ನಮ್ಮ ನಾಡಹಬ್ಬ ದಸರಾ ಹಾಗೂ ಬೆಳಕಿನ ಹಬ್ಬ ದೀಪಾವಳಿಗಳ ಧಾರ್ಮಿಕ ಆಚರಣೆಗಳ ಆಸುಪಾಸಿನಲ್ಲಿಯೇ ಪ್ರತಿವರ್ಷ ಕನ್ನಡಿಗರು ಸಂಭ್ರಮದಿಂದ ಆಚರಿಸುವ ಮತ್ತೊಂದು ಅತೀ ದೊಡ್ಡ ಹಬ್ಬವೇ ನವೆಂಬರ್ 1 ರ ನಮ್ಮ "ಕನ್ನಡ ರಾಜ್ಯೋತ್ಸವ".

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನೆಲ್ಲಾ ಒಗ್ಗೂಡಿಸಿ, "ವಿಶಾಲ ಮೈಸೂರು" ರಾಜ್ಯದ ಉದಯಕ್ಕೆ ನಾಂದಿ ಹಾಡಿದ ದಿನವಾದ ನವೆಂಬರ್ 1 ರ ದಿನವನ್ನು ನಾವು ಪ್ರತಿವರ್ಷವೂ ನಮ್ಮ ರಾಜ್ಯೋತ್ಸವವೆಂದು ಆಚರಿಸುತ್ತಿದ್ದೇವೆ ಎಂಬುದು ನಮ್ಮೆಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.

ಭಾರತವು 1947 ರಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವತಂತ್ರ್ಯ ರಾಷ್ಟ್ರವಾದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಗೆ ಆಗಾಗ್ಗೆ ಬೇಡಿಕೆಗಳು ಬರುತ್ತಲೇ ಇದ್ದವು. ಅಂತಿಮವಾಗಿ ಭಾರತ ಸರ್ಕಾರವು ಭಾಷಾಧಾರಿತ ರಾಜ್ಯಗಳ ರಚನೆಗಾಗಿ 1953 ರ ಡಿಸೆoಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಫಜಲ್ ಅಲಿಯವರ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ "ರಾಜ್ಯ ಪುನರ್ವಿಂಗಡಣಾ ಆಯೋಗ" ವನ್ನು ನೇಮಕ ಮಾಡಿತು. ಆ ನಂತರ ಈ ಆಯೋಗದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು 1954 ರ ಡಿಸೆಂಬರ್ ನಲ್ಲಿ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಗೋವಿಂದ ಬಲ್ಲಭ ಪಂತ್ ರವರು ನಿರ್ವಹಿಸಿದರು.

ಅಂತಿಮವಾಗಿ ಈ ಆಯೋಗವು 1955 ರ ಸೆಪ್ಟೆಂಬರ್ 30 ರಂದು ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿತು. ಆ ತರುವಾಯ ಅವುಗಳನ್ನು ಸಂಸತ್ತಿನಲ್ಲಿ ಸುಧೀರ್ಘವಾಗಿ ಚರ್ಚಿಸಿದ ನಂತರ ಸರ್ಕಾರವು 1956 ರ ಆಗಸ್ಟ್ 31 ರಂದು "ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ" ಯನ್ನು ವಿಧ್ಯುಕ್ತವಾಗಿ 1956 ರ ನವೆಂಬರ್ 1 ರಿಂದ ಜಾರಿಗೆ ಬರುವಂತೆ ಅನ್ವಯಗೊಳಿಸಿತು.

ಈ ಕಾಯ್ದೆಯ ಅನ್ವಯ ನಮ್ಮ ರಾಜ್ಯವೂ ಸಹ 1956 ರ ನವೆಂಬರ್ 1 ರಂದು "ವಿಶಾಲ ಮೈಸೂರು ರಾಜ್ಯ" ವಾಗಿ ಅಸ್ತಿತ್ವಕ್ಕೆ ಬಂದಿತು. ಈ ಹಿಂದೆ ಮುಂಬೈ, ಹೈದರಾಬಾದ್  ಹಾಗೂ ಮದ್ರಾಸ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಹಳೇ ಮೈಸೂರು ಪ್ರಾಂತ್ಯದ ಪ್ರದೇಶಗಳೊಂದಿಗೆ ವಿಲೀನಗೊಂಡು,"ವಿಶಾಲ ಮೈಸೂರು" ರಾಜ್ಯವು ಉದಯವಾಗಿದ್ದು ಈಗ ಇತಿಹಾಸ. ಆದರೆ, ಬಳ್ಳಾರಿ ಜಿಲ್ಲೆಯು ಮಾತ್ರ ಇದಕ್ಕೂ ಮೊದಲೇ ಎಂದರೆ 1953 ರ ಅಕ್ಟೋಬರ್ ನಲ್ಲಿಯೇ ಮದ್ರಾಸ್ ಪ್ರಾಂತ್ಯದಿಂದ ಪ್ರತ್ಯೇಕಗೊಂಡು ಮೈಸೂರು ರಾಜ್ಯದಲ್ಲಿ ವಿಲೀನವಾಗಿತ್ತು ಎಂಬುದು ಇಲ್ಲಿ ಉಲ್ಲೇಖನಾರ್ಹ. 

