೇಶದಲ್ಲಿರುವ ಪ್ರತಿಯೊಬ್ಬ 'ವ್ಯಕ್ತಿ'ಗೂ ನೀಡುತ್ತದೆ. ಆದರೆ ಮತದಾನದ ಹಕ್ಕು, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಮತ್ತು ನಿರ್ದಿಷ್ಟ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವ ಹಕ್ಕುಗಳು ಕೇವಲ 'ಪೌರರಿಗೆ' ಮಾತ್ರ ಮೀಸಲು.
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಪೌರತ್ವ ರದ್ದಾಗುತ್ತದೆಯೇ?: ಇತ್ತೀಚಿನ ಸಾರ್ವಜನಿಕ ಆತಂಕಗಳಿಗೆ ಉತ್ತರಿಸುವ ಪ್ರಮುಖ ಅಂಶವೆಂದರೆ — ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟ ತಕ್ಷಣಕ್ಕೆ ಯಾರ ಪೌರತ್ವವೂ ರದ್ದಾಗುವುದಿಲ್ಲ.
ಮತದಾರರ ಪಟ್ಟಿಯ ಸೇರ್ಪಡೆ ಅಥವಾ ತಿದ್ದುಪಡಿಗಳು 'ಜನಪ್ರತಿನಿಧಿತ್ವ ಕಾಯ್ದೆ, 1950'ರ ಅಡಿಯಲ್ಲಿ ನಡೆಯುವ ಆಡಳಿತಾತ್ಮಕ ಪ್ರಕ್ರಿಯೆಗಳು. ಆದರೆ ಪೌರತ್ವವನ್ನು ರದ್ದುಗೊಳಿಸುವುದು ಅಥವಾ ಕಳೆದುಕೊಳ್ಳುವುದು ಕೇವಲ 'ಪೌರತ್ವ ಕಾಯ್ದೆ, 1955'ರ ನಿರ್ದಿಷ್ಟ ಕಾನೂನು ಪ್ರಕ್ರಿಯೆಯ ಮೂಲಕ ಮಾತ್ರ ಸಾಧ್ಯ. ಆದ್ದರಿಂದ ಆಡಳಿತಾತ್ಮಕ ಲೋಪಗಳಿಂದ ಅಥವಾ ವಾಸಸ್ಥಳ ಬದಲಾವಣೆಯಿಂದ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದಮಾತ್ರಕ್ಕೆ ವ್ಯಕ್ತಿಯೊಬ್ಬ ತನ್ನ ಪೌರತ್ವ ಕಳೆದುಕೊಂಡ ಎಂದರ್ಥವಲ್ಲ.
ಇದಲ್ಲದೆ, ಭಾರತದಲ್ಲೇ ಹುಟ್ಟಿ, ಇಲ್ಲೇ ಶಿಕ್ಷಣ ಮುಗಿಸಿ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಪೌರತ್ವವು ಆತ ಜನಿಸಿದ ವರ್ಷ ಹಾಗೂ ಆಗ ಜಾರಿಯಲ್ಲಿದ್ದ ಪೌರತ್ವ ಕಾಯ್ದೆಯ ನಿಯಮಗಳಿಗೆ ಬದ್ಧವಾಗಿರುತ್ತದೆಯೇ ಹೊರತು ಕೇವಲ ಮತದಾರರ ಪಟ್ಟಿಯನ್ನು ಆಧರಿಸಿ ನಿರ್ಧಾರವಾಗುವುದಿಲ್ಲ.
ರಾಜಕೀಯ ಆರೋಪಗಳು ಮತ್ತು ವಾಸ್ತವ: ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ರಾಜಕೀಯ ತಂತ್ರ ಎಂದು ಕೆಲವು ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಆರೋಪಿಸುತ್ತಿದ್ದರೆ, ಚುನಾವಣಾ ಆಯೋಗವು ಇದು ಕೇವಲ ನಕಲಿ ಮತ್ತು ಅನರ್ಹ ಮತದಾರರನ್ನು ತಡೆಯಲು ನಡೆಸುತ್ತಿರುವ ತಾಂತ್ರಿಕ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದೆ.
