ಲೇಖಕ, ಕವಿ ದಿಲೀಪ್ ಎನ್ಕೆ ಅವರ ಕವನ ಸಂಕಲನ ʻಚೆಗ್ಗಿʼ ಹೊಸ ನುಡಿಗಟ್ಟಿನ ಕವಿತೆಗಳಾಗಿದೆ. ಈ ಕವನ ಸಂಕಲನದಲ್ಲಿ ದಲಿತ ಬಂಡಾಯದ ಕಾವ್ಯದಿಂದ ಕಲಿತ ಪಾಠಗಳು ಅಧಿಕವಾಗಿವೆ. ಬಡತನ, ಶೋಷಣೆ, ಪ್ರೀತಿ, ಮನುಷ್ಯತ್ವದ ಹಂಬಲ ಇಂಥ ಚಿತ್ರಗಳು ಮತ್ತೆ ಮತ್ತೆ ಬಂದಿವೆ. ಇವೆಲ್ಲ ಹೊಸ ರೂಪದಲ್ಲಿ ಬರಲು ಯತ್ನಿಸಿವೆ ಎಂಬುದೇ ಈ ಸಂಕಲನದ ಗುಣಾತ್ಮಕ ಸಂಗತಿ ಎನ್ನುತ್ತಾರೆ ಲೇಖಕ, ವಿಮರ್ಶಕ ವಿಕ್ರಮ ವಿಸಾಜಿ ಅವರು ಕೃತಿಗೆ ಬರೆದ ಅನಿಸಿಕೆ “ಹೊಸ ನುಡಿಗಟ್ಟಿನ ಕವಿತೆಗಳು” ನಿಮ್ಮ ಓದಿಗಾಗಿ ಇಲ್ಲಿದೆ…
“ಕನ್ನಡದಲ್ಲಿ ಸದ್ಯಕ್ಕೆ ಕವಿತೆಗಳ ಚರ್ಚೆ ಅಂಥ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಆದರೆ ಇದರಿಂದ ನಮ್ಮ ತರುಣ ಕವಿಗಳೇನೂ ವಿಚಲಿತರಾದಂತಿಲ್ಲ. ಹೊಸ ತಲೆಮಾರಿನ ಈ ಹುಡುಗ ಹುಡುಗಿಯರಿಗೆ ಈಗಲೂ ಕಾವ್ಯವೇ ನೆಚ್ಚಿನ ತಾಣ. ದಿಲೀಪ್ ಎನ್ನೆ ಕೂಡ ಇದೇ ಸಾಲಿಗೆ ಸೇರಿದ ಕವಿ. ತಮ್ಮ ಅನುಭವಗಳ ಅಭಿವ್ಯಕ್ತಿಗೆ ಅವರು ಕಾವ್ಯವನ್ನು ನೆಚ್ಚಿದ್ದಾರೆ. ಸುತ್ತಲಿನ ಸಮಾಜವನ್ನು ಅರಿಯುತ್ತ, ಇಲ್ಲಿನ ಅಸಮಾನತೆ, ಅಸ್ಪೃಶ್ಯತೆಗೆ ಹೊಸ ನುಡಿಗಟ್ಟು ಹುಡುಕುತ್ತ, ಮಾರಿಕುಣಿತದ ಸೊಲ್ಲನ್ನು ಕಾವ್ಯದಲ್ಲಿ ಎರಕ ಹೊಯ್ಯುತ್ತ ಕಾವ್ಯದ ಹೊಸ ದಾರಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಇಷ್ಟಂತೂ ನಿಜ, ಅವರ ತೀವ್ರವಾದ ತುಡಿತ ಕಾವ್ಯದ ವಿವಿಧ ಆಕಾರಗಳಲ್ಲಿ ಮೈಮುರಿದೇಳುತ್ತಿದೆ. ಅಸ್ಪಷ್ಟ ದಾರಿಗಳಲ್ಲೂ ಆದ್ರವಾದ ಒಂದು ಲೋಕಕ್ಕಾಗಿ ತಡಕಾಡುತ್ತಿದೆ. ಮನುಷ್ಯ ಸಂಬಂಧಗಳ ಗಟ್ಟಿ ಎಳೆಗಳನ್ನು ಕಾಣಲು ಹಂಬಲಿಸುತ್ತಿದೆ. ಅನುಭವವೇನೊ ಅವರಲ್ಲಿ ವಿನೂತನವಾಗಿದೆ. ಆದರೆ ಈ ಜೀವನಾನುಭವವನ್ನು ಕಲಾನುಭವವನ್ನಾಗಿ ಮಾಡಲು ಅವರು ಇನ್ನಷ್ಟು ದಾರಿ ಸವೆಸಬೇಕೇನೊ. ಇಂಥ ದಾರಿಯಲ್ಲಿ ನಡೆಯುವ ಅದಮ್ಯ ಉತ್ಸಾಹವಂತೂ ಈ ಕವಿಗಿದೆ. ಇನ್ನು ಈ ಕವಿಯ ಕಾವ್ಯದ ಭವಿಷ್ಯ ಕುರಿತು ಈಗಲೇ ಏನು ಹೇಳುವುದು? ಈ ಭವಿಷ್ಯ ಸ್ವತಃ ದಿಲೀಪರಿಗಲ್ಲದೆ ಬೇರಾರಿಗೂ ಗೊತ್ತಿಲ್ಲ. ಕವಿಯ ವಿಶಿಷ್ಟ ಅನುಭವಗಳ ಜೊತೆಗೆ ಕಾರ್ಮಿಕನ ಶ್ರಮವೂ ಸೇರಬೇಕಲ್ಲವೆ?
ದಿಲೀಪರ ಈ ಕವನ ಸಂಕಲನದಲ್ಲಿ ದಲಿತ ಬಂಡಾಯದ ಕಾವ್ಯದಿಂದ ಕಲಿತ ಪಾಠಗಳು ಅಧಿಕವಾಗಿವೆ. ಬಡತನ, ಶೋಷಣೆ, ಪ್ರೀತಿ, ಮನುಷ್ಯತ್ವದ ಹಂಬಲ ಇಂಥ ಚಿತ್ರಗಳು ಮತ್ತೆ ಮತ್ತೆ ಬಂದಿವೆ. ಇವೆಲ್ಲ ಹೊಸ ರೂಪದಲ್ಲಿ ಬರಲು ಯತ್ನಿಸಿವೆ ಎಂಬುದೇ ಈ ಸಂಕಲನದ ಗುಣಾತ್ಮಕ ಸಂಗತಿ. ಅಲ್ಲಿ ಕಲಿತ ಪಾಠಗಳು ಕಾಲದ ಚಲನೆಯಲ್ಲಿ ಬದಲಾಗಿವೆ. ತನ್ನ ಕಾಲದ ಕಾವಿನಲ್ಲಿ ಹೊಸ ಧ್ವನಿ ಪಡೆಯುತ್ತಿವೆ. ಇಂಥ ಹೊಸ ಧ್ವನಿಯನ್ನು ಹಿಡಿಯಲು ದಿಲೀಪ್ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಪ್ರಯತ್ನ ತನ್ನ ಚರಮ ಸ್ಥಿತಿಗೆ ಹೋದಾಗ ಕೇವಲ ದಿಲೀಪ್ ಮಾತ್ರ ಬರೆಯಲು ಸಾಧ್ಯವಾಗುವ ಕವಿತೆಗಳು ಮೂಡಿಬರುತ್ತವೆ. ಹೇಗೆ ಕೇವಲ ಸಿದ್ದಲಿಂಗಯ್ಯ ಅವರು ಮಾತ್ರ ಬರೆಯಬಲ್ಲ ಕವಿತೆಗಳು, ಕೆ.ಬಿ.ಸಿದ್ದಯ್ಯ ಮಾತ್ರ ಬರೆಯಬಲ್ಲ ಕವಿತೆಗಳು, ಎನ್.ಕೆ.ಹನುಮಂತಯ್ಯ ಮಾತ್ರ ಬರೆಯಬಲ್ಲ ಕವಿತೆಗಳು ಬರೆಯಲು ಸಾಧ್ಯವಾಯಿತೋ ಹಾಗೆ. ಮುಂದೊಂದು ದಿನ ದಿಲೀಪರದೇ ಆದ ಕಾವ್ಯಲೋಕವೊಂದು ನಿರ್ಮಾಣವಾದೀತು. ಅದಕ್ಕಾಗಿ ಅವರು ಇನ್ನಷ್ಟು ಶ್ರಮಿಸುವ ಅಗತ್ಯವಿದೆ. ತನ್ನ ಜೀವನದಲ್ಲಿ ಎದುರಾದ ಘಟನೆಗಳು, ವ್ಯಕ್ತಿಗಳು ಇಲ್ಲಿರುವಂತೆ ಬೌದ್ಧ ಧರ್ಮದ ಚಿಂತನಾಲೋಕ ಕೂಡ ಇಲ್ಲಿನ ಕವಿತೆಗಳಲ್ಲಿದೆ. ಧಮ್ಮಗೀತೆಗಳ ಲೋಕವೂ ಇಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಖಾಸಗಿ, ಸಾಮಾಜಿಕ, ಧರ್ಮನಿಷ್ಠೆ ಹೀಗೆ ಹಲಬಗೆಯ ಅನುಭವಗಳನ್ನು ಕವಿ ವಿವಿಧ ಸ್ತರಗಳಲ್ಲಿ ನಿರ್ವಹಿಸಿದ್ದಾರೆ. ಖಾಸಗಿ ಅನುಭವಗಳ, ವ್ಯಕ್ತಿಗಳ ಕುರಿತು ಬರೆಯುವಾಗ ಆದ್ರ್ರತೆ ಇದ್ದರೆ, ಸಾಮಾಜಿಕ ಲೋಕ ಕವಿಯ ಒಳಲೋಕದ ತಲ್ಲಣಗಳಿಗೆ ಅವಕಾಶ ಮಾಡಿದೆ. ಧರ್ಮವು ಕವಿಗೆ ಬಾಳಿನ ನೈತಿಕ, ಮಾನವೀಯ ಚೌಕಟ್ಟುಗಳನ್ನು ಅರಿವಿಗೆ ತಂದಿದೆ. ಹೀಗೆ ಎಲ್ಲೆಡೆಗೆ ತನಗೆ ಬೇಕಾದ ಕಾವ್ಯವನ್ನು ಈ ಕವಿ ಹುಡುಕುತ್ತಿದ್ದಾರೆ.
