ಕೊನೆಯ ಮನೆ

ತೆಲುಗು ಮೂಲ: ಬುದ್ಧಿ ಯಜ್ಞಮೂರ್ತಿ

ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

ಮಾಲೂರದ ಪಟಾಲಮ್ಮ ಬೀದಿಯ ಕೊನೆಯಲ್ಲಿ ಒಂದು ಹಳೆಯ ಮನೆಯ ಅಡುಗೆ ಮನೆ. ಬೆಳಿಗ್ಗೆ ಎಂಟು ಗಂಟೆ ಸಮಯ. ಸೂರ್ಯನ ಕಿರಣಗಳು ಕಿಟಕಿಯ ಜಾಲಿಯ ಮೂಲಕ ಗೋಡೆಗಳ ಮೇಲೆ ನೆರಳುಗಳನ್ನು ಬಿಡಿಸುತ್ತಿದ್ದವು. ನಿವೃತ್ತ ಶಾಲಾ ಶಿಕ್ಷಕ ರಾಜೇಂದ್ರ ಟೇಬಲ್ ಬಳಿ ಕುಳಿತು ದೋಸೆಯನ್ನು ಸಣ್ಣ ತುಂಡುಗಳಾಗಿ ಮಾಡುತ್ತಿದ್ದರು. ಅವರ ಎದುರಿನಲ್ಲಿ ಆರು ಅಡಿ ಚಾಪೆಯ ಮೇಲೆ ಕುಳಿತು ಶೋಭನಾ ತೆಂಗಿನಕಾಯಿ ಚಟ್ನಿಯನ್ನು ಒಂದು ಬಟ್ಟಲಿನಲ್ಲಿ ಬೆರೆಸುತ್ತಿದ್ದರು. ಅವರ ನಡುವೆ ನೆಲದ ಮೇಲೆ ವಯಸ್ಸಾಗುತ್ತಿರುವ ಸಾಕು ನಾಯಿ ಬಂಟಿ, ಸ್ಟೀಲ್ ಬಟ್ಟಲಿನಲ್ಲಿ ನೀರು ಕುಡಿಯುವ ಸದ್ದು ಮಾಡುತ್ತಿತ್ತು. ಅದರ ಬಾಲ ನೆಲಕ್ಕೆ ಬಡಿಯುತ್ತ, ಏಳುತ್ತ ಒಂದು ಲಯದಲ್ಲಿ ಓಲಾಡುತ್ತಿತ್ತು.

ತನ್ನ ತಟ್ಟೆಯಲ್ಲಿ ಶೋಭನಾ ಹಾಕಿದ ತೆಂಗಿನಕಾಯಿ ಚಟ್ನಿಯೊಂದಿಗೆ ಒಂದು ದೋಸೆ ತುಂಡನ್ನು ಬಾಯಿಗೆ ಹಾಕಿ ರಾಜೇಂದ್ರ ಅಗಿದರು. "ಈ ಮನೆಯನ್ನು ಮಾರಾಟ ಮಾಡೋಣ ಎಂದುಕೊಂಡಿದ್ದೇನೆ.." ಎಂದರು. ಅವರ ಧ್ವನಿ ಶೋಭನಾಗೆ ಭಾರವಾಗಿ ಕೇಳಿಬಂತು. ಈ ಬಾರಿ ಎಂದಿನಂತೆ ಪಾಠ ಓದಿದಂತೆ ಇರಲಿಲ್ಲ. ಜೀವನದಲ್ಲಿ ತೆಗೆದುಕೊಳ್ಳುವ ದೊಡ್ಡ ನಿರ್ಧಾರದಂತೆ ಅನಿಸಿತು.

ತೆಂಗಿನಕಾಯಿ ಚಟ್ನಿ ತಿರುಗಿಸುತ್ತಿದ್ದ ಸೌಟು ಒಂದು ಕ್ಷಣ ನಿಂತಿತು. ಪತಿಯತ್ತ ನೋಡಿದರು ಶೋಭನಾ. ಅವರ ಕಣ್ಣುಗಳಲ್ಲಿ ಆಶ್ಚರ್ಯಕ್ಕಿಂತ ಒಂದು ರೀತಿಯ ಆತಂಕವಿತ್ತು. "ಮಾರಾಟ ಮಾಡೋಣವಾ? ಈ ಮನೆಯನ್ನಾ?" ಅವರ ಧ್ವನಿ ದುರ್ಬಲವಾಗಿ, ಬಹುತೇಕ ಪಿಸುಗುಟ್ಟಿದಂತೆ ಕೇಳಿಸಿತು. ಚಟ್ನಿ ಬಟ್ಟಲನ್ನು ಪಕ್ಕಕ್ಕೆ ತಳ್ಳುತ್ತಾ, "ಈ ಮನೆಯಲ್ಲಿ ನಮ್ಮ ಜೀವನವೆಲ್ಲಾ ಕಳೆದಿದೆ ಮರೆತಿರಾ? ಈ ಅಡುಗೆಮನೆಯಲ್ಲಿ ನಾನು ಮೊದಲ ಬಾರಿ ಹಾಲು ಉಕ್ಕಿಸಿದ ದಿನ, ಬಂಟಿ ಚಿಕ್ಕ ನಾಯಿಮರಿಯಾಗಿ ಈ ಹೊಸ್ತಿಲಿಂದ ಒಳಗೆ ಜಿಗಿದ ದಿನ.." ಶೋಭನಾ ಮಾತುಗಳು ನಿಂತವು. ಅವರ ಕಣ್ಣುಗಳು ಗೋಡೆಯ ಮೇಲೆ ಸುಣ್ಣ ಕಳಚಿದ ಜಾಗದಲ್ಲಿ ನಿಂತವು.. ಹಳೆಯ ನೆನಪುಗಳನ್ನು ನೋಡುತ್ತಿರುವಂತೆ.

ರಾಜೇಂದ್ರ ನಕ್ಕರು, ಸ್ವಲ್ಪ ಹಾಸ್ಯದ ಧೋರಣೆಯಲ್ಲಿ. "ಶೋಭಾ.. ನೆನಪುಗಳು ನಮ್ಮ ಹೃದಯದಲ್ಲಿರುತ್ತವೆ, ಮನೆಯಲ್ಲಿ ಅಲ್ಲ. ಇಷ್ಟು ದೊಡ್ಡ ಮನೆ, ಈ ಹಳೆಯ ಗೋಡೆಗಳು, ಉದುರಿಹೋಗುತ್ತಿರುವ ಸುಣ್ಣ, ಸೋರುತ್ತಿರುವ ಸೂರು.. ಎಲ್ಲವೂ ನಮಗೆ ಭಾರವಾಗುತ್ತಿವೆ. ನಾವಿಬ್ಬರು, ಬಂಟಿ.. ನಮಗೆ ಒಂದು ಎರಡು ಕೊಠಡಿಗಳ ಮನೆ ಸಾಕು. ಅಪಾರ್ಟ್‌ಮೆಂಟ್‌ಗಳು ಬರುತ್ತಿವೆಯಲ್ಲಾ. ಆರಾಮದಾಯಕವಾದ ಒಂದು ಸಿಂಗಲ್ ಬೆಡ್‌ರೂಂ ಫ್ಲಾಟ್ ತೆಗೆದುಕೊಳ್ಳೋಣ." ಎಂದು ಒಂದು ದೋಸೆ ತುಂಡನ್ನು ಬಂಟಿಯ ಕಡೆಗೆ ಎಸೆದರು. ಅದು ಅದನ್ನು ಚಟಕ್ಕನೆ ಬಾಯಿಯಲ್ಲೇ ಹಿಡಿದುಕೊಂಡಿತು.

ಶೋಭನಾ ಮುಖದಲ್ಲಿ ಒಂದು ಸಣ್ಣ ಹಟಮಾರಿತನ. ರಾಜೇಂದ್ರರನ್ನು ಒಂದು ಶಾಲಾ ಹುಡುಗನನ್ನು ನೋಡಿದಂತೆ ನೋಡಿದರು. "ಫ್ಲಾಟಾ? ಅಲ್ಲಿ ಬಂಟಿಗೆ ಆಡಲು ಜಾಗವೆಲ್ಲಿರುತ್ತದೆ? ಅದು ಸಹ ನಮ್ಮಂತೆ ಲಿಫ್ಟ್ ಹತ್ತಲು ಕಲಿಯಬೇಕಾ? ಸ್ವಾಮೀ.. ನೀವು ಸೌಕರ್ಯಗಳ ಬಗ್ಗೆ ಮಾತನಾಡುತ್ತಿದ್ದೀರಿ, ಈ ಮನೆಯ ಹೊಸ್ತಿಲಿನಿಂದ ಬರುವ ಗಾಳಿ, ಈ ಮಣ್ಣಿನ ವಾಸನೆ.. ಅಲ್ಲಿ ಸಿಗುತ್ತವಾ?" ತೆಂಗಿನಕಾಯಿ ಚಟ್ನಿಯ ಮೆಣಸಿನಕಾಯಿಯ ಖಾರ ಅವರ ಮಾತುಗಳಲ್ಲೂ ಇತ್ತು.

ಏನೋ ಅರ್ಥವಾದಂತೆ ಬಂಟಿ ನೀರಿನ ಬಟ್ಟಲನ್ನು ಬಿಟ್ಟು ಶೋಭನಾ ಕಾಲುಗಳ ಬಳಿ ಬಂದು ಕುಳಿತಿತು. ಅವರ ಹೃದಯದ ಆತಂಕವನ್ನು ಗುರುತಿಸಿದಂತೆ ಸಣ್ಣದಾಗಿ ಗೊರಗುಡುತ್ತಾ, ಅವರ ಸೀರೆಯನ್ನು ಮೂತಿಯಿಂದ ಸ್ಪರ್ಶಿಸಿತು. ಸಣ್ಣ ನಗುಮುಖದಿಂದ ಬಂಟಿಯ ತಲೆಯನ್ನು ನೇವರಿಸಿದರು ಶೋಭನಾ. "ನೋಡಿದ್ರಾ, ಬಂಟಿಗೂ ಈ ಮನೆಯನ್ನು ಬಿಟ್ಟು ಹೋಗಲು ಇಷ್ಟವಿಲ್ಲ." ಎಂದರು, ಗೆದ್ದವರಂತೆ.

