ದಲಿತ ಹೋರಾಟದ ಒಳನೋಟ ಬರಹ ‘ಕಾಲದ ಕಟ್ಟಳೆ ಮೀರಿ’ ಎಂಬ ಹೆಸರಿನಲ್ಲಿ ಪಿ. ನಂದಕುಮಾರ್ ಅವರು ಬರೆದ ಕೃತಿ ಇದೆ. ಈ ಕೃತಿಗೆ ಅರುಣ್ ಜೋಳದಕೊಡ್ಲಿಗೆ ಅವರು ಮುನ್ನುಡಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು…
“ಗೆಳೆಯ ನಂದಕುಮಾರ್ ಕಳೆದ ವರ್ಷ ೨೦೨೫ ರ ಜನವರಿ ಒಂದರಂದು ತಾನು ಸಿಯುಕೆ ಕನ್ನಡ ವಿಭಾಗಕ್ಕೆ ಸಲ್ಲಿಸಿದ ಸಂಶೋಧನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ವಿದ್ಯಾರ್ಥಿ ನಾಯಕನಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹೋರಾಟ ಪ್ರತಿರೋಧವನ್ನು ಉಸಿರಾಗಿಸಿಕೊಂಡು, ಇದಕ್ಕೆ ತೆರಬೇಕಾದ ಬೆಲೆ ತೆತ್ತೂ ಬೆದರದೆ ಗಟ್ಟಿಯಾಗಿ ನಿಂತ ಸಂಶೋಧನ ವಿದ್ಯಾರ್ಥಿಯಾಗಿ ನಂದಕುಮಾರ್ ಮಾದರಿಯಾಗಿದ್ದಾರೆ. ಪಿಹೆಚ್.ಡಿ ಪಡೆದಾದ ತನ್ನ ಪೇಸ್ ಬುಕ್ ಖಾತೆಯಲ್ಲಿ `ಬಾಲ್ಯದಲ್ಲಿ ನಾನು ನಮ್ಮಪ್ಪ ನಮ್ಮೂರ ಗೌಡ್ರ (ವಾಲ್ಮೀಕಿ ನಾಯಕರು) ಮನಿ ಹೆಂಡಿಕಸ ಬಳ್ಯಾಕ ನಸುಕಿನಲ್ಲಿ ಹೋಗ್ತಿದ್ದ ಸಂದರ್ಭದಲ್ಲಿ ಅದೆಷ್ಟೋಬಾರಿ ಹೇಳ್ತಿದ್ದ `ಎಪ್ಪ ನಂದು ಈ ಹೆಂಡಿಕಸ ಬಳೇದು, ಐದು ರುಪಾಯಿಗೆ ಒಂದ್ ಕಟ್ ಬೀಡಿ ಸಲುವಾಗಿಯೇ ಚಾಕ್ರಿ ಮಡೋದು ನಮ್ ತಲೇಗೆ ಮುಗೀಲಿ. ನೀನಾರೆ ಚಂದ್ ಸಾಲಿ ಕಲ್ತು ದೊಡ್ಡ ಶ್ಯಾಣೆ ಆಗು’ ಎನ್ನುತ್ತಿದ್ದ. ನಮ್ಮಪ್ಪನ ಆಸೆಯಂತೆ ಇವತ್ತು ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಹಕ್ಕಿನ ಮೂಲಕ ಡಾಕ್ಟರೇಟ್ ಪದವಿಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಸಂತೋಷದ ದಿನ. ಅದಲ್ಲದೆ ಭೀಮಾ ಕೋರೇಗಾಂವ ವಿಜಯದ ದಿವಸದಂದು ಈ ಪದವಿಯನ್ನು ಪಡೆದದ್ದು ಅತ್ಯಂತ ಖುಷಿಯಾಗಿದೆ’ ಎಂದು ಬರೆದುಕೊಳ್ಳುತ್ತಾನೆ.
