ತಪ್ಪು ಮಾಡೋದು ಮನುಷ್ಯನ ಸಹಜ ಗುಣ; ಇನ್ನೊಬ್ಬರು ಮಾಡಿದ ತಪ್ಪನ್ನು ಕ್ಷಮಿಸುವುದು ದೈವಿಕ ಗುಣ. ಈ ಮಾತು ಎಂಥಾ ದೊಡ್ಡ ಸತ್ಯ ಅಂದ್ರೆ.. ನಾವು ನಮ್ಮ ಮನಸ್ಸಿಗೆ ಆದ ನೋವನ್ನು ಬಿಡಲಾರದೆ ಹಠ ಹಿಡಿಯೋದು ಸಹಜವೇ ಆದ್ರೂ, ಆದರೆ ಕ್ಷಮಿಸಿ ಬಿಡೋದನ್ನು ಕಲಿತರೆ… ಅದು ನಮ್ಮನ್ನು ಇನ್ನಷ್ಟು ಎತ್ತರದ ಮಾನಸಿಕ ಮಟ್ಟಕ್ಕೆ ಕೊಂಡೊಯ್ಯುತ್ತೆ. ಕ್ಷಮೆಯೆಂದರೆ ಕೇವಲ ಮತ್ತೊಬ್ಬರಿಗೆ ನಾವು ಮಾಡೋ ಉಪಕಾರವಲ್ಲ, ಅದೊಂದು ನಮ್ಮ ಆಂತರಿಕಶಾಂತಿಗಾಗಿ, ನಮ್ಮದೇ ಆತ್ಮಕ್ಕೆನಾವು ಮಾಡಿಕೊಳ್ಳೋ ದೊಡ್ಡ ಒಳಿತು.
ಆದರೂ ಕೂಡ, ನಿಜವಾದ ಮಾನಸಿಕ ಮುಕ್ತಿಗೆ ಕೇವಲ ಒಂದು ಕ್ಷಣದ ಕ್ಷಮೆ ಸಾಲದು. ನಮ್ಮ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು, ನಾವು ನಮ್ಮ ಸುಪ್ತ ಮನಸ್ಸಿನಲ್ಲಿ (ಮೈಂಡ್ನ ಒಳಪದರದಲ್ಲಿ) ತುಂಬಿಕೊಂಡಿರೋ ಹಳೆ ಕಹಿ ನೆನಪುಗಳನ್ನು, ನೆಗೆಟಿವ್ ಯೋಚನೆಗಳನ್ನು ಹೊರಹಾಕಿ ಮುಕ್ತವಾಗಬೇಕು. ನಾವು ಹಳೆ ನೋವುಗಳನ್ನು ಮನಸ್ಸಿನಲ್ಲೇ ಹೂತುಕೊಂಡು ಕೂತ್ರೆ,... ಅವು ನಮ್ಮಲ್ಲಿರೋ ಉತ್ಸಾಹವನ್ನು ಖಾಲಿ ಮಾಡಿಬಿಡುತ್ತವೆ, ಚಿಂತೆಗಳನ್ನು ಹುಟ್ಟುಹಾಕಿ, ನಮ್ಮಬದುಕಿನ ದಾರಿಯನ್ನೇ ಮಸುಕಾಗಿಸುತ್ತವೆ.
ಹೀಗಾಗಿ, ನಮ್ಮ ಸುಪ್ತ ಮನಸ್ಸನ್ನು ಇಂಥಾ ಭಾವನಾತ್ಮಕ ಕಸದಿಂದ ಶುದ್ಧ ಮಾಡಿಕೊಳ್ಳುವುದು. ಶಾಶ್ವತ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಅತಿ ಮುಖ್ಯವಾದ ದಾರಿಯಾಗಿದೆ. ಮನಃಪೂರ್ವಕವಾಗಿ ಕ್ಷಮಿಸುವುದನ್ನು ರೂಢಿಸಿಕೊಳ್ಳಲು ಕೆಲವು ಸಲಹೆಗಳು. ಯಾರಿಗಾದರೂ ಮನಸ್ಸಿನಿಂದ ಕ್ಷಮೆ ನೀಡುವುದು ಎಂದರೆ ಅದೊಂದು ಧೈರ್ಯ ಮತ್ತು ಕರುಣೆಯ ಪಯಣ. ಅದನ್ನು ಪ್ರಾಮಾಣಿಕವಾಗಿ ರೂಢಿಸಿಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ: ನಿಮಗೆ ಆದ ನೋವನ್ನು ಒಪ್ಪಿಕೊಳ್ಳಿ ಮತ್ತು ಗೌರವಿಸಿ.