ರಾಜೇಂದ್ರ ದೊಡ್ಡದಾಗಿ ಉಸಿರು ತೆಗೆದುಕೊಂಡು, "ಶೋಭಾ, ನೀನು ಬಂಟಿಯನ್ನು ನೋಡುತ್ತಿದ್ದೀಯಾ, ನಾನು ನಮ್ಮ ಭವಿಷ್ಯವನ್ನು ನೋಡುತ್ತಿದ್ದೇನೆ. ಈ ಮನೆಯ ಖರ್ಚುಗಳು, ತೆರಿಗೆಗಳು, ರಿಪೇರಿಗಳು.. ಎಲ್ಲವೂ ನನ್ನ ಪಿಂಚಣಿಯನ್ನು ತಿನ್ನುತ್ತಿವೆ. ನಾವು ಈಗ ನಿರ್ಧಾರ ತೆಗೆದುಕೊಳ್ಳದಿದ್ದರೆ.. ನಾಳೆ ಈ ರಸ್ತೆಗೆ ಯಾವುದೋ ದೊಡ್ಡ ಕಮರ್ಷಿಯಲ್ ಕಾಂಪ್ಲೆಕ್ಸ್ ಬರುತ್ತದೆ. ಆಗ ನಮಗೆ ಏನೂ ಉಳಿಯುವುದಿಲ್ಲ." ಎನ್ನುತ್ತ ಟೇಬಲ್ ಮೇಲೆ ಕೈಯನ್ನು ಗಟ್ಟಿಯಾಗಿ ಹೊಡೆಯಲು ಹೋಗಿ ನಿಂತರು. ಅವರ ಕಣ್ಣುಗಳಲ್ಲಿ ಏನೋ ಭಯ.

ಹೊರಗೆ ಬೀದಿಯಲ್ಲಿ ಹಾಲಿನವನ ಸೈಕಲ್ ಬೆಲ್ ಸದ್ದು. ಶೋಭನಾ ಎದ್ದು, ಒಂದು ಬಟ್ಟಲು ತೆಗೆದುಕೊಂಡು ಹೊಸ್ತಿಲಿನ ಕಡೆಗೆ ನಡೆದರು. "ಸ್ವಾಮೀ.. ನೀವು ನಿಮ್ಮ ಪಿಂಚಣಿ ಬಗ್ಗೆ ಯೋಚಿಸಿ. ನಾನು ಬಂಟಿ ಬಗ್ಗೆ, ಈ ಮನೆಯ ಬಗ್ಗೆ ಯೋಚಿಸುತ್ತೇನೆ, ನಿರ್ಧಾರ ತೆಗೆದುಕೊಳ್ಳಲು ಇನ್ನು ಸಮಯವಿದೆ." ಎಂದು ಹೊಸ್ತಿಲಿನಲ್ಲಿ ನಿಂತು, ಒಂದು ಬಾರಿ ಹಿಂದಿರುಗಿ ನೋಡಿದರು. ಬಂಟಿ ಅವರ ಹಿಂದೆ ನಡೆಯುತ್ತಾ, ಸಂತೋಷದಿಂದ ಬಾಲವನ್ನು ಆಡಿಸಿತು.

ಒಂದೊಂದು ದೋಸೆ ತುಂಡನ್ನು ಅಗಿಯುತ್ತಾ, ಮೌನವಾಗಿ ಆಲೋಚನೆಗಳಲ್ಲಿ ಮುಳುಗಿದರು ರಾಜೇಂದ್ರ. ಈ ಮನೆಯನ್ನು ಬಿಡುವುದು ಅಷ್ಟು ಸುಲಭವಲ್ಲ ಎಂದು ಹೃದಯದಲ್ಲಿ ಯಾರೋ ಹೇಳಿದಂತೆ ಅನಿಸಿತು.

* * *

ಮಧ್ಯಾಹ್ನ ಎರಡು ಗಂಟೆ. ಬಿಸಿಲು ಗೋಡೆಗಳನ್ನು ತಾಗುತ್ತಿತ್ತು. ರಾಜೇಂದ್ರ ಮನೆಯ ಮುಂದೆ ಒಂದು ಪಲ್ಸರ್ ಬೈಕ್ ಅಸ್ಪಷ್ಟ ಸದ್ದು ಮಾಡುತ್ತಾ ನಿಂತಿತು. ಬೈಕ್‌ನಿಂದ ಇಳಿದ ರಿಯಲ್ ಎಸ್ಟೇಟ್ ಬ್ರೋಕರ್ ರಾಘವರಾವ್ ಮುಖದ ಮೇಲೆ ಹರಡಿಕೊಂಡಿದ್ದ ಬೆವರಿನ ಗೆರೆಗಳನ್ನು ಕಿರಿಕಿರಿಯಾಗಿ ಒರೆಸಿಕೊಂಡರು. ಅವರ ಕೈಯಲ್ಲಿ 'ಪ್ರಾಪರ್ಟಿ ಡೀಲ್ಸ್' ಎಂಬ ಸ್ಟಿಕ್ಕರ್ ಇರುವ ಒಂದು ಫೈಲ್ ಇತ್ತು.

ಹೊಸ್ತಿಲೊಳಗೆ ಇಣುಕಿ "ರಾಜೇಂದ್ರ ಅವರೇ!" ಎಂದು ಗಟ್ಟಿಯಾಗಿ ಕರೆದರು ರಾಘವರಾವ್, ಹಾಲ್‌ನಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಆ ದಿನದ ಪೇಪರ್‌ನಲ್ಲಿನ ಸುದ್ದಿಗಳನ್ನು ಓದುತ್ತಿದ್ದ ರಾಜೇಂದ್ರ, "ಓ.. ರಾಘವಾ.. ಬಾ ಬಾ" ಎಂದು ಕರೆದರು.

ಅಡುಗೆಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದ ಶೋಭನಾ, ರಾಘವರಾವ್ ಧ್ವನಿ ಕೇಳಿ ತಲೆ ತಿರುಗಿಸಿದರು. "ಯಾರೋ ಬ್ರೋಕರ್ ಅನ್ಸುತ್ತೆ" ಎಂದು ತಮ್ಮಲ್ಲೇ ಮಾತನಾಡಿಕೊಳ್ಳುವಂತೆ ಜೋರಾಗಿಯೇ ಹೇಳಿದರು. ಹಾಲ್‌ನ ಒಂದು ಮೂಲೆಯಲ್ಲಿ ಚಿಕ್ಕ ಕಾಟನ್ ಹಾಸಿಗೆಯ ಮೇಲೆ ಮಲಗಿದ್ದ ಬಂಟಿ ರಾಘವರಾವ್ ಧ್ವನಿ ಕೇಳಿ ಒಂದು ಕಿವಿಯನ್ನು ನಿಲ್ಲಿಸಿತು. ಅದರ ಕಣ್ಣುಗಳು ಸೂಕ್ಷ್ಮವಾಗಿ ಹೊಸ್ತಿಲಿನತ್ತ ನೋಡಿದವು.

ರಾಘವರಾವ್ ಹಾಲ್‌ನೊಳಗೆ ಧಾವಿಸಿ, ಒಂದು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತರು. ಕೈಯಲ್ಲಿದ್ದ ಫೈಲನ್ನು ಸದ್ದು ಮಾಡುತ್ತಾ ಟೇಬಲ್ ಮೇಲೆ ಇಟ್ಟರು. "ರಾಜೇಂದ್ರ ಅವರೇ, ಮನೆ ಮಾರಾಟಕ್ಕೆ ಇಟ್ಟಿದ್ದೀರಲ್ಲಾ? ಈ ರಸ್ತೆಯಲ್ಲಿ ನಿಮ್ಮ ಮನೆ ಒಂದು ಚಿನ್ನದ ಗಣಿ. ಈಗ ಮಾರುಕಟ್ಟೆ ಹಾಟ್ ಹಾಟ್ ಆಗಿದೆ. ಒಳ್ಳೆಯ ರೇಟ್ ಬರುತ್ತೆ." ಎಂದು ಉತ್ಸಾಹದಿಂದ ಆರಂಭಿಸಿದರು, ಕೈಗಳಿಂದ ಗಾಳಿಯಲ್ಲಿ ಗೆರೆಗಳನ್ನು ಎಳೆಯುತ್ತಾ.

ಓದುತ್ತಿದ್ದ ಪೇಪರನ್ನು ಮಡಚಿ ಪಕ್ಕಕ್ಕೆ ಇಟ್ಟು, ದೀರ್ಘವಾಗಿ ಉಸಿರು ತೆಗೆದುಕೊಂಡರು ರಾಜೇಂದ್ರ, "ನೀನು ಯಾವಾಗಲೂ ಇಂತಹ ಮಾತುಗಳೊಂದಿಗೆ ಬರುತ್ತೀಯಾ ರಾಘವಾ! ಆದರೆ ಈ ಮನೆ.. ನಮಗೆ ಬರಿ ಆಸ್ತಿಯಲ್ಲ. ಇಲ್ಲಿ ನಮ್ಮ ಜೀವನವಿದೆ. ನೀನು ಹೇಳುವ ರೇಟು ಆ ನೆನಪುಗಳನ್ನು ಖರೀದಿಸಬಲ್ಲದಾ?" ಒಂದು ಶಾಲಾ ಶಿಕ್ಷಕ ತನ್ನ ವಿದ್ಯಾರ್ಥಿಯನ್ನು ಕೇಳಿದಂತೆ ಕೇಳಿದರು.

