ದಕ್ಷಿಣದ ಹೆಬ್ಬಾಗಿಲಿನಲ್ಲಿ ಹೋರಾಟದ ಸಿಂಹಗರ್ಜನೆ
ಭಾರತದ ಯಾವುದೇ ಪ್ರಮುಖ ಹೋರಾಟವಾಗಲಿ, ದಕ್ಷಿಣ ಭಾರತದಲ್ಲಿ ಅದು ಪಸರಿಸುವುದು ಕರುನಾಡಿನ ಮೂಲಕವೇ ಎನ್ನುವುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇಸ್ಲಾಂ ದಾಳಿಕೋರರ ವಿರುದ್ಧದ ಯುದ್ಧಗಳಿರಬಹುದು ಅಥವಾ ಆಧುನಿಕ ಕಾಲದ ರಾಷ್ಟ್ರವಾದಿ ಚಿಂತನೆಗಳಿರಬಹುದು, ಕನ್ನಡ ನಾಡು ಸದಾ 'ಭಾರತೀಯತೆ'ಯನ್ನು ಎತ್ತಿಹಿಡಿದ ಪವಿತ್ರ ಬೀಡಾಗಿದೆ.
14ನೇ ಶತಮಾನದ ಆರಂಭದಲ್ಲಿ ದೆಹಲಿ ಸುಲ್ತಾನರ ನಿರಂತರ ದಾಳಿಗಳಿಂದ ದಕ್ಷಿಣ ಭಾರತ ತತ್ತರಿಸಿತ್ತು. ಹೊಯ್ಸಳರ ಪ್ರಮುಖ ನಗರಗಳ ಮೇಲೆ ನಿರಂತರ ದಾಳಿ ನಡೆಯುತ್ತಿತ್ತು. ಮದುರೈನಲ್ಲಿ ಸುಲ್ತಾನರ ಆಳ್ವಿಕೆ ಸ್ಥಾಪನೆಯಾಗಿ, ಮೀನಾಕ್ಷಿ ಹಾಗೂ ಶ್ರೀರಂಗಂನಂತಹ ಪವಿತ್ರ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಸಂಪೂರ್ಣ ನಿಂತುಹೋಗಿದ್ದವು. ಇಂತಹ ಕರಾಳ ಸಮಯದಲ್ಲಿ, ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಹೊಯ್ಸಳ ದೊರೆ ಮೂರನೇ ವೀರಬಲ್ಲಾಳ ತನ್ನ 80ನೇ ವಯಸ್ಸಿನಲ್ಲೂ ಮದುರೈ ಸುಲ್ತಾನರ ಮೇಲೆ ಭೀಕರ ದಾಳಿ ಮಾಡಿದನು. ಯುದ್ಧನೀತಿಯ ಪ್ರಾಮಾಣಿಕತೆ ಮೆರೆದ ಆತ ಮೋಸದಿಂದ ಹತನಾದರೂ, ದಕ್ಷಿಣದಲ್ಲಿ ಆತ ಹಚ್ಚಿದ ಹೋರಾಟದ ಕಿಚ್ಚು ಆರಿರಲಿಲ್ಲ. ಇದು ನಡೆದ ಕೆಲವೇ ದಶಕಗಳ ಒಳಗೆ ವಿಜಯನಗರದ ರಾಜಕುಮಾರ 'ಕುಮಾರ ಕಂಪಣ' ಮದುರೈನಲ್ಲಿದ್ದ ಇಸ್ಲಾಮಿಕ್ ಆಡಳಿತವನ್ನು ಸಂಪೂರ್ಣವಾಗಿ ಕೊನೆಗಾಣಿಸಿ, ಆ ದೇವಾಲಯಗಳಲ್ಲಿ ಮರಳಿ ಪೂಜೆ-ಪುನಸ್ಕಾರಗಳು ಮೊಳಗುವಂತೆ ಮಾಡಿದನು.
