ಯುವ ಬರಹಗಾರ ರಾಹುಲ ಕಟ್ಟಿ ಇವರ ‘ಕತ್ತಲೆ’ ಎನ್ನುವ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಗಿದೆ. ‘ಕತ್ತಲೆ’ ಎಂದರೆ ಬದುಕಿನ ಭರವಸೆಯ ಕವನ ಸಂಕಲನ ಎಂದು ಕವಿ ಹೇಳಿಕೊಂಡಿದ್ದಾರೆ. ಈ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯವೂ ಲಭಿಸಿದೆ. ಈ ಕವನ ಸಂಕಲನದ ಬಗ್ಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಕಾವ್ಯಶ್ರೀ ಮಹಾಗಾಂವಕರ (ಸಿಕಾ). ಮುನ್ನುಡಿಯ ಆಯ್ದ ಭಾಗಗಳು…
“ಇಂದು ಟೆಕ್ನಾಲಜಿ ಅತ್ಯಂತ ಮುಂದುವರಿದ ಹೊತ್ತಲಿ, ಸೋಶಿಯಲ್ ಮೀಡಿಯಾ ತುಂಬ ಚುರುಕಾಗಿದೆ. ಫೇಸ್ಬುಕ್, ವಾಟ್ಸ್ ಆಪ್, ಇಸ್ಟಾ, ಟ್ವಿಟರ್ ಇತ್ಯಾದಿಗಳ ಬಳಕೆ, ಕೇವಲ ಹೆಚ್ಚಲ್ಲ, ಅತಿ ಹೆಚ್ಚು ಎಂದೇ ಹೇಳಬೇಕಾಗಿದೆ. ಫೇಸ್ಬುಕ್ ಬಳಸುವವರು ವಯಸ್ಸಾದವರು, ವಾಟ್ಸ್ ಆಪ್ ಬಳಸುವವರು ಮಧ್ಯ ವಯಸ್ಸಿನವರು, ಇನ್ಸ್ಟಾ ಎಂದರೆ ಯಂಗ್ಸ್ಟರ್ಸ್, ಟ್ವಿಟರ್ ಎಂದರೆ ಸೆಲೆಬ್ರಿಟಿಗಳು ಎನ್ನುವ ಕ್ಲಾಸಿಫಿಕೇಶನ್ ಕೂಡ ಅಚ್ಚರಿ ಮೂಡಿಸುತ್ತದೆ. ಮನುಷ್ಯ ಇಷ್ಟೊಂದು ಬಿಜಿ಼ ಆಗಿರುವಾಗ ಭಾವನೆಗಳ ತೀವ್ರತೆ ನಿರೀಕ್ಷಿಸುವುದು ಅಷ್ಟೇ ಕಷ್ಟ. ಹೌದು, ನಿಮ್ಮ ಊಹೆ ಸರಿಯಾಗಿದೆ. ನಾನು ಭಾವನೆಗಳ ತೀವ್ರತೆ ಎಂದು ಹೇಳಲು ಹೊರಟಿರುವುದು ಕವಿತೆಗಳ ರಚನೆಯ ಹಿನ್ನೆಲೆಯಲ್ಲಿಯೇ. ಪ್ರಸ್ತುತ ಕಾಲದಲ್ಲಿ ‘ಕವನ ಬರೆದರೆ ಏನು ಲಾಭ?’ ಎಂದು ಪ್ರಶ್ನೆ ಕೇಳುವ ವ್ಯವಹಾರಿಕ ಪ್ರಜ್ಞೆ ಜಾಗೃತವಾಗಿದೆ. ಇದರ ಉತ್ತರ ಹುಡುಕಲು ಹೊರಟರೆ, ಲಾಭದ ಉತ್ತರವಾಗಿ, ಒಂದು ಉತ್ತರವೂ ಸಿಗುವುದಿಲ್ಲ. ಏಕೆಂದರೆ ಪ್ರಕಾಶಕರು ಕವನ ಸಂಕಲನಗಳ ಪ್ರಕಟಣೆಗೆ ಒಪ್ಪುವುದಿಲ್ಲ. ಅದಕ್ಕೆ ಕಾರಣ ಗ್ರಂಥಾಲಯ ಖರೀದಿಸುವುದಿಲ್ಲ. ಇನ್ನು ಕವಿಗೆ ಬೇಕಾಗಿರುವ ಕೇಳುವ ಕಿವಿಗಳು, ಅವುಗಳು ಸಿಗುವುದು ದುರ್ಲಭ. ಎಲ್ಲರೂ ತಂತ್ರಜ್ಞಾನದ ಕೃಪೆಯಲ್ಲಿ ಕಳೆದು ಹೋಗುತ್ತಿದ್ದಾರೆ. ಇಂತಹ ಜಾಗತಿಕ ಸಂಕ್ರಮಣ ಕಾಲದಲ್ಲಿ ಎಲ್ಲೊ ಕೆಲವು ಪ್ರತಿಭಾವಂತರು ಭಾವಾಭಿವ್ಯಕ್ತಿಯ ಕವನ ರಚನೆಗೆ ಮುಂದಾಗುತ್ತಾರೆ. ಅಂಥವರಲ್ಲಿ ರಾಹುಲ್ ಅವರು ಒಬ್ಬರು.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಉಕ್ಕುವ ರೋಷ!
ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುವ ಪುರುಷ ವರ್ಗದ ಮೇಲೆ ಕಿಡಿಕಾರುವ ಗಟ್ಟಿತನ!
ಹಸಿದ ಹೊಟ್ಟೆಯ ತಳಮಳಕ್ಕೆ ನೋವಿನ ಸಹಸ್ಪಂದನ!
ಕೂಲಿ ಮಾಡುವ ಹಸಿದ ಒಡಲ ತಾಪಕೆ ಮರುಕ!
ಹಳ್ಳಹಿಡಿದ ರಾಜಕೀಯ ಸ್ಥಿತ್ಯಂತರಗಳ ಎತ್ತಿ ತೋರಿಸುವ ಎದೆಗಾರಿಕೆ!
ಅನ್ಯಾಯ, ಅತ್ಯಾಚಾರ ಕಂಡಾಗಲೆಲ್ಲ ಅಕ್ಷರದ ಹೋರಾಟಕ್ಕಿಳಿವ ಕೆಚ್ಚೆದೆ!
ಬಡತನದ ಬೇಗುದಿಗೆ ಬೆಂದು ಬಸವಳಿವ ಜೀವಿಗಳ ಅಂತರಂಗ ಅರಿಯುವ ತುಡಿತ!
ಹಸಿವಿನ ಹಾಹಾಕಾರಕೆ ಮರುಗುವ ಸಂವೇದನಶೀಲತೆ!
ಈ ಎಲ್ಲದರ ನಡುವೆಯೂ ಅರಳಲಿದೆ ಪ್ರೀತಿಯ ಹೊನಲು ಎಂದು ನಂಬಿರುವ ಕವಿ “ಕನ್ನಡದ ಸಂತ” ಕಾವ್ಯನಾಮದ ರಾಹುಲ್!
ಜವಾರಿ ಭಾಷೆಯ ದೇಸೀ ಪ್ರತಿಭೆಯ ಈ ಯುವಕ ತನ್ನ ಕಾವ್ಯಶಕ್ತಿಯಿಂದ ಓದುಗರ ಮೇಲೆ ಮೋಡಿ ಮಾಡಬಲ್ಲ, ಹಾಗೆಯೇ ಸಮಾಜದ ಅಂಕು ಡೊಂಕುಗಳನ್ನು ನಿಷ್ಠುರವಾಗಿ ಅಭಿವ್ಯಕ್ತಿಸಲೂ ಬಲ್ಲ. ಕಾವ್ಯ ಪ್ರೀತಿಯ ಎಳೆ ಹಿಡಿದು, ಸಾಹಿತ್ಯದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ರಾಹುಲ್ ಅವರಲ್ಲಿ ಅದಮ್ಯ ‘ಜೀವನ ಪ್ರೀತಿ’ ಇದೆ.
