ಚೆಕಾವ್ ನ ಸಣ್ಣ ಕಥೆಗಳು

ಸಣ್ಣ ಕಥೆಗಳ ಮಾಂತ್ರಿಕ ಎಂದೇ ಹೆಸರುವಾಸಿಯಾದ ರಷ್ಯಾದ ಕಥೆ, ನಾಟಕಕಾರ ಆಂಟೆನ್ ಚೆಕಾವ್ ಅಥವಾ ಚೆಕಾಫ್ (Anton Chekhov) ರ ಕೆಲವು ಸಣ್ಣ ಕಥೆಗಳನ್ನು ಕನ್ನಡ ಕಥೆಗಾರ ಉದಯಕುಮಾರ ಹಬ್ಬು ಇವರು ಅನುವಾದ ಮಾಡಿದ್ದಾರೆ. ಸಣ್ಣ ಕಥೆಗಳನ್ನು ಅನುವಾದ ಮಾಡುವುದು ಒಂದು ದೊಡ್ಡ ಸಾಹಸದ ಕೆಲಸ. ಏಕೆಂದರೆ ಸಣ್ಣ ಕಥೆಗಳ ಮೂಲ ಭಾಷೆಯಲ್ಲಿ ಕಡಿಮೆ ಪದಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಥೆಯನ್ನು ಕಟ್ಟಿಕೊಡಬೇಕಾಗುತ್ತದೆ. ಈ ರೀತಿಯ ಕಥೆಗಳು ಹೆಚ್ಚಾಗಿ ಭಾವನಾತ್ಮಕವಾಗಿರುತ್ತವೆ. ಅದೇ ರೀತಿಯ ಪರಿಣಾಮ ಅನುವಾದದಲ್ಲೂ ಬಿಂಬಿಸಬೇಕಾಗುತ್ತದೆ. ಇದನ್ನು ಸಾಕಷ್ಟು ಸಮರ್ಥವಾಗಿ ಉದಯಕುಮಾರರು ನಿಭಾಯಿಸಿದ್ದಾರೆ ಅನ್ನಬಹುದು.

ಚೆಕಾವ್ ಅವರನ್ನು “ಮೌನ ಸಂಕಟದ ಮಹಾನ್ ಧ್ವನಿ” ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ. “ಪ್ರಪಂಚದ ಸಣ್ಣ ಕಥೆಗಳ ಇತಿಹಾಸದಲ್ಲಿ ಆಂಟನ್ ಚೆಕಾವ್ ಒಬ್ಬ ಅಪ್ರತಿಮ ಮಾಂತ್ರಿಕ. ಬದುಕಿನ ಸಣ್ಣ ಸಂಗತಿಗಳನ್ನು ಹಿಡಿದು ಮಾನವ ಸ್ವಭಾವದ ಆಳವಾದ ಸತ್ಯಗಳನ್ನು ಹೊರಹಾಕುವ ಅವರ ಕಲೆ ಅದ್ಭುತವಾದದ್ದು. ಇಲ್ಲಿನ ೧೫ ಕಥೆಗಳು ರಷ್ಯಾದ ಹಿನ್ನೆಲೆಯಲ್ಲಿ ಬರೆದಿದ್ದರೂ ಇವು ಇಂದಿನ ನಮ್ಮ ಸಮಾಜಕ್ಕೆ ಮತ್ತು ಪ್ರತಿಯೊಬ್ಬ ಮನುಷ್ಯನ ಮನಸ್ಸಿಗೂ ಆಹಾರವಾಗುತ್ತದೆ.

