ಕೆಲವು ಸ್ಥಳಗಳು ನಮ್ಮ ನೆನಪುಗಳ ಭಾಗವಾಗಿರುತ್ತವೆ. ಇನ್ನು ಕೆಲವು ಸ್ಥಳಗಳು ಮತ್ತೊಬ್ಬರ ನೆನಪುಗಳ ಮೂಲಕ ನಮಗೆ ಪರಿಚಯವಾಗುತ್ತವೆ. ಚಿತ್ರದುರ್ಗದ ಶ್ರೀ ಲಕ್ಷ್ಮೀ ಭವನ ಟಿಫಿನ್ ರೂಮ್ ನನಗೆ ಎರಡನೇ ರೀತಿಯಲ್ಲಿ ಪರಿಚಯವಾದ ಸ್ಥಳ.
ಚಿತ್ರದುರ್ಗದಲ್ಲಿ ನಡೆದ "ಬ್ರ್ಯಾಂಡ್ ಚಿತ್ರದುರ್ಗ" ಕಾರ್ಯಕ್ರಮಕ್ಕೆ ನಾನು ಕಾಲೇಜು ಸ್ನೇಹಿತ ಹರಿಪ್ರಸಾದ್ ಮತ್ತು ಕೆಲವು ಗೆಳೆಯರ ಜೊತೆ ಹೊಗಿದ್ದೆ. ಅಲ್ಲಿ ಹರಿಯ ಮುಖ್ಯ ಭಾಷಣ ಒಣಭೂಮಿಯನ್ನೇ ಅವಕಾಶವನ್ನಾಗಿ ಪರಿವರ್ತಿಸಬಹುದೆಂಬ ಅವನ ಚಿಂತನೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ನಮಗೆಲ್ಲರಿಗೂ ಸಾಕಷ್ಟು ಹಸಿವಾಗಿತ್ತು.
"ಬಾ, ಮೊದಲು ಶ್ರೀ ಲಕ್ಷ್ಮೀ ಭವನಕ್ಕೆ ಹೋಗೋಣ. ಚಿತ್ರದುರ್ಗಕ್ಕೆ ಬಂದು ಅಲ್ಲಿ ದೋಸೆ ತಿನ್ನದೇ ಹೋಗುವುದು ಸರಿಯಲ್ಲ." ಎಂದ ಹರಿ. ಅವನು ತನ್ನ ಬಾಲ್ಯದ ಕೆಲವು ಸಮಯ ಚಿತ್ರದುರ್ಗದಲ್ಲಿ ಕಳೆದಿದ್ದ.
ನನಗೆ ಆ ಹೋಟೆಲ್ ಹೆಸರು ಆಗ ಸಂಪೂರ್ಣ ಹೊಸದು. ಆದರೆ ಹರಿಯ ಮಾತಿನಲ್ಲಿದ್ದ ಖಚಿತತೆ ನೋಡಿ ಇದು ಸಾಮಾನ್ಯ ಹೋಟೆಲ್ ಅಲ್ಲ ಎನ್ನುವುದು ಅರ್ಥವಾಯಿತು. ನಂತರ ತಿಳಿಯಿತು — ಅವನಿಗೆ ಅದು ಕೇವಲ ಒಂದು ಹೋಟೆಲ್ ಅಲ್ಲ, ಬಾಲ್ಯದ ನೆನಪುಗಳ ಜೊತೆ ಬೆಸೆದುಕೊಂಡಿದ್ದ ಒಂದು ವಿಶೇಷ ಸ್ಥಳ.
ಹೋಟೆಲ್ ತಲುಪುವ ಮುನ್ನವೇ ಒಂದು ಸಣ್ಣ ಘಟನೆ ನಮ್ಮ ಪ್ರವಾಸವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿತು.