ಶೋಭನಾ ಒಂದು ಗಾಜಿನ ಗ್ಲಾಸ್‌ನಲ್ಲಿ ಕಾಫಿ ತಂದು ಹಾಲ್‌ನೊಳಗೆ ಬಂದರು. ರಾಘವರಾವ್ ಮುಂದೆ ಕಾಫಿಯನ್ನು ಇಟ್ಟು, "ರಾಯರೇ, ಈ ಮನೆಯ ಗೋಡೆಗಳು ಸ್ವಲ್ಪ ಹಳೆಯದಾಗಿವೆ. ಸೂರು ಅಲ್ಲಲ್ಲಿ ಸೋರುತ್ತಿದೆ. ನೀವು ಇದನ್ನು ಯಾರಿಗೆ ಮಾರುತ್ತೀರಿ?" ಎಂದು ಕೇಳಿದರು. ಅವರ ಧ್ವನಿಯಲ್ಲಿ ಅಮಾಯಕತೆ, ಆದರೆ ಕಣ್ಣುಗಳಲ್ಲಿ ಎಚ್ಚರಿಕೆ. ರಾಘವರಾವ್ ಕಾಫಿ ಗ್ಲಾಸ್ ತೆಗೆದುಕೊಂಡು ಒಂದು ಸಿಪ್ ಮಾಡಿ, ದೊಡ್ಡದಾಗಿ ನಕ್ಕರು. "ಶೋಭನಮ್ಮನವರೇ, ಆ ಜವಾಬ್ದಾರಿ ನನ್ನದು. ಈ ಮನೆ ಹಳೆಯದಾದರೂ, ಇದು ಇರುವ ಸ್ಥಳವಾಗಲಿ, ಈ ಬೀದಿಯಾಗಲಿ.. ಒಂದು ಗೋಲ್ಡ್ ಮೈನ್. ನೀವು ಒಂದು ರೂಪಾಯಿ ಖರ್ಚು ಮಾಡಬೇಕಾಗಿಲ್ಲ, ಖರೀದಿದಾರನನ್ನು ನಾನು ಸೆಟ್ ಮಾಡುತ್ತೇನಲ್ಲಾ." ಅವರು ಟೇಬಲ್ ಮೇಲಿದ್ದ ಫೈಲನ್ನು ತೆರೆದು ಕೆಲವು ಪೇಪರ್‌ಗಳನ್ನು ಗಾಳಿಯಲ್ಲಿ ಆಡಿಸಿದರು, ಏನೋ ಮಾಯಾಜಾಲ ಮಾಡುತ್ತಿರುವವರಂತೆ, "ಆದರೆ ಒಂದು ಚಿಕ್ಕ ಪ್ರಾಬ್ಲಮ್.. ಈ ರಸ್ತೆಯಲ್ಲಿ ಒಂದು ಹೊಸ ವಾಣಿಜ್ಯ ಸಮುದಾಯ ಬರಲಿದೆ ಎಂದು ಮಾಹಿತಿ ಇದೆ. ನೀವು ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತೀರೋ ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಬೆಲೆ ಇಳಿಯಬಹುದು."

ಒಂದು ಕ್ಷಣ ಆಲೋಚನೆಯಲ್ಲಿ ಬಿದ್ದರು ರಾಜೇಂದ್ರ. "ವಾಣಿಜ್ಯ ಸಮುದಾಯವಾ? ಈ ಬೀದಿಯಲ್ಲಿಯಾ?" ಅವರ ಕಣ್ಣುಗಳಲ್ಲಿ ಒಂದು ಆತಂಕ, ಹಳೆಯ ನೆನಪೇನೋ ಹೃದಯವನ್ನು ಸ್ಪರ್ಶಿಸಿದಂತೆ. ರಾಘವರಾವ್ ಮಾತುಗಳಿಗೆ ನಿಟ್ಟುಸಿರು ಬಿಟ್ಟರು ಶೋಭನಾ. " ರಾಯರೇ! ನೀವು ದರಗಳ ಬಗ್ಗೆ, ಯೋಜನೆಗಳ ಬಗ್ಗೆ ಮಾತನಾಡುತ್ತೀರಿ ಒಳ್ಳೆಯದು. ಆದರೆ ಈ ಹೊಸ್ತಿಲಿನಲ್ಲಿರುವ ತುಳಸಿ ಗಿಡ, ನಮ್ಮ ಬಂಟಿ ಆಡುವ ಅಂಗಳ.. ನಿಮ್ಮ ಫೈಲ್ ಲೆಕ್ಕಗಳಲ್ಲಿ ಬರುತ್ತವಾ?" ಸವಾಲು ಎಸೆಯುವಂತೆ ಕೇಳಿದರು ಶೋಭನಾ. ನನ್ನ ಮನೆಯನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂಬ ಧೈರ್ಯ, ಅವರ ಮಾತುಗಳಲ್ಲಿ.

ಅವರ ಮಾತುಗಳಲ್ಲಿನ ವೇದನೆ ಅರ್ಥವಾದಂತೆ ಎದ್ದು ರಾಘವರಾವ್ ಬಳಿ ನಡೆದಿತು ಬಂಟಿ. ಅವನ ಪಾದವನ್ನು ಒಂದು ಬಾರಿ ಮೂತಿಯಿಂದ ಸ್ಪರ್ಶಿಸಿ, ಎಚ್ಚರಿಕೆ ನೀಡುವಂತೆ ಅವನ ಪ್ಯಾಂಟನ್ನು ಸಣ್ಣದಾಗಿ ಕಚ್ಚಿತು. "ಹೇಯ್.. ಈ ನಾಯಿ ನೋಡಿ!" ಎಂದು ನಗಲು ಪ್ರಯತ್ನಿಸಿದರು ರಾಘವರಾವ್, ಅಸಹಜವಾಗಿ. ಬಂಟಿಯನ್ನು ಕೈಯಿಂದ ತಳ್ಳಲು ಹೋಗಿದ್ದರು. ಅದು ಸಣ್ಣದಾಗಿ ಗೊರಗುಟ್ಟುತ್ತಾ ಹಿಂದೆ ಸರಿದಿತ್ತು.

ಬಂಟಿಯನ್ನು ನೋಡುತ್ತಾ ಕಿರು ನಗೆ ಬೀರಿದರು ಶೋಭನಾ. ಆದರೆ ಅವರ ಹೃದಯದಲ್ಲಿ ಭಾರ, ರಾಘವರಾವ್ ಮಾತುಗಳು, ವಾಣಿಜ್ಯ ಸಮುದಾಯ, ದರಗಳು, ಬೇಗ ತೆಗೆದುಕೊಳ್ಳಬೇಕಾದ ನಿರ್ಧಾರ.. ಅವರ ಮನಸ್ಸಿನಲ್ಲಿ ಅಸ್ಪಷ್ಟ ಭಯ. ರಾಘವರಾವ್ ಫೈಲ್ ಕಡೆ ನೋಡುತ್ತಾ, "ಸರಿ ರಾಘವಾ. ನಾವು ಸ್ವಲ್ಪ ಆಲೋಚಿಸಬೇಕು. ನೀನು ನಾಳೆ ಬಾ. ಯಾರಾದರೂ ಖರೀದಿದಾರರಿದ್ದರೆ ಅವರ ವಿವರಗಳನ್ನು ಹೇಳುವೆಯಂತೆ" ಎಂದರು ರಾಜೇಂದ್ರ. ಅವರ ಧ್ವನಿಯಲ್ಲಿ ಅರ್ಧ ಒಪ್ಪಿಗೆ. ಆದರೆ ಕಣ್ಣುಗಳಲ್ಲಿ ಇನ್ನೂ ಸ್ವಲ್ಪ ಅನಿಶ್ಚಿತತೆ.

ಕಾಫಿ ಗ್ಲಾಸ್ ಖಾಲಿ ಮಾಡಿ, ಬಂದ ಕೆಲಸ ಯಶಸ್ವಿಯಾಗಿದೆ ಎಂಬ ಆನಂದದಿಂದ ಎದ್ದರು ರಾಘವರಾವ್, "ಸರಿ ರಾಜೇಂದ್ರ ಅವರೇ.. ನಾನು ನಾಳೆ ಬರುತ್ತೇನೆ. ನೆನಪಿಡಿ. ಸಮಯ ನಮಗಾಗಿ ನಿಲ್ಲುವುದಿಲ್ಲ" ಸಿನಿಮಾದ ಡೈಲಾಗ್ ಹೇಳಿ, ಹೊರಗೆ ಬೈಕ್ ಕಡೆಗೆ ನಡೆದರು. ಅವರ ಹಿಂದೆ ಸಣ್ಣದಾಗಿ ಗೊರಗುಟ್ಟಿತು ಬಂಟಿ, ಅವನು ಮತ್ತೆ ಅಲ್ಲಿಗೆ ಬರಬಾರದು ಎಂದು ಬಯಸುತ್ತಿರುವಂತೆ.

ಖಾಲಿ ಕಾಫಿ ಗ್ಲಾಸ್ ತೆಗೆದುಕೊಂಡು ಅಡುಗೆಮನೆಗೆ ನಡೆದರು ಶೋಭನಾ. "ಸ್ವಾಮೀ.. ಈ ರಾಘವರಾವ್ ನಮ್ಮ ಮನೆಯನ್ನು ಒಂದು ವ್ಯಾಪಾರದಂತೆ ನೋಡುತ್ತಿದ್ದಾನೆ. ನೀವು ನಿಜವಾಗಿಯೂ ಈ ಮನೆಯನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದೀರಾ?" ಅವರ ಧ್ವನಿಯಲ್ಲಿ ಸಣ್ಣ ನಡುಕ.

