1941ರ ಪ್ರಾರ೦ಭದ ದಿನಗಳಲ್ಲಿ ನಾನು ನಿರಂಜನರನ್ನು ಮೊದಲು ನೋಡಿದ್ದು. ಆಗ ಅವರು ಕುಳುಕುಂದ ಶಿವರಾಯರಾಗಿದ್ದರು.
ಆ ದಿನಗಳಲ್ಲಿ ಮಂಗಳೂರು ವಿದ್ಯಾರ್ಥಿ ಸಂಘದ ವಾರ್ಷಿಕ ಸಮ್ಮೇಳನವು ಜರಗುತ್ತಿತ್ತು. ಹಾರ್ವಾರ್ಡ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದಿದ್ದ ಡಾ. ಕೆ.ಬಿ. ಕೃಷ್ಣ ಅವರು ಅದರ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಸಂಘದ ಕಾಯದರ್ಶಿಯಾಗಿದ್ದವರು ಎ.ರಾಘವನ್. ಕಮ್ಯೂನಿಸ್ಟ್ ತತ್ವದಿಂದ ಆಕರ್ಷಿತರಾದ ಅನೇಕ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಶಿ ವಿದ್ಯಾಪೀಠದ ವಿದ್ಯಾರ್ಥಿ ಚಳುವಳಿಯ ಮುಖಂಡರಾಗಿದ್ದು ಬಂಧನಕ್ಕೊಳಗಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದ ನಂತರ ಭೂಗತರಾಗಿದ್ದ ಪರಮೇಶ್ವರನ್ ಎಂಬವರ ಜೊತೆಯಲ್ಲಿ ನಾವೆಲ್ಲರೂ ಹುರುಪಿನಿಂದ ವಾರ್ಷಿಕ ಸಮ್ಮೇಳನದ ಕಾರ್ಯಕರ್ತರಾಗಿ ದುಡಿಯುತ್ತಿದ್ದೆವು. ಆಗ ವಿದ್ಯಾರ್ಥಿ ಚಳುವಳಿಯನ್ನು ಸಂಘಟಿಸುತ್ತಿದ್ದ ಪರಮೇಶ್ವರನ್ ನಮಗೆ ಪರಿಚಯಿಸಿದ ಯುವಕ ಕುಳುಕುಂದ ಶಿವರಾಯರು. ಹಾಗಾಗಿ ಅವರ ಬಗ್ಗೆ ನಮಗೆಲ್ಲ ಕುತೂಹಲ.
ಅಚ್ಚಳಿಯದ ವ್ಯಕ್ತಿತ್ವ
ಶಿವರಾಯರು ನೀಲೇಶ್ವರದಲ್ಲಿ ವಿದ್ಯಾರ್ಥಿಯಾಗಿದ್ದರು. ಅಲ್ಲಿಯ ರೈತ ಚಳುವಳಿಯ ಸಂಪರ್ಕ ಅವರಿಗಿತ್ತು. ಅವರ ಉಡುಪು ಮತ್ತು ನಡವಳಿಕೆ ನೋಡುವಾಗ ‘ಇವರು ಎಂತಹ ವಿದ್ಯಾರ್ಥಿ ಚಳುವಳಿಯ ಕಾರ್ಯಕರ್ತ’ ಎಂದು ನಮಗೆಲ್ಲಾ ಆಶ್ಚರ್ಯವಾಗಿತ್ತು.
ಪ್ರಸಿಧ್ಧ ಕಯ್ಯೂರ್ ಪ್ರಕರಣದ ವ್ಯಾಜ್ಯವು ಮಂಗಳೂರಿನ ಸೆಶನ್ಸ್ ನ್ಯಾಯಲಯದಲ್ಲಿ ಜರಗುತ್ತಿದ್ದಾಗ ವೀಕ್ಷಿಸಲು ಹೋಗುತ್ತಿದ್ದೆವು. ಅಲ್ಲಿಗೆ ಶಿವರಾಯರೂ ಬರುತ್ತಿದ್ದರು. ಆ ವ್ಯಾಜ್ಯದ ತೀರ್ಪಿನ ದಿನದಂದು ಬಿಡುಗಡೆಯಾದ ನೀಲೇಶ್ವರ ಗಣಪತಿ ಕಾಮತರು ಹೊರಗೆ ಬಂದವರೇ ಶಿವರಾಯರನ್ನು ಗುರುತಿಸಿದಾಗ ನನಗೆ ಶಿವರಾಯರ ಮೇಲೆ ಗೌರವ ಮೂಡಿತ್ತು.
