ಖ್ಯಾತ ಲೇಖಕ, ಕಾದಂಬರಿಕಾರ ಶರಚ್ಚಂದ್ರ (ಶರತ್ ಚಂದ್ರ ಚಟ್ಟೋಪಾಧ್ಯಾಯ) ಚಟರ್ಜಿ ಅವರ ಹಲವಾರು ಬರಹಗಳು ಕನ್ನಡಕ್ಕೆ ಅನುವಾದಗೊಂಡಿವೆ. ಅವುಗಳಲ್ಲಿ ‘ಕೊರೆಲ್’ ಎನ್ನುವ ನೀಳ್ಗತೆಯೂ ಒಂದು. ಈ ನೀಳ್ಗತೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಜನಾರ್ದನ ಕುಲಕರ್ಣಿ. ಇದು ಶರಚ್ಚಂದ್ರರ ಪ್ರಥಮ ಸುದೀರ್ಘ ಕತೆ. ಶರಚ್ಚಂದ್ರರ ಕತೆಗಳನ್ನು ಕನ್ನಡಕ್ಕೆ ತರಲು ಬಹಳಷ್ಟು ಶ್ರಮಿಸಿದ ಗುರುನಾಥ ಜೋಶಿಯವರು ಪುಟ್ಟದಾದ ಮುನ್ನುಡಿಯನ್ನು ಬರೆದಿದ್ದಾರೆ.
ಅದರಲ್ಲಿ ಅವರು “ಭಾರತದ ಸರ್ವಶ್ರೇಷ್ಠ ಕಾದಂಬರಿಕಾರರಾಗಿದ್ದ ದಿವಂಗತ ಶರಚ್ಚಂದ್ರರ ಎಲ್ಲಿಯೂ ಕನ್ನಡದಲ್ಲಿ ಇದುವರೆಗೆ ಪ್ರಕಟವಾಗದಿದ್ದ ಕಥೆ ‘ಕೊರೆಲ್’, ಇದೊಂದು ಸುಂದರ ಪ್ರಣಯ ಕಥೆ. ಇದರ ಸ್ಥಾನ ವಿದೇಶವಾಗಿದ್ದರೂ ಇದರಲ್ಲಿಯ ವಿಚಾರಗಳು, ಸನ್ನಿವೇಶಗಳು ಭಾರತೀಯ ಸಮಾಜಕ್ಕೆ ಒಗ್ಗು ವಂತಹವು. ಆದ್ದರಿಂದ ಇದು ಭಾರತೀಯರಿಗೂ ಮೆಚ್ಚುಗೆಯಾಗುವಂತಹದು.
ಇದನ್ನು ನೇರವಾಗಿ ಬಂಗಲಾದಿಂದ (ಬಂಗಾಲಿ) ಶ್ರೀ ಜನಾರ್ದನ ಕುಲಕರ್ಣಿಯವರು ಬಹು ಸುಂದರವಾಗಿ ಅನುವಾದಿಸಿದ್ದಾರೆ. ಅನುವಾದಕರು ಕಲಕತ್ತೆಯಲ್ಲಿ ಬಹು ವರ್ಷ ನೌಕರಿಯಲ್ಲಿದ್ದವರು. ಬಂಗಲಾ ಭಾಷೆಯ ಮತ್ತು ಸಾಹಿತ್ಯದ ಅಭ್ಯಾಸ ಮಾಡಿದವರು. ಬಂಗಲಾ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಕನ್ನಡಿಗರಿಗೆ ಕೊಡುವ ಸದಿಚ್ಛೆಯುಳ್ಳವರು. ಇವರ ಸದಿಚ್ಛೆ ಕೈಗೂಡಲೆಂದು ಹೃತ್ತೂರ್ವಕವಾಗಿ ಹಾರೈಸುವೆ.” ಎಂದು ಶುಭಕೋರಿದ್ದಾರೆ.
