ಮಂಗಳೂರಿನ ಕದ್ರಿ ಪಾರ್ಕಿನಲ್ಲಿ 2026ರ ಮಾವು ಮೇಳ ಜರಗಿದ್ದು ನಾಲ್ಕು ದಿನಗಳು: ಮೇ 28ರಿಂದ 31ರ ತನಕ.

ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ (ರಿ.) ಆಯೋಜಿಸಿದ್ದ ಮಾವು ಮೇಳಕ್ಕೆ ಸಹಕಾರ ನೀಡಿದ್ದು ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ. ಕಳೆದ ಎರಡು ವರುಷಗಳಿಂದ ಬೇಸಗೆಯ ಮುಕ್ತಾಯದಲ್ಲಿ ನಡೆಸುವ ಮಾವು ಮೇಳ ಮಂಗಳೂರಿನಲ್ಲಿ ಜನಪ್ರಿಯವಾಗಿದೆ.

ಅಲ್ಫಾನ್ಸೋ, ಬಾದಾಮಿ, ಮಲಗೋವಾ, ಕೇಸರಿ, ಕಾಲಪ್ಪಾಡಿ, ಸಕ್ಕರೆಗುತ್ತಿ, ದಶೇರಿ, ರಸಪೂರಿ, ಇಮಾಮ್ ಪಸಂದ್, ಮಲ್ಲಿಕಾ, ಮಾಯಾ ಇತ್ಯಾದಿ ತಳಿಗಳ ಮಾವಿನ ಹಣ್ಣುಗಳು ಈ ವರುಷ ಮಾರಾಟಕ್ಕೆ ಲಭ್ಯವಿದ್ದವು.

ಅಲ್ಲಿ ಮಾವಿನ ಹಣ್ಣುಗಳನ್ನು ಕಿಲೋಕ್ಕೆ ನೂರು ರೂಪಾಯಿಯಿಂದ ಇನ್ನೂರು ರೂಪಾಯಿ ವರೆಗಿನ ದರದಲ್ಲಿ ಬೆಳೆಗಾರರು ಮಾರುತ್ತಿದ್ದರು ಎಂದು ಮೊದಲ ಮೂರು ದಿನ ಹೋಗಿ ಮಾವು ಖರೀದಿಸಿದವರು ಹೇಳಿದ್ದರು. ಮಾರಾಟಗಾರರಿಗೆ ತಗಡಿನ ಶೀಟುಗಳು (ಚಾವಣಿ) ಮತ್ತು ಅಗ್ರೋ ನೆಟ್-ಗಳಿಂದ ನಿರ್ಮಿಸಿದ ಮಳಿಗೆಗಳನ್ನು ಮಾರಾಟಕ್ಕೆ ಒದಗಿಸಲಾಗಿತ್ತು.

ಈ ವರುಷ ಮೊದಲ ಮೂರು ದಿನಗಳಲ್ಲಿ ಮಾವು ಖರೀದಿಸಲು ನಾನು ಮಾವು ಮೇಳಕ್ಕೆ ಹೋಗಲಿಲ್ಲ. ಕಳೆದ ವರುಷ ಮೊದಲ ದಿನ ಹೋದಾಗ ಒಬ್ಬ ಬೆಳೆಗಾರ/ ಮಾರಾಟಗಾರನ ಜೊತೆ ನಡೆದ ಮಾತುಕತೆ ನನ್ನ ನೆನಪಿನಿಂದ ಮಾಸಿರಲಿಲ್ಲ. ಆತನಿಂದ ಮಲ್ಲಿಕಾ ಮಾವು ಖರೀದಿಸಿ, ಅಲ್ಲಿ ಅಲ್ಲಲ್ಲಿ ನೇತಾಡಿಸಿದ್ದ “ಕಾಗದದ ಹಾಳೆಯ ಫಲಕ”ದಲ್ಲಿದ್ದ ದರ ಕಿಲೋಕ್ಕೆ 70 ರೂಪಾಯಿ ಪಾವತಿಸಿದಾಗ “80 ರೂಪಾಯಿ ಕೊಡಿ ಸರ್” ಎಂದ. “ಅದ್ಯಾಕೆ? ಅಲ್ಲಿ ನೋಟಿಸಿನಲ್ಲಿ ಎಪ್ಪತ್ತು ರೂಪಾಯಿ ಹಾಕಿದ್ದಾರಲ್ಲ” ಎಂದು ಕೇಳಿದೆ. “ಅವರು ನಮ್ಮ ಹತ್ತಿರ ಕೇಳದೆ ಹಾಕಿದ್ದಾರೆ ಸರ್. ನಮಗೆ ನಷ್ಟ ಆಗುತ್ತದೆ” ಎಂದ. “ಹಾಗಿದ್ದರೆ ನೀವು ನೋಟಿಸಿನಲ್ಲಿ ಇದ್ದ ರೇಟು ಸರಿ ಮಾಡಿಸಬೇಕಾಗಿತ್ತು. ನಾವ್ಯಾಕೆ ಹೀಗೆ ಚರ್ಚೆ ಮಾಡಬೇಕು?” ಎಂದೆ. ಅವನ ಉತ್ತರ ಮಾರ್ಮಿಕವಾಗಿತ್ತು, “ನಮ್ಮ ಮಾತು ಯಾರು ಕೇಳ್ತಾರೆ ಸರ್” ಎಂದ. ಕೊನೆಗೆ ಅವನಿಗೆ ಕಿಲೋಕ್ಕೆ 80 ರೂಪಾಯಿ ಪಾವತಿಸಿ ಆ ಮಾವು ಮನೆಗೆ ತಂದೆ.