ಒಬ್ಬ ಅನಾಥ ಬಾಲಕನ ಆಕ್ರಂದನ, ಪ್ರೀತಿಗಾಗಿ ಹಾತೊರೆಯುವ ಮುದ್ದಿನ ಮಗ, ಬಾಜಿಗೆ ಬಿದ್ದು ಜೀವನವನ್ನೇ ಬಲಿಕೊಡುವ ವಕೀಲ, ಮಗನನ್ನು ಕಳೆದುಕೊಂಡು ಯಾರೂ ಇಲ್ಲದ ಕುದುರೆಯ ಮುಂದೆ ಗೋಳಾಡುವ ಬಂಡಿ ಚಾಲಕ, ಹಾಗೂ ಇಲ್ಲಿನ ಪ್ರತಿಯೊಂದು ಪಾತ್ರವೂ ನಿಮ್ಮನ್ನು ಬಹಳ ಕಾಡಲಿದೆ. ಜಾಗತಿಕ ಸಾಹಿತ್ಯದ ಈ ಅಮೂಲ್ಯ ರತ್ನಗಳನ್ನು ಕನ್ನಡದ ಸೊಗಡಿನಲ್ಲಿ ನಿಮ್ಮ ಕೈಗಿಡಲಾಗಿವೆ. ಮನುಷ್ಯ ಸಂಬಂಧಗಳ ಸಂಕೀರ್ಣತೆ, ಒಂಟಿತನ ಮತ್ತು ಬದುಕಿನ ಅನಿಶ್ಚತತೆಯನ್ನು ಅರಿಯಲು ಈ ಕಥಾಸಂಕಲನವೊಂದು ಓದು ಅನಿವಾರ್ಯ.

ಜಗತ್ತಿನ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರಾದ ಅಂಟನ್ ಚೆಕಾವ್ ಸಾಹಿತ್ಯವು ಮನುಷ್ಯನ ಮನಸ್ಸಿನ ಆಳದ ಪದರುಗಳನ್ನು ತೆರೆದಿಡುತ್ತದೆ ಅವರ ಕಥೆಗಳಲ್ಲಿ ನಗುವಿನ ಹಿಂದಿನ ಅಡಗಿರುವ ನೋವುಂಟು.

ಈ ಸಂಕಲನದಲ್ಲಿ ಚೆಕಾವ್ ಅವರ ಅತ್ಯಂತ ಪ್ರಸಿದ್ಧ ೧೫ ಸಣ್ಣ ಕಥೆಗಳೂ ಹಾಗೂ ಅವರ " ನಾಟಕ. "ಚೆರ್ರಿ ಆರ್ಚರ್ಡ್ " ಚೆರ್ರಿ ಹಣ್ಣಿನ ತೋಟ" ನಾಟಕವನ್ನು ಸಮಗ್ರವಾಗಿ ನೀಡಲಾಗಿದೆ. ಜಮೀನ್ದಾರಿ ಪದ್ಧತಿಯ ಪತನ ಮತ್ತು ಬದಲಾಗುತ್ತಿರುವ ಸಮಾಜದ ಮುಖಾಮುಖಿಯನ್ನು ಚಿತ್ರಿಸುವ ಈ ನಾಟಕವು ವಿಶ್ವ ಸಾಹಿತ್ಯದ ಒಂದು ಅಚ್ಚರಿ. ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಅರಿಯಬಯಸುವ ಪ್ರತಿಯೊಬ್ಬರಿಗೂ ಈ ನಾಟಕ ಒಂದು ಕೈಗನ್ನಡಿ.” ಎಂದು ಬೆನ್ನುಡಿಯಲ್ಲಿ ಹೇಳಲಾಗಿದೆ.

ಅನುವಾದಕರಾದ ಉದಯಕುಮಾರ ಹಬ್ಬು ತಮ್ಮ ಮುನ್ನುಡಿಯಲ್ಲಿ “ವಿಶ್ವ ಸಾಹಿತ್ಯದ ಭೂಪಟದಲ್ಲಿ ರಷ್ಯಾದ ಮಹತ್ವದ ಲೇಖಕ ಆಂಟನ್ ಚೆಕಾವ್ ಅವರ ಹೆಸರು ಅಜರಾಮರ. ಅವರ ಕಥೆಗಳು ಕೇವಲ ಘಟನೆಗಳ ವಿವರಣೆಯಲ್ಲ; ಅವು ಮನುಷ್ಯನ ಅಂತರಂಗದ ಸಂಕೀರ್ಣತೆಗಳನ್ನು ಬಿಂಬಿಸುವ ಕನ್ನಡಿಗಳು. ಚೆಕಾವ್ ಅವರ ಕಥೆಗಳಲ್ಲಿ ನಾಯಕರಿಲ್ಲ; ವಿಲನ್ ಗಳಿಲ್ಲ. ಬದಲಿಗೆ ನಮ್ಮಂತೆಯೇ ಇರುವ, ನೋವು ನಲಿವುಗಳ ನಡುವೆ ತೊಳಲಾಡುವ ಸಾಮಾನ್ಯ ಮನುಷ್ಯರಿದ್ದಾರೆ.