ರಾಜೇಂದ್ರ ಮತ್ತೆ ಪೇಪರ್ ತೆರೆದು, "ನೋಡೋಣ ಶೋಭಾ, ಈಗಲೇ ಏನೂ ಹೇಳಲು ಸಾಧ್ಯವಿಲ್ಲ." ಎಂದರು. ಆದರೆ ಅವರ ಮನಸ್ಸೆಲ್ಲಾ ರಾಘವರಾವ್ ಮಾತುಗಳ ಸುತ್ತ ತಿರುಗುತ್ತಿತ್ತು.. ವಾಣಿಜ್ಯ ಸಮುದಾಯ, ದರಗಳು, ಪಟಾಲಮ್ಮ ಬೀದಿಯ ಚಿನ್ನದಂತಹ ತಮ್ಮ ಮನೆಯ ಭವಿಷ್ಯ..

* * *

ಐದು ಗಂಟೆಯಾಗಿತ್ತು. ಸೂರ್ಯ ಪಶ್ಚಿಮದ ಕಡೆಗೆ ವಾಲುತ್ತಾ, ಮನೆಗಳ ಸೂರಿನ ಮೇಲೆ ಬಂಗಾರ ನೆರಳನ್ನು ಹರಡುತ್ತಿದ್ದ. ಪಟಾಲಮ್ಮ ಬೀದಿಯಲ್ಲಿ ಮಕ್ಕಳು ಗೋಲಿಗಳಿಂದ ಆಡುತ್ತಿದ್ದರು. ಬೀದಿಯ ಒಂದು ಮೂಲೆಯಲ್ಲಿ ಆಕಳು ಒಂದು ಬಾಲ ಅಲುಗಾಡಿಸುತ್ತಾ ಹುಲ್ಲು ತಿನ್ನುವುದರಲ್ಲಿ ಮಗ್ನವಾಗಿತ್ತು. ಹಳೆಯ ಗೋಧಿ ಬಣ್ಣದ ಅಂಗಿ ಹಾಕಿಕೊಂಡಿದ್ದ ರಾಜೇಂದ್ರ ಬಂಟಿಯನ್ನು ಕರೆದುಕೊಂಡು ಬೀದಿಗೆ ಬಂದರು. ವಯಸ್ಸಾಗುತ್ತಿದ್ದರೂ ಉತ್ಸಾಹದಿಂದ ಬಂಟಿ ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಾ ರಾಜೇಂದ್ರನ ಹಿಂದೆ ನಡೆಯುತ್ತಿತ್ತು. ಅದರ ಮೂಗಿಗೆ ಅಲ್ಲಿನ ಗಾಳಿಯ ಎಲ್ಲಾ ವಾಸನೆಗಳು – ಮಣ್ಣು, ಒಣಗಿದ ಗೋಮಯ, ಹತ್ತಿರದ ಮನೆಯಿಂದ ಬರುತ್ತಿದ್ದ ದೋಸೆಗಳ ವಾಸನೆ - ತಗುಲುತ್ತಿದ್ದವು.

ರಾಜೇಂದ್ರನ ತಲೆ ರಾಘವರಾವ್ ಮಾತುಗಳ ಸುತ್ತ ತಿರುಗುವುದನ್ನು ನಿಲ್ಲಿಸಲಿಲ್ಲ. ವಾಣಿಜ್ಯ ಸಮುದಾಯ, ಮನೆಯ ದರಗಳು, ತೆಗೆದುಕೊಳ್ಳಬೇಕಾದ ನಿರ್ಧಾರ. ಬಂಟಿಯನ್ನು ನೋಡಿ ಸಣ್ಣದಾಗಿ ನಗುತ್ತಾ, "ಹೇಯ್ ಬಂಟಿ.. ನಿನಗೆ ಈ ಗಲಾಟೆಗಳೇನೂ ತಲೆಕೆಡಿಸುವುದಿಲ್ಲ ಅಲ್ಲವಾ! ನಿನ್ನ ಕೆಲಸ ಆರಾಮ. ಈ ರಸ್ತೆ, ಈ ಮಣ್ಣು, ಈ ಮಕ್ಕಳು ಸಾಕು ನಿನಗೆ" ಎಂದು ತನ್ನಲ್ಲೇ ಮಾತನಾಡಿಕೊಂಡರು. ಬಂಟಿ ಒಂದು ಬಾರಿ ತಲೆ ಎತ್ತಿ ಸಣ್ಣದಾಗಿ ಗೊರಗುಟ್ಟಿತು, ಅವರ ಮಾತುಗಳಿಗೆ ಉತ್ತರ ನೀಡುವಂತೆ.

ರಾಜೇಂದ್ರ ಹತ್ತಿರದ ಚಿಕ್ಕ ಟೀ ಅಂಗಡಿಯ ಬಳಿ ಬಂದರು. ಅಲ್ಲಿ ಕೆಲವರು ಯುವಕರು ಗುಂಪಾಗಿ ಸೇರಿ ಗದ್ದಲದಿಂದ ಮಾತನಾಡಿಕೊಳ್ಳುತ್ತಿದ್ದರು. ಅವರ ಮಾತುಗಳನ್ನು ಕೇಳಿದಾಗ ರಾಜೇಂದ್ರನ ಮನಸ್ಸಿನಲ್ಲಿ ಆತಂಕ. ಗಡ್ಡವಿರುವ ಒಬ್ಬ ಯುವಕ ಕುಡಿಯುತ್ತಿದ್ದ ಸಿಗರೇಟನ್ನು ಗಾಳಿಯಲ್ಲಿ ಆಡಿಸುತ್ತಾ, "ಈ ಮನೆಗಳೆಲ್ಲಾ ಕೆಡವಿ ಹಾಕುತ್ತಾರೆ ನೋಡಿ. ಮುಂದಿನ ವರ್ಷ ಈ ರಸ್ತೆಯಲ್ಲಿ ಒಂದು ದೊಡ್ಡ ಕಾಂಪ್ಲೆಕ್ಸ್ ಬರುತ್ತದೆ. ಈ ಮಣ್ಣಿನ ರಸ್ತೆ ಸಿಮೆಂಟ್ ರಸ್ತೆಯಾಗುತ್ತದೆ" ಎಂದ ಗಟ್ಟಿಯಾಗಿ.

ಹೂವಿನ ಅಂಗಿ ಹಾಕಿಕೊಂಡ ಇನ್ನೊಬ್ಬ ಯುವಕ ನಗುತ್ತಾ, "ನಿಜವೇ. ಈ ಹಳೆಯ ಮನೆಗಳಲ್ಲಿ ಯಾರಿದ್ದಾರೆ? ಈಗ ಎಲ್ಲರೂ ಕೊಲಾ ರಕ್ಕೋ, ಬೆಂಗಳೂರುಗೊ ಹೋಗುತ್ತಿದ್ದಾರೆ.. ಫ್ಲಾಟ್‌ಗಳಲ್ಲಿ ಆರಾಮಾಗಿರುತ್ತಾರೆ." ಎಂದನು. ಇನ್ನೊಬ್ಬ, ಹಳೆಯ ಸೈಕಲ್‌ಗೆ ಒರಗಿಕೊಂಡು ನಿಂತುಕೊಂಡು, "ಆದರೆ ಈ ಮನೆಗಳ ಮಾಲೀಕರು ಒಪ್ಪುವುದಿಲ್ಲ. ಅವರು ದರದ ಬಗ್ಗೆ ಅಲ್ಲ, ನೆನಪುಗಳ ಬಗ್ಗೆ ಮಾತನಾಡುತ್ತಿರುತ್ತಾರೆ" ಎಂದು ಗೇಲಿಯಾಗಿ ನಕ್ಕನು.

ಈ ಮಾತುಗಳನ್ನು ಕೇಳುತ್ತಾ ಒಂದು ಕ್ಷಣ ನಿಂತುಬಿಟ್ಟರು ರಾಜೇಂದ್ರ, ಅವರ ಮನಸ್ಸಿನಲ್ಲಿ ರಾಘವರಾವ್ ಮಾತುಗಳು ಮತ್ತೊಮ್ಮೆ ತಿರುಗಿದವು. ಬಂಟಿಯನ್ನು ಮಡಿಲಿಗೆ ತೆಗೆದುಕೊಂಡರು. ಅದರ ವಯಸ್ಸಾದ ದೇಹ ಭಾರವೆನಿಸಿತು. ಅವರ ಮುಖದ ಆತಂಕವನ್ನು ಗುರುತಿಸಿದಂತೆ ಅವರ ಕೈಯನ್ನು ಸಣ್ಣದಾಗಿ ನೆಕ್ಕಿತು ಬಂಟಿ. 'ಬಂಟಿ, ಈ ಬೀದಿಯನ್ನು ನೀನು ಹೇಗೆ ಬಿಟ್ಟು ಹೋಗುತ್ತೀಯಾ?' ಎಂದು ತಮ್ಮಲ್ಲೇ ಅಂದುಕೊಂಡರು. ಅವರ ಕಣ್ಣುಗಳು ಒಂದು ಹಳೆಯ ಪೇರಲ ಮರದ ಮೇಲೆ ನಿಂತವು. ಅದರ ಕೊಂಬೆಗಳು ಒಂದು ಹಳೆಯ ನೆನಪಿನಂತೆ ಕೆಳಗೆ ಬಾಗಿ ನಿಂತಿದ್ದವು.