ಇಸ್ಲಾಂ ಆಕ್ರಮಣಕಾರರ ವಿರುದ್ಧ ಶತಮಾನಗಳ ಹಿಂದೆಯೇ ಹೊಯ್ಸಳರು ಮತ್ತು ವಿಜಯನಗರದ ಅರಸರು ತೋರಿದ ಇದೇ ಕೆಚ್ಚೆದೆಯ ಪರಂಪರೆ, ಬ್ರಿಟಿಷರ ಕಾಲದಲ್ಲೂ ಮುಂದುವರೆಯಿತು. 1824 ರಷ್ಟು ಹಿಂದೆಯೇ ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ತೊಡೆತಟ್ಟಿ ನಿಂತ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ನೇಣುಗಂಬಕ್ಕೇರಿದರೂ ತಾಯ್ನಾಡಿನ ಜಯಕಾರ ಮೊಳಗಿಸಿದ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಸ್ವಾತಂತ್ರ್ಯ ಹೋರಾಟಕ್ಕೆ ದಾರಿ ತೋರಿದರು.
ತದನಂತರದ ಗಾಂಧೀಯುಗದಲ್ಲಿ, 'ಕರ್ನಾಟಕದ ಸಿಂಹ' ಗಂಗಾಧರರಾವ್ ದೇಶಪಾಂಡೆ, 'ಕರ್ನಾಟಕದ ಗಾಂಧಿ' ಹರ್ಡೇಕರ್ ಮಂಜಪ್ಪ, ಕರ್ನಾಡ್ ಸದಾಶಿವರಾವ್, ಕಡಿದಾಳ್ ಮಂಜಪ್ಪ, ಕಮಲಾದೇವಿ ಚಟ್ಟೋಪಾಧ್ಯಾಯ, ನಿಟ್ಟೂರು ಶ್ರೀನಿವಾಸರಾವ್, 'ವಚನ ಪಿತಾಮಹ' ಫ. ಗು. ಹಳಕಟ್ಟಿ ಅವರಂತಹ ಅಸಂಖ್ಯಾತ ಗಾಂಧೀವಾದಿಗಳು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದರು. ಮತ್ತೊಂದೆಡೆ, ಬ್ರಿಟಿಷರ ಖಜಾನೆಗಳನ್ನು ಲೂಟಿ ಮಾಡಿ ಕ್ರಾಂತಿಯ ಕಹಳೆ ಮೊಳಗಿಸಿದ ವೀರ ಸಿಂಧೂರ ಲಕ್ಷ್ಮಣ ಹಾಗೂ ಬ್ರಿಟಿಷ್ ಅಧಿಕಾರಿಗಳನ್ನು ಬಗ್ಗುಬಡಿದು ಗಲ್ಲಿಗೇರಿದ ಈಸೂರು ಬಂಡಾಯದ ಯುವಕರ ಸಾಹಸಗಾಥೆಗಳು ಕರ್ನಾಟಕದ ಕ್ರಾಂತಿಕಾರಿ ಮುಖವನ್ನು ಅನಾವರಣಗೊಳಿಸಿದವು.
ಈ ಸುದೀರ್ಘ ವೀರ ಪರಂಪರೆಯಲ್ಲಿ ಬಂದು, ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೆಜ್ಜೆಹಾಕಿ,ತದನಂತರ ಭಗತ್ ಸಿಂಗ್ರಂತೆ ಕ್ರಾಂತಿಕಾರಿಯಾಗಿ ಮಾರ್ಪಟ್ಟು ಕೇವಲ 32 ನೇ ವಯಸ್ಸಿಗೆ ಎದೆಯಲ್ಲಿ ಗುಂಡು ತಿಂದು ಹುತಾತ್ಮನಾದ ಕೆಚ್ಚೆದೆಯ ತರುಣನೇ ಮೈಲಾರ ಮಹದೇವಪ್ಪ—ಕರ್ನಾಟಕದ ಸ್ವಾತಂತ್ರ್ಯ ಇತಿಹಾಸದ ಧ್ರುವತಾರೆ.