1956 ಕ್ಕೂ ಮೊದಲು ನಮ್ಮ ಹಳೇ ಮೈಸೂರು ರಾಜ್ಯದಲ್ಲಿ ಕೇವಲ ಹತ್ತು ಜಿಲ್ಲೆಗಳು (ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಚಿತ್ರದುರ್ಗ, ತುಮಕೂರು, ಬಳ್ಳಾರಿ ಮತ್ತು ಕೋಲಾರ) ಮಾತ್ರ ಆಸ್ತಿತ್ವದಲ್ಲಿದ್ದವು. ವಿಶಾಲ ಮೈಸೂರು ರಾಜ್ಯವು ರೂಪುಗೊಂಡ ನಂತರ ಮುಂಬೈ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರ್ಪಡೆಯಾದರೆ, ಹೈದರಾಬಾದ್ ಪ್ರಾಂತ್ಯದಿಂದ ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಗಳು ಹಾಗೂ ಮದ್ರಾಸ್ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಸೇರ್ಪಡೆಯಾಗಿ ನಮ್ಮ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ ಹತ್ತೊಂಬತ್ತಕ್ಕೆ ಏರಿತು. 

ರಾಜ್ಯಗಳ ಪುನರ್ವಿಂಗಡಣಾ ಪ್ರಕ್ರಿಯೆಯು ಪೂರ್ಣಗೊಂಡ ಹದಿನೇಳು ವರ್ಷಗಳ ತರುವಾಯ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ದೇವರಾಜ್ ಅರಸ್ ರವರ ಅವಧಿಯಲ್ಲಿ 1973 ರ ನವೆಂಬರ್ 1 ರಂದು ನಮ್ಮ ಮೈಸೂರು ರಾಜ್ಯಕ್ಕೆ ವಿಧ್ಯುಕ್ತವಾಗಿ "ಕರ್ನಾಟಕ" ವೆಂದು ಮರುನಾಮಕರಣ ಮಾಡಲಾಯಿತು. ನಂತರ 1986 ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಜಿಲ್ಲೆಯನ್ನು ನಗರ ಹಾಗೂ ಗ್ರಾಮಾಂತರ ಎಂದು ವಿಭಜಿಸಿದ ಪರಿಣಾಮ ಕರ್ನಾಟಕದ ಒಟ್ಟು ಜಿಲ್ಲೆಗಳ ಸಂಖ್ಯೆ ಇಪ್ಪತ್ತಕ್ಕೆ ಏರಿತು.

ಆನಂತರ,1997 ರಲ್ಲಿ ಜೆ ಹೆಚ್ ಪಟೇಲರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಎಂಟು ಹೊಸ ಜಿಲ್ಲೆಗಳಾದ ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಹಾವೇರಿ, ಗದಗ, ದಾವಣಗೆರೆ, ಉಡುಪಿ ಹಾಗೂ ಚಾಮರಾಜನಗರಗಳನ್ನು ರಚಿಸಲಾಯಿತು ಮತ್ತು 2007 ರಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಪುನಃ ಎರಡು ಹೊಸ ಜಿಲ್ಲೆಗಳಾದ ರಾಮನಗರ ಮತ್ತು ಚಿಕ್ಕಬಳ್ಳಾಪುರಗಳು ರೂಪುಗೊಂಡವು. 2021 ರ ನವೆಂಬರ್ ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆಯನ್ನೂ ಒಳಗೊಂಡಂತೆ ಇಂದು ನಮ್ಮ ಕರ್ನಾಟಕ ರಾಜ್ಯವು ಒಟ್ಟು ಮೂವತ್ತೊಂದು ಜಿಲ್ಲೆಗಳನ್ನು ಹೊಂದಿದೆ.

ಭಾಷಾವಾರು ಪ್ರಾಂತ್ಯಗಳ ರಚನೆ 1956 ರಲ್ಲಿ ನಡೆದರೂ, ಅದಕ್ಕೂ ಹಲವಾರು ದಶಕಗಳ ಹಿಂದೆಯೇ ಕರ್ನಾಟಕದ ಏಕೀಕರಣ ಚಳುವಳಿಯು ಜಾಗೃತಗೊಂಡಿತ್ತು. ಕನ್ನಡ ನಾಡಿನ ಜನತೆಗೆ ಅತ್ಯಂತ ಪ್ರಾತಃಸ್ಮರಣೀಯರಾದ  ಹುಯಿಳುಗೋಳು ನಾರಾಯಣರಾಯರು 1920 ರ ದಶಕದಲ್ಲಿಯೇ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಗೀತೆಯನ್ನು ರಚಿಸುವ ಮುಖಾಂತರ ಕರ್ನಾಟಕದ ಏಕೀಕರಣದ ಕಹಳೆಯನ್ನು ಮೊಳಗಿಸಿದ್ದರು. ಇದರೊಂದಿಗೆ ಡಿ ಎಸ್ ಕರ್ಕಿ (ದುಂಡಪ್ಪ ಸಿದ್ದಪ್ಪ ಕರ್ಕಿ) ಯವರಿಂದ ರಚಿಸಲ್ಪಟ್ಟ "ಹಚ್ಚೇವು ಕನ್ನಡದ ದೀಪ" ಹಾಗೂ ಕುವೆಂಪು ವಿರಚಿತ "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ" ಗೀತೆಗಳು ಕರ್ನಾಟಕದ ಏಕೀಕರಣ ಚಳವಳಿಯ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದವು.