ಯುವಕರು ಮಾತನಾಡುತ್ತಲೇ ಇದ್ದರು. ಗಡ್ಡದವನು, "ಈ ರಸ್ತೆಯಲ್ಲಿರುವವರು ಬೇಗ ಮಾರದಿದ್ದರೆ, ನಂತರ ಅವರ ಮನೆಗಳನ್ನು ಬಿಲ್ಡರ್‌ಗಳು ಅಗ್ಗಕ್ಕೆ ಕೊಳ್ಳುತ್ತಾರೆ. ಈಗ ಮಾರಿದರೆ, ಕೋಲರಿನಲ್ಲೋ, ಬೆಂಗಳೂರಿನಲ್ಲೋ ಒಳ್ಳೆಯ ಫ್ಲಾಟ್ ಖರೀದಿಸಬಹುದು." ಎಂದ ಮತ್ತೊಮ್ಮೆ ಗಟ್ಟಿಯಾಗಿ. ಅವು ಕಿವಿಗೆ ಬಿದ್ದು, ತನ್ನ ಕೈಯಲ್ಲಿದ್ದ ಬಂಟಿಯ ಹಗ್ಗವನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡರು ರಾಜೇಂದ್ರ. ಅವರ ಕಣ್ಣುಗಳ ಮುಂದೆ ಒಂದು ದೃಶ್ಯ ಕದಲಾಡಿತು – ಈ ಬೀದಿ, ತಮ್ಮ ಮನೆ, ಈ ಪೇರಲ ಮರ.. ಎಲ್ಲವೂ ಅಪಾರ್ಟ್‌ಮೆಂಟ್‌ಗಳ ಕೆಳಗೆ ನಜ್ಜುಗುಜ್ಜಾಗಿ ಮಾಯವಾಗುತ್ತಿದ್ದವು.

ಬೀದಿಯಲ್ಲಿ ಒಂದು ಚಿಕ್ಕ ಹುಡುಗಿ ರಬ್ಬರ್ ಬಾಲ್‌ನೊಂದಿಗೆ ಆಡುತ್ತಾ, ಬಂಟಿಯನ್ನು ನೋಡಿ ಹತ್ತಿರ ಬಂದಳು. "ಅಂಕಲ್, ಇವತ್ತು ಬಂಟಿ ನನ್ನ ಜೊತೆ ಆಡುತ್ತದಾ?" ಎಂದು ಕೇಳಿದಳು. ಆ ಮಗುವಿನ ಕಣ್ಣುಗಳಲ್ಲಿ ಒಂದು ಮುಗ್ಧ ಸಂತೋಷ. ರಾಜೇಂದ್ರ ಆ ಮಗುವಿನ ಮುಖದತ್ತ ನೋಡಿ, "ಇವತ್ತು ಸ್ವಲ್ಪ ದಣಿದಿದೆ. ನಾಳೆ ಆಡುತ್ತದೆ ಬಿಡು" ಎಂದರು. ಅವರ ಧ್ವನಿಯಲ್ಲಿ ತಿಳಿಯದ ಒಂದು ದುಗುಡ. ಮಗುವಿನ ಕೈಯಲ್ಲಿದ್ದ ಬಾಲನ್ನು ನೋಡಿ, ಉತ್ಸಾಹದಿಂದ ಬಾಲ ಆಡಿಸಿತು ಬಂಟಿ.

ಆದರೆ ರಾಜೇಂದ್ರ ಹಗ್ಗವನ್ನು ಎಳೆದು ಬಂಟಿಯನ್ನು ಕರೆದುಕೊಂಡು ಮನೆಯ ಕಡೆಗೆ ನಡೆದರು. ಆಡುತ್ತಿದ್ದ ಮಕ್ಕಳ ಗದ್ದಲ, ಯುವಕರ ಮಾತುಗಳು, ದೂರದಲ್ಲಿ ಒಂದು ಸೈಕಲ್ ಬೆಲ್ ಸದ್ದು ಅವರ ಕಿವಿಯಲ್ಲಿ ಒಂದು ಅಸ್ಪಷ್ಟ ಗೊಂದಲವನ್ನು ಸೃಷ್ಟಿಸಿದವು. ಮನೆಯ ಹೊಸ್ತಿಲಿಗೆ ಕಾಲಿಡುತ್ತಿದ್ದಂತೆ ಒಂದು ಚಿಕ್ಕ ಬಟ್ಟಲಿನಲ್ಲಿ ಬಂಟಿಗೆ ನೀರು ಸಿದ್ಧಪಡಿಸುತ್ತಾ ಕಂಡರು ಶೋಭನಾ. "ಏನು ಸ್ವಾಮೀ, ನಿಮ್ಮ ಮುಖವೇಕೆ ಹಾಗೆ ಇದೆ?" ಎಂದರು ಅವರು, ಪತಿಯ ಮುಖದತ್ತ ನೋಡುತ್ತಾ.

ಬಂಟಿಯನ್ನು ಬಿಟ್ಟು, ಗಟ್ಟಿಯಾಗಿ ಉಸಿರು ತೆಗೆದುಕೊಂಡು ಬಿಟ್ಟರು ರಾಜೇಂದ್ರ. "ಶೋಭಾ.. ಬೀದಿಯಲ್ಲಿ ಯುವಕರು ಕಾಂಪ್ಲೆಕ್ಸ್ ಪ್ರಾಜೆಕ್ಟ್ ಬಗ್ಗೆಯೇ ಮಾತನಾಡುತ್ತಿದ್ದಾರೆ. ನಾವು ಈ ಮನೆಯನ್ನು ಈಗ ಮಾರದಿದ್ದರೆ, ಈ ಬೀದಿಯೊಂದಿಗೆ ನಮ್ಮ ನೆನಪುಗಳನ್ನೂ ಕೆಡವಿ ಹಾಕುತ್ತಾರೇನೋ" ಎಂದರು. ಅವರ ದನಿ ಕ್ಷೀಣವಾಯಿತ್ತು. ಬಂಟಿಯನ್ನು ನೋಡುತ್ತಾ, "ಆದರೂ ಬಂಟಿ ಈ ಮನೆಯ ಹೊಸ್ತಿಲನ್ನೂ, ಇಲ್ಲಿನ ಮಕ್ಕಳನ್ನೂ ಬಿಟ್ಟು ಬೇರೆ ಜಾಗದಲ್ಲಿ ಹೇಗೆ ಇರಲು ಸಾಧ್ಯ?" ಎಂದು ಕೇಳಿದರು ಶೋಭನಾ. ಅವರ ಮಾತುಗಳಲ್ಲಿ ಈ ಮನೆಯನ್ನು ರಕ್ಷಿಸಿಕೊಳ್ಳುತ್ತೇನೆ ಎಂಬ ನಂಬಿಕೆ.

ನೀರಿನ ಬಟ್ಟಲ ಬಳಿ ಕುಳಿತು, ಸಣ್ಣ ಸದ್ದಿನಿಂದ ಕುಡಿಯಲು ಆರಂಭಿಸಿತು ಬಂಟಿ. ಈ ಗಲಾಟೆಗಳ ನಡುವೆ ಅದರ ಚಿಕ್ಕ ಚಿಕ್ಕ ಚೇಷ್ಟೆಗಳು ರಾಜೇಂದ್ರ, ಶೋಭನಾಗೆ ಒಂದು ಚಿಕ್ಕ ಸಮಾಧಾನದಂತೆ ಅನಿಸಿದವು. ಸಂಜೆಯ ತಂಪಾದ ಗಾಳಿ ಬೀಸುವುದು ಹೊಸ್ತಿಲನ್ನು ದಾಟಿ ಮನೆಯೊಳಗೆ ನುಗ್ಗಿ ಅವರ ದೇಹವನ್ನು ಸ್ಪರ್ಶಿಸಿತು. ಆದರೂ ರಾಜೇಂದ್ರನಿಗೆ ಅದಾವುದೂ ಹತ್ತಲಿಲ್ಲ. ಅವರ ಹೃದಯದಲ್ಲಿ ಒಂದು ಅನಿಶ್ಚಿತತೆ - ಈ ಮನೆ, ಈ ಬೀದಿ, ಈ ಜೀವನ.. ಇವೆಲ್ಲಾ ಇನ್ನು ಎಷ್ಟು ಕಾಲ ತಮ್ಮವು?

* * *

ರಾತ್ರಿ ಒಂಬತ್ತು ಗಂಟೆಯಾಗಿತ್ತು. ಪಟಾಲಮ್ಮ ಬೀದಿಯ ನಿಶ್ಯಬ್ಧವನ್ನು ಭಗ್ನಗೊಳಿಸುತ್ತಾ ದೂರದಲ್ಲಿ ಒಂದು ನಾಯಿ ಗೊರಗುಟ್ಟಿತು. ಹತ್ತಿರದ ದೇವಸ್ಥಾನದ ಗಂಟೆ ಸಣ್ಣದಾಗಿ ಮೊಳಗಿತು. ಮನೆಯಲ್ಲಿ ಹಳೆಯ ಲುಂಗಿಯಲ್ಲಿದ್ದ ರಾಜೇಂದ್ರ ಟಿವಿಯನ್ನು ಆನ್ ಮಾಡಿ ಬಂದು ಮಂಚದ ಮೇಲೆ ಕುಳಿತರು. ಒಂದರ ನಂತರ ಒಂದರಂತೆ ಆಕ್ಸಿಡೆಂಟ್‌ಗಳು, ಕೊಲೆಗಳು, ಜಗಳಗಳು, ಕಳ್ಳತನಗಳ ಸುದ್ದಿಗಳು! ಸಾಮಾನ್ಯ ಗುಲಾಬಿ ಬಣ್ಣದ ಸೀರೆ ಉಟ್ಟುಕೊಂಡಿದ್ದ ಶೋಭನಾ ಒಂದು ಸ್ಟೀಲ್ ಬಾಟಲ್‌ನಲ್ಲಿ ನೀರು ತುಂಬಿ ಅದನ್ನು ಮಂಚದ ಬಳಿ ಒಂದು ಮೂಲೆಯಲ್ಲಿ ನೆಲದ ಮೇಲೆ ಇಟ್ಟು, ಮಂಚದ ಒಂದು ಮೂಲೆಯಲ್ಲಿ ಕುಳಿತರು. ಆ ಮಂಚದ ಮೇಲೆ ಬಂಟಿ ಸುರುಳಿ ಸುತ್ತಿಕೊಂಡು ಮಲಗಿ ನಿದ್ದೆ ಮಾಡುತ್ತಿತ್ತು. ಆಗಾಗ ಅದರ ಬಾಲ ಕದಲುತ್ತಿತ್ತು, ಅದು ಏನೋ ಕನಸು ಕಾಣುತ್ತಿರುವಂತೆ.