ಬಾಲ್ಯ ಮತ್ತು ದೇಶಭಕ್ತಿಯ ಬೇರುಗಳು: ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಮಾರ್ತಾಂಡಪ್ಪ ಮತ್ತು ಬಸಮ್ಮ ದಂಪತಿಯ ಪುತ್ರನಾಗಿ 8 ಜೂನ್ 1911ರಂದು ಜನಿಸಿದ ಮಹದೇವಪ್ಪನವರಿಗೆ ಬಾಲ್ಯದಿಂದಲೇ ದೇಶಭಕ್ತಿಯ ಅಪಾರ ಸೆಳೆತವಿತ್ತು. ಶಾಲಾ ದಿನಗಳಲ್ಲೇ ಗಾಂಧೀಜಿಯವರ 'ಯಂಗ್ ಇಂಡಿಯಾ' ಪತ್ರಿಕೆಯನ್ನು ಆಳವಾಗಿ ಓದುತ್ತಿದ್ದ ಅವರು, ತಾಯ್ನಾಡಿನ ಸ್ವಾತಂತ್ರ್ಯದ ಕನಸುಗಳನ್ನು ಕಾಣುತ್ತಿದ್ದರು. ಮುಂದೆ ಸಿದ್ದಮ್ಮನವರನ್ನು ವಿವಾಹವಾದರೂ, ಅವರಿಗೆ ಸಾಂಸಾರಿಕ ಬದುಕಿಗಿಂತ ದೇಶಸೇವೆಯ ತುಡಿತವೇ ಹೆಚ್ಚಾಗಿತ್ತು. ಧಾರವಾಡದ ಯುವ ಸಂಘಟನೆಯ ಸಂಪರ್ಕಕ್ಕೆ ಬಂದ ನಂತರ, ಗಾಂಧೀಜಿಯವರ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಬರಮತಿ ಆಶ್ರಮವನ್ನು ಸೇರಿದರು ಮತ್ತು ಅಲ್ಲಿ ಅತ್ಯಂತ ನಿಕಟ ಹಾಗೂ ಪ್ರೀತಿಯ ಅನುಯಾಯಿಯಾದರು.
ದಂಡಿ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಏಕೈಕ ಕನ್ನಡಿಗ: ಮೈಲಾರ ಮಹದೇವಪ್ಪನವರ ಜೀವನದ ಅತ್ಯಂತ ಪ್ರಮುಖ ಘಟ್ಟವೆಂದರೆ 1930ರ ಐತಿಹಾಸಿಕ 'ಉಪ್ಪಿನ ಸತ್ಯಾಗ್ರಹ' (ದಂಡಿ ಯಾತ್ರೆ). ಬ್ರಿಟಿಷರ ಉಪ್ಪಿನ ಕಾಯ್ದೆಯನ್ನು ಮುರಿಯಲು ಗಾಂಧೀಜಿಯವರು ಸಬರಮತಿಯಿಂದ ದಂಡಿವರೆಗೆ ಪಾದಯಾತ್ರೆ ಕೈಗೊಂಡಾಗ, ಅವರ ಜೊತೆ ಹೆಜ್ಜೆ ಹಾಕಲು ಆಯ್ಕೆಯಾಗಿದ್ದ 78 ಜನ ಕಟ್ಟಾ ಅನುಯಾಯಿಗಳಲ್ಲಿ ಕೇವಲ 18 ವರ್ಷದ ಮಹದೇವಪ್ಪನವರೂ ಒಬ್ಬರಾಗಿದ್ದರು. ಇಡೀ ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಕನ್ನಡಿಗ ಎಂಬ ಐತಿಹಾಸಿಕ ಹೆಗ್ಗಳಿಕೆ ಇವರದ್ದಾಗಿತ್ತು.
ಇವರ ಹೋರಾಟದಲ್ಲಿ ಇವರ ಪತ್ನಿ ಸಿದ್ದಮ್ಮನವರ ಪಾತ್ರವೂ ಅನನ್ಯ. ಶಾಸನ ಭಂಗ ಚಳುವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಕರ್ನಾಟಕದ ಮುಂಚೂಣಿಯ ಮಹಿಳೆಯರಲ್ಲಿ ಸಿದ್ದಮ್ಮನವರೂ ಒಬ್ಬರು. ಜೈಲುವಾಸದ ನಂತರ ಈ ದಂಪತಿ ತಾಯ್ನಾಡಿಗೆ ಮರಳಿದಾಗ ಇಡೀ ನಾಡು ಅವರಿಗೆ ಹೂಮಳೆಯ ಸ್ವಾಗತ ಕೋರಿತು.