ಆಗಿನ ಶಿವರಾಯರ ಚಿತ್ರಣ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಒಂದು ಗಿಡ್ಡ ಕೈಯ ಬನಿಯನ್ ತರಹದ ಅಂಗಿ, ಎತ್ತಿ ಕಟ್ಟಿದ ಮುಂಡು, ತಲೆಯಲ್ಲಿ ಖಾದಿ ಟೋಪಿ, ಒಂದು ಕಾಲಿನಲ್ಲಿ ಬಳೆ ಧರಿಸುತ್ತಿದ್ದರು. ಅವರನ್ನು ನೋಡಿದಾಗ ಶುದ್ಧ ಗಾಂಧಿವಾದಿ ಎಂದು ಅನಿಸಿತ್ತು.
ಅನಂತರ ಅವರು ಮಂಗಳೂರಿಗೆ ಬಂದು ರಾಷ್ಟ್ರಬಂಧು ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸಮಾಡುತ್ತಿದ್ದರು. ಆಗ ನನ್ನ ಮತ್ತು ಅವರ ಸಂಪರ್ಕ ಬಲಗೊಂಡು, ಅವರು ನಮಗೆಲ್ಲರಿಗೂ ಹತ್ತಿರವಾದರು.
ಬೆರಗುಗೊಳಿಸಿದ ಪರಿವರ್ತನೆ
ಮುಂಬೈಯಲ್ಲಿ ಪ್ರಥಮ ಪ್ರಗತಿಶೀಲ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದಾಗ ಶಿವರಾಯರನ್ನು ಅದರಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಯಿತು. ಅವರು ಅದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳಿದರು. ಅಲ್ಲಿಂದ ಹಿಂತಿರುಗಿದಾಗ ಅವರಲ್ಲಿ ಆದ ಪರಿವರ್ತನೆ ಕಂಡು ನಮಗೆ ಆಶ್ಚರ್ಯವಾಗಿತ್ತು. ಅವರ ಉಡುಪಿನಲ್ಲಿ ಆದ ಬದಲಾವಣೆ ಎದ್ದು ಕಾಣುತ್ತಿತ್ತು. ಕುಂಬಳೆಯ ಗಾಂಧಿವಾದಿ, ಕಾಂಗ್ರೆಸ್ ಕಾರ್ಯಕರ್ತರಾದ ದೇವಪ್ಪ ಆಳ್ವರಂತೆ ಮುಂಚೆ ಉಡುಪು ತೊಡುತ್ತಿದ್ದ ಶಿವರಾಯರು ಹಿಂತಿರುಗಿದಾಗ ಮುಂಬೈಯ ಕಮ್ಯೂನಿಸ್ಟ್ ಕಾರ್ಯಕರ್ತರಾಗಿದ್ದ ಪಿ.ಸಿ.ಜೋಷಿಯವರಂತೆ ಉಡುಪು ಧರಿಸತೊಡಗಿದ್ದರು. ಅರ್ಧ ತೋಳಿನ ಅಂಗಿ ಮತ್ತು ಚಡ್ಡಿ ಧರಿಸಿ ಕಾಲುಗಳಿಗೆ ಪಠಾಣ್ ಶೂ ಮೆಟ್ಟಿಕೊಂಡಿದ್ದರು. ಅವರ ತಲೆಯ ಮೇಲಿನ ಗಾಂಧಿ ಟೋಪಿ ಮಾಯವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಅವರಲ್ಲಿ ಈ ವರೆಗೆ ಕಾಣುತ್ತಿದ್ದ ‘ನಾನೊಬ್ಬ ಮಹಾನ್ ವ್ಯಕ್ತಿಯಲ್ಲ’ ಎಂಬ ಕೀಳರಿಮೆ ಕಾಣೆಯಾಗಿ ‘ನಾನು ಯಾರಿಗೆ ಕಮ್ಮಿ’ ಎಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಇಂತಹ ಪರಿವರ್ತನೆ ನಮ್ಮನ್ನೆಲ್ಲ ಬೆರಗುಗೊಳಿಸುತ್ತಿತ್ತು.