"ಸ್ವಾಮೀ, ನೀವು ಇವತ್ತು ಬೀದಿಯಲ್ಲಿ ಕೇಳಿದೆ ಎಂದು ಹೇಳಿದ ಮಾತುಗಳು ನನ್ನ ತಲೆಯಲ್ಲಿ ಬಿಡದೆ ತಿರುಗುತ್ತಿವೆ. ಈ ಮನೆ, ಈ ಬೀದಿ ನಿಜವಾಗಿಯೂ ಕೆಡವಿ ಹಾಕುತ್ತಾರೆ ಎಂದು ನಂಬುತ್ತೀರಾ?" ಎಂದು ಕೇಳಿದರು ಶೋಭನಾ. ಅವರ ಧ್ವನಿಯಲ್ಲಿ ತಮ್ಮ ಮನೆಯನ್ನು ಕಳೆದುಕೊಳ್ಳುತ್ತೇವೆಯೇ ಎಂಬ ಆತಂಕ.

ರಾಜೇಂದ್ರ ಟಿವಿಯನ್ನು ಆಫ್ ಮಾಡಿ, "ಶೋಭಾ, ನಾನೇನೂ ನಂಬುತ್ತಿಲ್ಲ. ಆದರೆ ಮಾಲೂರು ಬದಲಾಗುತ್ತಿದೆ. ರಾಘವರಾವ್ ಮಾತುಗಳು, ಬೀದಿಯಲ್ಲಿನ ಯುವಕರ ಮಾತುಗಳಿಗೆ ಏನೇನೋ ಆಲೋಚನೆಗಳು ಬರುತ್ತಿವೆ. ಈ ಮನೆಯ ನಿರ್ವಹಣೆ ಕಷ್ಟವಾಗುತ್ತಿದೆ. ಎಷ್ಟು ಕಾಲ ನನ್ನ ಪಿಂಚಣಿಯಿಂದ ಇದನ್ನು ನಿಭಾಯಿಸಲು ಸಾಧ್ಯ? ಬೆಂಗಳೂರಿನಲ್ಲಿ ಒಂದು ಚಿಕ್ಕ ಫ್ಲಾಟ್ ತೆಗೆದುಕೊಂಡರೆ, ಕೊನೆಯ ದಿನಗಳಲ್ಲಿ ಸುಖವಾಗಿ ಇರಬಹುದಲ್ಲಾ ಎಂದು ಅನಿಸುತ್ತಿದೆ." ಎಂದರು. ಅವರ ಧ್ವನಿಯಲ್ಲಿ ವಾಸ್ತವವನ್ನು ಒಪ್ಪಿಕೊಳ್ಳಬೇಕು ಎಂಬ ಭಾವ. ಆದರೆ ಕಣ್ಣುಗಳಲ್ಲಿ ಏನೋ ಸಂದೇಹ.

ಪಕ್ಕದಲ್ಲಿದ್ದ ಬಂಟಿಯನ್ನು ನೋಡುತ್ತಾ, ತಮ್ಮ ಕೈಯನ್ನು ಅದರ ಮೇಲೆ ಇರಿಸಿದರು ಶೋಭನಾ. ಆ ಸ್ಪರ್ಶಕ್ಕೆ, ಸಣ್ಣದಾಗಿ ಕದಲಿದ ಬಂಟಿ, ತನ್ನ ತಲೆಯನ್ನು ಶೋಭನಾ ಮಡಿಲಿಗೆ ಜಾರಿಸಿತು. "ಸ್ವಾಮೀ, ನೀವು ಫ್ಲಾಟ್‌ಗಳ ಬಗ್ಗೆ, ಪಿಂಚಣಿಯ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಬಂಟಿ ಬಗ್ಗೆ ಯೋಚಿಸಿದಿರಾ? ಫ್ಲಾಟ್‌ಗೆ ಸ್ಥಳಾಂತರಗೊಂಡರೆ ಅದು ಎಲ್ಲಿ ಆಡುತ್ತದೆ? ಆ ಲಿಫ್ಟ್‌ಗಳು, ಕಾರಿಡಾರ್‌ಗಳು ಅದಕ್ಕೆ ಸರಿಹೊಂದುತ್ತವಾ?" ಎಂದರು ಶೋಭನಾ. ಅವರ ಮಾತುಗಳಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ತವಕ.

ಅವರ ಮಾತುಗಳಿಗೆ ಸಣ್ಣದಾಗಿ ನಕ್ಕರು ರಾಜೇಂದ್ರ. "ಶೋಭಾ, ನಿನಗೆ ಯಾವಾಗಲೂ ಬಂಟಿಯ ಧ್ಯಾನ. ಆದರೆ ನಮ್ಮ ಗತಿಯೇನು? ನಮ್ಮ ವಯಸ್ಸು, ಆರೋಗ್ಯ.. ಇಷ್ಟು ದೊಡ್ಡ ಮನೆಯನ್ನು ಎಷ್ಟು ಕಾಲ ನಿರ್ವಹಿಸಲು ಸಾಧ್ಯ? ಸೂರು ಸೋರುತ್ತಿದೆ. ಗೋಡೆಗಳು ಬಿರುಕು ಬಿಡುತ್ತಿವೆ. ಏನು ಮಾಡಬೇಕಾದರೂ ಹಣದ ಕೆಲಸ." ಎಂದು ಮಂಚದ ಮೇಲೆ ಹಿಂದಕ್ಕೆ ಒರಗಿದರು. ರಾಘವರಾವ್ ಮಾತುಗಳು, ಬೀದಿಯಲ್ಲಿನ ಯುವಕರ ಗದ್ದಲ, ಶೋಭನಾ ಆತಂಕ.. ಎಲ್ಲವೂ ಸೇರಿ ಅವರ ಮನಸ್ಸನ್ನು ಕಂಗೆಡಿಸುತ್ತಿದ್ದವು.

ಬಂಟಿಯ ತಲೆಯನ್ನು ನಿಧಾನವಾಗಿ ನೇವರಿಸುತ್ತಾ, “ಏನಯ್ಯ, ಈ ಮನೆ ಕೇವಲ ಗೋಡೆಗಳು, ಸೂರು ಅಲ್ಲ. ನಮ್ಮ ಜೀವನ. ಈ ಮನೆಯಲ್ಲಿ ನಾವು ಎಷ್ಟು ರಾತ್ರಿಗಳು ಕಳೆದಿದ್ದೇವೆ, ಎಷ್ಟು ಕಷ್ಟಗಳನ್ನು ದಾಟಿದ್ದೇವೆ! ಬಂಟಿ ಈ ಮಂಚದ ಮೇಲೆ ಮೊದಲ ಬಾರಿಗೆ ಮಲಗಿದ ದಿನ ನಿಮಗೆ ನೆನಪಿದೆಯೇ? ಆಗ ಅದು ಪುಟ್ಟ ನಾಯಿಮರಿ, ನಮ್ಮ ಜೀವನಕ್ಕೆ ಒಂದು ಹೊಸ ಸಂತೋಷವನ್ನು ತಂದಿತು." ಎನ್ನುತ್ತಿದ್ದಂತೆ ಅವರ ಕೊರಳು ಕ್ಷೀಣವಾಗಿ ನಡುಕಗೊಂಡಿತು. ಕಣ್ಣುಗಳಲ್ಲಿ ಸಣ್ಣ ತೇವ.

ಬಂಟಿ ನಿದ್ರೆಯಲ್ಲಿ ಒಂದು ಬಾರಿ ಕದಲಿತು, ತನ್ನ ಮೂತಿಯನ್ನು ಶೋಭನಾ ಕೈಯ ಮೇಲೆ ಉಜ್ಜಿತು. ಆ ಚಿಕ್ಕ ಕ್ರಿಯೆ, ಆ ರಾತ್ರಿ ಒಂದು ದೊಡ್ಡ ಉತ್ತರ. ಬಂಟಿಯತ್ತ ನೋಡುತ್ತಾ ಗಟ್ಟಿಯಾಗಿ ಉಸಿರು ಬಿಟ್ಟರು ರಾಜೇಂದ್ರ. "ಶೋಭಾ, ನಿನ್ನ ಮಾತುಗಳು ನನ್ನನ್ನು ಆಲೋಚನೆಗೆ ದೂಡುತ್ತಿವೆ. ಆದರೆ ಮಾಲೂರು ಬದಲಾಗುತ್ತಿದೆ. ನಾವು ಕೂಡ ಅದರ ಜೊತೆ ಬದಲಾಗಬೇಕಾ? ಅಥವಾ ಈ ಮನೆಯನ್ನೇ ಹಿಡಿದುಕೊಂಡು ಉಳಿಯಬೇಕಾ? ಏನೂ ತೋಚುತ್ತಿಲ್ಲ." ಎಂದು ಶೋಭನಾ ಕಡೆ ನೋಡಿದರು. ಅವರ ಕಣ್ಣುಗಳಲ್ಲಿ ಒಂದು ಪ್ರಶ್ನೆ, ಒಂದು ಉತ್ತರಕ್ಕಾಗಿ ಆಸೆ.