ನಮ್ಮ ಕನ್ನಡ ನಾಡಿಗೆ ಒಂದು ಭವ್ಯ ಪರಂಪರೆ ಮತ್ತು ಇತಿಹಾಸವಿದ್ದು, ನಮ್ಮ ಕನ್ನಡ ಭಾಷೆಯು ಸರಿಸುಮಾರು 2000 ವರ್ಷಗಳಷ್ಟು ಪುರಾತನವಾಗಿದ್ದು, ಭಾರತ ದೇಶದ ಕೆಲವೇ ಕೆಲವು ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಗಳು ಒಂದು ಧೀರ್ಘ ಇತಿಹಾಸವನ್ನು ಹೊಂದಿದ್ದು ಅವುಗಳ ಉಳಿವು ಮತ್ತು ಉನ್ನತಿಗಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ.

ಆ ಮಹನೀಯರ ಸಾಲಿನಲ್ಲಿ ಪ್ರಮುಖರೆಂದರೆ ಹಳೆಗನ್ನಡದ ಕವಿಗಳಾದ ಅಮೋಘವರ್ಷ (ನೃಪತುಂಗ), ಶ್ರೀವಿಜಯ, ನಾಗವರ್ಮ, ದುರ್ಗಸಿಂಹ, ನಾಗಚಂದ್ರ, ನೇಮಿಚಂದ್ರ, ಪಂಪ, ರನ್ನ, ಪೊನ್ನ, ಜನ್ನ, ಲಕ್ಷ್ಮೀಶ, ಹರಿಹರ, ರಾಘವಾಂಕ, ಗದುಗಿನ ನಾರಣಪ್ಪ (ಕುಮಾರವ್ಯಾಸ), ಸರ್ವಜ್ಞ ಹಾಗೂ ವಚನಕಾರರಾದ ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಪಾಲ್ಕುರಿಕೆ ಸೋಮನಾಥ, ದಾಸವರೇಣ್ಯರಾದ ಪುರಂದರದಾಸ, ಕನಕದಾಸ, ವಿಜಯದಾಸ, ಮೋಹನದಾಸ, ಗೋಪಾಲದಾಸ, ಜಗನ್ನಾಥದಾಸ, ಸಂತ ಶಿಶುನಾಳ ಷರೀಫ ಹಾಗೂ ಇನ್ನೂ ಹಲವಾರು ದಾರ್ಶನಿಕರು ತಮ್ಮ ಸಾಹಿತ್ಯ ಕೃತಿಗಳಿಂದ ಕನ್ನಡ ಭಾಷೆಯನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ.