ಈ ಪರಿವರ್ತನೆಯ ಬಳಿಕ ಮಂಗಳೂರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಮುಂಚೂಣಿಯ ಪಾತ್ರ ವಹಿಸಲನುವಾದರು. ಮಂಗಳೂರಿನಲ್ಲಿ ಪ್ರಗತಿಶೀಲ ಸಾಹಿತ್ಯದ ಚಳುವಳಿಯಲ್ಲಿ ಅವರು ಮುಖಂಡರಾಗಿದ್ದರು. ಇದು ಕಾರ್ಮಿಕ ಚಳುವಳಿಯ ಕಾರ್ಯಕರ್ತರಲ್ಲಿ ಪರಿಣಾಮ ಬೀರಿತ್ತು.
ಆ ಸಮಯದಲ್ಲಿ ಕೆಲವು ತಿಂಗಳುಗಳ ಕಾಲ ನಾನು ಅವರ ಜೊತೆ ಅವರ ಮನೆಯಲ್ಲೇ ವಾಸವಾಗಿದ್ದೆ. ಅವರೊಂದಿಗೆ ಅವರ ತಾಯಿ ಮಾತ್ರ ಇದ್ದರು. ಅವರ ತಾಯಿ ಯಾವಾಗಲೂ ಪಿರಿಪಿರಿ ಮಾಡುತ್ತಿದ್ದರು. ಶಿವರಾಯರು ಇದನ್ನೆಲ್ಲಾ ತಾಳ್ಮೆಯಿಂದ ಸಹಿಸಿಕೊಂಡಿದ್ದರು. ಅನಂತರ ನಾನು ಅವರ ಮನೆಯನ್ನು ಬಿಟ್ಟು ನನ್ನ ತಮ್ಮನೊಂದಿಗಿದ್ದೆ. ಆಗಾಗ ಅವರ ಮನೆಗೆ ಹೋಗುತ್ತಿದ್ದೆ. ನನ್ನ ವ್ಯಾಯಾಮದ ಡಂಬೆಲ್ಸ್ ಅಲ್ಲಿ ಬಿಟ್ಟು ಹೋಗಿದ್ದೆ. ಒಮ್ಮೆ ನಾನು ಅಲ್ಲಿಗೆ ಹೋದಾಗ ಅವರ ತಾಯಿ ನನ್ನೊಂದಿಗೆ, ‘ನನಗೆ ಅವನೊಬ್ಬನೇ ಇರುವುದು, ಇದನ್ನು ನಿಮಗೆ ಕಾಣಲು ಸಾಧ್ಯವಾಗುವುದಿಲ್ಲವೇ? ಎಷ್ಟೋ ರಾತ್ರಿ ನನಗೆ ನಿಮ್ಮ ಡಂಬೆಲ್ಸ್ ಅವನ ತಲೆಯ ಮೇಲೆ ಕುಣಿಯುವಂತೆ ಕಾಣುತ್ತದೆ. ದಯವಿಟ್ಟು ಅದನ್ನು ಕೊಂಡು ಹೋಗಿ’ ಎಂದಿದ್ದರು. ಇದರಿಂದ ಅವರ ಧೋರಣೆ ನನಗೆ ಅರ್ಥವಾಯಿತು. ಶಿವರಾಯರ ಕಷ್ಟವೂ ತಿಳಿಯಿತು. ಅನಂತರ ಶಿವರಾಯರು ನಿರಂಜನನಾಗಿ ಅವರ ಕುಟುಂಬದೊಂದಿಗೆ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದಾಗ ತನ್ನ ತಾಯಿಯನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದ ರೀತಿಯನ್ನು ಯಾರಾದರೂ ಮೆಚ್ಚಿಕೊಳ್ಳಲೇಬೇಕು. ತನ್ನ ತಾಯಿಯ ಬಗ್ಗೆ ನಿರಂಜನರು ತಾಳ್ಮೆ ಕಳೆದುಕೊಂಡದ್ದೇ ಇಲ್ಲ.
