Reis Magos Fort ಗೋವಾದ ಬರ್ಡೇಜ್ ತಾಲ್ಲೂಕಿನ ವೆರೇಮ್ ಪ್ರದೇಶದಲ್ಲಿ, ಮಾಂಡೋವಿ ನದಿಯ ದಡದಲ್ಲಿ ಇರುವ ಪ್ರಸಿದ್ಧ ಐತಿಹಾಸಿಕ ಕೋಟೆಯಾಗಿದೆ. ಇದು ಪಣಜಿಯಿಂದ ನದಿಯ ಆಚೆ ಭಾಗದಲ್ಲಿ ಕಾಣಿಸುತ್ತದೆ.
ಇತಿಹಾಸ : ಈ ಪ್ರದೇಶದಲ್ಲಿ ಮೊದಲಿಗೆ 1493ರಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾ ನೆಲೆ ಇತ್ತು. ಪೋರ್ಚುಗೀಸರು ಗೋವಾದ ಮೇಲೆ ಹಿಡಿತ ಸಾಧಿಸಿದ ನಂತರ 1551ರಲ್ಲಿ ಕೋಟೆಯನ್ನು ನಿರ್ಮಿಸಿದರು. ನಂತರ ಕೋಟೆಯನ್ನು ಹಲವು ಬಾರಿ ವಿಸ್ತರಿಸಲಾಗಿದ್ದು, 1707ರಲ್ಲಿ ಸಂಪೂರ್ಣವಾಗಿ ಪುನರ್ ನಿರ್ಮಿಸಲಾಯಿತು. ಆರಂಭದಲ್ಲಿ ಪೋರ್ಚುಗಲ್ನಿಂದ ಬರುವ ವೈಸರಾಯ್ಗಳು ಮತ್ತು ಗಣ್ಯರಿಗೆ ವಸತಿ ವ್ಯವಸ್ಥೆಯಾಗಿ ಬಳಸಲಾಗುತ್ತಿತ್ತು. ನಂತರ ಇದು ಪ್ರಮುಖ ರಕ್ಷಣಾ ಕೋಟೆಯಾಯಿತು.

ವಾಸ್ತುಶಿಲ್ಪ : ಕೋಟೆಯನ್ನು ಗೋವಾದಲ್ಲಿ ದೊರೆಯುವ ಗಟ್ಟಿಯಾದ ಲ್ಯಾಟರೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಎತ್ತರದ ಗೋಡೆಗಳು, ಕಾವಲು ಗೋಪುರಗಳು ಮತ್ತು ಕೋಟೆಯೊಳಗಿನ ಸುರಂಗಗಳು ಇದರ ಪ್ರಮುಖ ವೈಶಿಷ್ಟ್ಯಗಳು. ಕೋಟೆಯಲ್ಲಿ ಹಿಂದೆ 33 ಫಿರಂಗಿಗಳ ವ್ಯವಸ್ಥೆಯೂ ಇತ್ತು.
ಕೋಟೆಯ ನಂತರದ ಬಳಕೆ : ಕಾಲಕ್ರಮೇಣ ಇದರ ಸೇನಾ ಮಹತ್ವ ಕಡಿಮೆಯಾದ ನಂತರ ಕೋಟೆಯನ್ನು ಜೈಲಾಗಿ ಬಳಸಲಾಯಿತು. 1993ರವರೆಗೆ ಜೈಲಿನ ಬಳಕೆಯಲ್ಲಿತ್ತು. ನಂತರ ಕೋಟೆ ನಿರ್ಲಕ್ಷ್ಯಕ್ಕೊಳಗಾಯಿತು. 2008ರಲ್ಲಿ INTACH, ಗೋವಾ ಸರ್ಕಾರ ಮತ್ತು Helen Hamlyn Trust ಸಹಯೋಗದಲ್ಲಿ ಪುನರುಜ್ಜೀವನ ಕಾರ್ಯ ಆರಂಭವಾಯಿತು. ಇಂದು ಇದು ಸಾಂಸ್ಕೃತಿಕ ಕೇಂದ್ರ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿದೆ.
ಪ್ರವಾಸಿಗರಿಗೆ ವಿಶೇಷ ಆಕರ್ಷಣೆ : ಕೋಟೆಯ ಮೇಲಿನಿಂದ ಮಾಂಡೋವಿ ನದಿ, ಪಣಜಿ ನಗರ ಮತ್ತು ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ನೋಡಬಹುದು. ಐತಿಹಾಸಿಕ ಕಟ್ಟಡ, ವಾಸ್ತುಶಿಲ್ಪ ಮತ್ತು ನೈಸರ್ಗಿಕ ಸೌಂದರ್ಯ ಒಂದೇ ಸ್ಥಳದಲ್ಲಿ ಸಿಗುವುದರಿಂದ ಛಾಯಾಚಿತ್ರ ತೆಗೆಯಲು ಸಹ ಉತ್ತಮ ತಾಣವಾಗಿದೆ.
ಸಮೀಪದ ರೈಸ ಮಾಗೋಸ್ ಚರ್ಚ್ : ಕೋಟೆಯ ಸಮೀಪದಲ್ಲೇ ರೈಸ ಮಾಗೋಸ್ ಚರ್ಚ್ ಇದೆ. ಈ ಚರ್ಚ್ ಅನ್ನು 1555ರಲ್ಲಿ ನಿರ್ಮಿಸಲಾಗಿದ್ದು, ಗೋವಾದ ಆರಂಭಿಕ ಚರ್ಚ್ಗಳಲ್ಲಿ ಒಂದಾಗಿದೆ.

ಭೇಟಿ ಸಮಯ : ಗೋವಾ ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಕೋಟೆ ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 11:00ರಿಂದ ಸಂಜೆ 5:30ರವರೆಗೆ ತೆರೆದಿರುತ್ತದೆ. 'ರೈಸ ಮಾಗೋಸ್ ಕೋಟೆ ಗೋವಾದ ಪೋರ್ಚುಗೀಸ್ ಕಾಲದ ಇತಿಹಾಸ, ರಕ್ಷಣಾ ವ್ಯವಸ್ಥೆ, ಲ್ಯಾಟರೈಟ್ ವಾಸ್ತುಶಿಲ್ಪ ಮತ್ತು ಮಾಂಡೋವಿ ನದಿಯ ಸೌಂದರ್ಯವನ್ನು ಪರಿಚಯಿಸುವ ಮಹತ್ವದ ಪ್ರವಾಸಿ ತಾಣವಾಗಿದೆ'.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!