ಕಾಲಚಕ್ರವು ಮುಂದೆ ಸರಿದಂತೆ ಸರಿಸುಮಾರು 19 ನೇ ಶತಮಾನದ ಅಂತ್ಯದ ವೇಳೆಗೆ ಕ್ರಮೇಣ ಕನ್ನಡ ಸಾಹಿತ್ಯವು ಜನಮಾನಸದ ಆಡುಭಾಷೆಗೆ ಸನಿಹವಾಗಲು ಆರಂಭವಾಗಿ, ಆ ನಿಟ್ಟಿನಲ್ಲಿ ಆಧುನಿಕ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ, ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯ ಏಳಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖರೆಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ (ಮುದ್ದಣ), "ಕನ್ನಡ ಕುಲ ಪುರೋಹಿತ" ಆಲೂರು ವೆಂಕಟರಾವ್, "ಕನ್ನಡದ ಕಣ್ವ" ಬಿ ಎಂ ಶ್ರೀಕಂಠಯ್ಯ (ಬಿ ಎಂ ಶ್ರೀ), ಎ ಆರ್ ಕೃಷ್ಣಶಾಸ್ತ್ರಿ , ಎಸ್ ವಿ ರಂಗಣ್ಣ, ಮುದವೀಡು ಕೃಷ್ಣರಾವ್, ಬೆಳ್ಳಾವೆ ನರಹರಿ ಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ಗಂಗಾಧರ ಮಡಿವಾಳೇಶ್ವರ ತುರಮರಿ, ವೆಂಕಟ ರಂಗೋ ಕಟ್ಟಿ , ಫ ಗು ಹಳಕಟ್ಟಿ , ಡೆಪ್ಯೂಟಿ ಚನ್ನಬಸಪ್ಪ, ಡಿ ಎಸ್ ಕರ್ಕಿ, ಎಸ್ ಡಿ ಇಂಚಲ, ಹುಯಿಲುಗೋಳು ನಾರಾಯಣರಾವ್, ಹಲಸಂಗಿ ಚೆನ್ನಮಲ್ಲಪ್ಪ (ಮಧುರ ಚೆನ್ನ), ರೆವರೆಂಡ್ ಉತ್ತಂಗಿ ಚನ್ನಪ್ಪ, ಟಿ ಎಸ್ ವೆಂಕಣ್ಣಯ್ಯ, ಡಿ ಎಲ್ ನರಸಿಂಹಚಾರ್, ತೀ ನಂ ಶ್ರೀಕಂಠಯ್ಯ (ತಿ ನಂ ಶ್ರೀ ), ಪು ತಿ ನರಸಿಂಹಾಚಾರ್ (ಪು ತಿ ನ ), "ಕನ್ನಡ ಕಾದಂಬರಿಗಳ ಪಿತಾಮಹ" ವೆಂಕಟೇಶ ತಿರಕೊ ಕುಲಕರ್ಣಿ (ಗಳಗನಾಥ), "ಕನ್ನಡದ ಆಸ್ತಿ" ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), ಕೆ ವಿ ಅಯ್ಯರ್, ಆದ್ಯ ರಂಗಚಾರ್ಯ (ಶ್ರೀರಂಗ), “ಮಂಕುತಿಮ್ಮನ ಕಗ್ಗ” ಖ್ಯಾತಿಯ ಡಿ ವಿ ಗುಂಡಪ್ಪ (ಡಿ ವಿ ಜಿ), "ಕನ್ನಡದ ವರಕವಿ" ದ ರಾ ಬೇಂದ್ರೆ (ಅಂಬಿಕಾತನಯದತ್ತ), "ರಸಋಷಿ" ಕೆ ವಿ ಪುಟ್ಟಪ್ಪ (ಕುವೆಂಪು), ಸೇಡಿಯಾಪು ಕೃಷ್ಣಭಟ್ಟ, "ಪ್ರೇಮ ಕವಿ" ಕೆ ಎಸ್ ನರಸಿಂಹಸ್ವಾಮಿ, ಮುಳಿಯ ತಿಮ್ಮಪ್ಪಯ್ಯ , ಪಂಜೆ ಮಂಗೇಶರಾವ್, ಕಡೆಂಗೋಡ್ಲು ಶಂಕರಭಟ್ಟ , ಅಡ್ಯನಡ್ಕ ಕೃಷ್ಣಭಟ್ಟ , ಮಂಜೇಶ್ವರ ಗೋವಿಂದ ಪೈ, ಕಾಸರಗೋಡಿನ ಕಯ್ಯಾರ ಕಿಞ್ಞಣ್ಣ ರೈ , ಸು ರಂ ಎಕ್ಕುಂಡಿ, ಎಸ್ ವಿ ಪರಮೇಶ್ವರ ಭಟ್ಟ , ಕು ಶಿ ಹರಿದಾಸ ಭಟ್ಟ , ಪಾ ವೆಂ ಆಚಾರ್ಯ (ಲಾಂಗೂಲಾಚಾರ್ಯ), ಟಿ ಪಿ ಕೈಲಾಸಂ, ಜಿ ಪಿ ರಾಜರತ್ನo, ವಿ ಸೀತಾರಾಮಯ್ಯ (ವಿ ಸಿ), ಎಸ್ ಡಿ ಇಂಚಲ, ಸೋಮಶೇಖರ ಇಮ್ರಾಪೂರ, ಗೊರೂರು ರಾಮಸ್ವಾಮಿ ಅಯ್ಯಂಗಾರ್ , ಎಚ್ ವಿ ನಂಜುಂಡಯ್ಯ, ಎಂ ಎಸ್ ಪುಟ್ಟಣ್ಣ, ಟಿ ವಿ ವೆಂಕಟಾಚಲ ಶಾಸ್ತ್ರಿ , ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ), ತಿ ತಾ ಶರ್ಮ, ತ ಸು ಶ್ಯಾಮರಾವ್, ಸಿದ್ದವನಹಳ್ಳಿ ಕೃಷ್ಣಶರ್ಮ, ಪಾಟೀಲ್ ಪುಟ್ಟಪ್ಪ (ಪಾ ಪು), ಸಿದ್ದಯ್ಯ ಪುರಾಣಿಕ್ (ಕಾವ್ಯಾನಂದ), ಎಂ ಗೋಪಾಲಕೃಷ್ಣ ಅಡಿಗ, ಎಂ ವಿ ಸೀತಾರಾಮಯ್ಯ (ರಾಘವ) , ನಾ ಕಸ್ತೂರಿ, ಜಿ ಎಸ್ ಶಿವರುದ್ರಪ್ಪ , ಸಾ ಶಿ ಮರುಳಯ್ಯ, "ಕೊರವಂಜಿ" ಯ ಡಾ ಶಿವರಾಂ (ರಾ ಶಿ ), "ಕನ್ನಡ ಕಾದಂಬರಿ ಸಾರ್ವಭೌಮ" ಅ ನ ಕೃಷ್ಣರಾವ್ (ಅ ನ ಕೃ ), ಶಂ ಬಾ ಜೋಶಿ, ಆರ್ ಬಿ ಕುಲಕರ್ಣಿ (ರಾವ್ ಬಹಾದ್ದೂರ್), ಅನಂತ ಕೃಷ್ಣಚಾರ್ಯ ಶಹಾಪುರ (ಸತ್ಯಕಾಮ), ಬಸವರಾಜ ಕಟ್ಟೀಮನಿ, ಎಸ್ ಆರ್ ನಾರಾಯಣ ರಾವ್ (ಭಾರತೀಸುತ), ಶಂ ಗು ಬಿರಾದಾರ್, ಬೆಟಗೇರಿ ಕೃಷ್ಣಶರ್ಮ (ಆನಂದಕಂದ), ವಿ ಕೃ ಗೋಕಾಕ್ (ವಿನಾಯಕ) , ಗೊ ರು ಚನ್ನಬಸಪ್ಪ , ಜಯತೀರ್ಥ ರಾಜಪುರೋಹಿತ, ಕೃಷ್ಣಮೂರ್ತಿ ಪುರಾಣಿಕ್, ಆರ್ ಆರ್ ದಿವಾಕರ್, ರಾಜಶೇಖರ ಭೂಸನೂರಮಠ, ವ್ಯಾಸರಾಯ ಬಲ್ಲಾಳ, ಶಾಂತಿನಾಥ ದೇಸಾಯಿ, "ಕಡಲ ತೀರದ ಭಾರ್ಗವ" ಶಿವರಾಮ ಕಾರಂತ, ಎ ಎನ್ ಮೂರ್ತಿರಾವ್,  ಜಿ ಬಿ ಜೋಶಿ (ಜಡಭರತ ), ಚನ್ನವೀರಕಣವಿ, ಅ ರಾ ಮಿತ್ರ, ಕೋ ಚನ್ನಬಸಪ್ಪ, ಎಂ ಆರ್ ಶ್ರೀನಿವಾಸಮೂರ್ತಿ, ತ ರಾ ಸುಬ್ಬರಾವ್ (ತ ರಾ ಸು), ದೇ ಜವರೇಗೌಡ (ದೇ ಜ ಗೌ), ಎಚ್ ಎಲ್ ನಾಗೇಗೌಡ, ಹೆಚ್ ಶಾಂತರಸ, ಎಲ್ ಎಸ್ ಶೇಷಗಿರಿರಾವ್, ಸಿಂಪಿ ಲಿಂಗಣ್ಣ (ಭರತ), ಬಿ ಜಿ ಎಲ್ ಸ್ವಾಮಿ, ಜಿ ವೆಂಕಟಸುಬ್ಬಯ್ಯ (ಜಿ ವಿ ), ಎಸ್ ಎಲ್ ಭೈರಪ್ಪ , ಸ ಸ ಮಾಳವಾಡ, ಸುಬ್ರಮಣ್ಯರಾಜೇ ಅರಸ್ (ಚದುರಂಗ), ಹಾ ಮಾ ನಾಯಕ್ , ಕೆ ಟಿ ಗಟ್ಟಿ , ಹಂ ಪಾ ನಾಗರಾಜಯ್ಯ (ಹಂಪನಾ), ದೇವೇಂದ್ರಕುಮಾರ ಹಕಾರಿ, ಎಂ ಎಂ ಕಲ್ಬುರ್ಗಿ, ಕ ವೆಂ ರಾಜಗೋಪಾಲ್, ಜಿ ಎಸ್ ಸಿದ್ದಲಿಂಗಯ್ಯ , ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಪಾಟೀಲ್ (ಚಂಪಾ), ಚಂದ್ರಶೇಖರ ಕಂಬಾರ, ಗೌರೀಶ ಕಾಯ್ಕಿಣಿ, ಕುಳಕುಂದ ಶಿವರಾವ್ (ನಿರಂಜನ), ಕೀರ್ತಿನಾಥ ಕುರ್ತಕೋಟಿ, ಗಂಗಾಧರ ಚಿತ್ತಾಲ, ಶಂಕರ್ ಮೊಕಾಶಿ ಪುಣೆಕರ್, ಟಿ ಕೆ ರಾಮರಾವ್, "ಹಾಸ್ಯ ಬ್ರಹ್ಮ" ಬಳ್ಳಾರಿ ಬೀchi, ವಿಜಯ್ ಸಾಸನೂರ್, ಯಶವಂತ ಚಿತ್ತಾಲ, ಪರ್ವತವಾಡಿ ನರಸಿಂಗರಾವ್ (ಪರ್ವತವಾಣಿ), ದಾಶರಥಿ ದೀಕ್ಷಿತ್, "ಚುಟುಕು ಬ್ರಹ್ಮ" ದಿನಕರ ದೇಸಾಯಿ, ಡಾ ಎಂ ಆಕಬರ್ ಅಲಿ, ರಂ ಶ್ರೀ ಮುಗಳಿ, ಬಿ ಎ ಸನದಿ, ನಾ ಡಿಸೋಜ, ಎಂ ಚಿದಾನಂದ ಮೂರ್ತಿ, ಕೆ ಪಿ ಪೂರ್ಣಚಂದ್ರ ತೇಜಸ್ವಿ, ಸಿ ಪಿ ಕೃಷ್ಣ ಕುಮಾರ್ (ಸಿ ಪಿ ಕೆ ), ಎಂ ಎನ್ ವ್ಯಾಸರಾವ್, ಗಿರಡ್ಡಿ ಗೋವಿಂದರಾಜ್, ಬರಗೂರು ರಾಮಚಂದ್ರಪ್ಪ, ದೊಡ್ಡರಂಗೇಗೌಡ, ಕೆ ಚಿದಾನಂದ ಗೌಡ, ಪಿ ಲಂಕೇಶ್, ಅಮೃತ ಸೋಮೇಶ್ವರ, ಕೆ ವಿ ನಾರಾಯಣ, ಶ್ರೀಕೃಷ್ಣ ಆಲನಹಳ್ಳಿ, ಕೃಷ್ಣ ಮಾಸಡಿ, ಸು ರುದ್ರಮೂರ್ತಿ ಶಾಸ್ತ್ರಿ, "ನಿತ್ಯೋತ್ಸವದ ಕವಿ" ನಿಸಾರ್ ಅಹಮದ್, ಸಿದ್ಧಲಿಂಗ ಪಟ್ಟಣಶೆಟ್ಟಿ, ವೇಣುಗೋಪಾಲ ಸೊರಬ, ಸುಮತೀoದ್ರ ನಾಡಿಗ್, ಬಿ ಸಿ ರಾಮಚಂದ್ರ ಶರ್ಮ, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ಬೆಸಗರಹಳ್ಳಿ ರಾಮಣ್ಣ, ಸಂತೋಷ್ ಕುಮಾರ್ ಗುಲ್ವಾಡಿ, ಪಿ ಎಸ್ ರಾಮಾನುಜಂ, ಕುಂ ವೀರಭದ್ರಪ್ಪ, ಬೊಳುವಾರು ಮಹಮ್ಮದ್ ಕುಂಞಿ, ಬಿ ಆರ್ ಲಕ್ಷ್ಮಣ್ ರಾವ್, ವೈ ವಿ ಗುಂಡೂರಾವ್, ಹೆಚ್ ಎಸ್ ವೆಂಕಟೇಶಮೂರ್ತಿ, ಜರಗನಹಳ್ಳಿ ಶಿವಶಂಕರ್, ಜಯಂತ್ ಕಾಯ್ಕಿಣಿ, ಬಿ ಎಲ್ ವೇಣು, ಸಿ ಪಿ ಸಿದ್ಧಾಶ್ರಮ, ಸುಬ್ರಾಯ ಚೊಕ್ಕಾಡಿ, ಅರವಿಂದ ಮಾಲಗತ್ತಿ, ಎಚ್ ದುಂಡಿರಾಜ್ ಹಾಗೂ ಇನ್ನೂ ಅಸಂಖ್ಯಾತ ಲೇಖಕರಿದ್ದಾರೆ.