ಹಳೆಯ ಕೋಟೆಯ ಕಮಾನು ಬಾಗಿಲಿನ ಮೂಲಕವೇ ಒಳಗೆ ಹೋಗಬೇಕಿತ್ತು.ಚಿತ್ರದುರ್ಗದ ಕೋಟೆಯ ಬಾಗಿಲುಗಳನ್ನು ನೋಡಿದರೆ ಅವುಗಳನ್ನು ಕೇವಲ ಜನರಿಗಾಗಿ ಕಟ್ಟಿಲ್ಲ ಎನ್ನುವುದು ಅರ್ಥವಾಗುತ್ತದೆ. ಯುದ್ಧಕಾಲದ ಆನೆಗಳು, ಕುದುರೆಗಳು ಮತ್ತು ಸೇನೆಗಳ ಸಂಚಾರವನ್ನು ಗಮನದಲ್ಲಿಟ್ಟುಕೊಂಡೇ ಅವು ನಿರ್ಮಾಣವಾಗಿದ್ದವು.
ನನ್ನ ಕಾರು ಕಮಾನು ಕಡೆ ನಿಧಾನವಾಗಿ ಸಾಗುತ್ತಿದ್ದಾಗ ಸ್ನೇಹಿತರಲ್ಲಿ ಒಬ್ಬರು ತಮಾಷೆಯಾಗಿ ಹೇಳಿದರು: "ಈ ಬಾಗಿಲು ಮೂಲತಃ ಆನೆಗಳು ಒಳಗೆ ಹೋಗಲು ಕಟ್ಟಿದ್ದು. ನಿನ್ನ ಕಾರು ಕೂಡ ಆನೆಯಷ್ಟೇ ಗಾತ್ರ ಇದೆ. ಹಾಗಾಗಿ ಈ ಬಾಗಿಲು ಮತ್ತು ನಿನ್ನ ಕಾರಿನ ಜೋಡಿ ಪರಿಪೂರ್ಣ!" ಎಲ್ಲರೂ ನಕ್ಕರು. ನಿಜ ಹೇಳಬೇಕೆಂದರೆ, ಆ ಕಮಾನು ಮೂಲಕ ಕಾರು ಹೋಗುವಾಗ ನನಗೂ ಸ್ವಲ್ಪ ಅನುಮಾನವಿತ್ತು. ಒಂದು ಕಾಲದಲ್ಲಿ ಇದೇ ದಾರಿಯಲ್ಲಿ ರಾಜರ ಆನೆಗಳು ನಡೆದಿರಬಹುದು. ಇಂದು ಅದೇ ದಾರಿಯಲ್ಲಿ ನನ್ನ SUV ಸಾಗುತ್ತಿದೆ. ಇತಿಹಾಸದ ದೃಷ್ಟಿಯಿಂದ ನೋಡಿದರೆ ಇದು ಪ್ರಗತಿ. ಚಾಲಕನ ದೃಷ್ಟಿಯಿಂದ ನೋಡಿದರೆ ಇದು ಪರೀಕ್ಷೆ!ಅದೃಷ್ಟವಶಾತ್ ಕಾರು, ಕಮಾನು ಮತ್ತು ನನ್ನ ಆತ್ಮವಿಶ್ವಾಸ – ಮೂರೂ ಸುರಕ್ಷಿತವಾಗಿ ಒಳಗೆ ಪ್ರವೇಶಿಸಿದವು.
ಕಮಾನು ದಾಟಿದ ತಕ್ಷಣ ಹಳೆಯ ಚಿತ್ರದುರ್ಗ ತನ್ನದೇ ಆದ ಛಾಯೆಯಲ್ಲಿ ನಮ್ಮನ್ನು ಸ್ವಾಗತಿಸಿತು. ಕಿರಿದಾದ ರಸ್ತೆಗಳು, ಹಳೆಯ ಅಂಗಡಿಗಳು, ಮಾರುಕಟ್ಟೆಯ ಚಟುವಟಿಕೆಗಳು ಮತ್ತು ಅದರ ಮಧ್ಯೆ ತನ್ನದೇ ಆದ ಗುರುತನ್ನು ಉಳಿಸಿಕೊಂಡಿರುವ ಶ್ರೀ ಲಕ್ಷ್ಮೀ ಭವನ.