ಈ ಕೃತಿಯಲ್ಲಿರುವ ಸರಳ ಹಾಗೂ ಪುಟ್ಟದಾದ ಪ್ರೇಮ ಕಥೆ ನಡೆಯುವುದು ‘ಕೊರೆಲ್’ ಎನ್ನುವ ಗ್ರಾಮದಲ್ಲಿ. ಇದು ನಡೆಯುವ ಕಾಲದಲ್ಲಿ ಬರ್ಮ (ಈಗಿನ ಮಾಯನ್ಮಾರ್) ಇನ್ನೂ ಬ್ರಿಟೀಷರ ಶಾಸನಕ್ಕೆ ಒಳಪಟ್ಟಿರಲಿಲ್ಲ. ಲಂಡನ್ ನಗರದ ಉತ್ತರಕ್ಕೆ ನೂರಾ ಐದು ಮೈಲುಗಳ ದೂರದಲ್ಲಿರುವುದೇ ಕೊರೆಲ್ ಎನ್ನುವ ಗ್ರಾಮ. ನೆರೆಕರೆಯಲ್ಲಿರುವ ಇಬ್ಬರು ನಿವೃತ್ತ ಸೈನಿಕರ ಮನೆಗಳ ಕಥೆಯನ್ನು ಇಲ್ಲಿ ಹೇಳಲಾಗಿದೆ. ಒಬ್ಬನ ಹೆಸರು ಕ್ಯಾಪ್ಟನ್ ನೋಲ್ ಮತ್ತು ಇನ್ನೊಬ್ಬ ಕರ್ನಲ್ ಹ್ಯಾರಿಂಗ್ಟನ್. ಕ್ಯಾಪ್ಟನ್ ನೋಲ್ ಗೆ ಒಬ್ಬಳೇ ಮಗಳು ಮೇರಿ ಹಾಗೂ ಕರ್ನಲ್ ಹ್ಯಾರಿಂಗ್ಟನ್ ಗೆ ಒಬ್ಬನೇ ಮಗ ಲಿವೋ ಪೋಲ್ಡ್. ಅವನ ತಾಯಿ ಆತನನ್ನು ಪ್ರೀತಿಯಿಂದ ‘ಲಿವೊ’ ಎಂದೇ ಕರೆಯುತ್ತಿದ್ದಳು. ಲಿವೊನ ತಾಯಿಯ ಅಕಾಲ ಮೃತ್ಯುವಿನಿನ ಕಾರಣದಿಂದ ಕರ್ನಲ್ ಹ್ಯಾರಿಂಗ್ಟನ್ ಬದುಕಿನ ಮೇಲಿನ ಆಸೆಯನ್ನು ಕಳೆದುಕೊಂಡು ಸಾರಾಯಿ ದಾಸನಾಗಿ ಕುಡುಕನಾಗುತ್ತಾನೆ. ಕುಡಿಯಲು ಹಣ ಸಾಲದೇ ಇದ್ದಾಗ ತನ್ನ ಗೆಳೆಯ ಕ್ಯಾಪ್ಟನ್ ನೋಲ್ ನ ಹತ್ತಿರ ಸಾಲ ತೆಗೆದುಕೊಳ್ಳುತ್ತಾನೆ. ಆದರೂ ಸಾಲದ ಮೊತ್ತ ಹೆಚ್ಚಾದಾಗ ತೀರಿಸಲಾಗದೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡುತ್ತಾನೆ. ಆಗ ಲಿವೋ ಲಂಡನ್ನಿನಲ್ಲಿ ಕಲಿಯುತ್ತಿರುತ್ತಾನೆ. ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡ ಲಿವೋ ನನ್ನು ಮೇರಿ ಸಂತೈಸುತ್ತಾಳೆ. ಮನದ ಮೂಲೆಯಲ್ಲಿ ಅವರಿಬ್ಬರಲ್ಲೂ ಪ್ರೇಮ ಮೂಡುತ್ತದೆ.
ಆದರೆ ಭಗವಂತನ ಇಚ್ಚೆ ಬೇರೆಯೇ ಆಗಿರುತ್ತದೆ. ಮೇರಿಯ ತಂದೆ ಜ್ವರ ಬಂದು ನಿಧನ ಹೊಂದುತ್ತಾನೆ. ತಾಯಿ ಮೊದಲೇ ಸತ್ತುಹೋಗಿರುತ್ತಾಳೆ. ಆದರೆ ಆತ ಮೇರಿಗಾಗಿ ಅಪಾರ ಸಂಪತ್ತನ್ನು ಬಿಟ್ಟು ಹೋಗಿರುತ್ತಾನೆ. ಮೇರಿ ಆ ಸಂಪತ್ತನ್ನು ಬಳಸಿ ಊರಿನ ಜನರಿಗೆ ಬಡ್ಡಿಗಾಗಿ ಸಾಲ ನೀಡುತ್ತಾಳೆ. ಹೀಗೆ ಬಹುದೊಡ್ಡ ಸಾವುಕಾರಗಿತ್ತಿಯಾಗುತ್ತಾಳೆ. ತನ್ನ ಮನೆಯಲ್ಲಿ ಆಗಾಗ ಔತಣ ಕೂಟಗಳನ್ನು ಏರ್ಪಡಿಸುತ್ತಾಳೆ. ಹಲವಾರು ಹುಡುಗರು ಬಂದು ತಡರಾತ್ರಿಯತನಕ ಆಕೆಯ ಮನೆಯಲ್ಲಿ ಉಳಿದು, ಕುಡಿದು, ಹಾಡುತ್ತಾ ಇರುವುದು ಲಿವೋ ಗೆ ಇಷ್ಟವಾಗುವುದಿಲ್ಲ. ಈ ವಿಚಾರ ಮೇರಿಗೆ ತಿಳಿಸಿದಾಗ ಅವಳು ಅವನ ಬಳಿ ಮಾತಾಡುವುದನ್ನೇ ಕಡಿಮೆ ಮಾಡುತ್ತಾಳೆ. ಚಾರ್ಲ್ಸ್ ಎನ್ನುವ ಹುಡುಗನ ಜೊತೆ ಮೇರಿಯ ಒಡನಾಟ ತುಂಬಾ ಹೆಚ್ಚಾಗುತ್ತದೆ. ಇದು ಲಿವೋಗೆ ತಿಳಿದು ಆಕೆಯನ್ನು ಎಚ್ಚರಿಸಿದರೂ ಆಕೆಯ ನಡವಳಿಕೆ ಬದಲಾಗುವುದಿಲ್ಲ.