ನಮ್ಮ ಕನ್ನಡ ನಾಡು ಮತ್ತು ನುಡಿಗೆ ಅನೇಕ ಮಹಿಳಾ ಸಾಹಿತಿಗಳೂ ಸಹ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದು, ಅವರಲ್ಲಿ ಪ್ರಮುಖರೆಂದರೆ ವಚನಕಾರ್ತಿ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ (ಭೀಮೇಶ ಕೃಷ್ಣ), ನಂಜನಗೂಡು ತಿರುಮಲಾoಬ, ಕೊಡಗಿನ ಗೌರಮ್ಮ, ಅನಸೂಯಾ ಶಂಕರ್ (ತ್ರಿವೇಣಿ), ಬಿ ಎನ್ ಸುಬ್ಬಮ್ಮ (ವಾಣಿ), ಎಂ ಕೆ ಇಂದಿರಾ , ಜಯದೇವಿತಾಯಿ ಲಿಗಾಡೆ, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ, ಎನ್ ಪಂಕಜ, ಆರ್ಯಾoಬಾ ಪಟ್ಟಾಭಿ, ನೀಳಾದೇವಿ, ಎಚ್ ಎಸ್ ಪಾರ್ವತಿ , ಎಂ ವಿ ಕನಕಮ್ಮ (ಅಶ್ವಿನಿ), ಯಮುನಾ ಮೂರ್ತಿ, ಟಿ ಸುನಂದಮ್ಮ , ಕಮಲಾ ಹಂಪನಾ, ಚಿ ನ ಮಂಗಳಾ, ವೀಣಾ ಶಾಂತೇಶ್ವರ, ವಿಜಯಾ ದಬ್ಬೆ, ಶೈಲಜಾ ಉಡಚಣ , ಡಾ ಅನುಪಮಾ ನಿರಂಜನ , ಉಷಾ ನವರತ್ನರಾಮ್, ನಿರುಪಮ, ಹೇಮಲತಾ ಮಹಿಷಿ, ಕಾಕೋಳು ಸರೋಜ ರಾವ್, ಮಾಲತಿ ಪಟ್ಟಣಶೆಟ್ಟಿ, ಭಾಗೀರಥಿ ಹೆಗಡೆ, ವೈದೇಹಿ, ಸಾಯಿಸುತೆ, ಗೀತಾ ನಾಗಭೂಷಣ , ಸಾರಾ ಅಬೂಬಕರ್, ಬಾನು ಮುಷ್ತಾಕ್, ವಿದ್ಯುಲ್ಲತಾ ಸಾಸನೂರ್, ಸುಧಾಮೂರ್ತಿ, ಗುಡಿಬಂಡೆ ಪೂರ್ಣಿಮಾ, ಪ್ರತಿಭಾ ನಂದಕುಮಾರ್, ಭುವನೇಶ್ವರಿ ಹೆಗಡೆ, ಎಚ್ ಎಸ್ ಮುಕ್ತಾಯಕ್ಕ, ಧರಣಿದೇವಿ ಮಾಲಗತ್ತಿ ಹಾಗೂ ಸಬೀಹ ಭೂಮಿಗೌಡ ಮುಂತಾದವರನ್ನು ನಾವಿಲ್ಲಿ ಹೆಸರಿಸಬಹುದು.