ಈ ವರುಷ ಕೊನೆಯ ದಿನ ಭಾನುವಾರ ಮಾವು ಮೇಳಕ್ಕೆ ಹೋದೆ. ಕೆಲವು ಮಳಿಗೆಗಳಲ್ಲಿ ಮಾವಿನ ಹಣ್ಣುಗಳ ದರ ವಿಚಾರಿಸಿದಾಗ ಎಲ್ಲರೂ ಕಿಲೋಕ್ಕೆ ನೂರು ರೂಪಾಯಿ ದರದಲ್ಲಿ ಮಾರುತ್ತಿದ್ದರು. ಒಂದೆರಡು ತಳಿಗಳ ಮಾವಿನ ಹಣ್ಣುಗಳ ಮಾರಾಟ ಮಾತ್ರ ಕಿಲೋಕ್ಕೆ ನೂರೈವತ್ತು ರೂಪಾಯಿ ದರದಲ್ಲಿ ನಡೆಯುತ್ತಿತ್ತು. ಅಲ್ಲಿ ಮಾರಾಟ ಮಾಡುತ್ತಿದ್ದ ಬೆಳೆಗಾರರೆಲ್ಲ ಬಹುಶಃ ಅವತ್ತೇ ರಾತ್ರಿ ತಮ್ಮೂರು ರಾಮನಗರಕ್ಕೆ ವಾಪಾಸು ಹೋಗಬೇಕಾಗಿತ್ತು ಅನಿಸುತ್ತದೆ. ಮಾರಾಟವಾಗದೆ ಉಳಿದ ಮಾವಿನ ಹಣ್ಣುಗಳನ್ನು ವಾಪಾಸು ಒಯ್ದರೆ, ಮರುದಿನ ರಾಮನಗರ ತಲಪುವ ಹೊತ್ತಿಗೆ ಅವೆಲ್ಲ ಕೆಟ್ಟು ಹೋಗುತ್ತಿದ್ದವೇನೋ… ಅದಕ್ಕಾಗಿ ಎಲ್ಲರೂ ಎಲ್ಲ ಮಾವಿನ ಹಣ್ಣುಗಳ ದರ ಇಳಿಸಿದ್ದರು.