ಹುಬ್ಬಳ್ಳಿಯ ದಿನಗಳು
ಕಮ್ಯೂನಿಸ್ಟ್ ಪತ್ರಿಕೆ ‘ಜನಶಕ್ತಿ’ಯ ಸಂಪಾದಕರಾದಾಗ ಶಿವರಾಯರ ಎರಡನೇ ಪರಿವರ್ತನೆ ವೇದ್ಯವಾಯಿತು. ಆಗ ನಾನು ಹುಬ್ಬಳ್ಳಿಗೆ ಹೋಗಿದ್ದೆ. ಅವರೊಂದಿಗೆ ಒಂದೆರಡು ದಿನ ಉಳಿದಿದ್ದೆ. ಅಲ್ಲಿ ಅವರು ಮಧ್ಯಮವರ್ಗದ ಬುದ್ದಿಜೀವಿಗಳೊ೦ದಿಗೆ ಒಡನಾಡುತ್ತಿದ್ದ ರೀತಿಯನ್ನು ನೋಡಿ ಮೆಚ್ಚಿದೆ. ಅವರೆಲ್ಲರೂ ನಿರಂಜನರನ್ನು ಗೌರವಿಸುತ್ತಿದ್ದರು. “ಜನಶಕ್ತಿ”ಯಲ್ಲಿ ಅವರು ಬರೆಯುತ್ತಿದ್ದ ಅಂಕಣ ಬಹಳ ಮೆಚ್ಚುಗೆ ಪಡೆದಿತ್ತು. ಅವರದು ಕನ್ನಡ ಬರಹದಲ್ಲೇ ಒಂದು ಹೊಸ ಶೈಲಿಯಾಗಿತ್ತು. ಆಗ ಅವರ ಹೆಸರು ಶಿ.ರಾ.ಕುಳುಕುಂದ ಎಂದಾಗಿತ್ತು.
1948ರಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ನಿಷೇಧವಾದಾಗ ಕಾರ್ಯಕರ್ತರನೇಕರು ಭೂಗತರಾಗಿ ಕೆಲಸ ಮಾಡಬೇಕಾಗಿತ್ತು. ಕುಳುಕುಂದರೂ ಭೂಗತ ಜೀವನ ನಡೆಸಬೇಕಾಯಿತು. ಪಕ್ಷದ ಪ್ರಾಂತೀಯ ಸಮಿತಿಯನ್ನು ನಡೆಸುವ ಜವಾಬ್ದಾರಿಯು ಅವರ ಪಾಲಿಗೆ ಬಂತು.
ಪಕ್ಷದ ಭೂಗತ ಸಮಿತಿ ಕಾರ್ಯಾಲಯ ಹಳೆ ಹುಬ್ಬಳ್ಳಿಯಲ್ಲಿತ್ತು. ಆ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋದಾಗ ಒಂದು ತಿಂಗಳು ಅವರ ಮನೆಯ ಯಜಮಾನನಂತೆ ತಲೆಮರೆಸಿಕೊಂಡಿದ್ದೆ. ಆಗ ನನ್ನ ಹೆಸರು ತಗಡೂರು ಗೋಪಾಲರಾವ್. ನಾನು ಜುಟ್ಟು ಮೀಸೆ ಬೆಳೆಸಿ ಕಚ್ಚೆ ತೊಟ್ಟು ಶುದ್ಧ ಬ್ರಾಹ್ಮಣನಾಗಿ ಕಾಣುತ್ತಿದ್ದೆ. ನನ್ನ ಹೆಸರಿನಲ್ಲಿ ರೇಷನ್ ಕಾರ್ಡು ಆಗಿತ್ತು. ಕುಳುಕಕುಂದರು ಬೆಳಗ್ಗಿನ ಹೊತ್ತಿನಲ್ಲಿ ಹೊರಗೆ ಬರುತ್ತಿರಲಿಲ್ಲ. ಒಳಗೆ ಅಡುಗೆ ಕೆಲಸದಲ್ಲಿರುತ್ತಿದ್ದರು. ಹೊರಗಿನಿಂದ ತರಕಾರಿ ಮತ್ತು ಇತರ ಮನೆಸಾಮಾಗ್ರಿಗಳನ್ನು ತರುವ ಹೊಣೆ ನನ್ನದಾಗಿತ್ತು. ಕತ್ತಲೆಯಾಗುವಾಗ ಅವರು ಹೊರಗೆ ಹೊರಡುತ್ತಿದ್ದರು. ಆಗ ಅವರನ್ನು ನೋಡಬೇಕಿತ್ತು. ಕಚ್ಚೆ, ಕೋಟು ಮತ್ತು ತಲೆಗೆ ಕಪ್ಪು ಟೋಪಿ ಹಾಕಿಕೊಂಡು ಅವರು ಹೊರಟಾಗ ಕತ್ತಲೆಯಲ್ಲಿ ಅವರನ್ನು ಯಾರಿಗೂ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹುಬ್ಬಳ್ಳಿ ಪೇಟೆಯಲ್ಲಿ ತಿರುಗಿ ಇತರ ಕಾರ್ಯಕರ್ತರನ್ನು ಕಂಡು ಬರುತ್ತಿದ್ದರು. ಬೆಳಗ್ಗಿನ ಹೊತ್ತಿನಲ್ಲಿ ಮನೆಯೊಳಗೇ ಇದ್ದು ಬರೆಯುವ ಕೆಲಸದಲ್ಲಿ ಹಾಗೂ ಭೂಗತರಾದವರೊಂದಿಗೆ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ಉಪಾಧ್ಯಾಯ ಸಹೋದರರು, ಎನ್.ಎಸ್.ಹೊಳ್ಳರು, ಕಕ್ಕಿಲ್ಲಾಯರು, ರಹಿಮಾನರು, ಸಿಂಪ್ಸನ್ ಸೋನ್ಸರು - ಇವರೆಲ್ಲರೂ ಆಗ ಅಲ್ಲಿಗೆ ಬಂದು ಹೋಗುತ್ತಿದ್ದರು. ಅಲ್ಲಿ ಚರ್ಚೆಗಳು ಹಾಗೂ ಸಮಿತಿ ಸಭೆಗಳು ನಡೆಯುತ್ತಿದ್ದುವು.
