ಯುವ ಬರಹಗಾರ ಅಜಿತ್ ಪಾತ್ರೋಟ ಅವರು ಅನುವಾದಿಸಿರುವ ಕೃತಿ ʻಒಣಗಿದ ಹಳದಿ ಎಲೆಗಳು ಹೇಳಿವೆʼ. ಹಿಂದಿ ಸಾಹಿತ್ಯದ ಪ್ರಮುಖ ಕವಿ ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರ ಆಯ್ದ ಕವಿತೆಗಳಿರುವ ಈ ಕೃತಿಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಈ ಮಹತ್ವದ ಕೃತಿಗೆ ಲೇಖಕರೇ ಬರೆದ ಮುನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ:
“ಸರ್ವೇಶ್ವರ್ ದಯಾಳ್ ಅವರ ತಂದೆ ಪ್ರಸಾದ್ ಸಿಂಹ ಸಕ್ಷೇನಾ, ತಾಯಿ ಸೌಭಾಗ್ಯವತಿ ಅತ್ಯಂತ ಕಡು ಬಡತನದಲ್ಲಿ ತಮ್ಮ ಬದುಕನ್ನು ಕಳೆದವರು. ಈ ಹಿನ್ನಲೆಯ ಬಾಲ್ಯ, ಕವಿಯ ಮೇಲೆ ಪರಿಣಾಮ ಬೀರಿದೆ. "ಯಾವ ನೆಲದ ಮೇಲೆ ನನ್ನ ಜನ್ಮವಾಯಿತೋ, ಎಲ್ಲಿ ನನ್ನ ಬಾಲ್ಯದ ಜೀವನ ಕಳೆಯಿತೋ, ಅಲ್ಲಿ ಇಂದು ಯಾವುದೇ ಚಿಹ್ನೆಯಾಗಲಿ, ಯಾವುದೇ ಭಗ್ನಾವಶೇಷವಾಗಲಿ ಕಾಣುವುದಿಲ್ಲ. ಆ ಮನೆಯ ಪಕ್ಕದಲ್ಲಿದ್ದಂಥ ವಿಶಾಲವಾದ ಹುಣಿಸೆ ಮರಗಳು, ತೋಟ ನಾಶವಾಗಿ ಹೋಗಿದೆ. ಯಾವ ಕೆರೆಯಲ್ಲಿ ನಾನು ಗಂಟೆಗಟ್ಟಲೆ ಸಮಯ ಕಲ್ಲುಗಳನ್ನು ಎಸೆಯುತ್ತಿದ್ದೆನೋ, ಅದು ಈಗ ಬತ್ತಿ ಹೋಗಿದೆ. ಯಾವ ಗುಡಿಯಲ್ಲಿ ನಾನು ಪ್ರಸಾದ ಸ್ವೀಕರಿಸಿತ್ತಿದ್ದೆನೋ, ಅಲ್ಲಿ ಈಗ ದೀಪವು ಸಹ ಉರಿಯುತ್ತಿಲ್ಲ. ಅಲ್ಲಿ ನನ್ನನ್ನು ಗುರುತಿಸುವವರು ಯಾರು ಇಲ್ಲ. ನನಗೆ ಎಂದಿಗೂ ಇದರ ಅವಶ್ಯಕತೆ ಬೇಕೆನಿಸಲಿಲ್ಲ. ಆ ಚಿಕ್ಕ ಊರು ನನ್ನೂರು ನನ್ನ ಜೊತೆ ಸದಾ ಇರುತ್ತದೆ. ಏಕೆಂದರೆ ಅದು ಈಗ ಭೂಮಿಯ ಮೇಲಿಲ್ಲ."
ತಮ್ಮ ಹಳ್ಳಿಯ ಬಗ್ಗೆ ಸರ್ವೇಶ್ವರ್ ಅವರಲ್ಲಿ ಅಗಾಧ ಪ್ರೀತಿ ಇದೆ. ಈ ಪ್ರೀತಿಯ ಗಾಢತೆ ಎಷ್ಟಿತ್ತೆಂದರೆ ಅವರು ತಮ್ಮ ಜೀವನದುದ್ದಕ್ಕೂ ಊರಿನ ನೆನಪುಗಳನ್ನು ಹೊತ್ತುಕೊಂಡು ಅಲೆದಾಡುತ್ತಾ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ತಮ್ಮ ಸಂಪೂರ್ಣ ಸಾಹಿತ್ಯದಲ್ಲಿ 'ಊರಿನ ಅನೇಕ ಪ್ರಸಂಗಗಳನ್ನು ಮೆಲಕು ಹಾಕುತ್ತಾರೆ. ಅದರಲ್ಲಿಯೂ ಸಂಕಷ್ಟದ ಅನುಭವದಿಂದ ಕೂಡಿದ ನೆನಪುಗಳು ಅಧಿಕವಾಗಿವೆ.