ಅನುಭವಗಳು ಯಾವ ದಿಕ್ಕಿನದಾಗಿದ್ದರೂ ಅದಕ್ಕೆ ಕವಿ ಕಂಡುಕೊಳ್ಳುವ ಹೊಸ ನುಡಿಗಟ್ಟು ಗಮನ ಸೆಳೆಯುತ್ತದೆ. ಮೊದಲ ಕವಿತೆ 'ಇಬ್ಬನಿಯ ಕಾಲೆಜ್ಜೆ' ಯಲ್ಲಿನ ಹೊಸ ಭಾಷೆ ಅಚ್ಚರಿ ಮೂಡಿಸುವಷ್ಟು ಸೊಗಸಾಗಿದೆ;
ಬೆನ್ನ ಮೇಲೆ ಗುರಿಯ ಚೇಳ ಬಿಟ್ಟು ನೀನು
ಅಖಾಡಕ್ಕೆ ತಳ್ಳಿದ ಗುರು ದ್ರೋಣ
ಗುರು ಶಿಷ್ಯರ ಸಂಬಂಧವನ್ನು ಹೀಗೂ ನೋಡಬಹುದೆ ? ಅನ್ನುವುದೇ ಈ ಸಾಲುಗಳನ್ನು ಓದಿದಾಗ ಉಂಟಾದ ಅಚ್ಚರಿ. ಕರ್ಣ ಮತ್ತು ದ್ರೋಣರ ಸಂಬಂಧವನ್ನು ಕಹಿಯಿಲ್ಲದೆ ಈ ಕವಿತೆ ಕಂಡಿರಿಸಿದೆ. ಚರಿತ್ರೆಯ ಈ ದಿಕ್ಕು ಕರ್ಣನಿಗೂ ಒಂದು ಸವಾಲು, ಕವಿತೆಗೂ ಒಂದು ಸವಾಲು. ಹೀಗೆ ಅಪರಿಚಿತ ಲೋಕಗಳಿಗೆ ಇಲ್ಲಿನ ಅನೇಕ ಕವಿತೆಗಳು ಕೈಚಾಚಿವೆ. ಇಂಥ ಅನಿರೀಕ್ಷಿತ ನೋಟಗಳ ಮೂಲಕ ದಿಲೀಪರ ಕಾವ್ಯ ಇಷ್ಟವಾಗುತ್ತದೆ. ಈ ಮೇಲಿನ ಕವಿತೆ ಮುಕ್ತಾಯವಾಗುವುದು ಹೀಗೆ;
ಚಂದ್ರಚಾಪದ ಹಿಗ್ಗ
ಅಗಿದುಗಿದು ತಿಂಗಳ ಸಂತಾನದ
ತೋರಣ ಕಟ್ಟಿ ಭಾಸ್ಕರನ ಪ್ರಭೆಗೆ ಹಾಲೂಡಿ
ಹಬ್ಬದೊಡಲಲಿ ಸೂತಕ ಉಚ್ಚಿ ಜಾರಿದ ಇಬ್ಬನಿಯ ಕಾಲೆಜ್ಜೆ ನೀನು.
ಇಲ್ಲಿನ ಕವಿತೆಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ ಇವರಿಬ್ಬರ ಚಿತ್ರಗಳು ಅನೇಕ ಕಡೆ ಅಂತರ್ಜಲದಂತೆ ಪ್ರವಹಿಸಿವೆ. ತನ್ನ ಒಟ್ಟು ವೈಚಾರಿಕಲೋಕ ನಿರ್ಮಾಣವಾದದ್ದು ಇವರಿಂದಾಗಿ. ಯೋಚಿಸಲು, ಪ್ರೀತಿಸಲು, ಪ್ರತಿಭಟಿಸಲು ಮತ್ತು ಬಾಳಲು ಕಲಿಸಿದ ವ್ಯಕ್ತಿಗಳವರು. ಈ ಪ್ರಜ್ಞೆ ಇಲ್ಲಿನ ಬಹುತೇಕ ಕವಿತೆಗಳಲ್ಲಿದೆ. ದಲಿತ ಬಂಡಾಯೋತ್ತರ ಕಾವ್ಯದಲ್ಲಿ ಬಂದಿರುವ ಅಂಬೇಡ್ಕರ್ ಮತ್ತು ಗೌತಮ ಬುದ್ಧರ ಚಿತ್ರಗಳನ್ನು ಹೊಸ ಅಧ್ಯಯನಕ್ಕೆ ಒಳಪಡಿಸಬೇಕೇನೋ ? ಕನ್ನಡದ ಹಲವು ತಲೆಮಾರುಗಳು ಇವರಿಬ್ಬರನ್ನೂ ಕಾಣುತ್ತಿರುವ ಬಗೆಯನ್ನು ಇನ್ನೊಮ್ಮೆ ಆಲೋಚಿಸುವ ಅಗತ್ಯವಿದೆಯೆನಿಸುತ್ತದೆ. ಆಗ ಹೊಸ ಭಾಷೆ ಮತ್ತು ಹೊಸ ನೋಟಗಳ ಲೋಕವೊಂದು ಅನಾವರಣಗೊಳ್ಳುವುದರಲ್ಲಿ ಸಂಶಯವಿಲ್ಲ. ದಿಲೀಪರ ಕಾವ್ಯದ ಭಾವಕೋಶವಂತೂ ಈ ವೈಚಾರಿಕ ನೆಲೆಗಳಿಲ್ಲದೆ ತನಗೆ ಅಭಿವ್ಯಕ್ತಿಯೇ ಸಾಧ್ಯವಿಲ್ಲ ಎಂಬಂತೆ ಈ ಮಾರ್ಗಗಳನ್ನು ಗಾಢವಾಗಿ ನಂಬಿದೆ.