ಕಕ್ಕೇರಾ ಊರಿನೊಂದಿಗೆ ಡೋಹರ ಕಕ್ಕಯ್ಯನ ನಂಟಿದೆ. ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಶರಣನಾದ ಚರ್ಮ ಹದ ಮಾಡುವ ಕಾಯಕದ ಶೂದ್ರ ಸಮುದಾಯದ ಡೋಹಾರ ಕಕ್ಕಯ್ಯ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಹೋರಾಟ ನಡೆಸಿದಾತ. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಕಕ್ಕೇರಿಯ ಬಳಿ ಆತ ಹೋರಾಡುತ್ತ ಹುತಾತ್ಮನಾದನಂತೆ. `ನೆನೆಯಲರಿಯೆ, ನಿರ್ಧರಿಸಲರಿಯೆ, ಮನವಿಲ್ಲವಾಗಿ ಭಾವಿಸಲರಿಯೆ ಭಾವ ನಿರ್ಭಾವವಾಗಿತ್ತಾಗಿ ಧ್ಯಾನ ಮೌನವರಿಯೆ ಧ್ಯಾನಾತೀತ ತಾನಾಯಿತ್ತಾಗಿ ಜ್ಞಾನ ಜ್ಞೇಯಂಗಳೆಲ್ಲ ಮೀರಿ ಅಭಿನವ ಮಲ್ಲಿಕಾರ್ಜುನನಲ್ಲಿ ಪರಮಸುಖಿಯಾಗಿರ್ದೆ’ ಎಂದು ವಚನ ಕಟ್ಟುತ್ತಾರೆ. ಹೀಗೆ ವಚನ ಪರಂಪರೆಯ ಹೋರಾಟದ ಒಂದು ಎಳೆ ದಾಟಿ ಹೋದ ಕಕ್ಕೇರಾದ ನಂದಕುಮಾರ್ ಈ ಕಾಲದಲ್ಲಿ ಭರವಸೆ ಹುಟ್ಟಿಸುವ ಯುವ ಕವಿ, ಕಥೆಗಾರ, ಸಂಶೋಧಕ.
ದಲಿತ ಆತ್ಮಕಥನಗಳ ಬಗ್ಗೆ ಈ ಕೃತಿಯಲ್ಲಿ ಗಮನಸೆಳೆಯಲಾಗಿದೆ. ದಲಿತ ಆತ್ಮಕಥನಗಳ ಅಧ್ಯಯನಗಳ ಸಮೀಕ್ಷೆಯೂ ಇಲ್ಲಿದೆ. ಈ ಸಂಕಲನದ ಮುಖ್ಯ ಲೇಖನಗಳಲ್ಲಿ ಒಂದಾದ `ದಲಿತ ಅನುಭವ ಕಥನ ತಾತ್ವಿಕ ನೆಲೆಗಳು’ ಬರಹದಲ್ಲಿ ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಆತ್ಮಕಥನಗಳು ಹೇಗೆ ರೂಪು ಪಡೆದವು ಎಂದು ವಿಶ್ಲೇಷಣೆ ಮಾಡುತ್ತಲೇ ದಲಿತ ಅತ್ಮಕಥೆಗಳ ಒಳನೇಯ್ಗೆಯ ಎಳೆಗಳನ್ನು ಚರ್ಚಿಸಲಾಗಿದೆ. ಇದು ದಲಿತ ಸಮುದಾಯದ ಹೊಸ ತಲೆಮಾರಿನ ದೃಷ್ಟಿಕೋನವನ್ನೂ ಕೂಡ ಕಾಣಿಸುತ್ತಿದೆ. ಆತ್ಮಕಥನಗಳ ಅಧ್ಯಯನ ಮಾಡುವವರಿಗೆ ದಮನಿತ ನೆಲೆಯ ಒಂದು ನೆಲೆಯ ದೃಷ್ಟಿಕೋನವನ್ನು ಒದಗಿಸುತ್ತದೆ.ದಲಿತ ಆತ್ಮಕಥೆಗಳಲ್ಲಿ ನಿರೂಪಿತಗೊಂಡ ಬಡತನ ಮತ್ತು ಹಸಿವಿನ ಬಗೆಗಿನ ವಿಶ್ಲೇಷಣೆಯು ಗಮನಸೆಳೆಯುತ್ತದೆ. ಡಾ.