ಹೊರಗಿನಿಂದ ನೋಡಿದರೆ ಇದು ಯಾವುದೇ ದೊಡ್ಡ ಅಥವಾ ಆಧುನಿಕ ರೆಸ್ಟೋರೆಂಟ್ ಅಲ್ಲ.
ಆದರೆ ಒಳಗೆ ಕಾಲಿಟ್ಟ ಕೆಲವೇ ನಿಮಿಷಗಳಲ್ಲಿ ಒಂದು ವಿಷಯ ಅರ್ಥವಾಗುತ್ತದೆ.
ಇಲ್ಲಿ ಜನರು ಅಲಂಕಾರಕ್ಕಾಗಿ ಬರುವುದಿಲ್ಲ. ರುಚಿಗಾಗಿ ಬರುತ್ತಾರೆ.
ಹರಿಪ್ರಸಾದ್ ಈಗಾಗಲೇ ಅನುಭವಿ ಮಾರ್ಗದರ್ಶಿಯಂತೆ ವರ್ತಿಸುತ್ತಿದ್ದ."ಮೊದಲು ದೋಸೆ ಬರಲಿ. ನಂತರ ಮಾತನಾಡೋಣ" ಎಂದನು. ಸ್ವಲ್ಪ ಸಮಯದಲ್ಲೇ ದೋಸೆ ಮತ್ತು ಕಾಫಿ ನಮ್ಮ ಮುಂದೆ ಬಂದವು.
ಮೊದಲ ತುಂಡು ಬಾಯಿಗೆ ಹೋದ ತಕ್ಷಣ ಯಾಕೆ ಇಷ್ಟು ವರ್ಷಗಳಿಂದ ಈ ಸ್ಥಳದ ಬಗ್ಗೆ ಜನರು ಮಾತನಾಡುತ್ತಾರೆ ಎಂಬುದು ಅರ್ಥವಾಯಿತು. ಅದು ಕೇವಲ ದೋಸೆಯ ರುಚಿಯಲ್ಲ; ವರ್ಷಗಳ ಕಾಲ ಉಳಿಸಿಕೊಂಡು ಬಂದಿರುವ ಒಂದು ಸಂಪ್ರದಾಯದ ರುಚಿ.

ಆದರೆ ನ್ಯಾಯವಾಗಿ ಹೇಳಬೇಕೆಂದರೆ, ಶ್ರೀ ಲಕ್ಷ್ಮೀ ಭವನ ಪರಿಪೂರ್ಣ ಹೋಟೆಲ್ ಅಲ್ಲ.
ಸ್ಥಳ ಕಿರಿದಾಗಿದೆ. ವಾಹನ ನಿಲುಗಡೆಗೆ ಹೆಚ್ಚಿನ ಅವಕಾಶವಿಲ್ಲ. ಆಧುನಿಕ ರೆಸ್ಟೋರೆಂಟ್ಗಳ ಸೌಲಭ್ಯಗಳನ್ನು ನಿರೀಕ್ಷಿಸಿ ಹೋದರೆ ನಿರಾಶೆಯಾಗಬಹುದು. ಆದರೆ ಈ ಹೋಟೆಲ್ನ ಬಲವೂ ಅದೇ.