ಬಂಟಿಯನ್ನು ಮತ್ತಷ್ಟು ಹತ್ತಿರ ಎಳೆದುಕೊಂಡು, "ಸ್ವಾಮೀ, ಈ ರಾತ್ರಿ ನಾವು ನಿರ್ಧಾರ ತೆಗೆದುಕೊಳ್ಳಬೇಕಾದ ಕೆಲಸವೇನೂ ಇಲ್ಲ. ಈ ಮನೆ, ಬಂಟಿ, ನಾವು.. ಒಬ್ಬರಿಗೊಬ್ಬರು ಇದ್ದೇವೆ. ಅದು ಸಾಕು." ಎಂದರು ಶೋಭನಾ. ಅವರ ಮಾತುಗಳಲ್ಲಿ ಸ್ಥಿರತೆ, ನಂಬಿಕೆ ಕಂಡವು. ರಾಜೇಂದ್ರ ಮೌನವಾಗಿ ಅವರ ಮುಖದತ್ತ ನೋಡಿದರು. ಆ ಕ್ಷಣದಲ್ಲಿ, ಇಬ್ಬರಿಗೂ ಒಂದೇ ಆಲೋಚನೆ ಮೂಡಿತು - ಈ ಮನೆ ಕೇವಲ ಗೋಡೆಗಳಿರುವ ಮನೆ ಅಲ್ಲ, ಅವರ ಜೀವನ, ಅವರ ಬಂಟಿ, ಅವರ ಪ್ರೀತಿ!

ಕೋಣೆಯ ಚಿಕ್ಕ ಗೋಡೆ ಗಡಿಯಾರ ಟಿಕ್ ಟಿಕ್ ಎಂದು ಸದ್ದು ಮಾಡುತ್ತಿತ್ತು. ಹೊರಗಡೆ ಒಂದು ಚಿಕ್ಕ ಗಾಳಿ ಬೀಸಿತು. ತುಳಸಿ ಗಿಡದ ಎಲೆಗಳು ನಿಧಾನವಾಗಿ ಕದಲಿದವು. ನಿದ್ರೆಯಲ್ಲಿ ಸಣ್ಣದಾಗಿ ಗೊರಕೆ ಹೊಡೆಯಿತು ಬಂಟಿ. ಶೋಭನಾ, ರಾಜೇಂದ್ರ ಒಬ್ಬರನ್ನೊಬ್ಬರು ನೋಡಿಕೊಂಡು, ಒಂದು ಮೌನ ಒಪ್ಪಂದಕ್ಕೆ ಬಂದರು - ಈ ಕ್ಷಣ, ಈ ರಾತ್ರಿ, ಈ ಮನೆ.. ಇವೆಲ್ಲಾ ತಮ್ಮವೇ.

* * *

ಮರುದಿನ ಬೆಳಿಗ್ಗೆ, ಮಾಲೂರಿನ ಪಟಾಲಮ್ಮ ಬೀದಿ ತಾಜಾ ಉತ್ಸಾಹದಿಂದ ಮಿಂಚಿತು. ಸೂರ್ಯ ಆಕಾಶದಲ್ಲಿ ಸಂಪೂರ್ಣವಾಗಿ ಮೇಲೇರಿರಲಿಲ್ಲ. ಬೀದಿಯ ಹೊಸ್ತಿಲುಗಳು ತೆರೆದುಕೊಂಡವು. ಹಾಲಿನವರ ಕ್ಯಾನ್‌ಗಳು, ಸೈಕಲ್ ಬೆಲ್‌ಗಳು, ಮಕ್ಕಳ ಗದ್ದಲ ಸೇರಿ ಅದೊಂದು ರೀತಿಯ ಸಂಗೀತವನ್ನು ಸೃಷ್ಟಿಸುತ್ತಿದ್ದವು.

ರಾಜೇಂದ್ರ, ಶೋಭನಾ ಅವರ ಮನೆಯ ಮುಂದೆ ತುಳಸಿ ಗಿಡದ ಮೇಲೆ ಮುಂಜಾನೆಯ ಗಾಳಿ ಮೆತ್ತಗೆ ಬೀಸಿತು. ಮನೆಯೊಳಗೆ ಆರಾಮ ಕುರ್ಚಿಯಲ್ಲಿ ಕುಳಿತು ಆ ದಿನದ ದಿನಪತ್ರಿಕೆ ಓದಲು ಪ್ರಯತ್ನಿಸುತ್ತಿದ್ದರು ರಾಜೇಂದ್ರ. ಆದರೆ ಮನಸ್ಸು ಎಲ್ಲೆಲ್ಲೋ ತಿರುಗುತ್ತಿತ್ತು. ಶೋಭನಾ ಅಡುಗೆಮನೆಯಲ್ಲಿ ಒಂದು ಚಿಕ್ಕ ಬಟ್ಟಲಿನಲ್ಲಿ ಬಂಟಿಗೆ ಹಾಲು ಸಿದ್ಧಪಡಿಸುತ್ತಾ ಏನೋ ಹಳೆಯ ಸಿನಿಮಾದ ಹಾಡನ್ನು ಗುನುಗುತ್ತಿದ್ದರು. ಬಂಟಿ ಹಾಲ್‌ನಲ್ಲಿದ್ದ ತನ್ನ ವಿಶೇಷ ಹಾಸಿಗೆಯ ಮೇಲೆ ನಿದ್ರಿಸುತ್ತಾ - ಈಗಷ್ಟೇ ಎದ್ದಿತು.

ಅಷ್ಟರಲ್ಲಿ ಮನೆಯ ಮುಂದೆ ಒಂದು ಬೈಕ್ ಬಂದು ನಿಂತ ಸದ್ದು, ಗೋಧಿ ಬಣ್ಣದ ಶರ್ಟ್ ಹಾಕಿಕೊಂಡಿದ್ದ ರಾಘವರಾವ್ ಕೈಯಿಂದ ಮುಖದ ಮೇಲಿನ ಬೆವರನ್ನು ಒರೆಸಿಕೊಳ್ಳುತ್ತಾ ಒಳಗೆ ದಡದಡನೆ ಬಂದರು. ಅವರ ಕೈಯಲ್ಲಿ ಎಂದಿನಂತೆ ಒಂದು ಫೈಲ್. "ರಾಜೇಂದ್ರನವರೇ, ಗುಡ್ ಮಾರ್ನಿಂಗ್!" ಎಂದು ಉತ್ಸಾಹದಿಂದ ಮಾತನಾಡಿದರು. ಅವರ ಕಣ್ಣುಗಳಲ್ಲಿ ಒಂದು ಆಸೆ. "ನಿಮ್ಮ ಮನೆಯನ್ನು ಖರೀದಿಸಲು ಒಬ್ಬರು ಸಿದ್ಧ! ಇಂದು ಸಂಜೆ ಬಂದು ನೋಡುತ್ತಾರಂತೆ. ಓಕೆನಾ?" ಎಂದು ಫೈಲನ್ನು ಟೇಬಲ್ ಮೇಲೆ ಸದ್ದಾಗುವಂತೆ ಇಟ್ಟರು, ಒಂದು ಕೆಲಸ ಬಹುತೇಕ ಯಶಸ್ವಿಯಾಗಿದೆ ಎಂಬಂತೆ.

ಪೇಪರ್ ಅನ್ನು ಮಡಚಿ, ಗಟ್ಟಿಯಾಗಿ ಉಸಿರು ಬಿಟ್ಟರು ರಾಜೇಂದ್ರ. ಶೋಭನಾಳ ಕಡೆ ನೋಡಿದರು. ಅವರು ಅಡುಗೆಮನೆಯಲ್ಲಿ ನಿಂತುಕೊಂಡು, ಹಾಲಿನ ಬಟ್ಟಲನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ರಾಘವರಾವ್ ಮಾತುಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದರು. ಇಬ್ಬರ ಕಣ್ಣುಗಳು ಸೇರಿಕೊಂಡವು, ಒಂದು ಮೌನ ಸಂಭಾಷಣೆ ನಡೆದಂತೆ. ರಾಜೇಂದ್ರ ಒಂದು ಕ್ಷಣ ಆಲೋಚಿಸಿ, ಕೈಯಲ್ಲಿದ್ದ ಕಂಕಣವನ್ನು ಸರಿಪಡಿಸಿಕೊಂಡರು. ಬಂಟಿಯನ್ನು ಮಡಿಲಿಗೆ ತೆಗೆದುಕೊಂಡು ಹಾಲ್‌ನೊಳಗೆ ನಡೆದರು ಶೋಭನಾ. ರಾಘವರಾವ್‌ನನ್ನು ಒಬ್ಬ ಅಪರಿಚಿತನಂತೆ ನೋಡುತ್ತಾ ಬಾಲ ಆಡಿಸಿತು ಬಂಟಿ.

ಶೋಭನಾ, "ರಾಘವರಾವ್ ಅವರೇ, ನಾವು ಇನ್ನೂ ಆಲೋಚಿಸಿಲ್ಲ. ಈ ಮನೆ ನಮಗೆ ಕೇವಲ ಒಂದು ಆಸ್ತಿಯಲ್ಲ. ಇದು ನಮ್ಮ ಜೀವನ, ನಮ್ಮ ಎಷ್ಟೋ ನೆನಪುಗಳ ನಿಲಯ. ನೀವು ದರದ ಬಗ್ಗೆ, ಖರೀದಿದಾರರ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಮನೆಯ ಅಂಗಳ, ಈ ಬೀದಿಯ ಮಕ್ಕಳು, ಈ ತುಳಸಿ ಗಿಡ.. ಇವು ನಿಮ್ಮ ಲೆಕ್ಕಕ್ಕೆ ಬರುವುದಿಲ್ಲ." ಎಂದು ಬಂಟಿಯನ್ನು ಮತ್ತಷ್ಟು ಗಟ್ಟಿಯಾಗಿ ಮಡಿಲಿಗೆ ಅಪ್ಪಿಕೊಂಡರು. ಒಂದು ಕ್ಷಣ ಆಶ್ಚರ್ಯದಿಂದ ಶೋಭನಾ ಕಡೆ ನೋಡಿದರು ರಾಘವರಾವ್. ಅವರ ಮುಖದಲ್ಲಿ ಸಣ್ಣ ನಿರಾಶೆ. ಆದರೆ ಅಷ್ಟರಲ್ಲೇ ತಮ್ಮ ವ್ಯಾಪಾರಿ ನಗುವನ್ನು ಪ್ರದರ್ಶಿಸಿದರು.

