ಶ್ರೀಧರ ಗಸ್ತಿ ಅವರ ನೂತನ ಕಥಾ ಸಂಕಲನ ‘ಕೆಂಡದ ಧೂಳೋ’ ಇತ್ತೀಚೆಗೆ ಪ್ರಕಟವಾಗಿದೆ. ಇವುಗಳು ‘ಸಮಾನತೆಯೇ ಕೇಂದ್ರ ಕಾಳಜಿಯಾಗುಳ್ಳ ಕಥೆಗಳು’ ಎಂದು ಮುನ್ನುಡಿಯನ್ನು ಬರೆದ ಕತೆಗಾರ್ತಿ ಸುನಂದಾ ಕಡಮೆ ಅಭಿಪ್ರಾಯ ಪಡುತ್ತಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಇಲ್ಲಿ ಒಂಬತ್ತು ಕತೆಗಳಿದ್ದು ಶೀರ್ಷಿಕೆಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ ಮತ್ತು ಹೆಚ್ಚಾಗಿ ಗ್ರಾಮೀಣ ಭಿತ್ತಿಯ ಜನಜೀವನ ಇಲ್ಲಿ ಸೆರೆಹಿಡಿಯಲ್ಪಟ್ಟಿದೆ. ಸಮಾನತೆಯ ಹುಡುಕಾಟ ಎಲ್ಲ ಕಥೆಗಳ ಕೇಂದ್ರ ಕಾಳಜಿಯಾಗಿದೆ. ಹಳ್ಳಿಗಳಲ್ಲಿ ಕಾಣುವ ಜಾತಿ, ಅಂತಸ್ಸು, ಸಣ್ಣತನ, ಪ್ರೀತಿ-ಪ್ರೇಮ, ನಿರುದ್ಯೋಗ, ಭಾವನಾತ್ಮಕ ಸಂಬಂಧಗಳು, ಮಾನಸಿಕ ಶೋಭೆ, ಅಮಾಯಕ ಮಹಿಳೆಯರ ಮೇಲಾಗುವ ಅತ್ಯಾಚಾರ, ಪೆನ್ಡ್ರೈವ್ ಪ್ರಕರಣ, ದುರ್ನಡತೆಯವರ ನಿಗೂಢ ಹತ್ಯೆ, ಅನಾಥ ಮಕ್ಕಳ ಬದುಕು, ರಾಜಕೀಯ ಧುರೀಣರ ಅನೀತಿ, ಪಟ್ಟಣದಲ್ಲಿ ಬೆಳೆದು ನಿಂತ ವೇಶ್ಯಾಗೃಹಗಳು, ಈ ಎಲ್ಲ ಸಂಗತಿಗಳು ಇವರ ಕತೆಗಳಲ್ಲಿ ಮತ್ತೆ ಮತ್ತೆ ಕಾಣುತ್ತ ನಮ್ಮನ್ನು ತಲ್ಲಣಿಸುವಂತೆ ಮಾಡುತ್ತವೆ.
ಇಲ್ಲಿಯ 'ದಡ ಸೇರದ ಅಲೆಗಳು' ಕಥೆಯಲ್ಲಿ 'ಸ್ವಾತಂತ್ರ್ಯ ಗೀತಂತ್ರ ಎಲ್ಲಾ ನಮ್ಮಂಥೋರಿಗಲ್ಲಪಾ, ಅದು ಉಳ್ಳವರಿಗೆ ಮಾತ್ರ' ಎಂಬ ಮಾತು ಬರುತ್ತದೆ. ಚೋಮ ತನ್ನ ಸಾಕು ಮಕ್ಕಳಿಗೆ ಹೇಳುವ ಮಾತಿದು. ಸ್ವಾತಂತ್ರ್ಯ ಸಿಕ್ಕು ಎಂಬತ್ತು ವರ್ಷಗಳಾದರೂ ಇವತ್ತಿನ ವಾಸ್ತವವನ್ನು ಚೋಮ ಇಲ್ಲಿ ಅನೂಚಾನ ಪುನರುಚ್ಚರಿಸುತ್ತಾನೆ. ಅನಾಥ ಮಕ್ಕಳಿಗೆ ಆಸರೆಯಾಗಿದ್ದ ಚೋಮ ಮತ್ತು ಮೈನಾವತಿ, ಬುಡಕಟ್ಟು ಜನಾಂಗದ ಅಭಿವೃದ್ಧಿ ನಿಗಮದ ಯೋಜನೆಯಡಿ ಸ್ವ-ಉದ್ಯೋಗ ಮಾಡಿ ಊಹಿಸಲಾರದ ರೂಪದಲ್ಲಿ ಹಣ-ಹೆಸರು ಎರಡನ್ನೂ ಪಡೆದುಕೊಳ್ಳುತ್ತಾರೆ. ತದನಂತರ ಕತೆ ಪತ್ತೆದಾರಿ ಅಂಶವನ್ನು ಒಡಲಲ್ಲಿಟ್ಟುಕೊಂಡು ಬೆಳೆಯುತ್ತದೆ. ಅಂತೆಯೇ ಕುತೂಹಲ ಹೆಚ್ಚಿಸಿಕೊಳ್ಳುತ್ತ ಹೋಗುತ್ತದೆ.