ನಿಮ್ಮ ಭಾವನೆಗಳನ್ನು ಹತ್ತಿಕ್ಕಿಕೊಂಡು ಎಂದಿಗೂ ನಿಜವಾದ ಕ್ಷಮೆ ನೀಡಲು ಸಾಧ್ಯವಿಲ್ಲ. ನಿಮಗೆ ನೋವಾಗಿದೆ, ಕೋಪ ಬಂದಿದೆ ಅಥವಾ ಬೇಸರವಾಗಿದೆ ಎಂಬುದನ್ನು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳಿ; ಅಲ್ಲಿ ತಪ್ಪಾಗಿದೆ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಿ. ವ್ಯಕ್ತಿಯಿಂದ ಆತನ ವರ್ತನೆಯನ್ನು ಬೇರೆ ಮಾಡಿ ನೋಡಿ. ಜನರು ಅನೇಕ ಬಾರಿ ತಮ್ಮದೇ ಆದ ಒಳನೋವುಗಳು, ಅಭದ್ರತೆಗಳು ಅಥವಾ ಹಿಂದಿನ ಸಮಸ್ಯೆಗಳಿಂದಾಗಿ ಹಾಗೆ ವರ್ತಿಸಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ವ್ಯಕ್ತಿಯನ್ನು ಅವನ ಕೆಟ್ಟ ವರ್ತನೆಯಿಂದ ಪ್ರತ್ಯೇಕಿಸಿ ನೋಡಿದಾಗ, ವೈಯಕ್ತಿಕ ದ್ವೇಷ ತಾನಾಗೇ ಕರಗಿಹೋಗುತ್ತದೆ.
ಬಾಕಿ ತೀರಿಸುವ ಅಥವಾ ಸೇಡು ತೀರಿಸಿಕೊಳ್ಳುವ ಚಟವನ್ನು ಬಿಟ್ಟುಬಿಡಿ. ಮನಸ್ಸಿನಲ್ಲೇ ಯಾರ ಮೇಲಾದರೂ ಸೇಡು ತೀರಿಸಿಕೊಳ್ಳಬೇಕು ಅಥವಾ ಕರ್ಮವೇ ಅವರಿಗೆ ಶಿಕ್ಷೆ ನೀಡಲಿ ಎಂದು ಕಾಯುವುದನ್ನು ಕೈಬಿಡಿ. ಈ ಹಳೆ ಲೆಕ್ಕಾಚಾರಗಳನ್ನು ಬಿಟ್ಟುಬಿಟ್ಟರೆ, ನಿಮ್ಮ ಮಾನಸಿಕ ಶಕ್ತಿ ನಿಮ್ಮ ಸ್ವಂತ ಬೆಳವಣಿಗೆಗೆ ವೃದ್ಧಿಸುತ್ತದೆ. ಕ್ಷಮೆಯೆಂದರೆ ಅದೊಂದು ನಿರಂತರ ಪ್ರಕ್ರಿಯೆ ಎಂದು ತಿಳಿಯಿರಿ: ಕ್ಷಮೆ ಅನ್ನೋದು ಒಂದೇ ಕ್ಷಣದಲ್ಲಿ ಆಗಿಹೋಗುವ ಜಾದೂ ಅಲ್ಲ; ನಿಮ್ಮ ಮನಸ್ಸು ಆ ನಿರ್ಧಾರಕ್ಕೆ ಸಂಪೂರ್ಣವಾಗಿ ಒಪ್ಪಿಕೊಳ್ಳುವವರೆಗೂ, ಪ್ರತಿದಿನವೂ ನೀವು ಮಾಡಬೇಕಾದ ಒಂದು ಒಳ್ಳೆಯ ನಿರ್ಧಾರವದು.