ಆಶ್ರಮದ ಸ್ಥಾಪನೆ ಮತ್ತು ರಚನಾತ್ಮಕ ಕಾರ್ಯಗಳು: ಗುಜರಾತ್ನಿಂದ ಮರಳಿದ ನಂತರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಕೊರಡೂರು ಗ್ರಾಮದಲ್ಲಿ ವರದಾ ನದಿಯ ತೀರದಲ್ಲಿ "ಗ್ರಾಮ ಸೇವಾಶ್ರಮ"ವನ್ನು ಸ್ಥಾಪಿಸಿದರು. ಇದು ಕೇವಲ ಆಶ್ರಮವಾಗಿರದೆ, ಯುವಕರಲ್ಲಿ ದೇಶಭಕ್ತಿ ಮೂಡಿಸುವ, ಅಸ್ಪೃಶ್ಯತೆ ನಿವಾರಿಸುವ ಮತ್ತು ಬಡವರಿಗೆ ಉಚಿತ ವೈದ್ಯಕೀಯ ನೆರವು ನೀಡುವ ಕೇಂದ್ರವಾಗಿ ರೂಪುಗೊಂಡಿತು. ಗಾಂಧೀಜಿಯವರ ರಚನಾತ್ಮಕ ಕಾರ್ಯಗಳನ್ನು ಅವರು ಹಳ್ಳಿಹಳ್ಳಿಗಳಿಗೆ ಕೊಂಡೊಯ್ದರು.
ಅಹಿಂಸೆಯಿಂದ ಕ್ರಾಂತಿಯೆಡೆಗೆ: 1942ರ 'ಕ್ವಿಟ್ ಇಂಡಿಯಾ'
1942ರಲ್ಲಿ ಗಾಂಧೀಜಿಯವರು ನೀಡಿದ "ಮಾಡು ಇಲ್ಲವೇ ಮಡಿ" ಕರೆ ಮಹದೇವಪ್ಪನವರ ಜೀವನದ ದಿಕ್ಕನ್ನೇ ಬದಲಿಸಿತು. ಪ್ರಮುಖ ನಾಯಕರನ್ನೆಲ್ಲಾ ಬ್ರಿಟಿಷರು ಬಂಧಿಸಿದಾಗ, ಕೇವಲ ಅಹಿಂಸಾತ್ಮಕ ಪ್ರತಿಭಟನೆಗಳಿಂದ ಬ್ರಿಟಿಷರನ್ನು ಓಡಿಸಲು ಸಾಧ್ಯವಿಲ್ಲ ಎಂಬ ಸತ್ಯ ಮಹದೇವಪ್ಪನವರಿಗೆ ಅರಿವಾಯಿತು. ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರ ಕ್ರಾಂತಿಕಾರಿ ಮಾರ್ಗದಿಂದ ಪ್ರೇರಿತರಾದ ಅವರು, ಬ್ರಿಟಿಷ್ ಆಡಳಿತ ಯಂತ್ರವನ್ನು ಬುಡಮೇಲು ಮಾಡುವ ಕಾರ್ಯತಂತ್ರ ರೂಪಿಸಿದರು:
· ರೈಲ್ವೆ ಹಳಿಗಳನ್ನು ಕೀಳುವುದು ಮತ್ತು ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸುವುದು.
· ಬ್ರಿಟಿಷ್ ಸರ್ಕಾರಿ ಕಚೇರಿಗಳು ಮತ್ತು ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚುವುದು.
· ಬ್ರಿಟಿಷರ ಅಂಚೆ (ಟಪಾಲು) ಚೀಲಗಳನ್ನು ಲೂಟಿ ಮಾಡುವುದು.
· ರೈತರಿಗೆ ಬ್ರಿಟಿಷರಿಗೆ ಕಂದಾಯ ಕಟ್ಟದಂತೆ 'ಕರ ನಿರಾಕರಣೆ' (No Tax) ಚಳುವಳಿಯನ್ನು ಸಂಘಟಿಸುವುದು.
ಅವರ ಈ ಉಗ್ರ ಹೋರಾಟದ ಕಿಚ್ಚು ಮತ್ತು ಯುವಕರನ್ನು ಸಂಘಟಿಸುತ್ತಿದ್ದ ರೀತಿಯನ್ನು ಕಂಡು ಜನ ಅವರನ್ನು ಪ್ರೀತಿಯಿಂದ "ಕರ್ನಾಟಕದ ಭಗತ್ ಸಿಂಗ್" ಎಂದು ಕರೆಯಲಾರಂಭಿಸಿದರು.