ಈ ಸಂಕಲನದಲ್ಲಿ ನಾನು ಚೆಕಾವ್ ಅವರ ಆಯ್ದ ೧೫ ಕಥೆಗಳನ್ನು ಕನ್ನಡಕ್ಕೆ ತಂದಿದ್ದೇನೆ. ಇಲ್ಲಿನ ಪ್ರತಿಯೊಂದು ಕಥೆಯೂ ಒಂದೊಂದು ಜೀವನದ ದರ್ಶನವನ್ನು ಮೂಡಿಸುತ್ತದೆ."ವಾರ್ಡ್ ನಂಬರ್ 6” ವ್ಯವಸ್ಥೆಯ ಕ್ರಿಯೆಯನ್ನು ತೋರಿಸಿದರೆ "ದುಃಖ" ಮನುಷ್ಯರ ಒಂಟಿತನದ ಪರದಾಟವನ್ನು ಚಿತ್ರಿಸುತ್ತದೆ. * ಲಾಟರಿ ಟಿಕೆಟ್" ಹಣದ ಆಸೆಗೆ ಹೇಗೆ ಸಂಬಂಧಗಳನ್ನು ಹಾಳುಮಾಡಬಲ್ಲದು ಎಂಬ ವ್ಯಂಗ್ಯವನ್ನು ಮುಂದಿಟ್ಟರೆ” “ವಾಂಕಾ” ಬಾಲಕನ ಮುಗ್ಧ ಹಂಬಲವನ್ನು ನಮ್ಮ ಕಣ್ಣೆದುರು ಇಡುತ್ತದೆ.

ಚೆಕಾವ್ ಅವರ ಬರವಣಿಗೆ ಬದುಕಿನ ಸಣ್ಣ ಸಣ್ಣ ಘಟನೆಗಳಲ್ಲೇ ದೊಡ್ಡ ಸತ್ಯಗಳನ್ನು ಅಡಗಿಸಿಟ್ಟಿರುತ್ತಾರೆ. ಅದ್ದೂರಿ ಪದಗಳಿಲ್ಲದೆ ಸರಳವಾಗಿ ಮನಸ್ಸನ್ನು ತಟ್ಟುವ ಅವರ ಕಥೆಗಳನ್ನು ಕನ್ನಡ ಓದುಗರಿಗೆ ತಲುಪಿಸುವುದು ನನ್ನ ಈ ಪ್ರಯತ್ನದ ಮುಖ್ಯ ಉದ್ದೇಶ. ಈ ಅನುವಾದ ಪ್ರಕ್ರಿಯೆಯಲ್ಲಿ ನಾನು ಮೂಲನ ಕಥೆಯ ಭಾವನೆ ಮತ್ತು ಸಾಹಿತ್ಯಕ ಘನತೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕನ್ನಡ ಸಾಹಿತ್ಯಾಸಕ್ತರು ಈ ಜಾಗತಿಕ ಶ್ರೇಷ್ಠ ಕಥೆಗಳನ್ನು ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು.” ಎಂದು ತಮ್ಮ ಮನದಾಳದ ಅನಿಸಿಕೆಯನ್ನು ತೆರೆದಿರಿಸಿದ್ದಾರೆ.

ಹದಿನೈದು ಕಥೆಗಳು ಹಾಗೂ ಒಂದು ಪುಟ್ಟ ನಾಟಕವನ್ನು ಹೊಂದಿರುವ ೧೦೦ ಪುಟಗಳ ಈ ಪುಸ್ತಕವನ್ನು ಸಣ್ಣ ಕಥೆಗಳನ್ನು ಓದುವ ಆಸಕ್ತಿ ಇರುವವರು ಓದಲೇ ಬೇಕು. ಈ ಕೃತಿಯಲ್ಲಿನ ಒಂದು ಕಥೆ “ ಹಳ್ಳಿಯಲ್ಲೊಂದು ದಿನ” (A Day in the Country) ವನ್ನು ಓದುಗರಿಗಾಗಿ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಈ ಕಥೆಯನ್ನು ಓದಿದ ಮೇಲೆ ನಿಮಗೆ ಈ ಕೃತಿಯನ್ನೂ ಓದುವ ಆಸೆ ಖಂಡಿತವಾಗಿಯೂ ಮೂಡುತ್ತದೆ.