ಈ ಜೀವ ಜಗತ್ತಿನಲ್ಲಿ ‘ಪ್ರೀತಿ’ ಎನ್ನುವುದೊಂದು, ಎಂದೂ ಬತ್ತದ ಜೀವಜಲ! ಕವಿಯಾಗುವುದೇ ಪ್ರೀತಿಯಿಂದ ಅಥವಾ ಜೀವನ ಪ್ರೀತಿಯಿಂದ. ಈ ಪ್ರೀತಿಯಿಂದಲೇ ಸಂಬಂಧಗಳು, ಆ ಸಂಬಂಧಗಳೇ ಜೀವನ ಚಕ್ರಕ್ಕೆ ಕಾರಣವೂ ಹೌದು. ಜನಸಾಮಾನ್ಯರಿರಲಿ ಅಥವಾ ಬರಹಗಾರರಿರಲಿ ಅವರ ಮೊದಲ ಆದ್ಯತೆ ಪ್ರೀತಿ. ಕವಿಯಾದವರಿಗೆ ಪ್ರೀತಿ ಭಾವಾನಾತ್ಮಕತೆಯಿಂದ ಕೂಡಿರುತ್ತದೆ. ಅಂತಹ ಪ್ರೀತಿಸುವ ಮನಸಿದ್ದವರು, ಮಾಡುವ ಎಲ್ಲ ಕೆಲಸಗಳಲ್ಲೂ ಉತ್ಸಾಹ, ಉಮೇದು ತನ್ನಿಂದ ತಾನೇ ಹುಟ್ಟುತ್ತದೆ. ಹಾಗಾಗಿ ರಾಹುಲ್ ಅವರದು ಮಲ್ಟಿ ಟ್ಯಾಲೆಂಟೆಡ್ ಪರ್ಸನಾಲಿಟಿ! ಸಾಂಸ್ಕೃತಿಕಲೋಕದಲ್ಲಿ ಕಲಾವಿದನಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ತರಹೆವಾರಿ ತಿಂಡಿ, ತಿನಿಸು ಮಾಡಲು ನಿಂತರೆ ನಳಪಾಕ ಎಂದೇ ಹೇಳಬೇಕು. ಹಾಗೆಯೆ ಬರಹದಲ್ಲೂ ಪ್ರತಿಭೆ ತೋರಿದ್ದಾರೆ. ಪ್ರಸ್ತುತ ಕೃತಿ ‘ಕತ್ತಲೆ’ ಅವರ ಜೀವನ ಪ್ರೀತಿಯ ಸಂಕೇತ. ಪ್ರೀತಿ, ಪ್ರೇಮ ಅಷ್ಟೇ ಅಲ್ಲ, ಬಡತನ, ಹಸಿವು, ನೋವು, ಹೆಣ್ತತನದ ಸವಾಲು, ವ್ಯಭಿಚಾರ, ಅತ್ಯಾಚಾರ, ಅನ್ಯಾಯ, ಮೋಸ, ವಂಚನೆ, ಕೂಲಿ, ಕುಡಿತ, ಆಧುನಿಕತೆ ಮುಂತಾದವು ಈ ಕವಿಯನ್ನು ಕಾಡಿವೆ, ಅಷ್ಟೇ ಅಲ್ಲ ನಿದ್ದೆಗೆಡಿಸಿ ಕಾವ್ಯಕ್ಕೆ ವಸ್ತುವಾಗಿವೆ.
ಸಾಹಿತ್ಯಲೋಕದಲ್ಲಿ ‘ಅಡ್ಡ ಬರೆದರೆ ಗದ್ಯ ಉದ್ದ ಬರೆದರೆ ಪದ್ಯ’ ಎನ್ನುವ ಕ್ಲೀಶೆಯಾದ ಮಾತೊಂದಿದೆ. ಕವನ ರಚನೆಗೆ ತೊಡಗಿದ ಆರಂಭದಲ್ಲಿ, ಒಂದೊ ಎರಡೊ ಶಬ್ದಗಳ ಬರೆಯುತ್ತ, ಉದ್ದದ ಕವಿತೆ ಬರೆಯುವುದು ಸಹಜ. ಕ್ರಮೇಣ ಕಾವ್ಯ ಭಾಷೆಗೆ ಹೊಂದಿಕೊಳ್ಳಲು, ಅದೊಂದು ಆರಂಭಿಕ ಹೆಜ್ಜೆ ಮಾತ್ರ. ಕನ್ನಡದ ಸಂತನ ‘ಬೆವರ ಬಸಿರು’ ಒಳಗೊಂಡ ಕವಿತೆಗಳು ಮೇಲ್ನೋಟಕ್ಕೆ ಉದ್ದ ಬರೆದಂತೆ ತೋರುತ್ತದೆ. ಆದರೆ ಅವುಗಳಲ್ಲಿರುವ ‘ಧ್ವನಿ’ ಕಾವ್ಯದ ಮೌಲ್ಯವನ್ನು ಉನ್ನತೀಕರಿಸಲು ಕಾರಣವಾಗುತ್ತದೆ. ಇಲ್ಲಿ ಕವಿ ತನಗೆ ಹೇಳಬೇಕಾದುದಕ್ಕೆ ಪುಟ್ಟ ಕತೆಯ ಸ್ವರೂಪವನ್ನು ನೀಡಿ, ಮನದಲ್ಲಿ ಕವಿತೆಯಾಗಿಸಿ, ಭಾವಕೋಶದಲಿ ಕಾವು ಕೊಟ್ಟು, ಶಬ್ದಗಳ ಜಾಲದಲಿ ಸಿಲುಕಿ ಅಕ್ಷರವಾಗಿಸಿ, ಹೊರಹಾಕುವ ಜಾಣ್ಮೆ ತೋರಿದ್ದಾರೆ. ಉದಾಹರಣೆಗೆ ‘ಖಾಲಿ ಬಾಜಾರ’, ‘ಪರಿಸ್ಥಿತಿ’, ‘ನ್ಯಾಯ’, ‘ಅವಳು’, ‘ಚೆಂಬರು’, ‘ಪಠಣ’, ‘ಡಾಂಬರ’, ‘ಸಗಣಿ ಜೋಳದ ರೊಟ್ಟಿ’ ಇತ್ಯಾದಿ.