"ಊರಿನ ಆಚೆಗೆ ತಂದೆ-ತಾಯಿಗಳು ನಿರ್ಮಿಸಿದ ಮನೆ ಇದೆ. ಅದು ನನ್ನ ಪಾಲಿಗೆ ಅವರ ಸಮಾಧಿ ಇದ್ದ ಹಾಗೆ. ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದ, ಬಡ ಮಧ್ಯಮ ವರ್ಗದ ನನ್ನ ಚಿಕ್ಕ ಕುಟುಂಬ ಆ ಮನೆಗಾಗಿ ಸರ್ವನಾಶವಾಗಿ ಹೋಯಿತು. ಮನೆಯ ಛಾವಣಿಯ ನೆನಪು ಇವತ್ತಿಗೂ ಅಚ್ಚು ಹಾಕಿದ ಹಾಗಿದೆ. ಮನೆಗೆ ಹೊಂದಿಕೊಂಡ ಗೋಡೆಯಿದ್ದು, ಅಲ್ಲೊಂದು ಅನಾಥ ಆಶ್ರಮವಿದೆ. ನನ್ನ ಬಾಲ್ಯದ ಬಹುಕಾಲ ಅಲ್ಲಿಯೇ ಮಕ್ಕಳ ಜೊತೆ ಕಳೆಯಿತು. ಇವತ್ತಿಗೂ ಪ್ರತಿಯೊಂದು ಬೇಸರದ ಕ್ಷಣಗಳಲಿ ಆ ಮಕ್ಕಳ ಜೊತೆ ಕುಳಿತಂತೆ ಅನಿಸುತ್ತದೆ.' ಅಲ್ಲದೆ ತಮ್ಮದೆ ಒಂದು ಲೇಖನದಲ್ಲಿ ಹೀಗೆ ಹೇಳಿದ್ದಾರೆ "ತಾಯಿ ನಿರಂತರ ಪಾಠ ಪ್ರವಚನದಲ್ಲಿ ತೊಡಗಿದ್ದರೂ, ಬಹಳಷ್ಟು ದಿನಗಳಿಂದ ರೋಗಗ್ರಸ್ತಳಾಗಿದ್ದಳು. ತನ್ನ ಕೊನೆಯ ಸಮಯದಲ್ಲಿ ನನಗೆ ಒಂದು ಮಾತು ಹೇಳಿ ಮೃತಪಟ್ಟಳು. ಅದೇನೆಂದರೆ 'ಮಹತ್ವಾಕಾಂಕ್ಷೆಯಿಲ್ಲದ ಜೀವನಕ್ಕೆ ಯಾವುದೇ ಅರ್ಥವಿಲ್ಲ" ಎಂಬುದು.
ಸರ್ವೇಶ್ವರ ದಯಾಳರ ತಂದೆ ಸ್ವತಂತ್ರ ಜೀವನ ನಡೆಸಲು ವ್ಯಾಪಾರ, ಛಾಯಾಚಿತ್ರ ಗ್ರಾಹಕ, ರಂಗಸಜ್ಜಿಕೆಯನ್ನು ನಿರ್ಮಿಸುವ ಕಸಬುಗಳಲ್ಲಿ ಇದ್ದರು. ನೌಕರಿ ಮಾಡಲು ಆಗದೆ ಸಂತೋಷವೇ ಪರಮಧನ ಎಂದು ಹೇಳುತ್ತಲೆ ಇಲ್ಲವಾಗುತ್ತಾರೆ. ಸರ್ವೇಶ್ವರ ಅವರು ಹೇಳುವ ಹಾಗೆ "ಇಬ್ಬರು ಸತ್ತಾಗಲು ನಾನು ಅತ್ತಿಲ್ಲ. ಆ ಕಾರಣಕ್ಕೆ ಜನ ನನ್ನನ್ನು ಕಠೋರ ಮನಸ್ಸಿನವನೆಂದು ಕರೆದರು" ಸಂದರ್ಶನ ಒಂದರಲ್ಲಿನ ಮಾತುಗಳು ಹೀಗಿವೆ "ನನ್ನ ಕುಟುಂಬದವರು ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದರು ಕೂಡಾ, ಆರ್ಯ ಸಮಾಜದ ವಿಚಾರಧಾರೆಯನ್ನು ಕರಗತ ಮಾಡಿಕೊಂಡ ಕುಟುಂಬವಾಗಿತ್ತು. ಬಾಲ್ಯವು ಆರ್ಥಿಕ ಸಂಕಷ್ಟ, ಕುಟುಂಬದ ಆಂತರಿಕ ಕಲಹ ಹಾಗೂ ಅನಾಥ ಮಕ್ಕಳ ಜೊತೆಗೆ ಕಳೆಯಿತು. ಏಕೆಂದರೆ ನನ್ನ ಮನೆ ಅನಾಥಾಶ್ರಮಕ್ಕೆ ಸಮೀಪ ಹೊಂದಿಕೊಂಡಿತ್ತು. ತಂದೆ ಜೀವನ ನಿರ್ವಹಣೆಗಾಗಿ ಕಷ್ಟಪಟ್ಟು ದುಡಿಯುತ್ತಿದ್ದರು ಅಂದರೆ ಯಾವ ಕೆಲಸವೇ ಆಗಲಿ ಅಂಗಡಿ ವ್ಯಾಪಾರದಿಂದ ಹಿಡಿದು ರಂಗ ಸಜ್ಜಿಕೆಯ ಕೆಲಸವನ್ನು ಸಹ ಮಾಡುತ್ತಿದ್ದರು. ಮನರಂಜನೆಗೆಂದೆ ಆಗಾಗ ಆರ್ಯ ಸಮಾಜದ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಹಳ್ಳಿಯ ಜನಪದಗೀತೆಗಳು, ನಾಟ್ಯ ಮೊದಲಾದವು ಕಾಣಸಿಗುತ್ತಿದ್ದವು. ಈ ಬಗೆಯ ಜಾನಪದಗಳು ಅವೆಷ್ಟು ಗಾಢವಾಗಿದ್ದವು ಎಂದರೆ ಅವರ ಸೃಜನ ಕ್ರೀಯೆಯಲ್ಲಿ ಅದರ ಲಯಗಾರಿಕೆ ಕಾಣಸಿಗುತ್ತದೆ.
ಕವಿ ಬಳಸುವ ನುಡಿಗಟ್ಟುಗಳಲ್ಲಿ ವಿಷಾದದ ನೆರಳು ಇದೆ. ವ್ಯಂಗ ವರ್ಣನೆ ಇದೆ ಇಂತಹ ಸ್ಥಿತಿಗಳನ್ನು ಕವಿತೆಗೆ ಜೋಡಿಸಿಕೊಳ್ಳವುದು ಕಾಣಬಹವುದು. ಜನ ಸಾಮಾನ್ಯರ ಸಂಕಷ್ಟಗಳು, ಹಳ್ಳಿಯ ಮುಗ್ಧ ಬದುಕು ಇವುಗಳನ್ನು ಹೇಳುತ್ತಲೆ ಬೆಂಕಿಯ ಜ್ವಾಲೆಯಿಂದ ಹೊರ ಬಿಳುತ್ತದೆ. ಒಮ್ಮೊಮ್ಮೆ ಶಬ್ದಗಳೆ ಕೆಂಡದಂತೆ ಸುಡುತ್ತವೆ.
ಪ್ರಜಾಪ್ರಭುತ್ವವನ್ನು ರಾಜಕಾರಣಿಗಳು
ಚಪ್ಪಲಿಗಳ ಹಾಗೆ
ಕಟ್ಟಿಗೆಯಲ್ಲಿ ಸಿಕ್ಕಿಸಿಕೊಂಡು
ಎದೆ ಸೆಟೆಸಿಕೊಂಡು
ಎಲ್ಲ ಕಡೆ ಓಡಾಡುತ್ತಿದ್ದಾರೆ”
ಒಂದು ಕಡೆ ಜನಸಾಮಾನ್ಯರೇ ನಂಬಿ ಆಯ್ಕೆ ಮಾಡಿರುವ ಪ್ರಭುತ್ವ ಇನ್ನೊಂದು ಕಡೆ ಬಡ ಜನರ ಬದುಕು. ಇವೆಲ್ಲದರ ಮಧ್ಯ ಪ್ರಭುತ್ವದಲ್ಲಿರುವವರ ಮೇಲಾಟಗಳು ಕಾಣಸಿಗುತ್ತವೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!