ಇಲ್ಲಿ ಅಲಂಕಾರಕ್ಕಿಂತ ರುಚಿಗೆ ಆದ್ಯತೆ. ದೊಡ್ಡ ಮೆನುಗಿಂತ ಕೆಲವು ಆಯ್ದ ಪದಾರ್ಥಗಳ ಮೇಲೆ ಗಮನ. ಖಾಲಿ ದೋಸೆ, ಮಸಾಲೆ ದೋಸೆ, ಇಡ್ಲಿ, ವಡೆ, ಚೌಚೌ ಬಾತ್ ಮತ್ತು ಫಿಲ್ಟರ್ ಕಾಫಿ – ದಶಕಗಳಿಂದ ಜನರನ್ನು ಮತ್ತೆ ಮತ್ತೆ ಇಲ್ಲಿಗೆ ಕರೆತರುತ್ತಿರುವುದು ಇದೇ ಸರಳತೆ.
ಆನೆಬಾಗಿಲು ಸಮೀಪದ ಚಿಕ್ಕಪೇಟೆಯಲ್ಲಿರುವ ಈ ಟಿಫಿನ್ ರೂಮ್ ಸುಮಾರು ಏಳು ದಶಕಗಳ ಇತಿಹಾಸ ಹೊಂದಿದೆ ಎಂದು ಹೇಳಲಾಗುತ್ತದೆ. ಕೆಲವು ಮೂಲಗಳ ಪ್ರಕಾರ ಇದರ ಆರಂಭ 1953ರ ಸುಮಾರಿಗೆ. ಇಂದು ಸಾವಿರಾರು ಗ್ರಾಹಕರ ವಿಮರ್ಶೆಗಳೊಂದಿಗೆ ನಾಲ್ಕಕ್ಕಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ಈ ಹೋಟೆಲ್, ಸ್ಥಳೀಯರ ನೆನಪುಗಳಿಗೆ ಮಾತ್ರ ಸೀಮಿತವಾಗದೆ, ಇತ್ತೀಚಿನ ವರ್ಷಗಳಲ್ಲಿ ಶ್ರೀ ಲಕ್ಷ್ಮೀ ಭವನ ಯೂಟ್ಯೂಬ್ ಆಹಾರ ಪ್ರಿಯರ ಗಮನವನ್ನೂ ಸೆಳೆದಿದೆ. ಜನಪ್ರಿಯ ಆಹಾರ ವ್ಲಾಗರ್ ಕೃಪಾಲ್ ಅಮನ್ನ ಅವರು ಕೂಡ ಇಲ್ಲಿ ಭೇಟಿ ನೀಡಿ ಖಾಲಿ ದೋಸೆ ಮತ್ತು ಸಾಂಪ್ರದಾಯಿಕ ಉಪಹಾರದ ಬಗ್ಗೆ ವಿಡಿಯೋ ಮಾಡಿರುವುದು ಇದರ ಖ್ಯಾತಿಗೆ ಮತ್ತೊಂದು ಸಾಕ್ಷಿ. ಆದರೆ ಕಾರಣ ಮಾತ್ರ ಹಳೆಯದೇ "ದಶಕಗಳಿಂದ ಜನರನ್ನು ಮತ್ತೆ ಮತ್ತೆ ಕರೆತರುತ್ತಿರುವ ಒಂದು ದೋಸೆ ಮತ್ತು ಒಂದು ಕಪ್ ಕಾಫಿ".
ಪ್ರವಾಸ ಮುಗಿದ ಕೆಲ ದಿನಗಳ ನಂತರ ಹರಿಪ್ರಸಾದ್ ಈ ಹೋಟೆಲ್ ಬಗ್ಗೆ ತನ್ನ ದುರ್ಗದ ಬಗೆಗಿನ ಲೆಖನದಲ್ಲಿ ಉಲ್ಲೆಖಿಸಿ ಬರೆದಿದ್ದ.ಅದನ್ನು ಓದಿದಾಗ ನನಗೆ ಆಸಕ್ತಿದಾಯಕವಾದ ಒಂದು ವಿಷಯ ಗಮನಕ್ಕೆ ಬಂತು. ನಾನು ಆ ಹೋಟೆಲ್ನ್ನು ವರ್ತಮಾನದಲ್ಲಿ ನೋಡಿದ್ದೆ. ಅವನು ಅದನ್ನು ನೆನಪುಗಳ ಮೂಲಕ ನೋಡಿದ್ದ.