ಹೀಗೆ ಇನ್ನೂ ಹಲವಾರು ಮಹಿಳೆಯರು ಹಾಗೂ ಮಹನೀಯರು ತಮ್ಮ ಸಂಪದ್ಭರಿತ ಸಾಹಿತ್ಯ ಕೃಷಿಯ ಮೂಲಕ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿ, ಕನ್ನಡ ಸಾಹಿತ್ಯಾಸಕ್ತರಿಗೆ ರಸದೌತಣವನ್ನು ಉಣಬಡಿಸುವುದರೊಂದಿಗೆ ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಲು ಶ್ರಮಿಸಿದ ಸಾಹಿತ್ಯ ಸಾಧಕರ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಈ ಎಲ್ಲಾ ದಿಗ್ಗಜಗಳೊಂದಿಗೆ ಕನ್ನಡ ನಾಡಿನ ಭವ್ಯ ಇತಿಹಾಸ ಪರಂಪರೆಯನ್ನು ಬಿಂಬಿಸುವ ಅನೇಕ ಚಾರಿತ್ರಿಕ ಪಾತ್ರಗಳಾದ ಮಯೂರ ವರ್ಮ, ಇಮ್ಮಡಿ ಪುಲಕೇಶಿ, ಕೃಷ್ಣದೇವರಾಯ, ರಣಧೀರ ಕಂಠೀರವ, ಸರ್ವಜ್ಞ, ಪುರಂದರ ದಾಸ, ಕನಕದಾಸ ಇವುಗಳಿಗೆ ಜೀವತುಂಬಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಅವರೆಲ್ಲರನ್ನು ನಮ್ಮ ಕಣ್ಣೆದುರಿಗೆ ಸಾಕಾರಗೊಳಿಸಿ, ಅಸಂಖ್ಯಾತ ಕನ್ನಡ ಭಕ್ತಿ ಗೀತೆಗಳು ಮತ್ತು ಆಧುನಿಕ ಕನ್ನಡ ಕವಿಗಳ ಭಾವಗೀತೆಗಳನ್ನು ತಮ್ಮ ಸುಮಧುರ ಕಂಠದ ಸುಶ್ರಾವ್ಯ ಗಾಯನದ ಮೂಲಕ ಪ್ರಸ್ತುತಪಡಿಸಿ ಕನ್ನಡಿಗರನ್ನು ರಂಜಿಸಿ, ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಪ್ರಾಧಾನ್ಯತೆ ನೀಡಬೇಕೆಂಬ ಗೋಕಾಕ್ ವರದಿಯ ಅನುಷ್ಠಾನಕ್ಕೆ ನಡೆದ ಚಳವಳಿಗೆ ಹೊಸ ಶಕ್ತಿಯನ್ನು ತುಂಬಿ, ಅದರ ಯಶಸ್ಸಿಗೆ ಕಾರಣಕರ್ತರಾದ ಅಭಿಜಾತ ಕಲಾವಿದ ನಟಸಾರ್ವಭೌಮ ಡಾ ರಾಜಕುಮಾರ್ ರವರು ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿ, ಕನ್ನಡ ಜನಮಾನಸದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.

