‘ಎದೆಗೂಡ ಉಯ್ಯಾಲೆ’ ಲೇಖಕ, ಕವಿ ರುಜುವಾನ್ ಕೆ. ಅವರ ದ್ವಿತೀಯ ಕವನ ಸಂಕಲನ. ಅಂತರಾತ್ಮದ ನಿರ್ಭರತೆಯಿಂದ ಕೂಡಿರುವ ಇಲ್ಲಿನ ಕವಿತೆಗಳನ್ನು ಕುರಿತಂತೆ ಕವಿ ಮಾತು “ಉಯ್ಯಾಲೆಯಲಿ ಜೀಕುವ ಮುನ್ನ…” ನಿಮ್ಮ ಓದಿಗಾಗಿ ಇಲ್ಲಿದೆ…
'ಭಾವ ಮಥಿಸಿ ಮಥಿಸಿ ಬಂದ ನಾದದ ನವನೀತವೇ ಕವಿತೆ' ಎಂಬ ಮಾತನ್ನು ಕವಿ ಬೇಂದ್ರೆಯವರು ಹೇಳಿದ್ದಾರೆ. ಅಂದರೆ ಕವಿತೆ ಹುಟ್ಟುವುದು ಸುಲಭವೇನಲ್ಲ ಅದಕ್ಕೆ ಭಾವನೆಗಳು ಸಂಸ್ಕರಣಗೊಳ್ಳಬೇಕು. ಭಾಷೆಯ ಹಿಡಿತವಿರಬೇಕು. ಸಂಸ್ಕರಣಗೊಂಡ ಭಾವ, ಹಿಡಿತಕ್ಕೆ ಸಿಕ್ಕ ಭಾಷೆ ಇವು ಒಂದಕ್ಕೊಂದು ಬೆಸೆದು ಮಲ್ಲಿಗೆ ಹೂವು ಪೋಣಿಸಿದಂತೆ ಪದಕಟ್ಟಬೇಕು. ಆಗ ಒಂದು ಕವಿತೆ ಹುಟ್ಟು ಪಡೆಯುತ್ತದೆ. ಅದೇ ರೀತಿ ಕವಿತೆ ಬರೆಯಬೇಕೆಂಬ ಹಸಿವು ಮತ್ತು ಹವಣಿಕೆ ನನ್ನ ಕವನಗಳ ಹುಟ್ಟುವಿಕೆಗೆ ಪ್ರೇರಣದಾಯಿ ಎಂದೆನ್ನಬಹುದು.
ಬದುಕು ಆಗಾದ ವಿಸ್ಮಯಗಳ ಕಡಲು. ಅನೂಹ್ಯ ವಿಚಾರಗಳ ಒಡಲು. ಅಗೆದು ತೆಗೆದಷ್ಟು, ಮೊಗೆದು ಚೆಲ್ಲಿದಷ್ಟು ಅನಾವರಣಗೊಳ್ಳುವ ಸಾವಿರ ಸಾವಿರ ಸಂಗತಿಗಳು ನನ್ನೊಳಗಿನ ಸಾಹಿತ್ಯಾಸಕ್ತಿಯನ್ನು ಪ್ರಚೋದಿಸಿದವು. ಹಲವು ಬಗೆಯ ಬರವಣಿಗೆಯ ಗೊಂದಲದ ನಡುವೆಯೂ ನನ್ನೊಳಗಿನ ಬರವಣಿಗೆಯ ಹಂಬಲವನ್ನು ಜತನದಿಂದ ಕಾಪಿಟ್ಟುಕೊಂಡು, ನನ್ನೊಳಗೆ ಮೂಡುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ನೋವು-ನಲಿವು, ಪ್ರಕೃತಿ, ಸಮಾಜ, ಬದುಕು. ಹತಾಷೆ ಮೊದಲಾದವುಗಳು ಕವಿತೆಯ ವಸ್ತುಗಳಾಗಿ ಬಿಳಿ ಹಾಳೆಯ ಮೇಲೆ ಕಾವ್ಯವಾಗಿ ರೂಪುಗೊಂಡಿವೆ. ನನ್ನ ʻಎದೆಗೂಡ ಉಯ್ಯಾಲೆ" ಎಂಬ ಕವನ ಸಂಕಲನದ ಕವಿತೆಗಳು ಯಾವ ಛಂದಸ್ಸು-ಉಪಮೆ-ರೂಪಕಗಳ ಗೊಡವೆಯಿಲ್ಲದೆ, ನೇರವಾಗಿ ಮತ್ತು ಸರಳವಾಗಿ ಅಭಿವ್ಯಕ್ತಗೊಂಡಿರುವ ಕಾವ್ಯಕನ್ನಿಕೆಗಳಾಗಿವೆ. ಇದು ಎರಡನೆಯ ಕವನ ಸಂಕಲನವಾದರೂ ನಾನು ಬಿ.ಎ. ಪದವಿ ವ್ಯಾಸಾಂಗ ಮಾಡುತ್ತಿರುವಾಗ ಬರೆದ ಹಾಡಿನ ಸ್ಪರ್ಶವುಳ್ಳ ಕವಿತೆಗಳಾಗಿವೆ. ರಾಗ, ಲಯ, ತಾಳಗಳಿಗೆ ಅನುಗುಣವಾಗಿ ಬರೆದ ಹಾಡುಗಳಾಗಿರುವುದರಿಂದ ಕಾವ್ಯ ತತ್ವದ ಸೂಕ್ಷ್ಮತೆ ಇಲ್ಲಿ ಕಾಣಸಿಗುವುದು ಅಪರೂಪ. ನಾನಿನ್ನೂ ಕಾವ್ಯ ಬರಹದ ಆರಂಭದ ಹೊಸ್ತಿಲಲ್ಲಿ ಇದ್ದೇನೆ ಎಂಬ ಎಚ್ಚರದಿಂದ ಮತ್ತು ಸಹೃದಯಿಗಳು ಎಷ್ಟರ ಮಟ್ಟಿಗೆ ಇವುಗಳನ್ನು ಒಪ್ಪಿ ಅಪ್ಪುತ್ತಾರೆ ಎಂಬ ಭಯ ಮತ್ತು ಆತಂಕದಿಂದ ಹಾಗೂ ಕವಿ ಕಣ್ಮರೆಯಾದರೂ ಆತ ಬರೆದ ಸಾಹಿತ್ಯ ಕಣ್ಮರೆಯಾಗಬಾರದೂ ಎಂಬ ನಿಲುವನ್ನು ಇಟ್ಟುಕೊಂಡು ಈ ನನ್ನ ಕವಿತೆಗಳನ್ನು ಪ್ರಕಟಿಸುತ್ತಿದ್ದೇನೆ.
ಕವಿತೆ ಪ್ರತಿಯೊಬ್ಬ ಸಹೃದಯಿ ಓದುಗನ ಉಸಿರಾಗಬೇಕು ಎಂಬುದು ನನ್ನ ಅಭಿಲಾಷೆ. ಹಾಗಾಗಿ ಪ್ರತಿಯೊಬ್ಬ ಜನಸಾಮಾನ್ಯರೂ ಓದಿ ಅರ್ಥೈಸಿಕೊಳ್ಳಬೇಕು ಎಂಬ ಕಾರಣದಿಂದ ಹೆಚ್ಚು ದೀರ್ಘವೆನಿಸದ ರೀತಿಯಲ್ಲಿ ಮತ್ತು ಒಂದೆರೆಡು ಕವಿತೆಗಳನ್ನು ಹೊರೆತುಪಡಿಸಿ ಉಳಿದ ಎಲ್ಲಾ ಕವಿತೆಗಳಲ್ಲಿಯೂ ಕ್ಲಿಷ್ಟಕರ ಪದಗಳನ್ನು ಬಳಸದೆ ಸರಳವಾದ ಭಾಷೆಯಲ್ಲಿ ಕವಿತೆಗಳನ್ನು ಕಟ್ಟಿದ್ದೇನೆ. ನೀವು ಇದಕ್ಕೆ ಸ್ಪಂದಿಸುವ ರೀತಿ ಮತ್ತು ನಿಮ್ಮ ಸಲಹೆಗಳು ನನ್ನ ಮುಂದಿನ ಬರವಣಿಗೆಯನ್ನು ಬದಲಾವಣೆಯ ಹಾದಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತವೆ ಎಂಬ ನಂಬಿಕೆ ನನಗಿದೆ. ಅದೇ ವಿಶ್ವಾಸದಿಂದ "ಎದೆಗೂಡ ಉಯ್ಯಾಲೆ"ಯಲ್ಲಿ ಜೀಕುತ್ತಿರುವ ನನ್ನ ಕವಿತೆಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಿದ್ದೇನೆ. ಸಂತಸದಿ ಜೀಕು ಹೊಡೆಯುತ್ತಿರುವ ಕವಿತೆಗಳಿಗೆ ನಿಮ್ಮ ಕೈ ಜೋಡಿಸಿ ಮತ್ತಷ್ಟು ತೂಗಿಸಿ ಜೊತೆಗೆ ಜೀಕುವುದನ್ನು ಕಲಿಸಿಕೊಡಿ ಎಂದು ಬಯಸುತ್ತೇನೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!