ತನ್ನ ಬಾಲ್ಯದಲ್ಲಿ ಕುಟುಂಬದವರ ಜೊತೆ ತಿಂದ ಖಾಲಿ ದೋಸೆಯ ರುಚಿ ಇಂದಿನ ದೋಸೆಯಲ್ಲಿ ಸಿಗುವುದಿಲ್ಲ ಎಂಬ ಭಾವನೆಯನ್ನು ಅವನು ಲೇಖನದಲ್ಲಿ ವ್ಯಕ್ತಪಡಿಸಿದ್ದ.ಅದು ಸಹಜವೇ ಇರಬಹುದು.ಏಕೆಂದರೆ ವರ್ಷಗಳು ಬದಲಾಗುತ್ತವೆ. ಜನರು ಬದಲಾಗುತ್ತಾರೆ. ರುಚಿಗಳೂ ಬದಲಾಗುತ್ತವೆ. ಆದರೆ ಅದಕ್ಕಿಂತ ಹೆಚ್ಚು ಬದಲಾಗುವುದು ನಮ್ಮ ನೆನಪುಗಳು. ಬಾಲ್ಯದ ಒಂದು ದೋಸೆ ಕೇವಲ ದೋಸೆಯಾಗಿರುವುದಿಲ್ಲ. ಅದರ ಜೊತೆ ಕುಟುಂಬ, ಪ್ರವಾಸ, ನಗು ಮತ್ತು ನಿರಾಳತೆಯ ನೆನಪುಗಳೂ ಸೇರಿಕೊಂಡಿರುತ್ತವೆ. ಅದನ್ನು ಇಂದಿನ ಯಾವುದೇ ಹೋಟೆಲ್ ಮರುಸೃಷ್ಟಿಸಲು ಸಾಧ್ಯವಿಲ್ಲ. ಬಹುಶಃ ಅದಕ್ಕಾಗಿಯೇ ನನಗೆ ಆ ದೋಸೆ ಚೆನ್ನಾಗಿ ಅನಿಸಿತು ಮತ್ತು ಬಹುಶಃ ಅದಕ್ಕಾಗಿಯೇ ಹರಿಪ್ರಸಾದ್ಗೆ ಅದು ಹಿಂದಿನಷ್ಟು ಅದ್ಭುತವಾಗಿ ಅನಿಸಿರಲಿಲ್ಲ.
ನಾನು ದೋಸೆಯ ರುಚಿಯನ್ನು ಅನುಭವಿಸುತ್ತಿದ್ದೆ. ಅವನು ತನ್ನ ಬಾಲ್ಯವನ್ನು ಹುಡುಕುತ್ತಿದ್ದ.
ಇಬ್ಬರ ಅನುಭವಗಳೂ ಸರಿ.
ಚಿತ್ರದುರ್ಗ ಕೋಟೆಯು ನಗರದ ಇತಿಹಾಸವನ್ನು ಹೇಳಿದರೆ, ಶ್ರೀ ಲಕ್ಷ್ಮೀ ಭವನ ಅದರ ರುಚಿಯ ಇತಿಹಾಸವನ್ನು ಹೇಳುತ್ತದೆ. ಆದರೆ ಹರಿಪ್ರಸಾದ್ನಂತಹ ಅನೇಕರಿಗೆ ಅದು ಕೇವಲ ಒಂದು ಹೋಟೆಲ್ ಅಲ್ಲ — ಬಾಲ್ಯದ ನೆನಪುಗಳು ಇನ್ನೂ ಬಿಸಿಬಿಸಿಯಾಗಿ ಬಡಿಸಲ್ಪಡುವ ಒಂದು ಸ್ಥಳ.
ಚಿತ್ರ - google images
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!