ಇಡೀ ಸಂಕಲನದಲ್ಲಿ ಮೂಡಿ ಬಂದಿರುವ ಕೆಲವಾರು ಸಾಲುಗಳು ಗಮನ ಸೆಳೆಯುತ್ತವೆ. ಖಾಲಿ ಬಾಜಾರದಾಗ ನಿಂತಾಕಿ, ಏನ್ ಛಂದ ಕಾಣಸ್ತಿ, ಏನ್ ನಡದದ ಗೊತ್ತದ ಏನು?, ನನ್ನವಳು ಕೇಳುತ್ತಾಳೆ, ಅಬ್ಬಾ ಇನ್ನೂ ಬಂದಿಲ್ಲ, ಯಾಕ ಹಿಂಗ ಕಾಡ್ತಿ?, ಇತ್ಯಾದಿ ಪಂಕ್ತಿಗಳು ಪುನರುಕ್ತಿಗೆ ಒಳಗಾಗುತ್ತವೆ. ಇವು ಕಾವ್ಯದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಗದ್ಯ ಹಾಗೂ ಪದ್ಯದ ನಡುವಿನ ಭಾಷೆಯನ್ನು ಆಯ್ಕೆ ಮಾಡಿಕೊಂಡು, ತಮ್ಮದೇ ಶೈಲಿ ರೂಢಿಸಿಕೊಂಡ ಕವಿ ಕನ್ನಡದ ಸಂತ.
ಮನುಷ್ಯನ ಅನೇಕ ಮೂಲಭೂತ ಅಗತ್ಯಗಳ ನಡುವೆ ‘ಹಸಿವು’ ಬಹಳ ಪ್ರಮುಖವಾದುದು. ಕೆಲವೊಮ್ಮೆ ಕೆಲವರಿಗೆ ಈ ಹಸಿವು ಬಹುದೊಡ್ಡ ಸವಾಲಾಗಿ ನಿಲ್ಲುತ್ತದೆ. ಇನ್ನು ಕೆಲವರು ಹಸಿವಿಗಾಗಿ ಏನೆಲ್ಲಾ ಮಾಡಲು ಮುಂದಾಗುತ್ತಾರೆ. ಇದಕ್ಕೆಲ್ಲ ಬಡತನವೇ ಮೂಲ ಕಾರಣ ಎನ್ನುವುದು ಅಷ್ಟೇ ಸತ್ಯ. ದುಡಿಯಲು ಮುಂದಾಗಿ ಕೆಲಸಕ್ಕಾಗಿ ಕೈಚಾಚುವ ಪರಿಸ್ಥಿತಿ ಬಂದಾಗ, ಕೆಲಸ ಸಿಗಬಹುದು ಇಲ್ಲವೆ ಸಿಗದಿರಬಹುದು. ಆಗ ಸಿಗದಿದ್ದರೆ, ಹಸಿವು ಇಂಗಿಸಿಕೊಳ್ಳುವ ದಾರಿಗಳು ಮುಚ್ಚಿದಂತೆಯೇ ಸರಿ.
‘ಕತ್ತಲೆ’ ರಾಹುಲ್ ಅವರ ಮೊದಲ ಸಂಕಲನವಾದರೂ, ಅದು ತನ್ನದೇ ಆದ ಪ್ರೌಢಿಮೆಯಿಂದ ಬೀಗುತ್ತದೆ. ಈ ಕನ್ನಡದ ಸಂತನಿಗೆ ಸಾಹಿತ್ಯಲೋಕದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ರಾಹುಲ್ ಅವರೊಳಗಿನ ಪ್ರತಿಭೆ ಎಂಬ ಅವ್ವ, ಕೃತಿಯ ಸ್ವರೂಪದ ಕೂಸನ್ನು ಪದೇ ಪದೇ ಹೆರಲೆಂದು ಆಶಿಸುವೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!