ಒಳ್ಳೆಯ ಕಾವ್ಯ ಕೊಂಚ ಹಠಮಾರಿಯೇ ಆಗಿರುತ್ತದೇನೋ. ಅದು ತಾನು ನಂಬುವ ಮಾರ್ಗಗಳನ್ನು ರಕ್ತಗತವಾಗಿಸಿಕೊಳ್ಳುತ್ತದೆ. ಬರೆಯುತ್ತ ಬರೆಯುತ್ತ ತನ್ನ ದಾರಿಯನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳುತ್ತದೆ. ಹಲವೆಡೆ ಮಿಂಚಿನಂತೆ ತಮ್ಮ ಪ್ರತಿಭೆಯನ್ನು ತೋರುವ ದಿಲೀಪ್ ಒಮ್ಮೊಮ್ಮೆ ಜಾಡಿಗೆ ಬಿದ್ದ ಕ್ಲೀಷೆಯ ಸಾಲುಗಳನ್ನು ಬರೆದುಬಿಡುತ್ತಾರೆ. ಘೋಷಣೆಗಳ ಮೋಹಕ್ಕೆ ಒಳಗಾಗುತ್ತಾರೆ. ಆದರೆ ಇದೆಲ್ಲದರ ಪ್ರಮಾಣ ಕಡಿಮೆಯೆಂಬುದು ಸಮಾಧಾನದ ಸಂಗತಿ.
ಕವಿತೆ ಒಂದು ಮಾಯಾಕನ್ನಡಿ. ಅದು ನಾವೆಲ್ಲಾ ಚಡಪಡಿಸುವಂತೆ ಮಾಡುತ್ತದೆ. ಇಲ್ಲಿಯ ಬದುಕನ್ನು ಹೊಸ ಆವರಣದಲ್ಲಿ ನೋಡುವಂತೆ ಮಾಡುತ್ತದೆ. ಪ್ರತಿ ಸಲ ಓದಿದಾಗಲೂ ಹಳೆಯ ಅರ್ಥಗಳನ್ನು ಕಳಚಿ ಮತ್ತೆ ಒಂದೆರಡು ಹೊಸ ಅರ್ಥಗಳನ್ನು ಜೋಡಿಸುತ್ತದೆ. ಕನ್ನಡ ಕಾವ್ಯದ ಇಂಥ ಮಾಯಾಕನ್ನಡಿಯಲ್ಲಿ ನೋಡುವ ಸಾಹಸವನ್ನು ದಿಲೀಪ್ ಸಾಕಷ್ಟು ಯಶಸ್ವಿಯಾಗಿ ಮಾಡಿದ್ದಾರೆ. ಕಾವ್ಯದ ಹೊಸ ಭಾಷೆಯೊಂದನ್ನು ಸಾಕ್ಷಾತ್ಕರಿಸಿಕೊಳ್ಳುವ ಅವರ ಪ್ರಯತ್ನ ಯಶಸ್ಸು ಕಾಣಲಿ. ಅವರಿಂದ ಕಾವ್ಯದ ಹೊಸ ಧಾರೆ ಮೂಡಿಬರಲಿ ಅಂತ ಆಶಿಸುವೆ.”
(ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!