"ಸುಪ್ತ ಮನಸ್ಸಿನಿಂದ ನೆಗೆಟಿವ್ ನೆನಪುಗಳನ್ನು ಮರೆಯುವ ಬಗೆ ಹೇಗೆ? ಬಹಿರಂಗ ಮನಸ್ಸು ಕ್ಷಮಿಸಲು ಮುಂದಾದರೂ, ಸುಪ್ತ ಮನಸ್ಸು ಮಾತ್ರ ಹಿಂದಿನ ನೋವುಗಳ ಹಳೆಯ ನೆನಪುಗಳನ್ನು ಹಾಗೂ ದೇಹದ ಮೇಲಾದ ಆಘಾತದ ಗುರುತುಗಳನ್ನು ಹಾಗೇ ಉಳಿಸಿಕೊಂಡಿರುತ್ತದೆ. ಈ ನೆಗೆಟಿವ್ ಪ್ರಭಾವಗಳನ್ನು ನಿಮ್ಮ ಸುಪ್ತ ಮನಸ್ಸಿನಿಂದ ಸಂಪೂರ್ಣವಾಗಿ ತೆಗೆದುಹಾಕಲು:.. ಮೈಂಡ್ಫುಲ್ನೆಸ್ (ಪ್ರಜ್ಞಾಪೂರ್ವಕ ಇರವು) ಮೂಲಕ ಭಾವನಾತ್ಮಕವಾಗಿ ಅಂಟಿಕೊಳ್ಳುವುದನ್ನು ಬಿಡಿ. ನಿಮ್ಮ ತಲೆಗೆ ಬರುವ ಹಳೆ ನೆಗೆಟಿವ್ ಯೋಚನೆಗಳನ್ನು ಯಾವುದೇ ಭಾವನೆಗಳಿಗೆ ಒಳಗಾಗದೆ ಬರೀ ಗಮನಿಸಿ. ಹಳೆ ನೆನಪುಗಳು ಮತ್ತೆ ಮರುಕಳಿಸಿದಾಗ, ಅದನ್ನೀಗ ನಡೆಯುತ್ತಿರುವ ಘಟನೆ ಅಂದುಕೊಳ್ಳದೆ, ಕೇವಲ ಒಂದು ಹಳೆ ಡೇಟಾ (ಮಾಹಿತಿ) ಅಷ್ಟೇ ಅಂತ ತಿಳಿದುಕೊಳ್ಳಿ. ನಿಮ್ಮ ಬಗ್ಗೆ ನೀವೇ ಹೇಳಿ ಕೊಳ್ಳುವ ಕಥೆ ಯನ್ನು ಬದಲಾಯಿಸಿ. ನಿಮ್ಮ ಪರಿಸ್ಥಿತಿಯ ಬಗ್ಗೆ ನೀವು ಮನಸ್ಸಿನಲ್ಲಿ ಹೇಳಿಕೊಳ್ಳುವ ದೃಷ್ಟಿಕೋನವನ್ನು ಬದಲಿಸಿ. ಪರಿಸ್ಥಿತಿಯ ಕೈಯಲ್ಲಿ ಸಿಲುಕಿ ನರಳಿದ ಅಸಹಾಯಕಳಂತೆ ಅಥವಾ ಅಸಹಾಯಕನಂತೆ ಯೋಚಿಸುವುದನ್ನು ಬಿಟ್ಟು, ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಹೆಚ್ಚು ಗಟ್ಟಿಯಾಗಿ ಬೆಳೆದಿರುವ ಓರ್ವ ಗೆಲುವಿನ ವ್ಯಕ್ತಿ ಎಂದುಕೊಳ್ಳಿ.