ಪೌರತ್ವ ಎಂಬುದು ಕೇವಲ ಒಂದು ಗುರುತಿನ ಚೀಟಿಯನ್ನೋ ಅಥವಾ ಮತದಾರರ ಪಟ್ಟಿಯಲ್ಲಿರುವ ಹೆಸರನ್ನೋ ಆಧರಿಸಿದ ವಿಷಯವಲ್ಲ. ಅದು ಭಾರತೀಯ ಸಂವಿಧಾನ ಮತ್ತು ಸಂಸತ್ತಿನ ಕಾಯ್ದೆಗಳ ಅಡಿಯಲ್ಲಿ ವ್ಯಾಖ್ಯಾನಿಸಲ್ಪಟ್ಟ ಕಾನೂನುಬದ್ಧ ಸ್ಥಾನಮಾನವಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತು ಅನಗತ್ಯ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಅಧಿಕೃತ ಮಾಹಿತಿಯನ್ನು ಆಧರಿಸಿ ತಮ್ಮ ಆಡಳಿತಾತ್ಮಕ ದಾಖಲೆಗಳನ್ನು (ಜನನ ಪ್ರಮಾಣಪತ್ರ, ಪಾಸ್ಪೋರ್ಟ್ ಇತ್ಯಾದಿ) ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಮತ್ತು ಅಗತ್ಯ ಬಿದ್ದಾಗ ಕಾನೂನುಬದ್ಧ ಪರಿಹಾರಗಳನ್ನು ಪಡೆದುಕೊಳ್ಳುವುದು ಪ್ರಬುದ್ಧ ನಾಗರಿಕ ಸಮಾಜದ ಲಕ್ಷಣವಾಗಿದೆ.
ಸಂವಿಧಾನದ ೫ ರಿಂದ ೧೧ನೇ ವಿಧಿಗಳು (ಭಾಗ-೨): ಇವು 1950ರ ಜನವರಿ 26ರಂದು (ಸಂವಿಧಾನ ಜಾರಿಯಾದಾಗ) ಯಾರು ಭಾರತೀಯ ನಾಗರಿಕರಾಗಿದ್ದರು ಎಂಬುದನ್ನು ಮಾತ್ರ ನಿರ್ಧರಿಸುತ್ತವೆ.
ವಿಧಿ ೯ ಮತ್ತು ೧೧: ಬೇರೆ ದೇಶದ ಪೌರತ್ವ ಪಡೆದರೆ ಭಾರತೀಯ ಪೌರತ್ವ ರದ್ದಾಗುತ್ತದೆ (ಏಕ ಪೌರತ್ವ). ಪೌರತ್ವಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇದೆ.
ಭಾರತೀಯ ಪೌರತ್ವ ಕಾಯ್ದೆ, ೧೯೫೫: 1950ರ ನಂತರದ ಪೌರತ್ವದ ನಿಯಮಗಳನ್ನು ನಿರ್ವಹಿಸುತ್ತದೆ.
ಪಡೆಯುವ ೫ ಮಾರ್ಗಗಳು: ಜನ್ಮ, ವಂಶಾವಳಿ, ನೋಂದಣಿ, ನೈಸರ್ಗಿಕೀಕರಣ ಮತ್ತು ಹೊಸ ಪ್ರದೇಶದ ಸೇರ್ಪಡೆ.
ಕಳೆದುಕೊಳ್ಳುವ ೩ ಮಾರ್ಗಗಳು: ಸ್ವಇಷ್ಟದ ತ್ಯಾಗ (Renunciation), ಇನ್ನೊಂದು ಪೌರತ್ವ ಪಡೆದಾಗ ರದ್ದಾಗುವುದು (Termination) ಮತ್ತು ಸರ್ಕಾರವೇ ರದ್ದುಗೊಳಿಸುವುದು (Deprivation).
ಮುಖ್ಯ ವ್ಯತ್ಯಾಸ: ಸಂವಿಧಾನದ 5-11 ವಿಧಿಗಳು 1950ರ ಸ್ಥಿತಿಯನ್ನು ನಿರೂಪಿಸಿದರೆ, 1955ರ ಕಾಯ್ದೆಯು ಇಂದಿನ ಪೌರತ್ವ ನಿಯಮಗಳನ್ನು ನಿಯಂತ್ರಿಸುತ್ತದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!