ಅವರ ಕಾರ್ಯದಕ್ಷತೆ ಅನುಕರಣೀಯ. ಆದರೆ ಆಗಿನ ಬಾಹ್ಯ ಪರಿಸ್ಥಿತಿಯನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಅದು ಅವರೊಬ್ಬರದೇ ಸಮಸ್ಯೆ ಆಗಿರಲಿಲ್ಲ. ಭೂಗತ ಮುಖಂಡರೆಲ್ಲರನ್ನೂ ಆ ಸಮಸ್ಯೆ ಬಾಧಿಸಿತ್ತು. ಜನಸಾಮಾನ್ಯರಲ್ಲಿ ಬೆರೆಯಲು ಅವಕಾಶವಿಲ್ಲದಾಗ, ಬಹಿರಂಗವಾಗಿ ಕಾರ್ಯವೆಸಗುತ್ತಿದ್ದ ಕಾರ್ಯಕರ್ತರ ಸಂಪರ್ಕ ಕಮ್ಮಿಯಾದಾಗ ಇದು ಸಹಜ. ಇದರಿಂದಾಗಿ ‘ಹೇಳಿದ್ದನ್ನು ಮಾಡಿ’ ಎಂಬ ಧೋರಣೆಯಿಂದ ವರ್ತಿಸಿ ಅವರು ಟೀಕೆಗೆ ಒಳಗಾಗಬೇಕಾಯಿತು.
ಪಕ್ಷದ ಮೇಲಿನ ನಿರ್ಬಂಧ ತೊಲಗಿ, ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾದಾಗ ಹಳೆಯ ಭೂಗತ ಮುಖಂಡರ ಮೇಲೆ ಟೀಕೆಗಳು ಕೇಳಿ ಬಂದುವು. ಆಗ ಕುಳುಕುಂದರ ಮೇಲೂ ಬಹಳ ಟೀಕೆಗಳಿದ್ದುವು. ಇದರಿಂದಾಗಿ ಅವರು ಬಹಳ ನೊಂದಿದ್ದರು. ಕ್ರಮೇಣ ಅವರು ಪಕ್ಷದ ಸಕ್ರಿಯ ಕಾರ್ಯದಿಂದ ದೂರಸರಿಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಪೂರ್ಣವಾಗಿ ಕೆಲಸ ಮಾಡಲು ಶುರುಮಾಡಿದರು.
‘ಪುರೋಗಾಮಿ ಸಾಹಿತ್ಯ’ವೆಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಬಹಳ ಮುಖ್ಯವಾದ ಕೆಲವು ಪುಸ್ತಕಗಳನ್ನು ನಿರಂಜನರು ಹೊರತಂದರು. ಸಾಹಿತ್ಯ ರಂಗದಲ್ಲಿ ಪ್ರಮುಖರಾದರು. ಆ ಸಮಯದಲ್ಲೇ ಅವರಿಗೆ ಪಕ್ಷದ ಮೇಲೆ ಸಹಾನುಭೂತಿಯಿದ್ದ ವೈದ್ಯಕೀಯ ವಿದ್ಯಾರ್ಥಿನಿ ವೆಂಕಟಲಕ್ಷ್ಮಿಯವರ ಪರಿಚಯವಾಯಿತು. ಅನಂತರ ಅವರನ್ನೇ ಮದುವೆಯಾದರು. ಆಗಲೇ ಅವರು ಕುಳುಕುಂದ ಶಿವರಾಯ ಮತ್ತು ಶಿ.ರಾ.ಕುಳುಕುಂದ ಎಂಬ ಹೆಸರುಗಳನ್ನು ತೊರೆದು ‘ನಿರಂಜನ’ ಎಂಬ ಹೆಸರನ್ನು ಇಟ್ಟುಕೊಂಡರು. ಅವರ ಮಡದಿ ‘ಅನುಪಮಾ ನಿರಂಜನ’ ಎಂಬ ಹೆಸರಿನಿಂದ ಖ್ಯಾತನಾಮರಾದರು.
ಅತ್ತ ನಿರಂಜನರು ಸಾಹಿತಿ, ಪತ್ರಕರ್ತ, ಅಂಕಣಕಾರ, ಕಾದಂಬರಿಕಾರರಾಗಿ ಕಾರ್ಯವೆಸಗುತ್ತಿದ್ದಾಗ ಇತ್ತ ನಾನು ಅಡ್ಡೂರಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊ೦ಡೆ. ಅನಂತರ ನನ್ನ ಮತ್ತು ಅವರ ಸಂಪರ್ಕ ಕಡಿಮೆಯಾಯಿತು.
ಮತ್ತೆ ನಿರಂಜನರ ಸಂಪರ್ಕ
1973ರಲ್ಲಿ ಮತ್ತೆ ನಮ್ಮ ಸಂಪರ್ಕ ಪುನರುಜ್ಜೀವನ ಪಡೆಯಿತು. ನನ್ನ ಮಗ ಕೃಷ್ಣನನ್ನು ಬೆಂಗಳೂರಿನ ಕೃಷಿ ಕಾಲೇಜಿಗೆ ಸೇರಿಸಲೆಂದು ಹೋದ ಸಂದರ್ಭದಲ್ಲಿ ನಾನು ಅವರನ್ನು ಕಾಣಲು ಹೋಗಿದ್ದೆ. ಅಲ್ಲಿ ನನ್ನನ್ನು ಕಂಡಾಗ ಅವರಿಗಾದ ಆನಂದವನ್ನು ಮಾತಿನಲ್ಲಿ ಹೇಳಲಾಗದು. ಆದರಿಂದಾಗಿ ನನಗೂ ಮನಸ್ಸು ತುಂಬಿ ಬಂದಿತ್ತು.
ಅಂದಿನಿಂದ ನನ್ನ ಮತ್ತು ಅವರ ಭೇಟಿ ಆಗಾಗ ಆಗುತ್ತಿತ್ತು. ನನ್ನ ಮಗ ಕೃಷ್ಣನ ಬಗ್ಗೆ ಅವರಲ್ಲಿದ್ದ ಆಸಕ್ತಿ ಮತ್ತು ಕೃಷ್ಣ ಅವರ ಬಗ್ಗೆ ತೋರುತ್ತಿದ್ದ ಗೌರವ ನನಗೆ ಸಂತೋಷವನ್ನು ತ೦ದಿತ್ತು. ಕೃಷ್ಣನ ಏಳಿಗೆ ಬಗ್ಗೆ ಆಸಕ್ತಿ ವಹಿಸಿದ ನಿರಂಜನರು, ಕೃಷಿ ತಜ್ಞ ಮ.ಲ.ನ.ಅಯ್ಯಂಗಾರರನ್ನು ಕೃಷ್ಣನಿಗೆ ಪರಿಚಯಿಸಿದ್ದರು. ಮ.ಲ.ನ. ಅವರ ತೋಟಗಾರಿಕಾ ಗ್ರಂಥಕ್ಕಾಗಿ ಭಾಷಾಂತರಿಸುವ ಕೆಲಸ ಮಾಡುವ ಅವಕಾಶ ನಿರಂಜನರಿಂದಾಗಿ ಕೃಷ್ಣನಿಗೆ ಒದಗಿ ಬಂತು.
ಜ್ಞಾನಗಂಗೋತ್ರಿಯ ಸಾಹಸ
1973ರಲ್ಲಿ ನಿರಂಜನರು ಬೃಹತ್ ಗ್ರಂಥ ‘ಜ್ಞಾನಗಂಗೋತ್ರಿ’ ಯನ್ನು ಹೊರತರುವ ಸಾಹಸದಲ್ಲಿದ್ದರು. ಈ ಕಾರ್ಯದಲ್ಲಿದ್ದಾಗ ಪಾರ್ಶ್ವವಾಯುವಿಗೆ ತುತ್ತಾದರು. ಅದರಿಂದ ಚೇತರಿಸಿಕೊಂಡು ಪುನ: ಆ ಗ್ರಂಥದ ಕೆಲಸದಲ್ಲಿ ಮುಳುಗಿದರು. ಅವರು ಆ ಅಮೂಲ್ಯ ಪುಸ್ತಕಗಳನ್ನು ಹೊರತರುವ ಕೆಲಸ ಮುಗಿಸಿದ್ದು ಒಂದು ಹರಸಾಹಸವೇ ಸರಿ.