ಈ ಎಲ್ಲಾ ಮಹನೀಯರು ಹಾಗೂ ಮಹಿಳೆಯರು ನೀಡಿದ ಕೊಡುಗೆಯಿಂದ ಇಂದು ನಮ್ಮ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಅತ್ಯಂತ ಸಂಪದ್ಭರಿತವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ರಾಷ್ಟ ಮಟ್ಟದಲ್ಲಿ ಪೊಡ ಮಾಡುವ ಅತ್ಯುನ್ನತ ಪ್ರಶಸ್ತಿಯಾದ "ಜ್ಞಾನಪೀಠ ಪ್ರಶಸ್ತಿ" ಗೆ ನಮ್ಮ ಕನ್ನಡದ ಒಟ್ಟು ಎಂಟು ಮಂದಿ ಕವಿಗಳು / ಸಾಹಿತಿಗಳು (ಕುವೆಂಪು -1967, ದ ರಾ ಬೇಂದ್ರೆ -1973, ಕೆ ಶಿವರಾಮ ಕಾರಂತ -1977, ಮಾಸ್ತಿ ವೆಂಕಟೇಶ ಅಯ್ಯಂಗಾರ್ -1983, ವಿ ಕೃ ಗೋಕಾಕ್ -1990, ಯು ಆರ್ ಅನಂತಮೂರ್ತಿ - 1994, ಗಿರೀಶ್ ಕಾರ್ನಾಡ್ - 1998 ಮತ್ತು ಚಂದ್ರಶೇಖರ ಕಂಬಾರ -2010) ಭಾಜನರಾಗಿ, ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾದ ಭಾಷೆಯೆoಬ ಹೆಗ್ಗಳಿಕೆಯು ನಮ್ಮ ಕನ್ನಡಕ್ಕೆ ಪ್ರಾಪ್ತವಾಗಿರುವುದು ಕನ್ನಡಿಗರಾದ ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ನಮ್ಮ ಕನ್ನಡ ಭಾಷೆಗೆ ಕೇಂದ್ರ ಸರ್ಕಾರವು "ಶಾಸ್ತ್ರೀಯ ಭಾಷೆ" ಯ ಸ್ಥಾನ ಮಾನವನ್ನು 2008 ರಲ್ಲಿ ಕಲ್ಪಿಸುವ ಮೂಲಕ ಕನ್ನಡವು ಅತ್ಯಂತ ಸರಳ, ಸುಂದರ, ಸಂಪದ್ಭರಿತ, ಘನತೆ ಹಾಗೂ ಗಾಂಭೀರ್ಯತೆಯನ್ನು ಹೊಂದಿರುವ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವುದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ದೊರಕಲಿದೆ ಎಂಬುದು ಒಂದು ಸಂತೋಷದ ಹಾಗೂ ಸ್ವಾಗತಾರ್ಹವಾದ ಬೆಳವಣಿಗೆ.