ಸಾವಕಾರ ದೊಡ್ಡಯ್ಯನ ನೀಚತನವನ್ನು ಹೇಳುವ ಕಥೆ 'ಕೆಂಡದ ಧೂಳೋ' ಅದರಲ್ಲಿಯೂ 'ಗೋಲ್ಡ್ ಮೆಡಲ್ ಕೊಟ್ಟ ವ್ಯವಸ್ಥೆ ಒಂದು ನೌಕರಿ ಕೊಡಲು ವಿಫಲವಾಗಿದೆ' ಎಂಬ ಮಾತು ಬರುತ್ತದೆ. ಪಿಎಚ್ ಡಿ ಪದವೀಧರ ಅರುಣ ಕೆಲಸವಿಲ್ಲದೇ ಪಂಚಾಯ್ತಿಯ ವಾಟರ್ ಮ್ಯಾನ್ ಕೆಲಸಕ್ಕಾದರೂ ಹೋಗುವ ಸ್ಥಿತಿ ಇರುತ್ತದೆ, ಆದರೆ ಅವನ ಕ್ಲಾಸ್ಮೇಟ್ ಒಬ್ಬ 'ಗೋಲ್ಡ್ ಮೆಡಲ್ ಎಗ್ರೈಸ್ ಸೆಂಟರ್' ತೆಗೆದು ಹೊಟ್ಟೆಹೊರೆಯುತ್ತಾನೆ, ಧರ್ಮವೇ ಮುಖ್ಯವಾದ ಇಂದಿನ ರಾಜಕೀಯ ಪ್ರೇರಿತ ಸಮಾಜದಲ್ಲಿ ಇದು ಸಹಜ ಎಂಬಂತೆ ತೋರಿಬರುತ್ತಿದೆ. ಪ್ರಭುತ್ವಕ್ಕೆ ಪದವಿಗಳನ್ನು ನೀಡುವುದು ಗೊತ್ತೇ ಹೊರತು ಪದವೀಧರರಿಗೆ ಉದ್ಯೋಗ ನೀಡುವುದರ ಬಗ್ಗೆ ಚಿಂತನೆಯಿಲ್ಲ. ಇದು ವಾಸ್ತವ.” ಎಂದು ಕಥೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಬರಹಗಾರ್ತಿ ಡಾ. ಸರಜೂ ಕಾಟ್ಕರ್. ಅವರು ಬರೆದ ಕೆಲವು ಸಾಲುಗಳು… “ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಶ್ರೀಧರ ಗಸ್ತಿಯವರು ಸೂಕ್ಷ್ಮ ಕಥೆಗಳನ್ನು ಹೆಣೆಯುತ್ತಾರೆ. ಹೀಗಾಗಿ ಅವರ ಕಥೆಗಳಲ್ಲಿ ಶೋಷಿತರ ಧ್ವನಿ ಕೇಳಿಸುತ್ತದೆ; ಉಳ್ಳವರ ಅಹಂಕಾರದ ಠೇಂಕಾರವು ಕಾಣಿಸುತ್ತದೆ. ಸಮ ಮತ್ತು ಸುಂದರ ಸಮಾಜದ ಆಶಯವನ್ನು ಹೊಂದಿರುವ ಅವರ ಕಥೆಗಳು ಎಲ್ಲ ಬಡಜನರು, ಅಸಹಾಯಕರು, ಶೋಷಣೆಗೆ ಒಳಪಟ್ಟವರು - ಹೀಗೆ ನಾನಾ ನಮೂನೆಯ ನಿರ್ಲಕ್ಷಿತ ಜನರ ಒಳತೋಟಿಯ ಅಂತರ್ ಧ್ವನಿಯಾಗಿವೆ.
ಗ್ರಾಮೀಣ ಪ್ರದೇಶದಿಂದ ಬಂದಿರುವ ಶ್ರೀಧರ ಗಸ್ತಿಯವರಿಗೆ ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಪರಿಚಯವಿದೆ. ಅಲ್ಲಿ ನಡೆಯುವ ಸಂಚು, ಒಳಸಂಚು, ದಗಲಬಾಜಿತನ, ವಂಚನೆ ಇವುಗಳ ಜೊತೆಗೆ ಸುಳಿಗಾಳಿಯಂತೆ ಸುಳಿಯುವ ಮಾನವೀಯ ಗುಣಗಳು, ಜಾತಿ, ಮತ ಧರ್ಮಗಳನ್ನು ಮೀರಿ ಮನುಷ್ಯತ್ವವನ್ನು ಪ್ರತಿಪಾದಿಸುವ ಒಳ್ಳೆಯತನ ಈ ಎಲ್ಲ ಅಂಶಗಳು ಗಸ್ತಿಯವರ ಕಥೆಗಳ ಕಚ್ಚಾ ವಸ್ತುಗಳಾಗಿವೆ. ಓದುಗರೆದರು ಗ್ರಾಮೀಣ ಪರಿಸರವನ್ನು ಜೀವಂತವಾಗಿ ಅನಾವರಣಗೊಳಿಸಿರುವುದು ಶ್ರೀಧರ ಗಸ್ತಿಯವರ ಕಥೆಗಳ ವೈಶಿಷ್ಟವಾಗಿದೆ.”
ಸುಮಾರು ೧೦೦ ಪುಟಗಳ ಈ ಕಥಾ ಸಂಕಲನವನ್ನು ಶ್ರೀಧರ ಗಸ್ತಿ ಅವರು “ಹೊತ್ತಿ ಉರಿಯುವ ಬದುಕಿನ ಬೆಂಕಿಯಲ್ಲಿ ಕನಸಿನ ಕಿಡಿಯನ್ನು ಕಾಯುವ ಕೈಗಳಿಗೆ ಈ ಕೆಂಡದ ಧೂಳೋ” ಅರ್ಪಣೆ ಮಾಡಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!