ನಾನು ಅವರನ್ನು ಕಾಣಲು ಹೋದಾಗ ‘ನನ್ನ ಪುಸ್ತಕವು ನಿಮ್ಮ ಗ್ರಂಥಾಲಯದಲ್ಲಿ ಇಲ್ಲದಿದ್ದರೆ ಅದಕ್ಕೆ ಮರ್ಯಾದೆ ಇಲ್ಲ. ನೀವು ಕೊಂಡುಕೊಳ್ಳಲೇ ಬೇಕು’ ಎಂದರು. ನನಗೆ ಹಣದ ಅನುಕೂಲವಿಲ್ಲವೆಂದು ತಿಳಿಸಿದೆ. ಅದಕ್ಕೆ ‘ಬ್ಯಾಂಕಿನಲ್ಲಿ ಸಾಲ ಸಿಕ್ಕುತ್ತದೆ’ ಎ೦ದು ಅವರೇ ಸೂಚಿಸಿದರು. ಹಾಗೆ ನಾನು ಆ ಉಪಯುಕ್ತ ಪುಸ್ತಕಗಳನ್ನು ಖರೀದಿಸಿದೆ. ಈಗ ಅವು ನನ್ನ ಪುಸ್ತಕ ಸಂಗ್ರಹದಲ್ಲಿದೆ.
ತನ್ನ ಬಲಕೈಯ ಶಕ್ತಿಯನ್ನು ಕಳೆದುಕೊಂಡಾಗ ಅವರು ಧೃತಿಗೆಡಲಿಲ್ಲ. ಎಡಕೈಯಲ್ಲಿ ಬರೆಯಲು ಅಭ್ಯಾಸ ಮಾಡಿಕೊಂಡು ದೈಹಿಕ ದೌರ್ಬಲ್ಯವನ್ನು ಗೆದ್ದರು.
ಅವರು ಪಕ್ಷವಾತಕ್ಕೆ ತುತ್ತಾಗುವ ಮೊದಲು ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್ನಲ್ಲಿ ಮನೆಮಾಡಿಕೊ೦ಡಿದ್ದರು. ಆ ಮನೆಯ ನೆಲಮಟ್ಟದಲ್ಲಿ ಅನುಪಮಾರವರ ಕ್ಲಿನಿಕ್ ಮತ್ತು ಮಹಡಿಯಲ್ಲಿ ನಿರಂಜನರ ಗ್ರ೦ಥಾಲಯ ಹಾಗೂ ಅಧ್ಯಯನ ಕೊಠಡಿ ಇತ್ತು. ಇವರ ಆರೋಗ್ಯ ಹದಗೆಟ್ಟ ನಂತರ ಆ ಮನೆಯನ್ನು ಮಾರಿ ಐದನೇ ಬ್ಲಾಕ್ನಲ್ಲಿ ಮಹಡಿಯಿಲ್ಲದ ಹೊಸಮನೆ ಕಟ್ಟಿಸಿ, ಅಲ್ಲಿ ತಮ್ಮ ಕೆಲಸ ಮುಂದುವರಿಸಿದರು. ಅವರ ಗ್ರಂಥಾಲಯ ಅಮೂಲ್ಯವಾದ ಪುಸ್ತಕಗಳ ಭಂಡಾರ.
ಅಡ್ಡೂರಿಗೆ ಭೇಟಿ ಮತ್ತು ವಿದಾಯ
ಅವರಿಗೆ ಮಂಗಳೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಮಾನ ಏರ್ಪಡಿಸಿತ್ತು. ಅದಕ್ಕಾಗಿ ಬಂದಿದ್ದಾಗ ಅವರಿಗೆ ಮೋತಿಮಹಲಿನ ಮೇಲಿನ ಮಹಡಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಂದು ವಿದ್ಯುತ್ ಕೈಕೊಟ್ಟು ಅವರು ಮೋತಿಮಹಲಿನ ಮೆಟ್ಟಿಲು ಇಳಿಯಲು ಕಷ್ಟವಾಗಿ ಆ ಸಭೆಗೆ ಬರುವಾಗ ತಡಾವಾಯಿತಾದರೂ ಅವರು ಗೆಲವಿನಿಂದಿದ್ದರು.