ದೇಹದ ಒತ್ತಡವನ್ನು ಹೊರಹಾಕುವ ತಂತ್ರಗಳನ್ನು ಬಳಸಿ: ಹಳೆ ನೋವುಗಳು ನಮ್ಮ ದೇಹದಲ್ಲೂ ಕೆಲವೊಮ್ಮೆದೈಹಿಕ ಒತ್ತಡವಾಗಿ ಕೂತುಕೊಂಡಿರುತ್ತವೆ. ದೀರ್ಘವಾದ ಉಸಿರಾಟದ ವ್ಯಾಯಾಮ (ಉಸಿರಾಟದ ಕಸರತ್ತು), ಪ್ರತಿದಿನ ವ್ಯಾಯಾಮ ಮಾಡುವುದು ಅಥವಾ ಧ್ಯಾನ ಮಾಡುವ ಮೂಲಕ ಮೈ-ಮನಸ್ಸಿನಲ್ಲಿದ್ದ ನರಗಳ ಒತ್ತಡವನ್ನು ಹೊರಹಾಕಿ. ಮನಸ್ಸನ್ನು ಸಕಾರಾತ್ಮಕ ಯೋಚನೆಗಳಿಂದ ತುಂಬಿಕೊಳ್ಳಿ:
ಹಳೆ ಭಾವನೆಗಳ ಕಹಿ ನೆನಪುಗಳನ್ನು ಓಡಿಸಲು, ನಿಮ್ಮನ್ನು ನೀವು ಇವುಗಳಲ್ಲಿ ತೊಡಗಿಸಿಕೊಳ್ಳಿ. ಕೃತಜ್ಞತಾ ಭಾವ (ಇರುವುದಕ್ಕೆ ಧನ್ಯವಾದ ಹೇಳುವುದು), ಒಳ್ಳೆಯವರ ಸಹವಾಸ, ಮನಸ್ಸಿಗೆ ಮುರುವು ತರುವ ....ಹೊಸ ಅನುಭವಗಳು. ಇವೆಲ್ಲವೂ ನಿಮ್ಮಲ್ಲಿ ಹೊಸದಾದ ಸಕಾರಾತ್ಮಕ ಯೋಚನೆಗಳ ಬುನಾದಿಯನ್ನು ಹಾಕುತ್ತವೆ. ಬಿಟ್ಟುಬಿಡುವುದರ ಶಕ್ತಿ:
ಒಂದು ಸಣ್ಣ ಒಳನೋಟ, ಕೋಪವನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ಅಂದ್ರೆ, ನಾವೇ ವಿಷ ಕುಡಿದು ಬೇರೆಯವರು ಸಾಯಲಿ ಅಂತ ಕಾಯೋದರ ಸಮಾನ, ಕ್ಷಮೆ ಮತ್ತು ಮರೆಯುವಿಕೆಯ ಈ ಅದ್ಭುತ ಶಕ್ತಿಯನ್ನುಅರ್ಥಮಾಡಿ'ಕೊಳ್ಳಲು, ತಮ್ಮ ಮಠಕ್ಕೆ ಮರಳುತ್ತಿದ್ದ ಇಬ್ಬರು ಜೆನ್ ಸನ್ಯಾಸಿಗಳ ಈ ಪ್ರಸಿದ್ಧ ಕಥೆಯನ್ನು ನೆನಪಿಸಿಕೊಳ್ಳಿ. ದಾರಿಯಲ್ಲಿ ಬರುತ್ತಿರುವಾಗ ಅವರಿಬ್ಬರಿಗೆ ಒಂದು ದೊಡ್ಡ ನದಿ ಎದುರಾಯಿತು. ಅಲ್ಲಿ ರೇಷ್ಮೆ ಸೀರೆ ಉಟ್ಟಿದ್ದ ಯುವತಿಯೊಬ್ಬಳು ಬಟ್ಟೆ ಹಾಳಾಗಬಾರದು ಎಂದು ನದಿ ದಾಟಲಾಗದೆ ಕಷ್ಟಪಡುತ್ತ ನಿಂತಿದ್ದಳು. ಯೋಚನೆ ಮಾಡದೆ ಹಿರಿಯ ಸನ್ಯಾಸಿ ಆಕೆಯನ್ನು ತನ್ನ ಹೆಗಲ ಮೇಲೆ ಕೂಡಿಸಿಕೊಂಡು ನದಿ ದಾಟಿಸಿ, ಆಚೆಯ ದಡದಲ್ಲಿ ಬಹಳ ಅಕ್ಕರೆಯಿಂದ ಕೆಳಗಿಳಿಸಿದರು.
ಆ ಇಬ್ಬರು ಸನ್ಯಾಸಿಗಳು ಯಾವುದೇ ಮಾತಾಡದೆ ತಮ್ಮ ಪ್ರಯಾಣ ಮುಂದುವರೆಸಿದರು. ಗಂಟೆಗಳು ಕಳೆದವು, ಮಠದ ಹತ್ತಿರ ಬರುವಷ್ಟರಲ್ಲಿ, ಹಿರಿಯವರು ಮಾಡಿದ್ದು ತಮ್ಮ ಧರ್ಮಕ್ಕೆ ವಿರುದ್ಧವಾದದ್ದು ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದ ಕಿರಿಯ ಸನ್ಯಾಸಿಗೆ ತನ್ನ ಸಿಟ್ಟನ್ನು ತಡೆಯಲು ಆಗಲಿಲ್ಲ.
