ಮಗಾ ಹುಟ್ಯಾನವ್ವ
ಹತ್ತು ಹಡಿಯೋದಕ್ಕಿಂತ ಮತ್ತೊಂದು ಹಡದಾಂಗ ।
ಮಗನ ಹಡೆದೆನವ್ವ । ಮಗನ ಹಡೆದೆನವ್ವ
ಮನೆಯ ಕೀರ್ತಿ ತಂದನವ್ವ
ಮಗ ಮುಟ್ಯಾನವ್ವಾ ನನಗೊಬ್ಬ ಮಗ ಹುಟ್ಯಾನವ್ವ
ಹುಟ್ಟಿ ಬಂದವ್ವ ಹೋಳಿ ಹುಣ್ಣಿಮೆ ದಿನಕವ್ವ
ಕೆಕ್ಕರ ಮಬ್ಬಿಗೆ ಕಾಮನ ಸುಡುವಾಗ ಧರೆಗೆ ಬಂದನವ್ವ
ಧರೆಗೆ ಬಂದನವ್ವ ಮನೆಯ ಕೀರ್ತಿ ತಂದನವ್ವ
ವರುಷ ತುಂಬಿತವ್ವ ಹರದಾಡಿ ನಡಿಯಾಕತ್ಯಾನವ್ವ
ಕಡ್ದಿಯ ಗೀಚಿ ಮುಂದಿನ ಮನೆಗ ಕೊಡಿ ಇಟ್ಟನವ್ವ
ಕಿಡಿ ಇಟ್ಟನವ್ವ ಮುಂದಿನ ಮನೆಯ ಸುಟ್ಟನವ್ವ
ಮೂರು ತುಂಬಿತವ್ವ ನೆರೆಮನಿಗೋಗಾಕತ್ತನವ್ವ
ಮಗ್ಗಲ ಮನೆಯ ಮಲ್ಲವ್ವಕ್ಕನ ಗಂಟಿ ಕದ್ದನವ್ವ
ಗಂಟ ಕದ್ದನವ್ವ ಬಂದು ಬಚ್ಚಿ ಇಟ್ಟನವ್ವ
ಆರು ತುಂಬಿತವ್ವ ಶಾಲೆಗೆ ಹೋಗಾಕತ್ಯಾನವ್ವ
ಮೊದಲನೆಯ ದಿವಸ ಮಾಸ್ತರ ತಲೆಯ ಒಡೆದು ಬಂದನವ್ವ
ಒಡೆದು ಬಂದನವ್ವ ಶಾಲೆಗೆ ಸಲಾಮು ಹೊಡೆದನವ್ವ
ಎಂಟು ತುಂಬಿತವ್ವ ಹೊಳೆಗೆ ಈಜಲು ಹೋದನವ್ವ
ಜೋಡಿ ಉಡುಗನ ಹೊಳೆಗೆ ದಬ್ಬಿ ಓಡಿ ಬಂದನವ್ವ
ಏಡಿ ಬಂದನವ್ವ ಅವನ್ನ ಮುಳುಗಿಸಿ ಕೊಂದನವ್ವ
ಹದಿನಾರು ತುಂಬಿತವ್ವ ಮುಖಕೆ ಚಿಗುರು ಮೀಸೆ ಬಂತವ್ವ
ಒಠ್ಯಾನ ಪಾರಿ ಒಲ್ಲೆನೆಂದರೂ ಜಗ್ಗಿ ಹೋದನವ್ವ
ಜಗ್ಗಿ ಎಳೆದನವ್ವ ಮುಂದಿಂದು ಹ್ಯಾಂಗ ಹೇಳಲವ್ವಾ
ಇಪ್ಪತ್ತೆರಡು ತುಂಬಿತವ್ವ ಇಸ್ಪೀಟು ಆಡಾಕ ಹತ್ಯಾನವ್ವ
ಸಿಂದಿ ಸರಾಯಿ ಸಿಕ್ಕಾಂಗ ಕುಡದು ಮನಿಗೆ ಬಂದನವ್ವ
ಮನೆಗೆ ಬಂದನವ್ವ ಮೈಮ್ಯಾಗ ಪರಿವೆ ಇಲ್ಲವ್ವ
ಇಪ್ಪತ್ತೈದಕವ್ವ ಕೊಲೆಯೊಂದ ಮಾಡಿ ಬಂದನವ್ವ
ಹದಿನೈದು ವರುಷ ಜೇಲಿಗೆ ಬಿದ್ದು ಸಟದು ಬಂದನವ್ವ
ಸೆಟದು ಬಂದನವ್ವ ಬಂದು ಖಾದಿ ತೊಟ್ಟವನ್ನ
ನಲವತ್ತೈದಕ್ಕ ಇಲೆಕ್ಷನಿಗೆ ನಿಂತನವ್ವ
ಹ್ಯಾಂಗೋ ಏನೋ ದೇವರಿಗೆ ಗೊತ್ತು ಆರಿಸಿ ಬಂದನವ್ವ
ಆರಿಸಿ ಬಂದನವ್ವ ಈಗ ಮುಖ್ಯಮಂತ್ರಿಯವ್ವ
(‘ಜಾನಪದ ಗೀತೆಗಳು’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!