ಆ ಸಂದರ್ಭದಲ್ಲಿ ಅಡ್ಡೂರಿನ ನನ್ನ ಮನೆಗೂ ಕುಟುಂಬ ಸಹಿತವಾಗಿ ಬಂದಿದ್ದರು.ಅವರಿಗೆ ನನ್ನ ಮನೆಯ ಕೆಲವೇ ಮೆಟ್ಟಿಲುಗಳನ್ನು ಹತ್ತಲೂ ಕಷ್ಟವಾಯಿತು! ಆಗ ಅವರು ನನ್ನ ಪುಸ್ತಕಭಂಡಾರದಿಂದ ದಕ್ಷಿಣ ಅಮೇರಿಕಾದ ಮಾಯಾ, ಇಂಕಾ ಮತ್ತು ಅಜ್ಜೈಕ್ ಸಂಸ್ಕೃತಿಯ ಬಗ್ಗೆ ಮತ್ತು ಈಜಿಪ್ಟಿನ ಫಾರೋ ಸಂಸ್ಕೃತಿಯ ಬಗ್ಗೆ ಕೆಲವು ಪುಸ್ತಕಗಳನ್ನು ಹುಡುಕಿ ತೆಗೆದು ಒಯ್ದರು. ‘ಆ ಪುಸ್ತಕಗಳಿಂದ ತನ್ನ ಮೃತ್ಯುಂಜಯ ಕಾದಂಬರಿ’ ಬರೆಯಲು ಬಹಳ ಸಹಾಯವಾಯಿತೆಂದು ಅವರು ಅನಂತರ ನನಗೆ ತಿಳಿಸಿದರು.
ಅಡ್ಡೂರಿನಿಂದ ನಿರಂಜನರು ಪುತ್ತೂರಿಗೆ ಹೋದರು. ಪುತ್ತೂರಿನ ಕನ್ನಡ ಸಂಘವು ಶ್ರೀ ಬೋಳಂತಕೋಡಿ ಈಶ್ವರ ಭಟ್ಟರ ನೇತೃತ್ವದಲ್ಲಿ ಅವರಿಗೆ ಸಂಭ್ರಮದ ಸಂಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಆಗ ನಿರಂಜನರು ತಮ್ಮ ಹುಟ್ಟೂರಿಗೆ ಮರಳಿ ಬಂದಂತೆ ಸಂತೋಷಪಟ್ಟರು.
ಅದುವೇ ನಾನು ನಿರಂಜನರನ್ನು ಕೊನೆಯದಾಗಿ ನೋಡಿದ್ದು. ಅನಂತರ ಅವರಿಗೆ ಕೆಲವು ಬಾರಿ ಪತ್ರ ಬರೆದ ನೆನಪು. ಪ್ರಗತಿಶೀಲ ಸಾಹಿತ್ಯದ ಅಭಿವೃಧ್ಧಿಗಾಗಿ, ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತನಾಗಿ ಮತ್ತು ಸಾಹಿತಿಯಾಗಿ ನಿರಂಜನರು ಮಾಡಿದ ಸಾಧನೆ ವಿಶಿಷ್ಟವಾದದ್ದು. ಮುಖ್ಯವಾಗಿ ಅವರ ಸಂಪಾದಕತ್ವದ ‘ಜ್ಞಾನ ಗಂಗೋತ್ರಿ’ ಮತ್ತು ಇಪ್ಪತ್ತೈದು ಸಂಪುಟಗಳ ಜಗತ್ತಿನ ವಿವಿಧ ದೇಶ ಭಾಷೆಗಳ ಮನತಟ್ಟುವ ಕಥೆಗಳ ಸಂಗ್ರಹ ‘ವಿಶ್ವ ಕಥಾಕೋಶ’ – ಇವು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿವೆ.
ಹಲವಾರು ಜನಪ್ರಿಯ ಕಾದಂಬರಿಗಳನ್ನು ಬರೆದಿರುವ ನಿರಂಜನರು ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಬರೆದ ಕಯ್ಯೂರಿನ ಹುತಾತ್ಮರ ಕತೆಯನ್ನೊಳಗೊಂಡ ‘ಚಿರಸ್ಮರಣೆ’ ಕಾದಂಬರಿ ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು, ಅದು ನಿರಂಜನರನ್ನು ಚಿರಸ್ಮರಣೀಯರನ್ನಾಗಿಸಿದೆ.
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!