ಅಪ್ಪಗೆರೆ ಸೋಮಶೇಖರ ಅವರು ನಿರೂಪಿಸಿದ ತಂಬೂರಿ ರಾಜಮ್ಮನ ಆತ್ಕಕಥೆಯ ಬಗ್ಗೆ ಬರೆಯುತ್ತಾ, ತಳಸಮುದಾಯದ ಸಾಂಸ್ಕೃತಿಕ ಕಥನ ತಮ್ಮ ವಯಕ್ತಿಕ ನೋವು ನಲಿವುಗಳ ಒಡಲೊಳಗೆ ಹೇಗೆ ರೂಪುತಳೆಯುತ್ತದೆ ಎನ್ನುವುದನ್ನು ವಿಶ್ಲೇಷಿಸಲಾಗಿದೆ. ದಲಿತ ಆತ್ಮಕಥನಗಳ ಕುರಿತ ವಿಶ್ಲೇಷಣೆಯು ಚಳವಳಿಗಾರರ ಬದುಕು ಮತ್ತು ಹೋರಾಟ ಒಂದಕೊಂದು ಪೂರಕವಾಗಿರುವ ಬಗೆಗಿನ ವಿಶ್ಲೇಷಣೆಗೆ ಒಳನೋಟಗಳಿಂದ ಕೂಡಿದೆ. ಈ ಬರಹಗಳಲ್ಲಿ ದಲಿತ ಸಮುದಾಯದ ಹೊಸ ತಲೆಮಾರಿನ ತಲ್ಲಣಗಳ ನೋಟವೂ ಬೆರೆತಿದೆ.
ಈ ಕೃತಿಯ ಎರಡನೆ ಭಾಗದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ ಮಾಡಲಾಗಿದೆ. ಇದು ದಲಿತ ಆತ್ಮಕಥನದ ಮುಂದುವರಿದ ಭಾಗದಂತೆಯೂ, ಈ ಆತ್ಮಕಥನಗಳ ಒಡಲೊಳಗಿನ ಕಿಚ್ಚಿನಂತೆಯೂ ಕಾಣುತ್ತದೆ. ಇಲ್ಲಿ ಮುಖ್ಯವಾಗಿ ಭಾರತದ ದಲಿತ ಚಳವಳಿಗಳ ಬಗ್ಗೆ ಚರ್ಚಿಸುತ್ತಾ, ಕರ್ನಾಟಕದ ದಲಿತ ಚಳವಳಿಯ ೫೦ ವರ್ಷದ ಹೋರಾಟದ ಅವಲೋಕನ ನಡೆಸುತ್ತಾ ಕಲ್ಯಾಣ ಕರ್ನಾಟಕ ದಲಿತ ಚಳವಳಿಯ ಸಾಂಸ್ಕೃತಿಕ ಪ್ರತಿರೋಧದ ನೆಲೆಗಳನ್ನು ಕಟ್ಟಿಕೊಡುತ್ತಾರೆ. ಈ ಬರಹಗಳು ದೇಶ-ಕಾಲದ ವ್ಯತ್ಯಾಸ ಮತ್ತು ಅದರೊಳಗೆ ಹಾದುಹೋದ ಸಮಾನ ಎಳೆಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ದಲಿತ ಚಳವಳಿಯ ಜತೆ ಜತೆಗೆ ವಚನ ಚಳವಳಿಯನ್ನು ಬೆಸೆಯಲೆತ್ನಿಸಿರುವುದು ಗಮನ ಸೆಳೆಯುತ್ತದೆ. ರಜಾಕಾರರ ವಿರುದ್ಧ ಬಂಡಾಯದ ದನಿ ಮೊಳಗಿಸಿದ ಮಲ್ಲಪ್ಪ ಕಾಂಗ್ರೇಸ್ ಕುರಿತ ಹೊಸ ಬಗೆಯ ಲೇಖನವಿದೆ. ಈ ಲೇಖನ ಹೈ-ಕ ವಿಮೋಚನ ಹೋರಾಟದಲ್ಲಿ ಭಾಗವಹಿಸಿದ ದಲಿತ ಕೆಳಜಾತಿಗಳ ಚಳವಳಿಯ ಸಂಗಾತಿಗಳ ಅಧ್ಯಯನದ ಅಗತ್ಯವನ್ನು ಮನವರಿಕೆ ಮಾಡುತ್ತದೆ.