ಇಂದು ನಮ್ಮ ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರು ನಗರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಒಂದು ಮಹತ್ವಪೂರ್ಣ ಸ್ಥಾನವನ್ನು ಪಡೆದಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾದರೂ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕನ್ನಡದ ಸ್ಥಾನ ಮಾನ ದಿನೇ ದಿನೇ ಕ್ಷೀಣಿಸುತ್ತಿರುವುದು ಕನ್ನಡಿಗರೆಲ್ಲರ ಪಾಲಿಗೆ ಒಂದು ಆತಂಕಕಾರಿ ಬೆಳವಣಿಗೆಯಾಗಿ ಪರಿಣಮಿಸಿದೆಯೆಂದರೆ ಅದು ಅತಿಶಯೋಕ್ತಿಯಲ್ಲ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಇತ್ತೀಚಿಗೆ ನಮ್ಮ ಕನ್ನಡಿಗರು ನಿರ್ಲಕ್ಷಿಸಲ್ಪಟ್ಟು, ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿವುದು ಅತ್ಯಂತ ಖೇದನೀಯ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ನಿಗಾವಹಿಸಿ, ನಮ್ಮ ಕನ್ನಡ ಯುವ ಜನತೆಯ ಹಿತಾಸಕ್ತಿಯನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯ ಮತ್ತು ಅನಿವಾರ್ಯವಾಗಿದೆ.

ನಮ್ಮ ಕನ್ನಡಿಗರನೇಕರು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯಿಂದ ಅತ್ಯುತ್ತಮ ಸಾಧನೆಗೈಯುವುದರೊಂದಿಗೆ ಉದ್ಯಮ ಕ್ಷೇತ್ರದಲ್ಲೂ ಸಹ ಉನ್ನತ ಹುದ್ದೆ / ಪದವಿಗಳನ್ನು ಅಲಂಕರಿಸುವ ಮೂಲಕ ನಮ್ಮ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

ಇದರೊಂದಿಗೆ, ನಮ್ಮ ಹಲವಾರು ಕನ್ನಡಿಗರು ಇಂದು ವಿಶ್ವದಾದ್ಯoತ ಅನೇಕ ರಾಷ್ಟ್ರಗಳಿಗೆ ತಮ್ಮ ಜೀವನೋಪಾಯವನ್ನರಸಿ ವಲಸೆ ಹೋಗಿದ್ದರೂ ಸಹ ತಮ್ಮ ಮೂಲ ಬೇರುಗಳನ್ನು ಮರೆಯದೇ, ವಿದೇಶಿ ನೆಲದಲ್ಲೂ "ಕನ್ನಡ ಸಂಘ" ಗಳನ್ನು ಆರಂಭಿಸಿ ನಮ್ಮ ಕಸ್ತೂರಿ ಕನ್ನಡದ ಸಂಸ್ಕೃತಿಯ ಕಂಪನ್ನು ಪಸರಿಸುವ ಮೂಲಕ, "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯ ಆಶಯದಂತೆ ಬಾಳುತ್ತಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಒಂದು ಹೆಮ್ಮೆಯ ವಿಷಯವಾಗಿದೆ. 

ಪ್ರತಿವರ್ಷವೂ ನಮ್ಮ ರಾಜ್ಯೋತ್ಸವದ ಸಂದರ್ಭವಾದ ನವೆಂಬರ್ 1 ರಂದು ಕರ್ನಾಟಕ ಸರ್ಕಾರವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ನಾಡಿಗೆ ವಿಶಿಷ್ಟ ಕೊಡುಗೆಯನ್ನು ನೀಡಿದ ಸಾಧಕರನ್ನು ಗುರುತಿಸಿ, ಅವರಿಗೆ “ರಾಜ್ಯೋತ್ಸವ ಪ್ರಶಸ್ತಿ” ಯನ್ನು ನೀಡಿ ಗೌರವಿಸುವ ಸಂಪ್ರದಾಯವು ನಿರಂತರವಾಗಿ ನಡೆದು ಬಂದಿದೆ.

ಇಂದು ನಮ್ಮ ರಾಜ್ಯೋತ್ಸವದ ಆಚರಣೆಯು ವರ್ಷಕ್ಕೊಮ್ಮೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿದ್ದು, ಉಳಿದಂತೆ ನಮ್ಮ ಕನ್ನಡಾಭಿಮಾನವು ತೆರೆಮರೆಗೆ ಸರಿದು ಹೋಗುತ್ತಿದೆ. ಆದರೆ, ಕನ್ನಡ ರಾಜ್ಯೋತ್ಸವದ ನವೆಂಬರ್ 1 ರ ಈ ಶುಭ ಸಂದರ್ಭದಲ್ಲಿ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಹಿರಿಮೆ ಮತ್ತು ಗರಿಮೆಗಳನ್ನು ನಿರಂತರ ಉಳಿಸಿ, ಅವುಗಳನ್ನು ಮತ್ತಷ್ಟು ಬೆಳೆಸುವ ದೃಢ ಸಂಕಲ್ಪವನ್ನು ಮಾಡುವ ಮೂಲಕ ಕನ್ನಡಿಗರಾದ ನಾವೆಲ್ಲರೂ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಗಣ್ಯಾತಿಗಣ್ಯರಿಗೆ ಗೌರವಪೂರ್ವಕವಾಗಿ ನಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿ, ನಮ್ಮ ಕರ್ನಾಟಕ ಏಕೀಕರಣದ 70 ನೇ ವರ್ಷಾಚರಣೆಯಾದ ನಮ್ಮ ನಾಡು, ನುಡಿಯ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸೋಣ.

      ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ                             ಶುಭಾಶಯಗಳು 

          "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ,                          ಸಿರಿಗನ್ನಡಂ ಗಲ್ಲಿ ಗಲ್ಲಿಗೆ"

                   "ಜೈ ಕನ್ನಡ ಭುವನೇಶ್ವರಿ"