ಮರೆಯಲಾಗದ ಕರಾಳ ದಿನ: ಏಪ್ರಿಲ್ 1, 1943: ಬ್ರಿಟಿಷರು ರೈತರಿಂದ ಬಲವಂತವಾಗಿ ವಸೂಲಿ ಮಾಡಿದ್ದ ಕಂದಾಯದ ಹಣವನ್ನು ಹೊಸರಿತ್ತಿಯ ವೀರಭದ್ರಸ್ವಾಮಿ ದೇವಸ್ಥಾನದ ಖಜಾನೆಯಲ್ಲಿ ಇಟ್ಟಿದ್ದರು. ರೈತರ ಹಣವನ್ನು ಮರಳಿ ಅವರಿಗೇ ಹಂಚಬೇಕೆಂದು ನಿರ್ಧರಿಸಿದ ಮಹದೇವಪ್ಪನವರು, 1 ಏಪ್ರಿಲ್ 1943 ರಂದು ತಮ್ಮ ಬೆಂಬಲಿಗರೊಂದಿಗೆ ಹೊಸರಿತ್ತಿಗೆ ಆಗಮಿಸಿದರು.
ಆದರೆ, ಮೊದಲೇ ಮಾಹಿತಿಯನ್ನು ಕಲೆಹಾಕಿದ್ದ ಬ್ರಿಟಿಷರ ವಿಶೇಷ ಪೊಲೀಸ್ ಪಡೆ ದೇವಸ್ಥಾನದ ಸುತ್ತ ಹೊಂಚುಹಾಕಿ ಕುಳಿತಿತ್ತು. ಮಹದೇವಪ್ಪನವರ ಪಡೆಯು ಖಜಾನೆಯತ್ತ ಧಾವಿಸುತ್ತಿದ್ದಂತೆ, ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು. ಕ್ರಾಂತಿಕಾರಿ ಮಾರ್ಗ ಹಿಡಿದಿದ್ದರೂ, ಸಹ-ಭಾರತೀಯರ ಮೇಲೆ ರಕ್ತಪಾತ ಮಾಡಬಾರದೆಂಬ ಗಾಂಧಿ ತತ್ವಕ್ಕೆ ಬದ್ಧರಾಗಿದ್ದ ಮಹದೇವಪ್ಪನವರು, ತಮ್ಮ ಬಳಿ ಬಂದೂಕುಗಳಿದ್ದರೂ ಎದುರಾಳಿ ಭಾರತೀಯ ಪೊಲೀಸರ ಮೇಲೆ ಗುಂಡು ಹಾರಿಸದಂತೆ ತಮ್ಮ ಪಡೆಯವರಿಗೆ ಆದೇಶಿಸಿದರು.
ಬ್ರಿಟಿಷ್ ಪೊಲೀಸರ 3-4 ಗುಂಡುಗಳು ಮಹದೇವಪ್ಪನವರ ಎದೆ ಸೀಳಿದವು. ಕೇವಲ 32ನೇ ವಯಸ್ಸಿಗೆ "ಭಾರತ್ ಮಾತಾ ಕಿ ಜೈ" ಎನ್ನುತ್ತಾ ಆ ವೀರ ನೆಲಕ್ಕುರುಳಿದ. ಅವರ ಜೊತೆಯಲ್ಲೇ ಇದ್ದ ವೀರಯ್ಯ ಹಿರೇಮಠ್ ಮತ್ತು ತೀರಕಪ್ಪ ಮಡಿವಾಳರ ಕೂಡ ಆ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದರು.
ಸ್ಮರಣೆ: ಮೈಲಾರ ಮಹದೇವಪ್ಪನವರ ಬಲಿದಾನ ಕರುನಾಡಿನ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಇವರ ಸ್ಮರಣಾರ್ಥ ಭಾರತ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಹಾಗೂ ಹಾವೇರಿ ರೈಲು ನಿಲ್ದಾಣಕ್ಕೆ ಇವರ ಹೆಸರನ್ನಿಡಲಾಗಿದೆ. ಅಂದು ದಂಡಿ ಯಾತ್ರೆಯಲ್ಲಿ ಗಾಂಧೀಜಿಯವರ ಬೆನ್ನಹಿಂದೆ ನಡೆದಿದ್ದ ಆ 18ರ ಯುವಕ, ಇಂದು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ 'ಕರ್ನಾಟಕದ ಭಗತ್ ಸಿಂಗ್' ಆಗಿ ಅಜರಾಮರನಾಗಿ ಉಳಿದಿದ್ದಾರೆ.
-ಕಿರಣ್ ಬಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!