ಈ ಕೃತಿಯ ಕೊನೆಯ ಭಾಗದಲ್ಲಿ ನಂದಕುಮಾರ್ ಅವರ ಸಿಟ್ಟು ಸೆಡವು ವಾಸ್ತವದ ಜತೆಗಿನ ಗುದ್ದಾಟ ದಾಖಲಾಗಿದೆ. ಮೇಲಿನ ಬರಹಗಳಲ್ಲಿ ಒಂದಷ್ಟು ನಿರ್ಲಿಪ್ತತೆಯ ದಾಟಿ ಕಂಡುಬಂದರೆ ಈ ಭಾಗದಲ್ಲಿ ವ್ಯವಸ್ಥೆಯ ಬಗೆಗಿನ ಒಳಗಿನ ಕುದಿ ಎದ್ದು ಕಾಣುತ್ತದೆ. ತೀರಾ ಈಚೆಗೆ ಯುಜಿಸಿ ಜಾರಿಗೊಳಿಸಿದ ಸಮಾನತೆ ಕಾಯ್ದೆಯನ್ನು ಮನುವಾದಿಗಳು ವಿರೋಧಿಸುತ್ತಿರುವ ರಾಜಕಾರಣವನ್ನು ಒಬ್ಬ ವಿದ್ಯಾರ್ಥಿಯಾಗಿ ಪ್ರತಿರೋಧವನ್ನು ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ರೋಹಿತ್ ವೇಮುಲ ಆಕ್ಟ್ ಜಾರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನಂದಕುಮಾರ್ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಸಹಜವಾಗಿ ಈ ಯುಜಿಸಿ ಸಮಾನತೆಯ ಕಾಯ್ದೆಯನ್ನು ಬೆಂಬಲಿಸಿ, ಇದರ ವಿರೋಧದ ಹಿಂದಣ ಮನುವಾದಿ ರಾಜಕಾರಣವನ್ನು ಕಟುವಾಗಿ ವಿರೋಧಿಸಿದ್ದಾರೆ. ಹಾಗಾಗಿ ಇಲ್ಲಿನ ಬರಹಗಳನ್ನು ಸಂಶೋಧಕನ ದೃಷ್ಟಿಕೋನಕ್ಕಿಂತ ವಿದ್ಯಾರ್ಥಿದೆಸೆಯ ಆಕ್ಟಿವಿಜಮ್ಮಿನ ಆಯಾಮ ಕಾಣುತ್ತದೆ.ಸಾಮ್ರಾಟ ಅಶೋಕನ ನಾಡಿನಲ್ಲಿ ಸಂಘಪರಿವಾರ ಹೇಗೆ ಬಲಗೊಳ್ಳುತ್ತಿದೆ ಎನ್ನುವುದನ್ನು ಬಹಳ ನಿರ್ಭಿಡೆಯಾಗಿದೆ ದಾಖಲಿಸಿದ್ದಾರೆ. `ರಾಷ್ಟ್ರದ ಕಲ್ಪನೆ ಸಂವಿಧಾನದ ಕಣ್ಣಿನಲ್ಲಿ’ ಲೇಖನದಲ್ಲಿ ಹಸಿವಿಲ್ಲದ, ಅಸ್ಪೃಷ್ಯತೆ ಇಲ್ಲದ, ಅಸಮಾನತೆ ಇಲ್ಲದ, ಕೋಮು ಗಲಬೆಗಳಿಲ್ಲದ, ಲಿಂಗತಾರತಮ್ಯಗಳಿಲ್ಲದ, ಜಾತಿ ಶೋಷಣೆಯಿಲ್ಲದ ಕಲಿಕೆಯನ್ನೂ ಒಳಗೊಂಡಂತೆ ಬುದ್ಧ ಬಸವ ಅಂಬೇಡ್ಕರರ ಕನಸಿನ ಭಾರತದ ಕನಸನ್ನು ನಂದಕುಮಾರ್ ಕಾಣುತ್ತಿದ್ದಾರೆ. ಬಹುಶಃ ಇದು ಎಲ್ಲಾ ದಮನಿತ ಸಮುದಾಯಗಳ ಯುವಕ ಯುವತಿಯರ ಕನಸೂ ಆಗಿದೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!