ಒಮ್ಮೆ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಮೇರಿ ಜಾದೂಗಾರನೊಬ್ಬನ ಪ್ರದರ್ಶನವನ್ನು ಏರ್ಪಡಿಸಿರುತ್ತಾಳೆ. ಆದರೆ ಅನಾರೋಗ್ಯದ ಕಾರಣದಿಂದ ಜಾದೂಗಾರ ಬರುವುದಿಲ್ಲ. ಊರಿನವರ ಎದುರು ತನ್ನ ಮರ್ಯಾದೆ ಹೋಗುತ್ತದೆ ಎಂದು ಅಂಜುವ ಮೇರಿ, ಕಾರ್ಯಕ್ರಮದ ಸ್ಥಳದಿಂದ ಹೊರನಡೆಯುತ್ತಾಳೆ. ಆದರೆ ಅಲ್ಲಿಗೆ ಬಂದಿದ್ದ ಲಿವೋ ಸುಂದರವಾಗಿ ಪಿಯಾನೋ ನುಡಿಸಿ, ಹಾಡು ಹಾಡಿ ಬಂದ ಊರಿನವರ ಮನಗೆಲ್ಲುತ್ತಾನೆ. ಆದರೆ ಆತ ಮೇರಿ ಜೊತೆ ಮಾತನಾಡಲು ಬಯಸುವುದಿಲ್ಲ. ಇದು ಮೇರಿಯ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ. ಅದಕ್ಕಾಗಿ ಆಕೆ ಅವನ ತಂದೆ ಮಾಡಿದ ಸಾಲವನ್ನು ಏಳು ದಿನಗಳ ಒಳಗಾಗಿ ತೀರಿಸಬೇಕು ಎಂದು ಕರಾರು ಹಾಕುತ್ತಾಳೆ. ಮೇರಿಗೆ ಕೊಡಬೇಕಾಗಿದ್ದ ಸುಮಾರು ಹನ್ನೆರಡು ಸಾವಿರ ಪೌಂಡ್ ಸಾಲದ ಹಣವನ್ನು ಲಿವೋ ತೀರಿಸುತ್ತಾನೆಯಾ? ಮೇರಿ ಮತ್ತು ಲಿವೋ ಮೊದಲಿನಂತೆಯೇ ಹತ್ತಿರವಾಗುತ್ತಾರೆಯಾ? ಮೇರಿ ಯಾರನ್ನು ಮದುವೆಯಾಗುತ್ತಾಳೆ? ಎಂಬೆಲ್ಲಾ ಕುತೂಹಲ ತೀರಲು ‘ಕೊರೆಲ್’ ಎನ್ನುವ ನೀಳ್ಗತೆಯನ್ನು ಓದಲೇ ಬೇಕು.
ಪುಟ್ಟದಾದ ೪೬ ಪುಟಗಳ ಈ ನೀಳ್ಗತೆಯ ಪುಸ್ತಕವನ್ನು ಅನುವಾದಕರಾದ ಜನಾರ್ದನ ಕುಲಕರ್ಣಿಯವರು “ನನ್ನಲ್ಲಿ ಸಾಹಿತ್ಯದ ಅಭಿರುಚಿಯ ಅಂಕುರಕ್ಕೆ ಕಾರಣರಾದ ನನ್ನ ಪೂಜ್ಯ ತಂದೆ ಶ್ರೀ ಮಲ್ಲಾರಿ ಬಾಳಕೃಷ್ಣ ಕುಲಕರ್ಣಿ, ಬೈಲವಾಡ ಇವರ ಪೂಜ್ಯ ಸ್ಮೃತಿಗೆ ಈ ಮೊದಲ ಹೂವಿನ ಅರ್ಪಣೆ” ಎಂದು ಅರ್ಪಿಸಿದ್ದಾರೆ. ಸುಮಾರು ಐದು ದಶಕಗಳ ಹಿಂದಿನ ಘಟನಾವಳಿಗಳನ್ನು ಈಗ ಓದುವಾಗ ಏನೋ ಒಂಥಾರಾ ಅನಿಸಿದರೂ ಕಥೆಯ ಮೂಲವಸ್ತು ಚೆನ್ನಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!