ಆತ ಜೋರಾಗಿ, ಗುರುಗಳೇ, ಸನ್ಯಾಸಿಗಳಾದ ನಾವೆಂದೂ ಹೆಂಗಸರನ್ನು ಮುಟ್ಟಬಾರದು ಎಂಬ ನಿಯಮವಿದೆಯಲ್ಲ! ಆ ಹೆಣ್ಣನ್ನು ನೀವು ನದಿ ದಾಟಿಸಿದ್ದು ಹೇಗೆ?" ಎಂದು ಪ್ರಶ್ನಿಸಿದ.
ಹಿರಿಯ ಸನ್ಯಾಸಿ ಆತನನ್ನು ಶಾಂತವಾಗಿ ನೋಡಿ ಹೇಳಿದರು, ಅವಳನ್ನು ನಾನು ನದಿ ದಡದಲ್ಲೇ ಬಿಟ್ಟು ಗಂಟೆಗಳೇ ಕಳೆದಿವೆ ಕಣೋ. ಆದರೆ ನೀನೇಕೆ ಇನ್ನೂ ಅವಳನ್ನು ನಿನ್ನ ಹೆಗಲ ಮೇಲೆಯೇ ಹೊತ್ಕೊಂಡು ತಿರುಗುತ್ತಿದ್ದೀಯಾ? ಈ ಕಥೆ ನಮ್ಮ ದಿನನಿತ್ಯದ ಬದುಕಿನ ಪ್ರತಿಬಿಂಬವೇ ಸರಿ.
ನಾವು ಮನಸ್ಸಿನಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿರುವ ಹಳೆ ಕಹಿ ಘಟನೆಗಳು, ಅವಮಾನಗಳು ಮತ್ತು ನೋವುಗಳು ಆ ಘಟನೆ ಮುಗಿದು ಎಷ್ಟೋ ವರ್ಷಗಳಾದರೂ ನಾವು ಹೊತ್ತುಕೊಂಡು ತಿರುಗುವ ದೊಡ್ಡ ಭಾರದ ಕಲ್ಲುಗಳಂತಿವೆ. ಯಾವಾಗ ನಾವು ಮನಃಪೂರ್ವಕವಾಗಿ ಕ್ಷಮಿಸುವ ಕಲೆಯನ್ನು ಕರಗತ ಮಾಡಿಕೊಂಡು, ನಮ್ಮ ಸುಪ್ತ ಮನಸ್ಸಿನಲ್ಲಿದ್ದ ಕಸವನ್ನು ಕಳೆದು ಕೊಳ್ಳುತ್ತೇವೆಯೋ, ಆಗ ನಾವು ಆ ದೊಡ್ಡ ಭಾರವನ್ನು ಕೆಳಗಿಳಿಸಿ—ಮತ್ತಷ್ಟು ಹಗುರವಾದ, ಆರೋಗ್ಯಕರವಾದ ಮತ್ತು ಅಪ್ಪಟ ನೆಮ್ಮದಿಯ ಜೀವನಕ್ಕೆ ಕಾಲಿಡುತ್ತೇವೆ. ಕ್ಷಮೆ ಮತ್ತು ಮರೆತುಬಿಡುವ
ಬಗೆಯ ವಿವಿಧ ಆಯಾಮಗಳ ಬಗ್ಗೆ ನಿಮಗೆ ಸ್ವಲ್ಪನಾದರೂ ಉಪಯುಕ್ತ ತಿಳಿವಳಿಕೆ ನೀಡಿದ್ದೇನೆಎಂದು ಭಾವಿಸುತ್ತೇನೆ. ಜೊತೆಗೆ, ದ್ವೇಷದ ವಿಷವರ್ತುಲದಿಂದ ಹೊರಬಂದು, ನಮ್ಮ ಮಾನಸಿಕ ನೆಮ್ಮದಿಯ ಮೇಲಿನ ಆ ದೊಡ್ಡ ಹೊರೆಯನ್ನು ಇಳಿಸಿಕೊಳ್ಳಲು ಇದು ಸಹಾಯ ಮಾಡಲಿದೆ ಎಂದು ಭಾವಿಸುತ್ತೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!