ಅಷ್ಟೇ ಅಲ್ಲ, ಗ್ರಾಹಕರನ್ನು ಸೆಳೆಯಲಿಕ್ಕಾಗಿ ಅಲ್ಲಿ ಮಾರಾಟಗಾರರು ಇನ್ನು ಕೆಲವು ಮಾರಾಟ ತಂತ್ರಗಳನ್ನು ಅನುಸರಿಸುತ್ತಿದ್ದುದನ್ನು ಗಮನಿಸಿದೆ. ಒಬ್ಬ ಮಾರಾಟಗಾರ ಐದೈದು ಮಾವಿನ ಹಣ್ಣುಗಳನ್ನು ಜೋಡಿಸಿ ಇಟ್ಟಿದ್ದ. ಪ್ರತಿಯೊಂದು ಗುಂಪಿನಲ್ಲಿರುವ ಐದು ಹಣ್ಣುಗಳ ಮಾರಾಟ ದರ ನೂರು ರೂಪಾಯಿ. “ನೋಡಿ ಸರ್, ತಗೊಳ್ಳಿ. ವೆಯ್ (ತೂಕ) ಮಾಡಿದರೆ (ಐದು ಮಾವುಗಳ) ಎರಡು ಕಿಲೋ ಜಾಸ್ತಿನೇ ತೂಕ ಬರ್ತದೆ” ಎಂದು ಹೇಳುತ್ತಿದ್ದ.

ಮುಂದಕ್ಕೆ ಹೋದಾಗ, ಇನ್ನೊಂದು ಮಳಿಗೆಯಲ್ಲಿ “ತಗೊಳ್ಳಿ ಸರ್. ನೂರು ರೂಪಾಯಿಗೆ ಒಂದೂವರೆ ಕಿಲೋ ಹಣ್ಣು ಕೊಡ್ತಾ ಇದೀವಿ” ಎಂದು ಗ್ರಾಹಕರನ್ನು ಕರೆಯುತ್ತಿದ್ದ. ಜೊತೆಗೆ, ರುಚಿ ನೋಡಲಿಕ್ಕೂ ಒಂದು ತುಂಡು ಮಾವು ಕೊಡುತ್ತಿದ್ದ.

ಅಲ್ಲಿಂದ ಮುಂದಕ್ಕೆ ಹೋದಾಗ ಇನ್ನೊಬ್ಬ ಮಾರಾಟಗಾರ “ನೂರು ರೂಪಾಯಿಗೆ ಮೂರು ಕಿಲೋ ಹಣ್ಣು, ತಗೊಳ್ಳಿ ಸರ್” ಎಂದು ಘೋಷಿಸುತ್ತಿದ್ದ. ನಾನು ಅವರೆಲ್ಲದಿಂದಲೂ ಮಾವಿನ ಹಣ್ಣು ಖರೀದಿಸಿದೆ.

ಮಾವು ಮೇಳಕ್ಕೆ ಬಂದವರನ್ನೆಲ್ಲ ಈ ಮಾರಾಟ ತಂತ್ರಗಳು ಸೆಳೆಯುತ್ತಿದ್ದವು. ಬಹುಪಾಲು ಗ್ರಾಹಕರು ತಲಾ 2 - 3 ಕಿಲೋ ಮಾವಿನ ಹಣ್ಣು ಖರೀದಿಸಿ “ತಮಗೆ ಕಡಿಮೆ ಬೆಲೆಗೆ ಮಾವು ಸಿಕ್ಕಿತು” ಎಂಬ ಖುಷಿಯಿಂದ ಹೊರ ನಡೆಯುತ್ತಿದ್ದರು.

ಅಂತೂ ಬೆಳೆಗಾರರ ಮಾರಾಟ ತಂತ್ರಗಳು ಗ್ರಾಹಕರನ್ನು ಸೆಳೆಯುವಲ್ಲಿ ಪರಿಣಾಮಕಾರಿಯಾಗಿದ್ದವು. ಕೇವಲ ಸಿಹಿಸಿಹಿ ಮಾವು ಬೆಳೆದರೆ ಸಾಲದು, ಗ್ರಾಹಕರನ್ನು ಸೆಳೆದು ಅವನ್ನು ನಾಜೂಕಾಗಿ ಮಾರಾಟ ಮಾಡಲು ಕಲಿಯದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ಬೆಳೆಗಾರರು ಅರ್ಥ ಮಾಡಿಕೊಂಡದ್ದು ಸಂತೋಷದ ಸಂಗತಿ.

ಫೋಟೋ: ಮೇ 31, 2026ರ ಸಂಜೆ ಕದ್ರಿ ಪಾರ್ಕಿನ ಮಾವು ಮೇಳದಲ್ಲಿ ಮಾವು ಖರೀದಿಸುತ್ತಿರುವ ಗ್ರಾಹಕರು