"ಶೋಭನಮ್ಮನವರೇ, ನಿಮ್ಮ ಭಾವನೆ ನನಗೆ ಅರ್ಥವಾಗುತ್ತಿದೆ. ಆದರೆ ಈ ಮಾರುಕಟ್ಟೆಯಲ್ಲಿ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ! ಈಗ ಈ ಮನೆಯನ್ನು ಖರೀದಿಸಲು ಬರುತ್ತಿರುವವರು ನಿಮಗೆ ಒಳ್ಳೆಯ ದರ ನೀಡುತ್ತಾರೆ. ನೀವು ಬೆಂಗಳೂರಿನಲ್ಲಿ ಒಂದು ಸುಂದರ ಫ್ಲಾಟ್.." ಎಂದು ನಿಲ್ಲಿಸಿದರು, ರಾಜೇಂದ್ರನ ಮುಖದಲ್ಲಿನ ಸ್ಥಿರವಾದ ನೋಟವನ್ನು ನೋಡುತ್ತಾ.

ಟೀ ಕುಡಿಯುವುದನ್ನು ಮುಗಿಸಿ, ಗ್ಲಾಸ್ ಅನ್ನು ಟೇಬಲ್ ಮೇಲೆ ಇಟ್ಟು, ನಿಧಾನವಾಗಿ ಎದ್ದರು ರಾಜೇಂದ್ರ, "ರಾಘವಾ, ನಿನ್ನ ಕೆಲಸ ನೀನು ಮಾಡುತ್ತಿದ್ದೀಯಾ. ಅದು ನಮಗೆ ಅರ್ಥವಾಗುತ್ತಿದೆ. ಆದರೆ ಈ ಮನೆಯನ್ನು ಮಾರಾಟ ಮಾಡಲು ನಾವು ಸಿದ್ಧರಿಲ್ಲ. ಈ ಮನೆ ನಮಗೆ, ನಮ್ಮ ಬಂಟಿಗೆ ಒಂದು ಸ್ವರ್ಗ. ಈ ಹೊಸ್ತಿಲು, ಈ ಬೀದಿ, ಈ ನೆನಪುಗಳು.. ಎಷ್ಟು ಹಣ ಕೊಟ್ಟರೂ ಖರೀದಿಸಲು ಸಾಧ್ಯವಿಲ್ಲ." ಅವರ ಧ್ವನಿಯಲ್ಲಿ ಗಟ್ಟಿ ನಿರ್ಧಾರ, ಒಂದು ನಿವೃತ್ತನಾಗುತ್ತಿರುವ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಕೊನೆಯ ಪಾಠ ಹೇಳಿದಂತೆ.

ಶೋಭನಾ ಮಡಿಲಿನಿಂದ ನೆಲಕ್ಕೆ ಇಳಿದು, ರಾಘವರಾವ್ ಬಳಿ ನಡೆದಿತು ಬಂಟಿ. ಅವನ ಕಾಲನ್ನು ಒಂದು ಬಾರಿ ಮೂತಿಯಿಂದ ಸ್ಪರ್ಶಿಸಿ ಸಣ್ಣದಾಗಿ ಗೊರಗುಟ್ಟಿತು, ಇನ್ನು ಈ ಮನೆಯಿಂದ ಹೊರಗೆ ದಯವಿಟ್ಟು ಹೋಗಿ ಎಂಬಂತೆ. ಅದನ್ನು ನೋಡಿ ಅಸಹಜವಾಗಿ ನಕ್ಕರು ರಾಘವರಾವ್. "ಸರಿ ರಾಜೇಂದ್ರ ಅವರೇ, ಶೋಭನಮ್ಮ ನವರೇ.. ನೀವು ಆಲೋಚಿಸಿ. ನಾನು ಮತ್ತೆ ಬರುತ್ತೇನೆ.. ಆದರೆ ಸಮಯ..." ಎಂದು ಮಾತುಗಳನ್ನು ಮಧ್ಯದಲ್ಲೇ ನಿಲ್ಲಿಸಿ, ತಮ್ಮ ಫೈಲ್ ತೆಗೆದುಕೊಂಡು ಹೊಸ್ತಿಲಿನ ಕಡೆಗೆ ನಡೆದರು. ಕೆಲವು ಕ್ಷಣಗಳಲ್ಲಿ ಅವರ ಬೈಕ್ ಸದ್ದು ನಿಧಾನವಾಗಿ ಬೀದಿಯಲ್ಲಿ ಮಾಯವಾಯಿತು.

ಬಂಟಿಯನ್ನು ಮತ್ತೆ ಮಡಿಲಿಗೆ ತೆಗೆದುಕೊಂಡು, ಪತಿಯ ಕಡೆ ನೋಡಿ ಚಿರುನಕ್ಕರು ಶೋಭನಾ. "ಏನಯ್ಯ, ಇವತ್ತು ನೀವು ನಮ್ಮ ಮನೆಯನ್ನು ಕಾಪಾಡಿದಿರಿ" ಎಂದರು. ಅವರ ಕಣ್ಣುಗಳಲ್ಲಿ ಹೆಮ್ಮೆ. ಅವರ ನಗುವನ್ನು ನೋಡುತ್ತಾ, ತಾವೂ ಸಣ್ಣದಾಗಿ ನಕ್ಕರು ರಾಜೇಂದ್ರ. "ಶೋಭಾ, ನಾವು ಇಲ್ಲೇ ಇರುತ್ತೇವೆ. ನಮಗೆ ಈ ಮನೆಯೇ ಸ್ವರ್ಗ. ಈ ಗೋಡೆಗಳು ಹಳೆಯದಾಗಿರಬಹುದು. ಆದರೆ ಅವು ನಮ್ಮ ಜೀವನದ ಭಾಗ." ಎಂದು ಹೊಸ್ತಿಲಿನ ಕಡೆ ನೋಡಿದರು. ಅಲ್ಲಿ ತುಳಸಿ ಗಿಡದ ಮೇಲೆ ಬಿದ್ದ ಸೂರ್ಯಕಿರಣಗಳು ಒಂದು ಚಿಕ್ಕ ನೆರಳನ್ನು ಚಿತ್ರಿಸುತ್ತಿದ್ದವು.

ಬಂಟಿ ಶೋಭನಾ ಮಡಿಲಿನಿಂದ ಒಂದು ಜಿಗಿದು, ಉತ್ಸಾಹದಿಂದ ಹೊಸ್ತಿಲಿನ ಕಡೆಗೆ ನಡೆಯಿತು. ಬೀದಿಗೆ ಓಡಿ, ಅಲ್ಲಿ ಒಂದು ಚಿಕ್ಕ ಮಗು ಆಡುತ್ತಿದ್ದ ರಬ್ಬರ್ ಬಾಲ್ ಅನ್ನು ನೋಡಿ ಗೊರಗುಟ್ಟಿತು. ಬೀದಿಯ ಮಕ್ಕಳು ಬಂಟಿಯನ್ನು ನೋಡಿ, "ಹಾಯ್.. ಬಂಟಿ ಬಂತು!" ಎಂದು ಸಂತೋಷದಿಂದ ಕೂಗಿದರು. ಅದು ತನ್ನ ಮುಪ್ಪಿನ ಕಾಲುಗಳಿಂದ ರಬ್ಬರ್ ಬಾಲ್ ಅನ್ನು ಹಿಡಿದುಕೊಂಡು ತಾನೂ ಆಟದಲ್ಲಿ ಭಾಗಿಯಾಯಿತು. ಅದರ ಬಾಲ ಸಂತೋಷದಿಂದ ಒಂದು ಲಯದಲ್ಲಿ ಓಲಾಡುತ್ತಿತ್ತು. ಹೊಸ್ತಿಲಿನಲ್ಲಿ ನಿಂತು, ಇದನ್ನೆಲ್ಲಾ ನೋಡಿದ ಶೋಭನಾ, "ಸ್ವಾಮೀ, ನೋಡಿ.. ಬಂಟಿ ಎಷ್ಟು ಉತ್ಸಾಹದಿಂದ ಆಡುತ್ತಿದೆ" ಎಂದರು.

ತಮ್ಮ ಕುರ್ಚಿಯಲ್ಲಿ ಹಿಂದಕ್ಕೆ ಒರಗಿ, ಗಟ್ಟಿಯಾಗಿ ಉಸಿರು ತೆಗೆದುಕೊಂಡರು ರಾಜೇಂದ್ರ. ಅವರ ತಲೆಯಲ್ಲಿ ರಾಘವರಾವ್ ಮಾತುಗಳು, ವಾಣಿಜ್ಯ ಸಮುದಾಯದ ಬಗ್ಗೆಯ ಭಯಗಳು.. ಒಂದು ಚಿಕ್ಕ ಮೋಡದಂತೆ ಬಂದು ಮಾಯವಾದವು. ಬಂಟಿಯ ಆಟ, ಶೋಭನಾಳ ನಗು, ಈ ಮನೆಯ ಹೊಸ್ತಿಲು.. ಇವೆಲ್ಲಾ ಅವರಿಗೆ ಸ್ಪಷ್ಟವಾದ ಉತ್ತರ ಅನಿಸಿದವು. ಬೀದಿಯಲ್ಲಿ ಒಂದು ಸೈಕಲ್ ಬೆಲ್ ಮೊಳಗಿತು. ಒಂದು ಆಕಳು 'ಅಂಬಾ' ಎಂದು ಸಣ್ಣದಾಗಿ ಅರಚಿತು. ಆ ಕ್ಷಣ.. ಆ ಮನೆ ದಂಪತಿಗಳಿಬ್ಬರಿಗೂ ಒಂದು ಚಿಕ್ಕ ಸ್ವರ್ಗ!!