ಖ್ಯಾತ ಕಥೆಗಾರ ‘ಅನು ಬೆಳ್ಳೆ’ (ರಾಘವೇಂದ್ರ ಬಿ. ರಾವ್) ಅವರು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ತೇದಾರಿ ಕಥೆಗಳನ್ನು ‘ಕೊಲೆಗಾರ’ ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ‘ಪುಸ್ತಕ ಮನೆ’ಯವರು.
“"ಸರ್ ಹಾಗಲ್ಲ, ಅವಳ ನಂಬರಿಗೆ ಫೋನ್ ಮಾಡಿಯಾಯಿತು. ಈಗ ಆ ಸಿಸ್ಟರ್ ಕೂಡ ಕಾಣಿಸ್ತಿಲ್ಲ."
"ಅಂದ್ರೆ... ಅಂದ್ರೆ... ಅಂದ್ರೆ..." ವೈದ್ಯಾಧಿಕಾರಿ ಹುಚ್ಚು ಹಿಡಿದವರಂತೆ ಕುರ್ಚಿಯಿಂದ ಎದ್ದು ಎದುರಿಗೆ ಕುಳಿತ್ತಿದ್ದ ಮೂವರತ್ತಲು ಬಾಗಿದ.
"ಸಾರ್, ಹೆಣದ ಜೊತೆಗೆ ಅವಳು -- ಮಾಯಾವಾಗಿದ್ದಾಳೆ ಸಾರ್" ಶನಿಚಾರನ ಮಾತುಗಳನ್ನು ಕೇಳಿ ಇನ್ನಷ್ಟು ಉರಿದ ಅಬುಧಾಬಿ.
"ಆ ಶ್ರೀಮಂತನ ಹಿಂದೆ ಓಡಿ ಹೋಗುವುದಕ್ಕೆ ಏನಾಗಿದೆ ಅವಳಿಗೆ?"
"ಸಾರ್, ಅವಳು ಓಡಿ ಹೋಗಿಲ್ಲ ಸಾರ್. ಶವಾಗಾರದ ಕಾವಲುಗಾರ ಹೇಳ್ತಾ ಇದ್ದಾನೆ... ಆ ಶವಾನೇ ಶಾಲಿನಿನ ಹಾರಿಸಿಕೊಂಡು ಹೋಗಿದೆಯಂತೆ."
ಡಾಕ್ಟರ್ ಅಬುಧಾಬಿ ದೊಪ್ಪನೆ ಕುರ್ಚಿಯಲ್ಲಿ ಕುಸಿದು ತಲೆಗೆ ಕೈ ಹಚ್ಚಿ ಕುಳಿತ.”
ಈ ಕುತೂಹಲ ಕೆರಳಿಸುವ ಸಾಲುಗಳು ‘ಓಡಿ ಹೋದ ಶವ’ ಕಥೆಯದ್ದು. ಇಂತಹ ರೋಚಕತೆ ಈ ಪುಸ್ತಕದಲ್ಲಿರುವ ಪ್ರತೀ ಕಥೆಯಲ್ಲೂ ಓದುಗರಿಗೆ ಕಾಣ ಸಿಗಲಿದೆ. ತಮ್ಮ ಮುನ್ನುಡಿಯಲ್ಲಿ ಅನು ಬೆಳ್ಳೆಯವರು ಹೇಳುತ್ತಾರೆ “ಕೊಲೆಗಾರ ಪತ್ತೇದಾರಿ ಕಥಾ ಸಂಕಲನ. ೨೦೧೦ರಲ್ಲಿ ಪ್ರಕಟವಾದ ಈ ಕೃತಿ ಇದೀಗ ನಾಡಿನ ಮನೆ ಮಾತಾಗಿರುವ ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳದ ಮೂಲಕ ಎರಡನೇ ಆವೃತಿ ಕಾಣುತ್ತಿರುವುದು ಸಂತಸದ ಸಂಗತಿ. ಇಲ್ಲಿಯ ಕಥೆಗಳೆಲ್ಲವೂ ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು. ಕಾಡಿನ ಹೊಳೆ(ಕರ್ಮವೀರ); ಕಥೆಗಾರ (ತಿಂಗಳು); ಕೊಲೆಗಾರ (ಸುಧಾ); ಓಡಿ ಹೋದ ಶವ! (ಕನ್ನಡ ಪ್ರಭ); ಸಾಕ್ಷಿ (ಕರ್ಮವೀರ); ಸೇಡು (ಹಂಸರಾಗ) ತೂಗು ಸೇತುವೆ (ಮಯೂರ); ಸಾಕ್ಷಿ (ಸಂಯುಕ್ತ ಕರ್ನಾಟಕ); ಸಂಗಾತಿ (ಕರ್ಮವೀರ). ಪತ್ರಿಕೆಯಲ್ಲಿ ಕಥೆಗಳನ್ನು ಪ್ರಕಟಿಸಿದ ಪತ್ರಿಕೆಗಳ ಸಂಪಾದಕರಿಗೆ ಸದಾ ಋಣಿ.”
ಸುಮಾರು ೧೫೦ ಪುಟಗಳ ಈ ಕೃತಿಯು ಪತ್ತೇದಾರಿ ಕಥೆಗಳನ್ನು ಓದಲು ಆಸಕ್ತಿ ಇರುವವರು ಅವಶ್ಯವಾಗಿ ಓದಲೇ ಬೇಕು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!